

ಮೈಸೂರು: ಟಿ. ನರಸೀಪುರ ಗಣೇಶೋತ್ಸವ ಮೆರವಣಿಗೆ ಕುರಿತ ಇನ್ಸ್‌ಪೆಕ್ಟರ್ ಧನಂಜಯ್ ಧಮ್ಕಿ ವಿಚಾರ ರಾಜ್ಯಾದ್ಯಂತ ದೊಡ್ಡ ಸದ್ದು ಮಾಡುತ್ತಿರುವಂತೆಯೇ ಬಿಜೆಪಿಯೊಳಗಿನ ಅಸಮಾಧಾನ ಸ್ಫೋಟಗೊಂಡಿದೆ.
ಇನ್ಸ್‌ಪೆಕ್ಟರ್ ಧನಂಜಯ್ ಅಮಾನತು ಮಾಡುವಂತೆ ಆಗ್ರಹಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ವೇಳೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಮಾಜಿ ಶಾಸಕ ಎಲ್. ನಾಗೇಂದ್ರ ಕಿತ್ತಾಡಿಕೊಂಡಿದ್ದಾರೆ. ಪರಸ್ಪರ ತಳ್ಳಾಡಿ, ಬೈದಾಡಿಕೊಂಡಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ಮುಂದೆಯೇ ಉಭಯ ನಾಯಕರ ತಳ್ಳಾಡಿಕೊಂಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮೊದಲು ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷ ಆಗಿರುವ ಎಲ್. ನಾಗೇಂದ್ರ ಅವರನ್ನು ತಳ್ಳಿದ್ದಾರೆ. ಬಳಿಕ ರೊಚ್ಚಿಗೆದ್ದ ನಾಗೇಂದ್ರ ಅವರು ಪ್ರತಾಪ್ ಸಿಂಹರನ್ನು ನೂಕಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಕ್ಸಮರ ಉಂಟಾಗಿದ್ದು, ಬಳಿಕ ನಾಗೇಂದ್ರ ಅವರು ಪ್ರತಾಪ್ ಸಿಂಹರನ್ನು ಬೈದುಕೊಂಡು ಹೋಗಿದ್ದಾರೆ. ತಳ್ಳಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಮನಸ್ತಾಪಕ್ಕೆ ಇದೇ ಕಾರಣ? ಅಂದಹಾಗೆ, ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಶಾಸಕ ನಾಗೇಂದ್ರ ಅವರು ಮೈಸೂರಿನ ಚಾಮರಾಜ ಕ್ಷೇತ್ರ ವಿಧಾನಸಭೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಎಲ್. ನಾಗೇಂದ್ರ ಅವರು ಈಗಾಗಲೇ ಒಂದು ಬಾರಿ ಅದೇ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದರು.
ಆದರೆ, ಲೋಕಸಭೆ ಚುನಾವಣೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣಕ್ಕೆ ಬರಲು ಯೋಜಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಮನಸ್ತಾಪವೇ ಉಭಯ ನಾಯಕರ ನಡುವಿನ ತಳ್ಳಾಟ ನೂಕಾಟದ ಘಟನೆಗೆ ಕಾರಣ ಎನ್ನಲಾಗುತ್ತಿದೆ.