ಹದಿಹರೆಯದ ಬಾಲಕಿಯ ಅಪಹರಣ, ಅತ್ಯಾಚಾರ ಪ್ರಕರಣ: ಇಬ್ಬರಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ವರಿತಗತಿ ವಿಶೇಷ ನ್ಯಾಯಾಲಯ-3ರ (Fast Track Special Court-3) ನ್ಯಾಯಾಧೀಶರಾದ ರಾಮ ನಾಯಕ್ ಅವರು, ಮೊದಲನೇ ಆರೋಪಿ ರಾಘವೇಂದ್ರ ಮತ್ತು 3ನೇ ಆರೋಪಿ ಸಾಗರ್ ಅವರನ್ನು ದೋಷಿಗಳೆಂದು ತೀರ್ಪು ನೀಡಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 17 ವರ್ಷದ ಹದಿಹರೆಯದ ಬಾಲಕಿಯ ಅಪಹರಣ ಮತ್ತು ಪದೇ ಪದೇ ಅತ್ಯಾಚಾರ ನಡೆಸಿದ 2017ರ ಪ್ರಕರಣವೊಂದರಲ್ಲಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ವಿಶೇಷ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ವರಿತಗತಿ ವಿಶೇಷ ನ್ಯಾಯಾಲಯ-3ರ (Fast Track Special Court-3) ನ್ಯಾಯಾಧೀಶರಾದ ರಾಮ ನಾಯಕ್ ಅವರು, ಮೊದಲನೇ ಆರೋಪಿ ರಾಘವೇಂದ್ರ ಮತ್ತು 3ನೇ ಆರೋಪಿ ಸಾಗರ್ ಅವರನ್ನು ದೋಷಿಗಳೆಂದು ತೀರ್ಪು ನೀಡಿ, ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 20,000 ರೂಪಾಯಿ ದಂಡ ವಿಧಿಸಿದ್ದಾರೆ.

ಅಲ್ಲದೆ, ಸಂತ್ರಸ್ತೆಗೆ 7 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ 2 ಮತ್ತು 4ನೇ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಜೆ.ಆರ್. ರಮೇಶ್ ಅವರು ಈ ಪ್ರಕರಣದ ವಾದ ಮಂಡಿಸಿದರು.

ಸರ್ಕಾರಿ ಅಭಿಯೋಜನೆಯ ಪ್ರಕಾರ, 2017ರ ಅಕ್ಟೋಬರ್ 26ರಂದು ರಾತ್ರಿ 8 ಗಂಟೆ ಸುಮಾರಿಗೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವೈಟ್‌ಫೀಲ್ಡ್ ರೈಲು ನಿಲ್ದಾಣದ ಬಳಿಈ ಘಟನೆ ನಡೆದಿದೆ. ಒಡಿಶಾ ಮೂಲದ ಸಂತ್ರಸ್ತೆ ಕೆ.ಆರ್. ಪುರದ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು ಮತ್ತು ತನ್ನ ಸ್ನೇಹಿತೆಗಾಗಿ ಕಾಯುತ್ತಿದ್ದಳು. ರೈಲು ನಿಲ್ದಾಣಕ್ಕೆ ಬಂದಿದ್ದ ರಾಘವೇಂದ್ರ ಮತ್ತು ಸಾಗರ್, ಸಂತ್ರಸ್ತೆಯ ಸ್ನೇಹಿತೆ ಲಾಡ್ಜ್‌ನಲ್ಲಿದ್ದು, ಆಕೆಯನ್ನು ಅಲ್ಲಿಗೆ ಕರೆದೊಯ್ಯುವಂತೆ ಆಕೆ ಹೇಳಿರುವುದಾಗಿ ನಂಬಿಸಿ ಸಂತ್ರಸ್ತೆಯನ್ನು ದಾರಿ ತಪ್ಪಿಸಿದ್ದರು.

ಬಳಿಕ ಆಕೆಯನ್ನು ಲಾಡ್ಜ್‌ನ ಕೊಠಡಿ ಸಂಖ್ಯೆ 6ಕ್ಕೆ ಕರೆದೊಯ್ದಿದ್ದ ಆರೋಪಿಗಳು ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಸ್ವಲ್ಪ ಸಮಯದ ನಂತರ, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಮಂಜುನಾಥ್ ಕೂಡ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆ ಕಿರುಚಿದಾಗ, ಎರಡನೇ ಆರೋಪಿಯಾದ ಲಾಡ್ಜ್ ಮ್ಯಾನೇಜರ್ ಅಲ್ಲಿಗೆ ಬಂದು ಘಟನೆಯ ಬಗ್ಗೆ ವಿಚಾರಿಸಿದ್ದಾರೆ. ಆ ಮೂವರು ಆರೋಪಿಗಳು ಮ್ಯಾನೇಜರ್‌ಗೂ ಸಂತ್ರಸ್ತೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಹಾಗೂ ಪೊಲೀಸರಿಗೆ ವಿಷಯ ತಿಳಿಸದಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

Casual Images
ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಪ್ರಕರಣ: ಸ್ವಯಂಘೋಷಿತ 'ಹಠಯೋಗಿ' ಸ್ವಾಮಿಗೆ 35 ವರ್ಷ ಕಠಿಣ ಜೈಲು ಶಿಕ್ಷೆ; 1 ಲಕ್ಷ ರೂ ದಂಡ

ಆರೋಪಿಗಳು ಸಂತ್ರಸ್ತೆಯನ್ನು 10 ದಿನಗಳ ಕಾಲ ಕೊಠಡಿಯಲ್ಲಿ ಅಕ್ರಮವಾಗಿ ಬಂಧಿಸಿಟ್ಟುಕೊಂಡಿದ್ದರು, ಘಟನೆಯನ್ನು ಯಾರಿಗಾದರೂ ಹೇಳಿದ್ರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಮತ್ತು ಪದೇ ಪದೇ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಪ್ರಾಸಿಕ್ಯೂಷನ್ ಹೇಳಿಕೆಯಲ್ಲಿ ತಿಳಿಸಿದೆ.

ನಂತರ, ಸಂತ್ರಸ್ತೆಯ ತಂದೆ ಕಾಡುಗೋಡಿ ಪೊಲೀಸರಿಗೆ ದೂರು ನೀಡಿದ್ದರು. ಇನ್ಸ್‌ಪೆಕ್ಟರ್‌ಗಳಾದ ಎಚ್. ಜಯರಾಜ್ ಮತ್ತು ಚನ್ನೇಶ್ ಅವರು ತನಿಖೆ ನಡೆಸಿ, ಪೋಕ್ಸೋ (POCSO) ಕಾಯ್ದೆ ಮತ್ತು ಐಪಿಸಿಯ (IPC) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ದೋಷಾರೋಪಣಾ ಪಟ್ಟಿಯನ್ನು (ಚಾರ್ಜ್‌ಶೀಟ್) ಸಲ್ಲಿಸಿದರು. ರಾಘವೇಂದ್ರ ಮತ್ತು ಸಾಗರ್ ವಿರುದ್ಧ ವಿಚಾರಣೆ ನಡೆಯಿತು. ನ್ಯಾಯಾಧೀಶರು ಇಬ್ಬರೂ ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ ಶಿಕ್ಷೆ ವಿಧಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com