

ನಿನ್ನೆ ಬುಧವಾರ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತದ ದಂತಕಥೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಹಾಡೊಂದನ್ನು ಆಲಿಸುತ್ತಿದ್ದ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಕರ್ನಾಟಕ ಸಂಗೀತದ “ಜೀವಂತ ಆತ್ಮ” ಭಕ್ತಿಯೇ ಎಂದು ಬಣ್ಣಿಸಿದರು. ಶಾಸ್ತ್ರೀಯ ಸಂಗೀತ ಪರಂಪರೆಯನ್ನು ರೂಪಿಸುವಲ್ಲಿ ವಿವಿಧ ಭಾಷೆಗಳು ಹಾಗೂ ಆಧ್ಯಾತ್ಮಿಕ ಪರಂಪರೆಗಳು ವಹಿಸಿರುವ ಪಾತ್ರವನ್ನೂ ಅವರು ವಿವರಿಸಿದರು.
ಕರ್ನಾಟಕ ಸಂಗೀತದಲ್ಲಿ ಭಕ್ತಿಯೇ ಈ ಪರಂಪರೆಯ ಜೀವಂತ ಆತ್ಮ. ಅದನ್ನು ವಿವಿಧ ಭಾಷೆಗಳ ಅದ್ಭುತ ಸಂಗಮ ಜೀವಂತವಾಗಿರಿಸಿದೆ. ಒಂದೇ ಸಂಗೀತ ಕಛೇರಿಯಲ್ಲಿ ವಿವಿಧ ಭಾಷಾ ಹಾಗೂ ಆಧ್ಯಾತ್ಮಿಕ ಪರಂಪರೆಗಳು ನದಿಗಳು ಸಮುದ್ರವನ್ನು ಸೇರುವಂತೆ ಒಂದಾಗಿ ಹರಿಯುತ್ತವೆ ಎಂದು ಹೇಳಿದರು.
ಭಕ್ತಿ ಪರಂಪರೆ ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡು, 12, 13 ಮತ್ತು 14ನೇ ಶತಮಾನಗಳಲ್ಲಿ ದೇಶದ ಉತ್ತರ ಭಾಗಗಳಿಗೂ ಹರಡಿತು. ಈ ಪರಂಪರೆಯು ಹಿಂದೂಸ್ತಾನಿ ಭಜನ್ ಪ್ರಕಾರದ ಮೇಲೂ ಪ್ರಭಾವ ಬೀರಿದೆ ಎಂದು ಅವರು ಹೇಳಿದರು.
ಸುಬ್ಬುಲಕ್ಷ್ಮಿ ಅವರ ಕಠಿಣ ಸಂಗೀತ ತರಬೇತಿ, ಸರಳತೆ ಹಾಗೂ ಸಂಗೀತ ಕ್ಷೇತ್ರದ ಬಗೆಗಿನ ಸಮರ್ಪಣೆಯನ್ನು ನಿರ್ಮಲಾ ಸೀತಾರಾಮನ್ ಸ್ಮರಿಸಿದರು. ಅವರ ಪ್ರತಿಭೆಯ ಹಿಂದೆ ಕಠಿಣ ಬೌದ್ಧಿಕ ಶಿಸ್ತು ಇತ್ತು, ತಮ್ಮ ಅಪಾರ ಖ್ಯಾತಿಯ ನಡುವೆಯೂ ಸುಬ್ಬುಲಕ್ಷ್ಮಿ ತಮ್ಮನ್ನು ಸದಾ ಸಂಗೀತದ ವಿದ್ಯಾರ್ಥಿಯೆಂದೇ ಪರಿಗಣಿಸುತ್ತಿದ್ದರು ಎಂದರು.
ಮಹಾತ್ಮ ಗಾಂಧಿಯವರಿಗಾಗಿ ಸುಬ್ಬುಲಕ್ಷ್ಮಿ ಹಾಡಿದ್ದ ಮೀರಾಬಾಯಿ ಅವರ ‘ಹರಿ ತುಮ್ ಹರೋ’ ಭಜನ್‌ನ ಪ್ರಸಂಗವನ್ನೂ ಹಣಕಾಸು ಸಚಿವೆ ನೆನಪಿಸಿಕೊಂಡರು. ಗಾಂಧಿಯವರಿಗಾಗಿ ಆ ಭಜನ್ ರೆಕಾರ್ಡ್ ಮಾಡುವ ಮೊದಲು ಅದರ ಉಚ್ಚಾರಣೆಯನ್ನು ಪರಿಪೂರ್ಣಗೊಳಿಸಲು ಗಾಯಕಿ ಇಡೀ ರಾತ್ರಿ ಅಭ್ಯಾಸ ಮಾಡಿದ್ದರಂತೆ ಎಂದು ಅವರು ಹೇಳಿದರು.
ಬೇರೆಯವರು ಹಾಡುವುದಕ್ಕಿಂತ ಸುಬ್ಬುಲಕ್ಷ್ಮಿ ಅದನ್ನು ಹೇಳುವುದನ್ನು ಕೇಳಲು ನಾನು ಹೆಚ್ಚು ಇಷ್ಟಪಡುತ್ತೇನೆ ಎಂದು ಗಾಂಧೀಜಿ ಹೇಳಿದ್ದರೆಂದು ಉಲ್ಲೇಖಿಸಿದರು.
ಸುಬ್ಬುಲಕ್ಷ್ಮಿ ಅವರ ಸಮಾಜಸೇವಾ ಕಾರ್ಯಗಳ ಬಗ್ಗೆಯೂ ಸಚಿವೆ ಮಾತನಾಡಿದರು. ಗಾಯಕಿ ತಮ್ಮ ಸಂಗೀತ ಕಛೇರಿಗಳಿಂದ ಬಂದ ಆದಾಯವನ್ನು ದತ್ತಿ ಹಾಗೂ ಸಾಂಸ್ಕೃತಿಕ ಕಾರ್ಯಗಳಿಗೆ ನೀಡುತ್ತಿದ್ದರು, ಸಂಸ್ಥೆಗಳಿಗೆ ನೆರವು ನೀಡುವುದರ ಜೊತೆಗೆ ದೇವಾಲಯಗಳು ಹಾಗೂ ಸಾಂಸ್ಕೃತಿಕ ತಾಣಗಳ ಪುನಶ್ಚೇತನಕ್ಕೂ ಅವರು ಕೊಡುಗೆ ನೀಡಿದ್ದರು ಎಂದು ಸ್ಮರಿಸಿದರು.
1916ರ ಸೆಪ್ಟೆಂಬರ್ 16ರಂದು ಜನಿಸಿದ ಮದುರೈ ಷಣ್ಮುಖವಾದಿವು ಸುಬ್ಬುಲಕ್ಷ್ಮಿ, ಸಾಂಪ್ರದಾಯಿಕ ಕಲಾವಿದರ ಕುಟುಂಬದಿಂದ ಬಂದವರು. 20ನೇ ಶತಮಾನದ ಕರ್ನಾಟಕ ಶಾಸ್ತ್ರೀಯ ಗಾಯನದ ಪ್ರಮುಖ ಧ್ವನಿಗಳಲ್ಲಿ ಒಬ್ಬರಾಗಿ ಅವರು ಹೊರಹೊಮ್ಮಿದರು.
ಅವರ ಸಂಗೀತ ಭಾರತ ಹಾಗೂ ವಿದೇಶಗಳಲ್ಲಿಯೂ ಅಪಾರ ಜನಪ್ರಿಯತೆ ಗಳಿಸಿತು. ಜಾತಿ, ಭಾಷೆ, ಪ್ರದೇಶ ಮತ್ತು ಧರ್ಮದ ಎಲ್ಲೆಗಳನ್ನು ಮೀರಿ ಅವರ ಸಂಗೀತ ಜನರನ್ನು ತಲುಪಿತು.
1998ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪಡೆದ ಮೊದಲ ಸಂಗೀತಗಾರ್ತಿ ಎಂಬ ಹೆಗ್ಗಳಿಕೆಗೆ ಸುಬ್ಬುಲಕ್ಷ್ಮಿ ಪಾತ್ರರಾದರು. 1974ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಮೊದಲ ಭಾರತೀಯ ಸಂಗೀತಗಾರ್ತಿಯೂ ಅವರೇ.
1966ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾರ್ಯಕ್ರಮ ನೀಡಿದ ಮೊದಲ ಭಾರತೀಯ ಸಂಗೀತಗಾರ್ತಿಯಾಗಿ ಅವರು ಇತಿಹಾಸ ನಿರ್ಮಿಸಿದರು. ಸುಬ್ಬುಲಕ್ಷ್ಮಿ ಅವರು 2004ರ ಡಿಸೆಂಬರ್ 11ರಂದು ಚೆನ್ನೈನಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.