ಅಂದು ಯುಗಾದಿ. ಜಾನಕಮ್ಮ ಹೊಸ ರೇಷ್ಮೆಯ ಸೀರೆಯನ್ನುಟ್ಟು ದೇಗುಲಕ್ಕೆ ಹೊರಟಾಗ ಗೇಟಿನ ಬಳಿ ಪಕ್ಕದಮನೆ ಲಲಿತಮ್ಮ ಕಂಡರು. ತನ್ನ ಸೀರೆಯನ್ನು ಇನ್ನೂ ಯಾರು ನೋಡಿರದ, ಅದರ ಕುರಿತು ಮೆಚ್ಚುಗೆಯ ಮಾತುಗಳು ಯಾರ ಬಾಯಲ್ಲೂ ಕೇಳಿರದ ಕಾರಣ ಜಾನಕಮ್ಮನಿಗೆ ಒಳಗೊಳಗೆ ಬೇಸರ. ಈಗ ಆ ಕೊರತೆ ಖಂಡಿತ ನೀಗುತ್ತೆ ಎಂಬ ಭರವಸೆಯಿಂದ ಲಲಿತಮ್ಮನಿಗೆ ಹೊಸ ವರುಷದ ಶುಭಾಶಯ ಕೋರಿದರು. ಲಲಿತಮ್ಮ ಮರು ಶುಭಾಶಯ ತಿಳಿಸುತ್ತ ಜಾನಕಮ್ಮನವರ ಭರವಸೆಗೆ ಧಕ್ಕೆ ಬಾರದಂತೆ 'ಸೀರೆ ತುಂಬಾ ಚೆನ್ನಾಗಿದೆ ಬಾರ್ಡರ್, ಪಲ್ಲು ತುಂಬಾನೇ ಚೆನ್ನಾಗಿದೆ. ಯಾರು ಕಾವ್ಯ ತಂದಿದ್ದಾ?' ಕೇಳಿದರು.
ಈ ಮಾತಿಗೇ ಕಾಯುತ್ತಿರುವಂತೆ 'ಅಯ್ಯೋ! ಇಷ್ಟು ಬೆಲೆಬಾಳುವ ಸೀರೆ ಅವಳಿಗೆ ತರೋಕ್ಕಾದರೂ ಮನಸ್ಸು ಬರುತ್ತಾ? ಮಹಾತಾಯಿ ನೂಲಿನ ಸೀರೆ ತರೋಕ್ಕೆ ಸಾವಿರ ಕಷ್ಟಗಳನ್ನು ಸಾಲಾಗಿ ಹೇಳಿಕೊಂಡು ಬರುತ್ತಾಳೆ. ಈ ಸೀರೆ ನಮ್ಮ ವರ್ಷ ತಂದದ್ದು'. ಒಬ್ಬಟ್ಟು ತಟ್ಟಲು ಬಾಳೆ ಎಲೆ ಮರೆತ ಕಾರಣ ತರಲು ಹೊರಟ ಕಾವ್ಯಳಿಗೆ ಇದು ಕೇಳಿಸಿತು. ಅವರ ಸ್ವಭಾವವೇ ಹಾಗೆ ಅಂತಂದುಕೊಂಡರೂ ಹಬ್ಬದ ದಿನ ತನ್ನನ್ನ ಕೇವಲ ಮಾಡಿ ಮಾತನಾಡಿದ್ದು ಕೇಳಿ ಅವಳ ಎದೆಯಲ್ಲಿ ಮುಳ್ಳು ನಾಟಿದಂತಾಯಿತು. ಆದರೂ ವರ್ಷಾಳ ಶ್ರೀಮಂತಿಕೆಗೆ ತಾವು ಸರಿತೂಗೊಲ್ಲ ಅನ್ನೋದು ಅತ್ತೆಗೆ ತಿಳಿಯದ ವಿಷಯವೇ?. 'ಅದ್ಯಾಕೆ ಹೀಗೆ ಪದೇಪದೆ ಹೀಯಾಳಿಸುತ್ತಾರೋ?' ನೊಂದುಕೊಳ್ಳುತ್ತಾ ಮುನ್ನಡೆದಳು ಕಾವ್ಯ.
ಜಾನಕಮ್ಮನಿಗೆ ಇಬ್ಬರು ಗಂಡುಮಕ್ಕಳು. ದೊಡ್ಡವನು ರಾಜ, ಚಿಕ್ಕವನು ರವಿ. ರಾಜನ ಹೆಂಡತಿ ಕಾವ್ಯ ಅವರಿಗಿಬ್ಬರು ಮಕ್ಕಳು. ರಾಜ ಒಂದು ಖಾಸಗಿ ಆಫೀಸಿನಲ್ಲಿ ಆಕೌಂಟೆಂಟ್. ಅವನ ಸಂಪಾದನೆ ಅವರ ಸಂಸಾರಕ್ಕೆ ಅಳೆದು ಸುರಿದು ಸರಿ ಹೋಗುತ್ತದೆ. ಯಾವ ತಿಂಗಳು ಹೆಚ್ಚಿನ ಖರ್ಚು ಬಂದರೂ ಸಾಲ ಮಾಡಬೇಕಾದ ಸ್ಥಿತಿ. ಮುಂದಿನ ತಿಂಗಳಿನ ಸಂಬಳದಲ್ಲಿ ಸಾಲ ಪಾವತಿಸಿದಾಗ ಅಂದಿನ ತಿಂಗಳಲ್ಲಿ ಮತ್ತೆ ಸಾಲ. ಹೀಗೆ ಒಂದು ವಿಷ ವರ್ತುಲ ಅವರನ್ನು ಸುತ್ತುವರಿದಿದ್ದು ಸುಳ್ಳಲ್ಲ. ಇದೇ ಕಾರಣ ಆದಷ್ಟು ಅನವಶ್ಯ ಖರ್ಚುಗಳಿಗೆ ಕೊಕ್ಕೆ ಹಾಕಿ ಸಂಸಾರ ನಡೆಸುವ ಪ್ರಯತ್ನ ಕಾವ್ಯಳದ್ದು.
ಎರಡನೇ ಮಗ ರವಿ ಬಿಸಿನೆಸ್ ಮಾಡುತ್ತಿದ್ದಾನೆ. ಅದೃಷ್ಟ ಕೂಡಿ ಬಂದು ಒಳ್ಳೆಯ ಸಂಪಾದನೆ ಪರನಾದ ರವಿಗೆ ಶ್ರೀಮಂತರ ಸಂಬಂಧವೇ ಕುದುರಿತು. ಮಾವನವರಿಗೆ ಇಬ್ಬರೂ ಹೆಣ್ಮಕ್ಕಳೇ ಆದ್ದರಿಂದ ಅವರು ತೀರಿದ ನಂತರ ಆಸ್ತಿಯನ್ನು ಮಕ್ಕಳಿಬ್ಬರೂ ಸಮನಾಗಿ ಹಂಚಿಕೊಂಡರು. ದೊಡ್ಡ ಬಂಗಲೆ, ಕಾರು, ಆಳುಕಾಳುಗಳು ಇಬ್ಬರು ಮಕ್ಕಳೊಂದಿಗೆ ಅವರದ್ದು ಸುಖಿ ಸಂಸಾರ.
ಬಾಳೆಲೆಗೆ ಹೊರಟ ಕಾವ್ಯಳ ಮನಸ್ಸಿನಲ್ಲಿ ಆಲೋಚನೆಗಳು. ಹಬ್ಬ ಬಂದರೇ ಸಾಧಾರಣ ಬಟ್ಟೆಗಳು ಕೊಂಡುಕೊಳ್ಳುವುದೇ ದುಸ್ತರ. ಇನ್ನು ಸಾವಿರಾರು ರು. ಸುರಿದು ರೇಷ್ಮೆ ಸೀರೆಯನ್ನು ತಾವು ಹೇಗೆ ತರಬಲ್ಲರು? ಮನೆ ಮಂದಿ ಹೊಸ ಬಟ್ಟೆ ಹಾಕಿಕೊಂಡು ಅತ್ತೆಗೆ ತಂದಿಲ್ಲವೆಂದರೆ ಅವರು ಹೀಗೆ ಆಡಿಕೊಂಡರೆ ಅರ್ಥವಿದೆ. ಹಬ್ಬದ ದಿನ ಅದೂ ಅಲ್ಲದೆ ವರುಷ ಪೂರ್ತಿ ಅವರ ಒಳಿತು ಕೆಡಕುಗಳನ್ನು ಔಷಧಿ ಪಥ್ಯಗಳನ್ನು ನೋಡಿಕೊಂಡರೂ ವರುಷಕ್ಕೊಂದು ಅಥವಾ ಎರಡು ಸಲ ವರ್ಷ ಕಳುಹಿಸಿಕೊಡುವ ಸೀರೆ ಒಡವೆಗಳನ್ನು ಕಾರಣವಾಗಿಸಿ ತನ್ನನ್ನು ಹೀನಾಯವಾಗಿ ಆಡಿಕೊಳ್ಳದೇ ಇದ್ದರೆ ಇವರಿಗೆ ಆಗುವುದೇ ಇಲ್ಲ. ಮನೆಯ ಪರಿಸ್ಥಿತಿ ತಿಳಿದಿದ್ದು ಹೀಗೆ ಮಾತನಾಡುವುದು ಸರಿಯಾ? ಅತ್ತೆಯವರನ್ನು ಕೇಳಿಯೇ ಬಿಟ್ಟಳು ಕಾವ್ಯ.
'ಅತ್ತೆ, ನಿಮಗೆ ಮನೆಯ ಪರಿಸ್ಥಿತಿ ಗೊತ್ತಿದ್ದರೂ ಹೀಗೆ ಅಕ್ಕಪಕ್ಕದವರ ಮುಂದೆ ಹೀಯಾಳಿಸುವುದು ಸರಿಕಾಣೊಲ್ಲ. ನಾನು ರೇಷ್ಮೆಯ ಸೀರೆ ತಂದು ನಿಮಗೆ ತರದೇ ಇದ್ದರೇ ಆಗ ನೀವು ಹೀಗೆ ಮಾತನಾಡಿದರೂ ಸರಿ. ಈ ಹಬ್ಬಕ್ಕೆ ನಾನು ಸೀರೆ ಬೇಡವೆಂದುಕೊಂಡದ್ದರಿಂದ ನಿಮಗೆ ಕಾಟನ್ ಜರೀ ಸೀರೆ ತರಲು ಸಾಧ್ಯವಾಯಿತು. ನೀವು ಮಾಡಿದ್ದು ಸರಿಯಾ?' ಅಂದಳು ನಿಷ್ಠುರವಾಗಿ.
ಸೊಸೆ ಬಾಯ್ತೆರೆಯದೇ ಕಾಯುತ್ತಾ ಕೂತವರಂತೇ ಜಾನಕಮ್ಮ ಏರುದನಿಯಲ್ಲಿ, 'ಹೌದಮ್ಮ! ನಾನು ನಿಮಗೆ ತುಂಬಾ ಭಾರವಾಗಿದೀನಿ. ಇಡೀ ವರುಷ ನನ್ನ ಊಟ ಬಟ್ಟೆಗೆ ನೀವು ಸಾಲಗಾರರಾಗುತ್ತಾ ಇದ್ದೀರಿ. ನಿನ್ನ ಹತ್ತಿರ ಮಾತುಗಳು ಕೇಳಿ ಕೇಳಿ ನನಗೂ ಸಾಕಾಗಿದೆ. ರವಿ ಹೇಗಿದ್ದರೂ ಈಗ ಇದೇ ಊರಿಗೆ ಬಂದಿದ್ದಾನೆ. ನಾನು ಅಲ್ಲೇ ಹೋಗ್ತೀನಿ. ನನ್ನ ಕಾಟ ನಿನಗೆ ತಪ್ಪುತ್ತೆ. ಸಾಲ ಮಾಡೋದೂ ತಪ್ಪುತ್ತೆ. ಸಾವಿರಾರು ರು. ಸುರಿದು ಸೀರೆ ಕೊಂಡವಳು ನನಗೆ ಎರಡೂ ಹೊತ್ತು ಊಟಹಾಕಲಾರಳಾ?' ಅನ್ನುತ್ತಾ ಮೂಗು ಸೀದಿದರು.
ಕಾವ್ಯಳದ್ದು ಸಾಧಾರಣ ಸೌಮ್ಯ ಸ್ವಭಾವ. ಆದರೇ ಹಬ್ಬದ ದಿನ ಹೀಗಾಯಿತಲ್ಲ ಎಂದು, ಹಾಗೇ ವರ್ಷಳಿಗೆ ಹೋಲಿಸಿ ತನ್ನನ್ನು ಹೀಯಾಳಿಸಿದ್ದು ಎಲ್ಲ ಸೇರಿ ಅವಳ ಆತ್ಮಾಭಿಮಾನಕ್ಕೆ ಪೆಟ್ಟು ಬಿದ್ದಂತಾಗಿ ದನಿ ಜೋರಾಯಿತು. 'ಹೋಗಿ, ಅಲ್ಲೇ ಹೋಗಿರಿ. ಇಲ್ಲಿ ತಿಳಿಸಾರು ತಿನ್ನೋದು ತಪ್ಪುತ್ತೆ. ಅಲ್ಲಾದರೇ ಕಾಲು ಕೆಳಗಿಡದೇ ಕಾರಿನಲ್ಲೇ ಓಡಾಡಬಹುದು. ದಿನಕ್ಕೊಂದು ಸೀರೆ ಒಡವೆ ಹಾಕ್ಕೋಬಹುದು' ಎಂದಳು ಸಿಟ್ಟಿನಲ್ಲಿ.
ಇವರಿಬ್ಬರ ಕಿರುಚಾಟಕ್ಕೆ ರೂಮಿನಲ್ಲಿರುವ ರಾಜ ಹೊರಗೆ ಬಂದ. 'ಕಾವ್ಯಾ ಏನಿದು? ಯಾಕೆ ಹೀಗೆ ಕೂಗ್ತಿದ್ದೀರಾ? ನಿನಗೆ ಹುಚ್ಚುಗಿಚ್ಚು ಹಿಡಿದಿಲ್ಲ ತಾನೇ?' ಎಂದು 'ಇಷ್ಟು ರಂಪಾಟ ಮಾಡಿದವಳಲ್ಲ ನೀನು. ಏನಾಗಿದೆ ನಿನಗಿವತ್ತು?' ಎಂದ ಕೋಪವಾಗಿ.
'ಆ! ನಾನೂ ಮನುಷ್ಯಳೇ. ನನಗೂ ಕೋಪ ಬರುತ್ತೆ, ನಿಮ್ಮ ಅಮ್ಮ ರೇಷ್ಮೆ ಸೀರೆ ಕೊಡಿಸಿಲ್ಲವೆಂದು ಅಕ್ಕಪಕ್ಕದವರ ಮುಂದೆ ಆಡಿಕೊಂಡಿದ್ದಕ್ಕೆ ನಾನು ಮಾತನಾಡಿದ್ದು ಇಲ್ಲದೇ ಹೋದ್ರೇ ನನಗೇನೂ ಹೊತ್ತೋಗದಿಲ್ವಾ ಇವರ ಹತ್ತಿರ ಜಗಳವಾಡೋಕೆ ಮಾಡೋಕೆ? ಬೆಟ್ಟದಷ್ಟು ಕೆಲ್ಸ ಇದೆ' ಇನ್ನೂ ಇಳಿಯದ ಕೋಪದಿಂದ ಮಾತುಗಳು ಹರಿತವಾಗಿತ್ತು. 'ಹೌದು ತಾಯೀ, ಎಲ್ಲ ಕೆಲಸ ನೀನೇ ಮಾಡೋದು. ನಾನು ಮಾತ್ರ ಕೂತು ತಿಂದು ಹೊತ್ತು ಹೋಗದೇ ಈ ರೀತಿ ಜಗಳ ತೆಗೀತಾ ಇದೀನಿ. ಇಷ್ಟಕ್ಕೂ ನಾನೇನಂದೆ? ವರ್ಷ ಈ ಸೀರೆ ತಂದುಕೊಟ್ಟದ್ದು ಅಂತ ಹೇಳಿದೆ. ಅದಕ್ಕೆ ನಿನಗ್ಯಾಕೆ ಆಕ್ರೋಶ' ಎಂದರು.
'ಅತ್ತೇ, ನೀವು ಅಷ್ಟೇ ಮಾತನಾಡಿದ್ರೆ ನನಗೆ ಕೋಪ ಬರ್ತಿರ್ಲಿಲ್ಲ. ಇರಲಿ ಈಗ ಮಾತು ಮರೆಸಬೇಡಿ. ಕೆಲಸದ ವಿಷಯವಾಗಿ ನಿಮ್ಮನ್ನು ನಾನು ಎಂದೂ ಪ್ರಶ್ನಿಸಿಲ್ಲ. ಆ ವಿಷಯ ನಿಮಗೂ ಗೊತ್ತು. ಸುಮ್ಮನೆ ಆರೋಪಿಸಬೇಡಿ' ಎಂದಳು.
'ಹೌದು, ಪ್ರತಿ ಮಾತಿಗೂ ಕೊಂಕು ತೆಗೆಯೋದು ನನ್ನ ಬುದ್ಧಿ. ನಿನ್ನನ್ನು ಆಡಿಕೊಂಡರೇನೇ ನನಗೆ ತಿಂದದ್ದು ಜೀರ್ಣವಾಗೋದು. ಈ ರಗಳೆಯೇ ಬೇಡ. ನಾಳೆ ಬೆಳಗ್ಗೇನೆ ನಾನು ನನ್ನ ಮಗನ ಮನೆಗೆ ಹೊರಟು ಹೋಗ್ತೀನಿ. ನೀವು ಸುಖವಾಗಿ ಸಂಸಾರ ಮಾಡಿಕೊಂಡಿರಿ' ಎನ್ನುತ್ತಾ ಮೂಗು ಸೀದಿ ಹಬ್ಬ ಅಂತಲೂ ನೋಡದೇ ಹಾಸಿಗೆಯ ಮೇಲೆ ಉರುಳಿದರು.
ಏನೋ ಕೋಪದಲ್ಲಿ ಅಮ್ಮ ಹಾಗಂದಿದ್ದಾಳೆ ಅಂದುಕೊಂಡ ರಾಜನ ಅನಿಸಿಕೆ ಸುಳ್ಳಾಯಿತು. ಕಾವ್ಯಳೂ ಏನೋ ಆಕ್ರೋಶದಿಂದ ಅತ್ತೆ ಹಾಗೆ ಮಾತನಾಡಿದ್ದಾರೆ ಆಮೇಲೆ ಅವರೇ ಸರಿ ಹೋಗ್ತಾರೆ ಎಂದುಕೊಂಡಿದ್ದಳು. ಆದರೇ ಜಾನಕಮ್ಮ ಬಟ್ಟೆಗಳನ್ನು ಸೂಟ್‌ಕೇಸಿನಲ್ಲಿ ತುಂಬಿ ನಿಂತಾಗ ಅವರಿಗರಿವಾಯಿತು. ಆಕೆ ಆ ವಿಷಯವನ್ನು ಎಷ್ಟು ತೀವ್ರವಾಗಿ ತೆಗೆದುಕೊಂಡಿದ್ದಾಳೆಂದು. ಅವರು ಎಷ್ಟೇ ಬೇಡಿಕೊಂಡರೂ ಆಕೆ ಕಿವಿಗೊಡದೇ ನಡೆದೇ ಬಿಟ್ಟರು. 'ಹೋಗಲಿ ಬಿಡು ಸ್ವಲ್ಪ ಕಾಲ ಆ ಮಗನೊಂದಿಗೆ ಇದ್ದ ಹಾಗಾಗುತ್ತೆ. ಕಾಲಕಳೆದಂತೆ ಈ ಕೋಪತಾಪ ಮಾಯವಾಗುತ್ತೆ' ಎಂದು ತಮಗೆ ತಾವೇ ಸಮಾಧಾನಿಸಿಕೊಂಡರು.
ಜಾನಕಮ್ಮ ಎರಡನೇ ಮಗನ ಮನೆ ಸೇರಿ ತಿಂಗಳುಗಳು ಕಳೆದವು. ಇದ್ದಕ್ಕಿದ್ದಂತೆ ಒಂದಿನ ಹೇಳದೇ ಕೇಳದೇ ದೊಡ್ಡ ಮಗನ ಮನೆಗೆ ಹಿಂದಿರುಗಿದರು. ಏನೋ ಆಗಾಗ ಮಾತುಕತೆ ನಡೆದರೂ ಅಷ್ಟು ವರ್ಷ ಅತ್ತೆಯ ಜೊತೆ ಅನುಬಂಧ ಬೆಳೆಸಿಕೊಂಡ ಕಾವ್ಯಳಿಗೆ ಅವರು ಹೊರಟ ನಂತರ ಅವರಿಲ್ಲದ ಲೋಪ ಎದ್ದು ಕಾಣುತ್ತಿತ್ತು. ಮಕ್ಕಳೂ 'ಅಜ್ಜಿ ಯಾವಾಗ ಬರ್ತಾರೆ?' ಅಂತ ಪದೇಪದೆ ಕೇಳ್ತಿದ್ರು. ಆಕೆಗಿದ್ದ ಕೋಪವೆಲ್ಲ ಸೊಸೆಯ ಮೇಲೆ ವಿನಾ ಮಕ್ಕಳ ಮೇಲಲ್ಲ. ಮೊಮ್ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ತಾ ಇದ್ರು. ಹಾಗಾಗಿ ಅತ್ತೆಯ ಹಠಾತ್ ಆಗಮನ ಕಾವ್ಯಳಿಗೆ ಖುಷಿ ತಂದಿತು. ಮನತುಂಬಿ ಆಕೆಯನ್ನು ಬರಮಾಡಿಕೊಂಡಳು ಕೈಕಾಲು ತೊಳೆದ ನಂತರ ಬಿಸಿಬಿಸಿ ಕಾಫಿ ಕೊಟ್ಟು 'ಹೇಗಿದ್ದೀರಾ ಅತ್ತೇ?' ಎಂದು ಕೇಳಿದಳು. ಆ ಕರೆಗೇ ಕಾಯುತ್ತಿರುವರಂತೆ ಜಾನಕಮ್ಮನವರ ಕಣ್ಣೀರಕಟ್ಟೆ ಒಡೆಯಿತು. 'ಏನಾಯಿತು ಅತ್ತೇ?' ಅಂತ ಗಾಬರಿಯಿಂದ ಆಕೆಯ ಭುಜಗಳನ್ನು ಅಲುಗಾಡಿಸಿದಳು ಕಾವ್ಯ. ಅದಕ್ಕುತ್ತರವಂತೆ ಆಕೆಯ ಅಳು ಮತ್ತಷ್ಟು ಹೆಚ್ಚಿತು. ಸ್ವಲ್ಪ ಹೊತ್ತು ಅಳು ಹಾಗೇ ಮುಂದುವರಿಯಿತು. ವಿಷಯವೇನು ಅನ್ನೋದು ಗೊತ್ತಾಲಿಲ್ಲ.
ಮತ್ತೆ ಕಾವ್ಯ ಪ್ರಶ್ನಿಸಿದಳು. 'ಯಾಕತ್ತೇ ಅಲ್ಲೇನಾಯಿತು? ವರ್ಷ ನಿಮ್ಮನ್ನು ಸರಿಯಾಗಿ ನೋಡಿಕೊಳ್ಳಲಿಲ್ವಾ? ನೀವು ಅಲ್ಲಿದ್ದದ್ದು ಅವರಿಗೆ ಇಷ್ಟವಾಗಲಿಲ್ವಾ?'. ಇನ್ನೂ ಮುಂದೆ ಏನು ಕೇಳಬೇಕೋ ತೊಚದೇ ಮೌನವನ್ನಾಶ್ರಯಿಸಿದಳು ಕಾವ್ಯ.
ಸ್ವಲ್ಪ ಹೊತ್ತಿಗೆ ತಮ್ಮ ದುಃಖವನ್ನು ಹತೋಟಿಗೆ ತಂದುಕೊಂಡ ಜಾನಕಮ್ಮ ಹೇಳಿದರು; 'ಅಲ್ಲಿ ಎರಡೂ ಹೊತ್ತು ಹಬ್ಬದ ಅಡುಗೆಯೇ. ಎಲ್ಲಿ ಹೋಗಬೇಕೆಂದರೂ ಕಾರಿನಲ್ಲೇ, ಒಳ್ಳೆಯ ಸೀರೆ ಒಡವೆಗೆ ಕಮ್ಮಿ ಇಲ್ಲ. ಆದರೇ...'. ಮತ್ತೆ ದುಃಖ ಒತ್ತರಿಸಿಬಂತು ಜಾನಕಮ್ಮನಿಗೆ. ಸ್ವಲ್ಪ ಹೊತ್ತಿಗೆ ತಾವೇ ಸಮಾಧಾನಿಸಿಕೊಂಡು ಮುಂದುವರಿಸಿದರು. 'ರವಿಗೆ ಒಂದು ನಿಮಿಷವೂ ಟೈಮ್ ಸಿಗಲ್ಲ. ಸಿಕ್ಕಾಗ ಆಳು ಕಾಳುಗಳಿಗೆ ಅಮ್ಮಾವ್ರನ್ನ ಚೆನ್ನಾಗಿ ನೋಡಿಕೊಳ್ಳಿ ಎನ್ನುತ್ತಿದ್ದನೇ ವಿನಾ ಬಾಯ್ತುಂಬಾ ಅಮ್ಮಾ ಎಂದು ಕರೆದು ನನ್ನ ಹತ್ತಿರ ಕೂತವನಲ್ಲ. ಮಕ್ಕಳು ನನ್ನ ಹತ್ತಿರ ಸುಳಿಯುತ್ತಿರಲಿಲ್ಲ. ಬಲವಂತವಾಗಿ ಹಿಡಿದು ಮುದ್ದು ಮಾಡಿದರೇ ಹುಳು ಮೈಮೇಲೆ ಹರಿದಂತೆ ಆಡೋರು. ಇನ್ನು ವರ್ಷ ಸದಾ ಕ್ಲಬ್ ಮೀಟಿಂಗ್ ಎಂದು ಸುತ್ತುತ್ತಾ, ಒಂದುಕ್ಷಣ ಕೆಲಸದವರ ಹತ್ತಿರ ಆಕೆಯನ್ನು ಅಲ್ಲಿ ಕರೆದುಕೊಂಡು ಹೋಗಿ. ಆಕೆಗೇನು ಇಷ್ಟವೋ ಆ ಅಡುಗೆಯನ್ನು ಮಾಡಿ ಅನ್ನುತ್ತಾ ಪರಾಯಿಯವರನ್ನು ನಡೆಸಿಕೊಳ್ಳುವಂತೆ ನನ್ನಿಂದ ಮೈಲು ದೂರ ಇರ್ತಿದ್ಲು. ಒಂದು ಸಲವೂ ನನ್ನನ್ನು ಬಾಯಿತುಂಬಾ ಅತ್ತೇ ಅಂತ ಕರೆದಿಲ್ಲ'. ಮತ್ತೆ ದುಃಖ ಉಮ್ಮಳಿಸಿ ಬಂತು. ಕಣ್ಣೀರನ್ನು ಒರೆಸಿಕೊಳ್ಳುತ್ತಾ ಅಲ್ಲಿರುವಷ್ಟು ದಿನ ಅಡುಗೆಯವಳ ಜೊತೆ ಆ ಮಾತು ಈ ಮಾತು ಆಡುತ್ತಾ ಕಾಲಕಳೆದ. ಮತ್ತೆ ಆಕೆಯ ಅಳು ಮುಂದವರಿಯಿತು.
ಅಷ್ಟು ದಿನಗಳ ಆಕೆಯ ನೋವು ಆ ಕಣ್ಣೀರಲ್ಲಿ ಕರಗಿ ಹೋಗುತ್ತಿದೆ ಎಂದರಿವಾಗಿ ಆಕೆಯನ್ನು ತಡೆಯದೇ ಅಳಲು ಬಿಟ್ಟಳು ಕಾವ್ಯ. ಅಲ್ಲಿ ಯಾವ ಕೊರತೆಯೂ ಇಲ್ಲದೇ ಹೋದರೂ ಪ್ರೇಮಾನುರಾಗಗಳಿಗೆ ದೊಡ್ಡಮಣೆ ಹಾಕಿ, ಹಾಗೇ ಆ ಭೋಗಭಾಗ್ಯಗಳಿಗಿಂತಲೂ ಅತ್ತೆಯ ಪಟ್ಟಕ್ಕೆ ಹೆಚ್ಚು ಮಹತ್ವ ದೊರಕಲಿಲ್ಲವೆನ್ನುವುದು ಆಕೆಯ ದುಃಖದ ಮೂಲಕಾರಣ ಎಂದರಿತ ಕಾವ್ಯಳಿಗೆ ಪಾಪ ಎನಿಸಿತು.
ಇನ್ನೂ ಅಳುತ್ತಿದ್ದ ಅತ್ತೆಯನ್ನು ಅಕ್ಕರೆಯಿಂದ ಆಲಂಗಿಸಿ 'ಸಮಾಧಾನ ತಂದುಕೊಳ್ಳಿ ಅತ್ತೇ' ಅಂದಳು ಮೆಲುದನಿಯಲ್ಲಿ ಅಷ್ಟೊತ್ತಿಗಾಗಲೆ ಆ ಕರೆಯ ಮಾಧುರ್ಯವನ್ನು ಬಹಳಷ್ಟು ಸಲ ಸವಿದ ಜಾನಕಮ್ಮನವರ ದುಃಖ ತಗ್ಗತೊಡಗಿತು.
ಸಂಜೆ ಮನೆಗೆ ಬಂದ ರಾಜು ಅಮ್ಮನನ್ನ ಕಂಡಕೂಡಲೇ ಆಶ್ಚರ್ಯ, ಆನಂದ ಬೆರೆತ ದನಿಯಲ್ಲಿ 'ಅಮ್ಮಾ' ಎನ್ನುತ್ತ ಪ್ರೀತಿಯಿಂದ ತಬ್ಬಿಕೊಂಡ. ಮಕ್ಕಳೂ ಅಜ್ಜೀ ಕತೆ ಹೇಳಿ ಎಂದು ಬೆನ್ನು ಹಿಡಿದರು. ರಾಜನ 'ಅಮ್ಮಾ' ಎನ್ನುವ ಕರೆ, ಕಾವ್ಯಳ 'ಆತ್ತೇ' ಎನ್ನುವ ಸಂಬೋಧನೆ, ಮಕ್ಕಳ ಪ್ರೀತಿಯ ನುಡಿಗಳಿಂದ ಸ್ವಲ್ಪ ಹೊತ್ತಿಗೆ ಜಾನಕಮ್ಮನವರ ದುಃಖ ಮಂಗಮಾಯವಾಯಿತು. ಸ್ವಲ್ಪ ಬಿಂಕದಿಂದಲೇ ಸೊಸೆಯ ಹತ್ತಿರ ಆ ಮಾತು ಈ ಮಾತು ಆಡುತ್ತಾ ಮುಂಚಿನಂತೆಯೇ ಮನೆಯೆಲ್ಲ ತಾನೇ ಆಗಿ ಓಡಾಟ ಶುರುಮಾಡಿಕೊಂಡರು ಜಾನಕಮ್ಮ.
-ರೋಹಿಣಿ ಸತ್ಯ
rohini.satya@gmail.com
Advertisement