-ರುದ್ರಾಣಮ್ಮ, ಊರಿಲ್ಲ
ಗಂಡ ತನ್ನ ತಾಯಿಗೆ(ನನ್ನ ಅತ್ತೆ) ದತ್ತುಮಗನಾಗಿದ್ದು, ನಮಗೆ ಮೂವರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನಿದ್ದು, ಅವರ ಮದುವೆಗೆ ಸ್ವಲ್ಪ ಆಸ್ತಿ ಮಾರಿದ್ದೇವೆ. ಮಗ ಮದುವೆಯಾದ ಆರು ತಿಂಗಳಿಗೇ ಬೇರೆ ಹೋಗಿದ್ದಾನೆ. ನಮಗೀಗ ವಯಸ್ಸಾಗಿದೆ. ಜೀವನಕ್ಕೆ ತುಂಬಾ ತೊಂದರೆಯಾಗಿದೆ. ಉಳಿದಿರುವ ಆಸ್ತಿಯನ್ನು ಮಾರಲು ತೊಂದರೆಯಾಗಿದೆ. ಈ ಆಸ್ತಿ ನನ್ನ ಗಂಡನಿಗೆ ಸ್ವಯಾರ್ಜಿತವೇ ಅಥವಾ ಪಿತ್ರಾರ್ಜಿತವೇ?
- ಹಿಂದೂ ಉತ್ತರಾಧಿಕಾರ ಕಾಯ್ದೆ 1956 ಇದರ ಕಲಂ 6ರಂತೆ ಒಬ್ಬ ಪುರುಷನ ಆಸ್ತಿ ಮಾತ್ರವೇ ಪಿತ್ರಾರ್ಜಿತವೆಂದು ಘೋಷಿಸಲಾಗಿದೆ. ಅಲ್ಲದೆ ಅದೇ ಕಲಂ 6(2) ಹಾಗೂ ಕಲಂ 14ರಂತೆ ಒಬ್ಬ ಮಹಿಳೆಯ ಆಸ್ತಿಯು ಆಕೆಯ ಸಂಪೂರ್ಣ ಸ್ವಾಮ್ಯಕ್ಕೆ ಒಳಪಡುತ್ತದೆ. ಆ ಆಸ್ತಿಯು ನಿಮ್ಮ ಗಂಡನಿಗೆ ಸೇರಿದರೆ ಅದು ಪಿತ್ರಾರ್ಜಿತವಾಗುವುದಿಲ್ಲ. ಅದು ಸ್ವಯಾರ್ಜಿತದಂತೆ ಆಗಿದ್ದು, ಅವರು ಅದನ್ನು ಹೇಗೆ ಬೇಕಾದರೂ ಪರಭಾರೆ ಮಾಡಬಹುದು. ಅಲ್ಲದೆ ಹಿಂದೂ ದತ್ತಕ ಹಾಗೂ ನಿರ್ವಹಣಾ ಕಾಯ್ದೆಯ ಕಲಂ 20(2) ಹಾಗೂ 2007ರ ಮಾತಾಪಿತೃ ಹಾಗೂ ಹಿರಿಯ ನಾಗರಿಕರ ನಿರ್ವಹಣಾ ಕಾಯ್ದೆಯ ಕಲಂ 4ರಂತೆ ನಿಮ್ಮ ಮಗ ನಿಮ್ಮನ್ನು ಪೋಷಣೆ ಮಾಡುವುದು ಕಡ್ಡಾಯವಾಗಿರುತ್ತದೆ.
ಹಿಸ್ಸೆಗೆ ಯಾರಿಗೂ ಹಕ್ಕಿಲ್ಲ
ಸಿದ್ದಭೈರಪ್ಪ, ರಾಮನಗರ
ನಮ್ಮ ತಾಯಿಯವರು ಅವರ ತಂದೆಯಿಂದ ಖರೀದಿಸಿದ್ದ ಜಮೀನನ್ನು 1990ರಲ್ಲಿ ನನ್ನ ತಾಯಿಯ ತಂದೆ, ಒಬ್ಬ ಸೋದರ ಸೇರಿ ನನಗೆ ತಿಳಿಯದಂತೆ ಮಾರಾಟ ಮಾಡಿದ್ದಾರೆ. ಈಗ ನನಗೆ ತಿಳಿದ ಮೇಲೆ ಕೇಳಿದಾಗ ಅದನ್ನು ಮಾರಾಟ ಮಾಡಿದರೆಂದು ಹೇಳುತ್ತಾರೆ. ನಾನು ಈಗ ಜಮೀನು ಕೊಂಡವರ ಮೇಲೆ ದಾವಾ ಹೂಡಬಹುದೇ?
- ಹಿಂದೂ ಉತ್ತರಾಧಿಕಾರ ಕಾಯ್ದೆ, 1956 ಇದರ ಕಲಂ 14ರಂತೆ ನಿಮ್ಮ ತಾಯಿಗೆ ಅವರ ಆಸ್ತಿಯ ಮೇಲೆ ಸಂಪೂರ್ಣ ಸ್ವಾಮ್ಯವಿದ್ದು, ಅದರಲ್ಲಿ ಹಿಸ್ಸೆಗೆ ಯಾರಿಗೂ ಹಕ್ಕಿಲ್ಲ. ಆದ್ದರಿಂದ ಅದನ್ನು ಮಾರಾಟ ಮಾಡಲು ನಿಮ್ಮ ಒಪ್ಪಿಗೆಯೂ, ಸಹಿಯ ಅಗತ್ಯವೂ ಇಲ್ಲ. ಅದರಲ್ಲಿ ಹಿಸ್ಸೆ ಬರುವುದೂ ಇಲ್ಲ.
ದಾಖಲಾತಿ ಕಲೆಹಾಕಿ
ಜಯತೀರ್ಥ, ಬೆಂಗಳೂರು
ಬೆಂಗಳೂರು ಚಾಮರಾಜಪೇಟೆ 3ನೇ ಮುಖ್ಯರಸ್ತೆಯಲ್ಲಿ ನಮ್ಮ ತಾತನ ಕಾಲದ 300 ವರ್ಷ ಹಳೆಯ ಮನೆಯಿದ್ದು, ದಾಖಲಾತಿಗಳು ಲಭ್ಯವಿಲ್ಲ. ಆದರೆ ಆ ವಂಶದ ಪ್ರತಿನಿಧಿಗಳು ಇದ್ದಾರೆ. ಸದರಿ ಮನೆಯನ್ನು ಊರ್ಜಿತಗೊಳಿಸಲು ಏನು ಮಾಡಬೇಕು?
- ಕಾರ್ಪೊರೇಷನ್ ಕಚೇರಿಯಲ್ಲಿ ದಾಖಲಾತಿ ತೆಗೆಸಿ ನೋಡಿ. ನಗರ ಸರ್ವೆ ಕಚೇರಿಯಲ್ಲೂ ನೋಡಿ. ಉಳಿದಂತೆ ಯಾವ ದಾಖಲಾತಿಯೂ ಲಭ್ಯವಿರಲಾರದು. ಈಗ ಯಾರಾದರೂ ಆ ಮನೆಗೆ ಕಂದಾಯ ಕಟ್ಟುತ್ತಿದ್ದರೆ ಅವರ ಬಳಿ ದಾಖಲಾತಿ ಏನಾದರೂ ಇದೆಯೇ ಪರಿಶೀಲಿಸಿ. ಇವುಗಳಲ್ಲಿ ಒಂದಾದರೂ ದಾಖಲಾತಿ ಲಭ್ಯವಿರಲೇಬೇಕು. ಅನಂತರ ಅಗತ್ಯಬಿದ್ದರೆ ಲಾಯರ್ ಮೂಲಕ ಪತ್ರಿಕೆಯಲ್ಲಿ ನೋಟೀಸ್ ಕೊಟ್ಟು ಮನೆ ನಿಮ್ಮದೆಂದು ಸಾಬೀತುಪಡಿಸಲು ಸಾಧ್ಯವಾಗಬಹುದು.
= ಎಚ್.ಆರ್. ಕಸ್ತೂರಿರಂಗನ್
Advertisement