
ವೆಬ್‌ಸೈಟೊಂದು ಪುಸ್ತಕವೊಂದನ್ನು ಹೊರತರುವಷ್ಟು ಸಾಹಿತ್ಯದ ಅಭಿರುಚಿ ಹೊಂದಿದೆ ಎಂಬುದೇ ಆಶ್ಚರ್ಯ ಮತ್ತು ಅಭಿನಂದನಾರ್ಹ ಸಂಗತಿ. ಈ ವಿಷಯದಲ್ಲಿ ಚಿತ್ರಲೋಕಡಾಟ್‌ಕಾಮ್‌ನ ವೀರೇಶ್ ಅವರಿಗೆ ಬಹುಪರಾಕ್ ಹೇಳಲೇಬೇಕು. ಅವರು ಹೊರತಂದಿರುವ, ಹಿರಿಯ ಸಿನಿಮಾ ಪತ್ರಕರ್ತ ಉದಯ ಮರಕಿಣಿ ಅವರ ಉಮ ಕಾಲಂಗಳ ಸಂಗ್ರಹ 'ಟಚ್ ಸ್ಕ್ರೀನ್' ಹೊಸಬಗೆಯ ಸಿನಿರುಚಿ ಬಡಿಸುತ್ತದೆ.
ಇದು ಉದಯ ಮರಕಿಣಿಯವರ ಫಸ್ಟ್ ಬುಕ್. ಹಾಗಂತ ಓದುಗರಿಗೆ ಲವ್ ಅಟ್ ಫಸ್ಟ್ 'ರೈಟ್' ಆಗುತ್ತದೆ ಎನ್ನಲಾಗುವುದಿಲ್ಲ. ಮರಕಿಣಿ ಅವರನ್ನು ಉದಯೋನ್ಮುಖ ಬರಹಗಾರ ಎನ್ನುವಂತಿಲ್ಲ. ಏಕೆಂದರೆ ಉದಯ ಮರಕಿಣಿ ಎಂಬ ಹೆಸರಿಗೆ ಟಚ್‌ಸ್ಕ್ರೀನ್ ಎಂಬ ಪುಸ್ತಕದಿಂದ ಪರಿಚಯವಾಗುವ ಅವಶ್ಯಕತೆಯಿಲ್ಲ.
ಹಾಗಾಗಿ, ಇದು ಉದಯ್ ಅವರ ಮೊದಲ ಪುಸ್ತಕ ಅಷ್ಟೆ. ಮೊದಲ ಬರವಣಿಗೆ ಅಲ್ಲ. ಅವರ ಬರಹದ ರುಚಿ ಕಂಡಿರುವ ಅವರ ಅಭಿಮಾನಿಗಳಿಗೂ ಇದು ಮೊದಲ ಓದಲ್ಲ. ಹೊಸ ಓದು. ಮರಕಿಣಿ ಅವರ ಬರಹಗಳನ್ನು ಓದಿ ಓದಿ ಮರುಳಾದವರಿಗೆ ಇದು ಓದುಗರಾಗಿ ಮರುಹುಟ್ಟು ಪಡೆದಂಥ ಅನುಭವ. ಈ ನಿಟ್ಟಿನಲ್ಲಿ, ಚಿತ್ರರಂಗದ ರುಚಿ ಕಂಡವರಿಗೆ ಉದಯ ಮರಕಿಣಿ ಮತ್ತೆ ಬರೆಯುತ್ತಿದ್ದಾರೆ ಎಂಬುದು ಸುನಿಲ್ ಕುಮಾರ್ ದೇಸಾಯಿ ಮತ್ತೆ ನಿರ್ದೇಶನ ಮಾಡುತ್ತಾರಂತೆ ಎಂಬಂಥ ಸುದ್ದಿಗಳಷ್ಟೇ ರೋಚಕ.
ತಮ್ಮ ಪನ್ ಪಾಂಡಿತ್ಯ ತೋರಿಸಲು ವಿಮರ್ಶೆ ಬರೆಯುವವರಲ್ಲ ಮರಕಿಣಿ. ಚಿತ್ರರಂಗವನ್ನು ಹಣಿಯುವ ಉದ್ದೇಶದಿಂದ ಅವರು ಸಿನಿಮಾಗಳ ಬಗ್ಗೆ ಕೆಟ್ಟ ವಿಮರ್ಶೆಗಳನ್ನು ಬರೆಯಲಿಲ್ಲ. ಹಾಗಂತ ತಾನು ಒಂದು ಕೆಟ್ಟ ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆ ಬರೆದರೆ ಅದರಿಂದ ಸಿನಿಮಾರಂಗ ಪಾವನವಾಗುತ್ತದೆ ಎಂಬ ಭಕ್ತಪ್ರಹ್ಲಾದನ ಲೆವೆಲ್ಲಿನ ಸಿನಿಮಾ ಭಕ್ತಿಯ ಭ್ರಮೆಯೂ ಅವರಿಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಓದುಗರಿಗೆ, ಕೆಟ್ಟ ವಿಮರ್ಶೆಗಳು ಮತ್ತು ಸಿನಿಮಾ ಕೆಟ್ಟದಾಗಿದೆ ಎನ್ನುವ ವಿಮರ್ಶೆಗಳ ನಡುವಿನ ಅಂತರ ಅರ್ಥವಾಗುತ್ತದೆ ಎಂಬ ಅರಿವು ಅವರಿಗಿದೆ. ಆ ದೃಷ್ಟಿಯಲ್ಲೇ ಇಲ್ಲಿನ ಅವರ ಬರಹಗಳನ್ನು ನೋಡಬೇಕಾಗುತ್ತದೆ. ಆಗ, 'ಕಲ್ಲು ಕೊರಗುವ ಸಮಯ', 'ಪ್ರಶಸ್ತಿಗಳು ಮಾರಾಟಕ್ಕಿವೆ', 'ಹಾಯ್ ಕನ್ನಡ ತಾಯ್' ಮುಂತಾದ ಬರಹಗಳಲ್ಲಿ ಚಿತ್ರರಂಗದ ಬಗೆಗಿನ ಅವರ ಪ್ರೀತಿ ಎದ್ದು ಕಾಣುತ್ತದೆ.
ಆದರೂ ಕೆಲವೊಂದು ಬರಹಗಳಲ್ಲಿ ಬೇರೆ ಯಾರೋ ಉದಯ ಮರಕಿಣಿಯವರಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೇನೋ ಎನ್ನುವ ಅನುಮಾನವೂ ಮೂಡುತ್ತದೆ. ಒಮ್ಮೊಮ್ಮೆ ಯಾರನ್ನೋ ಹೊಗಳಿ, ಇನ್ನೊಬ್ಬರ ಕಾಲೆಳೆದು, ಆ ಮೂಲಕ ಮತ್ತಿನ್ಯಾರನ್ನೋ ಸಮಾಧಾನ ಮಾಡಲು ಹೊರಟವರಂತೆಯೂ ಕಾಣುತ್ತಾರೆ ಮರಕಿಣಿ.
ಮರಕಿಣಿ ಅವರಿಲ್ಲಿ ರಾಜ್‌ಕುಮಾರ್, ಶಂಕರ್‌ನಾಗ್, ವಿಷ್ಣುವರ್ಧನ್, ಕಾಶೀನಾಥ್, ರವಿಚಂದ್ರನ್‌ರಿಂದ ಹಿಡಿದು ಪ್ರಕಾಶ್ ರೈ, ಯೋಗರಾಜ್‌ಭಟ್, ಜಂಗಲ್ ಜಾಕಿ ರಾಜೇಶ್, ವಿತರಕ ಪ್ರಸಾದ್, ಸುನಿ, ರಕ್ಷಿತ್ ಶೆಟ್ಟಿ ಅವರವರೆಗೆ ಬರೆದಿದ್ದಾರೆ. ಆದರೆ ಅದರ ಜೊತೆಯಲ್ಲೇ ವಿ. ಮನೋಹರ್, ಸುಂದರ್‌ನಾಥ್ ಸುವರ್ಣರಂಥ ನಿಶ್ಯಬ್ಧವಾಗಿ ಕೆಲಸ ಮಾಡುವ ಅಪರೂಪದ ವ್ಯಕ್ತಿಗಳ ಬಗ್ಗೆಯೂ ಬರೆದಿದ್ದಾರೆ ಎಂಬುದು ವಿಶೇಷ.
ಉದಯ ಮರಕಿಣಿ ಅವರನ್ನು ಓದಿ ಬಲ್ಲವರಿಗೆ ಇಲ್ಲಿ ನಿರಾಸೆ ಆಗುವ ಮಾತೇ ಇಲ್ಲ ಬಿಡಿ. ಮರಕಿಣಿ ಅವರ ಬರಹಗಳ ವಸ್ತು ಅಷ್ಟೇ ಅಲ್ಲ ಅವರ ಶೈಲಿಯೂ ಆಕರ್ಷಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗಾಗಿ ಕೆಲವೊಮ್ಮೆ ಅವರು ಆಯ್ದುಕೊಂಡ ಡರ್ಟಿ ಪಾಲಿಟಿಕ್ಸುಗಳ, ಡಿವೋರ್ಸುಗಳ, ಮಾರಾಟಕ್ಕಿರುವ ಪ್ರಶಸ್ತಿಗಳ ಬರಹಗಳಲ್ಲಿ, ಇದು ಉದಯ ಮರಕಿಣಿ ಮಾತ್ರ ಬರೆಯಬಹುದಾದ ವಿಷಯ ಎನ್ನುವಂಥ ವಸ್ತು ಇಲ್ಲದಿದ್ದರೂ, ಅವರ ಬರಹದ ಶೈಲಿಯಿಂದಾಗಿ ಒಂದೇ ಏಟಿಗೆ ಓದು ಮುಗಿಯುವುದು ಮಾತ್ರ ಗ್ಯಾರಂಟಿ. ಎಲ್ಲ ಹಳೆಯ ತಲೆಗಳಿಗೂ ಇರುವಂಥ, 'ಒಂದಾನೊಂದು ಕಾಲದಲ್ಲಿ ಏಸೊಂದು ಮುದವಿತ್ತ' ಎಂಬ ಬ್ಯೂಟಿಫುಲ್ ಶೀರ್ಷಿಕೆಯ ಬರಹದಲ್ಲಿ ಒಂದು ಕಾಲದಲ್ಲಿ ಎಲ್ಲವನ್ನೂ ಆಳಿದ ಹಿರಿಯ, ಅನುಭವಿಗಳ 'ನಮ್ ಕಾಲದಲ್ಲಿ ಹೆಂಗಿತ್ತು ಗೊತ್ತಾ?' ಎಂಬಂಥ ಮಾಮೂಲಿ ಕೊರಗೂ ಕಾಣಿಸುತ್ತದೆ. ಆದರೆ ಮೂರು ದಶಕಗಳ ಸಿನಿಮಾ ಶಿಕಾರಿ ಸರಣಿಯಲ್ಲಿ 'ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ' ಎಂಬ ಸಚಿನ್ ಬಗೆಗಿನ ಲೇಖನ ಮೊಸರಿನಲ್ಲಿ ಕಲ್ಲು ಸಿಕ್ಕಂತಲ್ಲದಿದ್ದರೂ, ಇದು ಇಲ್ಲಿ ಬೇಕಿತ್ತಾ ಎಂಬ ಪ್ರಶ್ನೆಯನ್ನಂತೂ ಹುಟ್ಟು ಹಾಕುತ್ತದೆ.
ಆದರೆ ಈ ಪುಸ್ತಕದಲ್ಲಿರುವ ವಿವಿಧ ಬರಹಗಳಲ್ಲಿರುವ ಕೆಲವು ಸಾಲುಗಳನ್ನು ನೋಡಿ:
ಗೋಡೆ ಮೇಲಿರುವ ಫೋಟೋದ ಬೆಲೆ ಗೊತ್ತಿರುವುದು ಆ ವ್ಯಕ್ತಿಯ ಅಪ್ಪ ಅಮ್ಮನಿಗೆ ಮತ್ತು (ಹೆಂಡತಿ) ಮಕ್ಕಳಿಗೆ ಮಾತ್ರ.
ಗೆಳೆಯ ಅಂತ ಒಪ್ಪಿಕೊಂಡ ಮೇಲೆ ಅವನ ಬಲಹೀನತೆಗಳನ್ನೂ ಒಪ್ಪಿಕೊಳ್ಳಬೇಕು, ಅದೊಂದು ಪ್ಯಾಕೇಜ್ ಇದ್ದ ಹಾಗೆ.
ನಾಮದ ಬಲದಿಂದ ಮಿಂಚುವುದಕ್ಕೆ ಹೊರಟವರು, ಆ ನಾಮದ ಯಶಸ್ಸಿನ ಹಿಂದಿನ ಗುಟ್ಟನ್ನೂ ಅರ್ಥ ಮಾಡಿಕೊಳ್ಳಬೇಕು.
ಈಗಿನ ಸ್ಕೂಲ್ ಮಕ್ಕಳ ಕಣ್ಣಿಗೆ ಗಾಂಧಿ ಹೇಗೆ ಕಾಣಿಸುತ್ತಾರೋ, ಚಿತ್ರೋದ್ಯಮದ ಕಣ್ಣಿಗೆ ಮನೋಹರ್ ಹಾಗೇ ಕಾಣಿಸುತ್ತಿದ್ದಾರೆ. ಒಳ್ಳೆಯತನ ಎನ್ನುವುದು ಮೌಲ್ಯ ಎನ್ನುವುದರ ಬದಲಾಗಿ ಅದು ದೌರ್ಬಲ್ಯ ಎನ್ನುವ ಸ್ಥಿತಿಗೆ ನಾವು ತಲುಪಿದ್ದೇವೆ.
ತನಗೆ ಒಗ್ಗದ ಜಾಗದಲ್ಲಿ ತಾನಿರಬಾರದು ಎನ್ನುವುದು ಸುವರ್ಣ ಅವರ ಧೋರಣೆಯಾಗಿತ್ತು, ಈಗ ಅವರು ಹೇಳದೇ ಕೇಳದೇ ಹೋಗಿರುವುದಕ್ಕೂ ಅದೇ ಕಾರಣವಾಗಿರಬಹುದಾ?
ಈ ಸಾಲುಗಳನ್ನು ಓದಿದಾಗ ಮಾತ್ರ, ಖಂಡಿತಾ ಇದು ಉದಯ ಮರಕಿಣಿ ಮಾತ್ರ ಬರೆಯಬಹುದಾಗಿದ್ದ ಸಾಲುಗಳು ಎನಿಸುವುದು 'ಟಚ್ ಸ್ಕ್ರೀನ್' ಪುಸ್ತಕ ಮತ್ತದರ ಲೇಖಕರ ಹೆಗ್ಗಳಿಕೆ.
-ಹರಿ
Advertisement