
ಅದೊಂದು ಹಳ್ಳಿಯಲ್ಲಿ ರತ್ನಾಕರನೆಂಬ ರೈತನಿದ್ದ. ಆತ ಮದುವೆಯಾಗಿ ಐದು ವರ್ಷಗಳಾಗಿದ್ದವು. ಸುಂದರಿಯಾದ ಪತ್ನಿ ಸರೋಜ ಎಲ್ಲ ರೀತಿಯಿಂದಲೂ ಅವನಿಗೆ ಅನುಕೂಲೆಯಾಗಿದ್ದಳು. ರತ್ನಾಕರನ ತಂದೆ ಭೀಮಯ್ಯ, ತಾಯಿ ಗಂಗಮ್ಮ- ಇಬ್ಬರೂ ವಯಸ್ಸಾದವರು- ಮಗ ಸೊಸೆಯೊಂಗಿದಿಗೇ ಇದ್ದರು. ಗಂಗಮ್ಮನಿಗೆ ಹತ್ತು ವರ್ಷಗಳಿಂದೀಚೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಶಕ್ತಿಹೀನರಾಗಿದ್ದ ವೃದ್ಧರನ್ನು ಮಗಸೊಸೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೂ ರತ್ನಾಕರ ಮತ್ತು ಸರೋಜಳಿಗೆ ಚಿಂತೆ ಕಾಡುತ್ತಿತ್ತು. ಅವರಿಗಿನ್ನೂ ಮಕ್ಕಳಾಗಿರಲಿಲ್ಲ.
ಭೀಮಯ್ಯ ಯುವಕನಾಗಿದ್ದಾಗ ಪಕ್ಕದ ಎಸ್ಟೇಟಿನ ಒಡೆಯನಾಗಿದ್ದ ಶ್ರೀಮಂತ ಮಧುಸೂದನನ ಒಂದು ತುಂಡು ಜಮೀನಿನಲ್ಲಿ ಒಕ್ಕಲಿನವನಾಗಿದ್ದ. ಕ್ರಮೇಣ ಅವನಿಗೆ ಆ ಜಾಗ ಸ್ವಂತದ್ದೇ ಆಗಿತ್ತು. ರತ್ನಾಕರ ಈಗ ಆ ಪುಟ್ಟ ಜಮೀನಿನಲ್ಲಿ ಆಲೂಗಡ್ಡೆ ಫಸಲು ಬೆಳೆದು ಮಾರಿ, ಬಂದ ಹಣದಿಂದ ನಾಲ್ವರ ಜೀವನಕ್ಕೇನೂ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದ. ಆದರೆ ಕಾಲ ಒಂದೇ ಥರ ಇರುತ್ತದೆಯೇ? ಒಂದು ವರ್ಷ ರೋಗದಿಂದಾಗಿ ಆಲೂಗಡ್ಡೆ ಫಸಲೇ ಕೈಗೆ ಬರಲಿಲ್ಲ. ಬಡರೈತ ರತ್ನಾಕರನಿಗೆ ದಿಕ್ಕೇ ತೋಚಲಿಲ್ಲ. ಜಮೀನ್ದಾರನೇ ದಾರಿಯಾಗಿ ಕಂಡಿತು.
ಈಗ ಎಸ್ಟೇಟ್ ಒಡೆಯನಾಗಿದ್ದವನು ಮಧುಸೂದನನ ಮಗ ಮನೋಹರ. ಮಧುಸೂದನನ ಉದಾರತನ ಅವನ ಮಗನಿಗಿರಲಿಲ್ಲ. 'ನೀನು ನನ್ನ ಜಮೀನಿನಲ್ಲಿ ದುಡಿಯುವುದನ್ನು ಯಾವತ್ತೋ ನಿಲ್ಲಿಸಿದ್ದೀಯಲ್ಲ, ಈಗ ನೀನೇನು ಕೇಳಿದರೂ ನಾ ಕೊಡಲಾರೆ. ಇಷ್ಟಾದ ಮೇಲೂ ನನ್ನ ಎಸ್ಟೇಟಿಗೆ ಅತಿಕ್ರಮ ಪ್ರವೇಶಿಸಿದರೆ, ಇಲ್ಲಿನ ಪ್ರಾಣಿಪಕ್ಷಿ, ಗಿಡಮರಗಳಿಗೆ ಹಾನಿ ಮಾಡಿದರೆ ನಿನ್ನ ಕೈಕಾಲು ಮುರಿದೇನು, ಹುಷಾರ್' ಎಂದು ಗದರಿಸಿ ಹಿಂದೆ ಕಳುಹಿಸಿದ್ದ.
ರತ್ನಾಕರ ಬೇರೆಡೆ ಹೋಗಿ ಕೂಲಿಗೆ ಕೇಳಿದ. ಆ ವರ್ಷ ಅಲ್ಲೆಲ್ಲ ಬರಗಾಲ. ಯಾರಲ್ಲೂ ಕೆಲಸವಿಲ್ಲ. ಪಕ್ಕದ ಎಸ್ಟೇಟಿನ ಕಡೆಗೆ ನಡೆದ; ರತ್ನಾಕರನ ಕೈಯ್ಯಲ್ಲೊಂದು ಕುಡುಗೋಲಿತ್ತು. ಗಡ್ಡೆಗೆಣಸಾದರೂ ಇದ್ದರೆ ಕಿತ್ತು ತರುವ ಉದ್ದೇಶ ಅವನದು. ಕಾಡಿನಲ್ಲಿ ಈತ ನಡೆಯುತ್ತಿರುವಾಗ ಕಾಡುಹಂದಿ ಅವನ ಕಣ್ಣಿಗೆ ಬಿತ್ತು. ಇದನ್ನು ಕೊಂದರೆ ಒಂದೆರಡು ದಿನ ತಾವೆಲ್ಲ ಹೊಟ್ಟೆ ತುಂಬ ತಿನ್ನಬಹುದು ಎಂದುಕೊಂಡ. ಅವನು ಕುಡುಗೋಲೆತ್ತಿ ಹಂದಿಯ ಕಡೆಗೆಸೆಯಲು ಸನ್ನದ್ಧನಾದ. ಅವನ ಉದ್ದೇಶ ಅರಿತ ಹಂದಿ ಅವನನ್ನು ತಡೆದು ಮಾತಾಡಿತು. 'ಎಲೈ ಮಾನವ, ನಿಲ್ಲು, ನನ್ನನ್ನು ಕೊಲ್ಲಬೇಡ'.
'ಯಾಕಯ್ಯಾ ಕೊಲ್ಲಬಾರದು? ನಿನ್ನ ಕೊಂದರೆ ಹಸಿವಿನಿಂದ ಬಳಲಿರುವ ನಾಲ್ಕು ಜೀವಗಳಿಗೆ ಊಟ ಸಿಗುತ್ತದೆ' ಎಂದು ಈತನಂದ. 'ಅಷ್ಟೇ ತಾನೇ? ಆದರೆ ನನ್ನ ಕೊಂದರೆ ನಿನ್ನ ಕೈಕಾಲು ಕಡಿಯಲಾಗುತ್ತದೆ. ಗೊತ್ತಾ ನಿನಗೆ? ನಾನು ದೇವಲೋಕದ ಹಂದಿ. ನನ್ನನ್ನು ಕೊಲ್ಲದಿದ್ದರೆ ನಿನಗೊಂದು ವರ ಕೊಡುತ್ತೇನೆ. ಏನು ಬೇಕು ನಿರ್ಧರಿಸು.' 'ಏನು ಬೇಕಾದರೂ ಕೊಡುತ್ತೀಯಾ?'. 'ಓಹೋ' ಎಂದಿತು ಕಾಡುಹಂದಿ. 'ಹಾಗಿದ್ದರೆ ನನ್ನ ಕುಟುಂಬದವರೊಂದಿಗೆ ಚರ್ಚಿಸಿ ನಾಳೆ ಬಂದು ಕೇಳುತ್ತೇನೆ' ಎಂದ ರತ್ನಾಕರ. ಮನೆಯ ಹೊರಗೆ ಜಗುಲಿಯಲ್ಲಿ ಕುಳಿತಿದ್ದ ಅಪ್ಪನಿಗೆ ಕಾಡಲ್ಲಿ ನಡೆದಿದ್ದೆಲ್ಲ ಹೇಳಿ, ಏನನ್ನು ಕೇಳಲಿ ಎಂದ.
'ಒಂದು ಚೀಲ ಚಿನ್ನದ ನಾಣ್ಯ ಕೇಳು. ಬಡತನ ದೂರಾಗುತ್ತದೆ' ಎಂದ ಭೀಮಯ್ಯ. ಇದನ್ನು ಕೇಳಿಸಿಕೊಂಡ ಒಳಗೆ ತಾಂಬೂಲಕ್ಕೆ ಅಡಕೆ ಕುಟ್ಟುತ್ತಾ ಕುಳಿತಿದ್ದ ತಾಯಿ ಗಂಗಮ್ಮ, 'ಚಿನ್ನ ಕೇಳುವುದರಿಂದ ನನ್ನ ಕುರುಡುತನ ಹೋಗುತ್ತಾ? ನನಗೆ ಕಣ್ಣು ಬರುವಂತೆ ಕೇಳು' ಎಂದಳು. ಒಳಗೆ ಹೆಂಡತಿ ಸರೋಜಳಿಗೆ ವಿಷಯ ತಿಳಿಸಿದಾಗ, 'ಮದುವೆಯಾಗಿ 5 ವರ್ಷಗಳಾದರೂ ಮಕ್ಕಳಿಲ್ಲ. ಮಗುವಾಗುವಂತೆ ವರ ಬೇಡಿ' ಎಂದಳು.
ಈಗ ರತ್ನಾಕರನಿಗೆ ಏನನ್ನು ಕೇಳಲಿ ಎಂಬುದು ಚಿಂತೆ. ಬೆಳಗಾಗುತ್ತಲೇ ಒಂದು ನಿರ್ಧಾರಕ್ಕೆ ಬಂದು ಕಾಡಿಗೆ ತೆರಳಿದ. ಹಂದಿ ಅಲ್ಲೇ ಇತ್ತು. ಇವನನ್ನು ನೋಡಿದ ಹಂದಿ 'ಏನು ನಿರ್ಧರಿಸಿದೆ ತಮ್ಮಾ?' ಎಂದಿತು. 'ನನ್ನ ಹೆಂಡತಿ ಚಿನ್ನದ ತೊಟ್ಟಿಲಿನಲ್ಲಿ ನಮ್ಮ ಮಗುವನ್ನು ತೂಗುವುದನ್ನು ನನ್ನ ತಾಯಿ ನೋಡುವಂತಾಗಲಿ' ಎಂದು ಕೇಳಿದ.
'ತಥಾಸ್ತು' ಎಂದಿತು ಹಂದಿ! ರತ್ನಾಕರನ ಸಂಸಾರಕ್ಕೆ ಸುಖಜೀವನ ಪ್ರಾಪ್ತವಾಯಿತು.
-ಸರಸ್ವತಿ ಶಂಕರ್
Advertisement