ಒಂದು ಬಾರಿ ರಾಜನೊಬ್ಬನಿಗೆ ಚರ್ಮಗಳೆಲ್ಲ ಬಿಳುಚಿಕೊಂಡಿತ್ತು. ಆ ರಾಜ್ಯಕ್ಕೆ ಬಂದ ಸನ್ಯಾಸಿಯೊಬ್ಬ ರಾಜನನ್ನು ಮುಟ್ಟಿದ ಕೂಡಲೇ ಆತನ ಚರ್ಮ ಕಾಯಿಲೆ ಗುಣವಾಯಿತು. ಇದಕ್ಕೆ ಪ್ರತ್ಯುಪಕಾರವಾಗಿ ಏನು ಮಾಡಲಿ ಎಂದು ಕೇಳಿದ. ಏನೂ ಬೇಡವೆಂದು ಸನ್ಯಾಸಿ ಎಷ್ಟು ಹೇಳಿದರೂ ರಾಜ ಕೇಳಲಿಲ್ಲ. ಕೊನೆಗೆ ಸನ್ಯಾಸಿ ಮುಂದೆ ಎಂದಾದರೂ ನನಗೆ ಅಗತ್ಯವಿದ್ದುದನ್ನು ಕೇಳುತ್ತೇನೆ ಎಂದ. ಮುಂದೊಂದು ದಿನ ಸನ್ಯಾಸಿಯ ಹಸುವಿಗೆ ವಯಸ್ಸಾಗಿ ಹಾಲು ನೀಡುತ್ತಿರಲಿಲ್ಲ. ಆಗ ಸನ್ಯಾಸಿಯು ರಾಜನಲ್ಲಿ ಹೊಸ ಹಸುವನ್ನು ಬೇಡೋಣವೆಂದು ಹೋದ. ರಾಜ ದೇಗುಲದಲ್ಲಿ ಹೆಚ್ಚಿನ ಐಶ್ವರ್ಯಕ್ಕಾಗಿ ಮೊರೆ ಇಡುತ್ತಿದ್ದ. ಸನ್ಯಾಸಿಯನ್ನು ನೋಡಿದೊಡನೆಯೇ ಗುರುತಿಸಿ ನನ್ನಿಂದೇನಾಗಬೇಕೆಂದು ಕೇಳಿದ. 'ಏನೋ ಕೇಳೋಣವೆಂದು ಬಂದೆ. ಆದರೆ ನೀನೇ ಒಬ್ಬ ಭಿಕ್ಷುಕ. ದೇವರಲ್ಲಿ ಬೇಡಿಕೆಗಳನ್ನಿಡುತ್ತಿದ್ದೀಯಾ. ಅಂಥದರಲ್ಲಿ ನಾನು ನಿನ್ನಲ್ಲಿ ಕೇಳಲೇನಿದೆ? ನನಗೇನಾದರೂ ಬೇಕಾದ್ದಿದ್ದರೆ ಅವನು ನೀಡಿಯೇ ನೀಡುತ್ತಾನೆ' ಎನ್ನುತ್ತಾ ಆಶ್ರಮಕ್ಕೆ ಮರಳಿದ.
Advertisement