ಹಸನ್ ಆದ ದೇಶ
ಮೊರಾಕ್ಕೊ ಮಸೀದಿಯ ಕೂಗು
ಈಚೆಗೆ ಮೊರಕ್ಕೊ ದೇಶಕ್ಕೆ ಪ್ರವಾಸ ಹೋಗಿದ್ದೆ. ಇದು ಆಫ್ರಿಕದ ವಾಯವ್ಯ ಭಾಗದ ಒಂದು ಸಾಮ್ರಾಜ್ಯ. ಬಹುಭಾಗ ಸಹರಾ ಮರುಭೂಮಿ. ಇಲ್ಲಿನ ಬಹುಪಾಲು ಜನ ಅರಬ್ ಮತ್ತು ಆಫ್ರಿಕ ಮೂಲ ನಿವಾಸಿಗಳಾದ 'ನಿರ್ಜರ್' ಜನಾಂಗದವರು. ಇದರ ರಾಜಧಾನಿ ರಬಾತ್. ಪ್ರಸಿದ್ಧ ವಾಣಿಜ್ಯ ನಗರ ಕ್ಯಾಸಾಬ್ಲಾಂಕಾ. ಫ್ರೆಂಚರ ಆಡಳಿತದಲ್ಲಿದ್ದ ಈ ದೇಶ 1956ರಲ್ಲಿ ಸ್ವತಂತ್ರವಾಯಿತು.
ಕ್ಯಾಸಾಬ್ಲಾಂಕಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಖ್ಯವಾದುದು ಹಸನ್- ಐಐ ಮಸೀದಿ. ಇದು ವಿಶ್ವದ 7ನೇ ದೊಡ್ಡ ಮಸೀದಿ, 22 ಎಕರೆ ಪ್ರದೇಶದಲ್ಲಿ ಕಟ್ಟಲಾಗಿದೆ. ಮುಂಭಾಗ ಅತಿ ವಿಶಾಲ. ಇಲ್ಲೇ ಲಕ್ಷಕ್ಕೂ ಹೆಚ್ಚು ಮಂದಿ ಕುಳಿತು ಪ್ರಾರ್ಥನೆ ಸಲ್ಲಿಸಬಹುದು. ಈ ಮಸೀದಿಯ 1/3 ಭಾಗವು ಸಮುದ್ರವನ್ನು ಆಕ್ರಮಿಸಿದೆ. ವಿಶೇಷತೆಯೆಂದರೆ ಹೆಚ್ಚಿನ ಪ್ರಾರ್ಥನಾ ಸಂದರ್ಭದಲ್ಲಿ ಮಸೀದಿಯ ಚಾವಣಿಯನ್ನು ಅಕ್ಕಪಕ್ಕಕ್ಕೆ ಜಾರಿಸಿ ಮೇಲಿನಿಂದ ಗಾಳಿ ಬೆಳಕು ಬರುವಂತೆ ಮಾಡಬಹುದು. ಒಳಭಾಗದಲ್ಲಿ ಅಮೂಲ್ಯ ಕಲ್ಲುಗಳ ಕೆತ್ತನೆ ನಡೆಯುತ್ತದೆ. ಕಟ್ಟಡದ ವಾಸ್ತುಶಿಲ್ಪಿ ಫ್ರಾನ್ಸ್‌ನ ಮೈಕೇಲ್ ಫಿನ್‌ಬಿಲ್. ಮಸೀದಿಯ ಬಾಗಿಲು ಗಟ್ಟಿಯಾದ ಟೈಟಾನಿಯಂ ಲೋಹದ್ದು. 1993ರಿಂದ ಪ್ರಾರ್ಥನೆಗೆ ಸಿದ್ಧವಾಗಿ ಒಳಭಾಗದಲ್ಲಿ 20 ಸಾವಿರ ಮಂದಿ ಕುಳಿತು ಪ್ರಾರ್ಥನೆ ಮಾಡುವಷ್ಟು ವಿಶಾಲವಾಗಿದೆ. ಕ್ಯಾಸಾಬ್ಲಾಂಕಾದ ಇತರ ಪ್ರೇಕ್ಷಣೀಯ ಸ್ಥಳಗಳೆಂದರೆ 'ಹಬಸ್ ಕ್ವಾರ್ಟರ್ಸ್' ಎಂಬ ಫ್ರೆಂಚ್ ಕಾಲದ ಅಂಗಡಿಗಳ ಸಂಕೀರ್ಣ.
ಇನ್ನು 'ಮರ್ರಾಕೇಷ್' ತಾಣಕ್ಕೆ ಕ್ಯಾಸಾ ಬ್ಲಾಂಕಾದಿಂದ 3 ಗಂಟೆ ಪಯಣ. ಇಲ್ಲಿ ಬರ್ಬರ್ ಬುಡಕಟ್ಟಿನ ಜನರೇ ಹೆಚ್ಚಿದ್ದಾರೆ. ಈ ನಗರವು ಕೆಂಬಣ್ಣದ ಕೋಟೆಯಿಂದ ಆವೃತವಾಗಿದೆ. ಇದರ ಸುತ್ತಳತೆ 16 ಕಿಲೋಮೀಟರ್. ಇಲ್ಲಿ 12ನೇ ಶತಮಾನದಲ್ಲಿ ಕಟ್ಟಲಾದ ಕುತೂಬಿಯಾ ಮಸೀದಿ ಇದೆ. ಇದು 221 ಅಡಿ ಎತ್ತರವುಳ್ಳ ಗೋಪುರ ಹೊಂದಿದೆ. ಪ್ರಪಂಚದ ಅನೇಕ ಚರ್ಚ್ ಮತ್ತು ಮಸೀದಿಗಳನ್ನು ನಿರ್ಮಿಸಲು ಈ ಮಸೀದಿಯೇ ಮಾದರಿಯಂತೆ. ಇಲ್ಲಿನ ಮೆದಿನಾ ಚೌಕ ಎಂಬ ದೊಡ್ಡ ಆವರಣದಲ್ಲಿ ಏನೆಲ್ಲಾ ಇಲ್ಲ! ದೊಡ್ಡ ಆಫ್ರಿಕನ್ ಹಾವುಗಳನ್ನು ಆಡಿಸಿ ಪ್ರದರ್ಶಿಸುವುದು, ಕೋತಿಗಳು ಮತ್ತು ಇತರ ಪ್ರಾಣಿಗಳನ್ನು ಕುಣಿಸುವುದು, ಅಂಗಡಿಗಳು, ಹೊಟೇಲ್‌ಗಳು ಎಲ್ಲ ಬಗೆಯ ಮನರಂಜನೆಯೂ ದೊರೆಯುತ್ತದೆ. ಇದನ್ನು ನೋಡಿದರೆ ನಮಗೆ ಭಾರತದ ಹಳ್ಳಿಗಳ ದೊಡ್ಡ ಜಾತ್ರೆಯ ನೆನಪಾಗುತ್ತದೆ. ಇಲ್ಲೂ ನಿತ್ಯಜಾತ್ರೆ. ಆದರೆ ದೇವರ ಸಂಭ್ರಮವಿಲ್ಲ. ಮೊರಾಕ್ಕೋ ರಾಜಧಾನಿಯಾದ ರಬಾತ್ ಕ್ಯಾಸಾಬ್ಲಾಂಕಾದಿಂದ ಒಂದೂವರೆ ತಾಸಿನ ಪಯಣ.
ಈ ನಗರಕ್ಕೆ ಹೊಂದಿಕೊಂಡಿರುವ 'ಕಸ್ಬಾ' ಎಂಬ ಹಳ್ಳಿ ಮನಮೋಹಕ. ಅಲ್ಲಿನ ರಸ್ತೆಗಳಂತೂ ಕೆಲವೆಡೆ ಒಬ್ಬರು ಹೋಗುವಷ್ಟು ಮಾತ್ರ ಅಗಲವಿದೆ. ದಾರಿಗಳಲ್ಲಿ ಕೆಲವೆಡೆ ಅಲ್ಲಿನ ತಂತಿವಾದ್ಯಗಳನ್ನು ಬಾರಿಸುವವರು ಚಿಕ್ಕ ಪುಟ್ಟ ಮನರಂಜನೆ ಕೊಡುತ್ತಿದ್ದರು. ಅಲ್ಲಿ ಅಟ್ಲಾಂಟಿಕ್ ಮಹಾಸಾಗರವನ್ನು ವೀಕ್ಷಿಸುತ್ತಾ ಮಿಂಟ್ ಚಹಾ ಸೇವಿಸುವ ಅವಕಾಶ ನಮ್ಮದಾಗಿತ್ತು.
ಇಲ್ಲಿನ ಟ್ಯಾಂಜಿಯರ್ ನಗರ ಸಣ್ಣ ಗುಡ್ಡ ತಗ್ಗುಗಳಿಂದ ಕೂಡಿದ ಸಮುದ್ರ ತೀರದ ಸುಂದರ ಬಂದರು ನಗರ. ಇಲ್ಲಿ ಸೂರ್ಯಾಸ್ತದ ವೇಳೆ ಅಟ್ಲಾಂಟಿಕ್ ಮಹಾಸಾಗರ ಮತ್ತು ಮೆಡಿಟರೇನಿಯನ್ ಸಾಗರಗಳ ಸಂಗಮದ ರಮಣೀಯ ದೃಶ್ಯ ರೋಮಾಂಚನ. ರಾತ್ರಿ ಈ ನಗರದ ಸಮುದ್ರ ತೀರವು ಝಗಝಗಿಸುವ ದೀಪಾಲಂಕಾರದಿಂದ ಸಜ್ಜುಗೊಳ್ಳುತ್ತದೆ. ಮಧ್ಯದಲ್ಲಿ ವಿಶಾಲ ರಸ್ತೆ, ಇನ್ನೊಂದೆಡೆ ಜಾಹೀರಾತಿನ ದೀಪಗಳಿಂದ ಕೂಡಿದ ದೊಡ್ಡ ದೊಡ್ಡ ಕಟ್ಟಡಗಳಿವೆ. ಇದು ಮುಂಬೈನ ಮರಿನ್ ಡ್ರೈವ್ ಅನ್ನು ಹೋಲುತ್ತದೆ. ಇಲ್ಲಿಂದ ಸ್ಪೇನ್‌ಗೆ ಒಂದೂವರೆ ತಾಸಿನ ಹಡಗು ಪಯಣ. ನಾವು ಟ್ಯಾಂಜಿಯರ್‌ನಿಂದ ಸ್ಪೇನ್‌ಗೆ ಹಡಗಿನಲ್ಲಿ ಹೋಗುವಾಗ ಇನ್ನೂ ಬ್ರಿಟಿಷರ ಆಡಳಿತದ ತೆಕ್ಕೆಯಲ್ಲಿರುವ ಗಿಬ್ರಾಲ್ಟರ್ ದ್ವೀಪವನ್ನು ದೂರದಿಂದ ವೀಕ್ಷಿಸಿದೆವು. ಮೊರಾಕ್ಕೋ ಹಿಂದುಳಿದ ದೇಶವಾದರೂ ಸ್ವಚ್ಛತೆಯನ್ನು ನಮಗಿಂತ ಚೆನ್ನಾಗಿ ಕಾಪಾಡಿಕೊಂಡಿದೆ.
ತೀನಂಶ್ರೀ ಪೆಟ್ಟಿಗೆ ಅಲ್ಲಿಗೆ ಹೋಗಿತ್ತು!
ನಾನು ಮತ್ತು ನನ್ನ ಪತಿ ನಾಗಭೂಷಣ ಅವರು ಕ್ಯಾಸಾಬ್ಲಾಂಕಾ ನೋಡಲು ಕಾತರರಾಗಿದ್ದಕ್ಕೆ ಕಾರಣ ಸೊಗಸಾಗಿದೆ. 1956ರಲ್ಲಿ ನನ್ನ ಮಾವ ಪ್ರೊ. ತೀನಂಶ್ರೀ 'ರಾಕ್‌ಫೆಲರ್ ಪ್ರತಿಷ್ಠಾನ'ದ ಆಹ್ವಾನದ ಮೇರೆಗೆ ಅಮೆರಿಕಕ್ಕೆ ಹೋಗಿದ್ದರು. ಆಗ ಅವರ ಪೆಟ್ಟಿಗೆಗಳು ಪ್ಯಾರಿಸ್‌ನಿಂದ ನ್ಯೂಯಾರ್ಕ್‌ಗೆ ಹೋಗುವ ಬದಲು ಕ್ಯಾಸಾಬ್ಲಾಂಕಾಗೆ ಹೋಗಿದ್ದವಂತೆ!
-ಡಾ. ಶಾರದಾ ನಾಗಭೂಷಣ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ