ಚಂದ್ರಶೇಖರ್, ಚನ್ನರಾಯಪಟ್ಟಣ
ನಾನು ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ)ಯಲ್ಲಿ ಕೆಲಸ ಮಾಡುತ್ತಿದ್ದು, ಇದಕ್ಕೆ ರಿಸರ್ವ್ ಬ್ಯಾಂಕ್‌ನ ಪರವಾನಗಿ ಇದೆ. ಆದರೂ ಸಹಕಾರ ಇಲಾಖೆಯ ಉಪನಿರ್ದೇಶಕರೊಬ್ಬರು ಹಣ ನೀಡಿಕೆ ಕಾಯ್ದೆ (ಂ್ಟಟಿಜಣ ಔಜಟಿಜಜ್ಠಡ ಆ್ಛಡಿ) ಅಡಿ ಕೇಸ್ ಮಾಡಿದ್ದಾರೆ. ನಮ್ಮ ಕಂಪನಿಯವರು ಇದರ ವಿರುದ್ಧ ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಮಧ್ಯಂತರ ತಡೆಯಾಜ್ಞೆ ಬಂದಿದೆ. ಎಫ್‌ಐಆರ್‌ನಲ್ಲಿ ನನ್ನ ಮತ್ತು ಸಿಬ್ಬಂದಿಗಳ ಹೆಸರೂ ಇದೆ. ಈಗ ನಮ್ಮ ಹೆಸರುಗಳನ್ನು ಎಫ್‌ಐಆರ್‌ನಿಂದ ಹೇಗೆ ತೆಗೆಸುವುದು?
- ಉಚ್ಚ ನ್ಯಾಯಾಲಯದಲ್ಲಿ ತೀರ್ಪು ನಿಮ್ಮ ಕಂಪನಿ ಪರವಾಗಿ ಆದರೆ ಎಫ್‌ಐಆರ್ ಕೂಡ ವಜಾ ಆಗುತ್ತದೆ. ತೀರ್ಪು ಪ್ರತಿಕೂಲವಾದರೆ ಆಗ ನೀವು ಒಬ್ಬ ವಕೀಲರ ಮೂಲಕ ಕೇಸನ್ನು ನಡೆಸಬೇಕಾಗುತ್ತದೆ.
ಯಾವುದಾದರೂ ದಾಖಲೆ ಬೇಕೇಬೇಕು
ಕೆ.ಎಂ. ನದಾಫ್, ಮುದ್ದೇಬಿಹಾಳ
ನನ್ನ ತಂದೆ ಈಗ ಆರು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಅವರು ತೀರಿಕೊಳ್ಳುವ ಮುನ್ನ ಪೋಸ್ಟ್ ಆಫೀಸ್‌ನ ಉಳಿತಾಯ ಖಾತೆಯಲ್ಲಿ ಸ್ವಲ್ಪ ಹಣ ಇಟ್ಟಿದ್ದೇನೆ ಎಂದು ಹೇಳಿದ್ದರು. ನಾನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಮೂಲಕ ಉಳಿತಾಯ ಖಾತೆ ಬಗ್ಗೆ ಮಾಹಿತಿ ಕೇಳಿದರೆ, 'ಯಾವುದೇ ಖಾತೆ ಇಲ್ಲ' ಎಂದು ಹೇಳುತ್ತಿದ್ದಾರೆ. ಇದಕ್ಕೆ ಪರಿಹಾರವೇನು?
- ನಿಮ್ಮ ತಂದೆ ಹಣ ಕಟ್ಟಿದ್ದಕ್ಕೆ ದಾಖಲೆ ಇದ್ದರೆ ಅಂದರೆ, ಬ್ಯಾಂಕ್ ಚೆಕ್ ಅಥವಾ ರಸೀತಿ ಇವುಗಳೇನಾದರೂ ಇದ್ದರೆ ನೀವು ಪೋಸ್ಟ್ ಆಫೀಸಿನಲ್ಲಿ ದಾಖಲೆ ಹಾಜರುಪಡಿಸಿ ಹಣ ಕೇಳಬಹುದು ಅಥವಾ ಉಳಿತಾಯ ಖಾತೆ ಸಂಖ್ಯೆ ಇದ್ದರೂ ಆಗಬಹುದು. ಯಾವುದೇ ದಾಖಲೆ ಇಲ್ಲದಿದ್ದರೆ ಏನು ಮಾಡಲೂ ಸಾಧ್ಯವಿಲ್ಲ.
ಸಂಬಂಧಿಸಿದ ಇಲಾಖೆ ಕೇಸ್ ಮಾಡಬೇಕು
ಎಂ. ರಾಜಕುಮಾರ್, ಬೆಂಗಳೂರು
ಇಲ್ಲೊಬ್ಬರು ತಮ್ಮ ಊರಿನಲ್ಲಿ ಸ್ವಂತ ಜಮೀನು ಹೊಂದಿದ್ದರೂ ತಮ್ಮ ಹೆಸರಿಗೆ 2 ಎಕರೆ, ತಮ್ಮ ಪತ್ನಿ ಹೆಸರಿಗೆ 3 ಎಕರೆ ಹಾಗೂ ತಮ್ಮನ ಹೆಸರಿಗೆ 2 ಎಕರೆ ಬಗರ್ ಹುಕುಂ ಸರ್ಕಾರಿ ಜಮೀನು ಹೊಂದಿದ್ದಾರೆ. ಸರ್ಕಾರದ ನಿಯಮಾವಳಿ ಪ್ರಕಾರ ಬಗರ್ ಹುಕುಂ ಜಮೀನು ಭೂರಹಿತ ಕೃಷಿ ಕಾರ್ಮಿಕರಿಗೆ ನೀಡಬೇಕಲ್ಲವೇ? ಇನ್ನೊಬ್ಬರು ಬಗರ್ ಹುಕುಂ ಜಮೀನನ್ನು 15 ವರ್ಷ ಇತರೆಯವರಿಗೆ ಪರಭಾರೆ ಮಾಡಬಾರದೆಂಬ ನಿಯಮಾವಳಿಗಳಿದ್ದರೂ ಮಾರಾಟ ಮಾಡಿದ್ದಾರೆ. ಇದು ಸರಿಯೇ? ಇದರ ವಿರುದ್ಧ ಭಾರತ ದಂಡಸಂಹಿತೆಯಲ್ಲಿ ಕೇಸ್ ಮಾಡಬಹುದೇ?
- ಹಾಗೆ ಕೇಸ್ ಮಾಡಬೇಕಾದವರು ಸರ್ಕಾರದ ಸಂಬಂಧಿಸಿದ ಇಲಾಖೆಯವರು. ಉಳಿದವರಿಗೆ ಆ ಅಧಿಕಾರವಿಲ್ಲ. ಬೇಕಾದರೆ ನೀವು ಸರ್ಕಾರಕ್ಕೆ ಅರ್ಜಿ ಕೊಡಬಹುದು. ನಂತರ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು.
- ಎಚ್.ಆರ್. ಕಸ್ತೂರಿರಂಗನ್
Advertisement