ಬೆತ್ತಲೆ ಆಚೆಯ ಕತ್ತಲು

ಹೊಸ ಶಾಲೆ ನನಗೆ ಒಳ್ಳೆಯ ಅನುಭವಗಳನ್ನು ನೀಡುತ್ತದೆಂದು ನಾನು ನಂಬಿದೆ. ಚೆನ್ನೈನ 'ನೈಟಿಂಗೆಲ್‌' ಶಾಲೆಯ ಗೇಟು...
ಬೆತ್ತಲೆ ಆಚೆಯ ಕತ್ತಲು
Updated on

ಎಲ್ಲ ನಟಿಯರ ಖಾಸಗಿ ಬದುಕೂ ಓದುಗನಿಗೆ- ನೋಡುಗನಿಗೆ ಮನರಂಜನೆ. ಆದರೆ, ನೀಲಿಚಿತ್ರದ ನಾಯಕಿ ಶಕೀಲಾಳ ಬದುಕನ್ನು ಬೆನ್ನುಹತ್ತಿದರೆ ಅವರ ಚಿತ್ರಗಳಂತೆ ನಿಮಗಲ್ಲೇನೂ ಆನಂದ ಕಾಣಿಸುವುದಿಲ್ಲ. ಅಷ್ಟೋ ಇಷ್ಟೋ ಕಥೆಗಳನ್ನು 'ಬಿಗ್‌ಬಾಸ್‌'ನಲ್ಲಿ ಅವರು ಹೇಳಿಕೊಂಡರೂ ಸಹಜವಾಗಿ ಅವರ ಬದುಕಿನ ಮೇಲೊಂದು ಅನುಕಂಪ ಒಡಮೂಡುತ್ತದೆ. ಕಥೆಗಾರ ಕೆ.ಕೆ. ಗಂಗಾಧರನ್ ಮಲಯಾಳಂ ಮೂಲದಲ್ಲಿರುವ ಶಕೀಲಾ ಅವರ ಆತ್ಮಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ...


ಹೊಸ ಶಾಲೆ ನನಗೆ ಒಳ್ಳೆಯ ಅನುಭವಗಳನ್ನು ನೀಡುತ್ತದೆಂದು ನಾನು ನಂಬಿದೆ. ಚೆನ್ನೈನ 'ನೈಟಿಂಗೆಲ್‌' ಶಾಲೆಯ ಗೇಟು ದಾಟಿ ಒಳಕ್ಕೆ ಹೋದಾಗ ಒಳ್ಳೆಯ ವಾತಾವರಣದ ಕನಸು ಕಂಡೆ. ಹೊಸ ಶಾಲೆ, ಹೊಸ ಗೆಳತಿಯರು, ಅಧ್ಯಾಪಕರು... ಪ್ರತಿಯೊಬ್ಬರನ್ನು ಪರಿಚಯಿಸಿಕೊಳ್ಳಲು ಮನಸ್ಸು ತಹತಹಿಸಿತು. ಬೆತ್ತ ಹಿಡಿದು ಬರುವ ಕ್ರೂರ ಮುಖಗಳ ಅಧ್ಯಾಪಕರಂತೂ ಇಲ್ಲಿರಲಾರರು. ಹಾಗೊಂದು ನಿರೀಕ್ಷೆ ನನಗಿತ್ತು. ಎಲ್ಲ ಶಾಲೆಯ ಅಧ್ಯಾಪಕರು ಒಂದೇ ರೀತಿಯಲ್ಲಿ ಇರಲಾರರಲ್ಲವೆ? ಅಷ್ಟೇ ಅಲ್ಲ, ಅಧ್ಯಾಪಕರು ಇಷ್ಟಪಡುವಂತೆ ಒಳ್ಳೆಯ ವಿದ್ಯಾರ್ಥಿಯೆಂದು ಸರ್ಟಿಫಿಕೇಟು ಪಡೆಯಬೇಕು. ಅದಕ್ಕಾಗಿ ನಾನು ಚೆನ್ನಾಗಿ ಓದಬೇಕೆಂದು ನಿರ್ಧರಿಸಿದೆ. ಈ ಶಾಲೆ ಅದಕ್ಕೆಲ್ಲ ದಾರಿದೀಪವಾಗುತ್ತದೆಂದು ನನಗನ್ನಿಸಿತ್ತು. ಒಂದೇ ನೋಟದಲ್ಲಿ ಇಷ್ಟವಾಗುವ ಸ್ಥಳದಂತಿತ್ತು.
ಆದರೆ... ಎಲ್ಲ ಭಾವನೆಗಳೂ ಬುಡಮೇಲಾಗಲು ತಡವಾಗಲಿಲ್ಲ. ವಿದ್ಯಾರ್ಥಿ ಜೀವನದುದ್ದಕ್ಕೂ ನನ್ನ ಮಾನಸಿಕ ಸಮತೋಲವನ್ನು ಹನಿಗೊಳಿಸುವ ಸಂದರ್ಭಗಳನ್ನೇ ಎದುರಿಸಬೇಕಾಗಿ ಬಂದದ್ದು ದುರಂತ. ಬಹಳ ಸಂತೋಷದಿಂದಲೂ ಹೆಮ್ಮೆಯಿಂದಲೂ ಸೇರಿಕೊಂಡ ಶಾಲೆಯಲ್ಲಿ ನಾನು ಬೇಟೆಯಾಡಲ್ಪಟ್ಟೆ. ಶಾಲೆಗೆ ಹೋಗುವುದೆಂದರೆ, ಯಾರೋ ನನ್ನನ್ನು ಕೆಡಿಸಲು ಕರೆದುಕೊಂಡು ಹೋಗುವಂತಿತ್ತು.
ನಾನಾಗ 7ನೇ ತರಗತಿಯಲ್ಲಿದ್ದೆ. ಆಗಲೇ ನನ್ನ ದೇಹದ ಬೆಳವಣಿಗೆ ಸಾಮಾನ್ಯಕ್ಕಿಂತಲೂ ಹೆಚ್ಚಾಗಿತ್ತು. ದೇಹದ ಎಲ್ಲ ಅಂಗಾಂಗಗಳೂ ಅಳತೆಗಿಂತಲೂ ಹೆಚ್ಚಾಗಿಯೇ ಬೆಳೆದು ಬಿಟ್ಟಿದ್ದವು. ಮನೆಯಲ್ಲಿ ಕೆಲವೊಮ್ಮೆ ಸೀರೆ ಉಟ್ಟು ನೋಡಿಕೊಂಡರೆ ನಾನು ಪ್ರೌಢ ಮಹಿಳೆಯಂತೆಯೇ ಕಾಣುತ್ತಿದ್ದೆ. ಕ್ಲಾಸಿನಲ್ಲಿ ಹೆಚ್ಚಿನ ಬೆಳವಣಿಗೆ ಇರುವ ಹೆಣ್ಣು ಮಗಳೂ ನಾನೇ ಆಗಿದ್ದೆ. ಇತರೆ ವಿದ್ಯಾರ್ಥಿಗಳು ನನ್ನ ಬೆಳೆದ ದೇಹದತ್ತ ಕಣ್ಣು ಹಾಯಿಸುತ್ತಿದ್ದರು. ಜೊತೆಗೆ ಕುಹಕದ ನಗು ಬೀರುತ್ತಿದ್ದರು. ನನ್ನ ದೇಹದ ಬೆಳವಣಿಗೆಯ ಬಗ್ಗೆ ನಾನು ಕೆಲವೊಮ್ಮೆ ಸಂಕಟಪಡುವುದೂ ಉಂಟು. ದಪ್ಪನೆಯ ಹತ್ತಿಯಂತೆ ಬೆಳೆದ ಮಾಂಸ ಖಂಡಗಳನ್ನು ಗೆಳತಿಯರು ಎಳೆದು ಹಿಂಸಿಸುತ್ತಿದ್ದರು.
ಈ ನಡುವೆ ನಾನು ವಯಸ್ಸಿಗೆ ಬಂದೆ. ಮನೆಯವರು ದೊಡ್ಡ ಹಬ್ಬ ಆಚರಿಸಲು ಸಜ್ಜಾದರು. ಋತುಮತಿಯಾದಾಗ ಋತು ಸ್ನಾನಕ್ಕೆ ಕುಟುಂಬದವರೆಲ್ಲರೂ ಭಾಗವಹಿಸುತ್ತಾರೆ. ವಯಸ್ಸಿಗೆ ಬಂದ ಹೆಣ್ಣುಮಗಳನ್ನು ಅರಶಿನದ ನೀರಿನಲ್ಲಿ ಸ್ನಾನ ಮಾಡಿಸುವುದು, ಅಲಂಕರಿಸುವುದು ಮುಂತಾದ ಸಂಪ್ರದಾಯಗಳು ಬಹಳ ಹೊತ್ತಿನ ಆಚರಣೆ. ಒಂದೇ ದಿನದಲ್ಲಿ ಅವಳು ಪ್ರೌಢೆಯಾಗಿ ಬದಲಾಗುತ್ತಾಳೆ. ಋತುಸ್ನಾನದ ನಂತರ ಆಕೆ 16 ದಿನ ಹೊರಗೆಲ್ಲೂ ಹೋಗುವಂತಿಲ್ಲ. ಹುಡುಗರೊಂದಿಗೆ ಯಾವುದೇ ಸಂಬಂಧವಾಗಲೀ, ಮಾತನಾಡಿಸುವುದಾಗಲಿ ಮಾಡಕೂಡದು. ಅಷ್ಟೇ ಅಲ್ಲ ಅಮ್ಮ, ಅಕ್ಕಂದಿರು, ಸಂಬಂಧದಲ್ಲಿರುವ ಪ್ರೌಢ ಮಹಿಳೆಯರು ಸುತ್ತಲೂ ಕುಳಿತು ಋತುಮತಿ ಆಗಿದ್ದರ ಮಹತ್ವವನ್ನು, ಮುಂದೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು 'ಕ್ಲಾಸ್‌' ತೆಗೆದುಕೊಳ್ಳುತ್ತಾರೆ.
ನನ್ನ ವಿಷಯದಲ್ಲೂ ಹಾಗೆಯೇ ಆಯಿತು. ಹೆಂಗಸರ ಬುದ್ಧಿಮಾತುಗಳು ಉಪದೇಶಗಳಿಂದ ನನ್ನ ಕಿವಿಗಳು ಮುಚ್ಚಿಹೊಗುವಂತಾಯಿತು. ನಾನು ಶಾಲೆಗೆ ರಜೆ ಹಾಕಿದೆ. 16 ದಿನ ನಾನು ತರಗತಿಗೆ ಬರುವುದಿಲ್ಲವೆಂದು ಅದಕ್ಕೆ ಕಾರಣಗಳನ್ನು ಸೇರಿಸಿ ನನ್ನ ಟೀಚರುಗಳಿಗೆ ಹೇಳಿದೆ. ಮಾಸ್ತರರಿಗೆ ನಾನೇನೂ ಹೇಳ ಹೋಗಲಿಲ್ಲ. ಆದರೆ ಅಧ್ಯಾಪಕಿಯರು ಮಾಸ್ತರುಗಳಿಗೆ ತಕ್ಷಣವೇ ಹೇಳಿದರೆಂದು ಆಮೇಲೆ ತಿಳಿಯಿತು.
ಎಲ್ಲ ಮುಗಿಸಿ 16 ದಿನಗಳ ತರುವಾಯ ನಾನು ಶಾಲೆಗೆ ಹೋದೆ. ಆಗಲೂ ನಾನು ಹೆಣ್ಣು ಮಗಳೆಂಬ ಭಾವನೆಯಿಂದ ಈಚೆ ಬರಲಾಗಲೇ ಇಲ್ಲ. ಮನೆಯವರು ಹೇಳಿದ ಬುದ್ಧಿಮಾತುಗಳೆಲ್ಲವನ್ನೂ ನಾನು ಗಾಳಿಗೆ ತೂರಿದೆ. ಏಕೆಂದರೆ ಹಾಗೊಂದು ಘಟನೆ ನಡೆದಿದೆ ಎಂದಲ್ಲದೆ ಬೇರಾವ ಬದಲಾವಣೆಯೂ ನನ್ನಲ್ಲಾಗಿದೆಯೆಂದು ನನಗೆ ನಂಬಲಾಗಲಿಲ್ಲ. ಗೆಳತಿಯರೊಂದಿಗೆ ಉಲ್ಲಾಸದಿಂದ ಓಡಾಡಿದೆ. ಅಂದು ನನಗೆ ಭೌತಶಾಸ್ತ್ರ ಪಾಠ ಮಾಡುತ್ತಿದ್ದ ಅಧ್ಯಾಪಕರ ಹೆಸರು ಅನ್ಬು ಅಂತ. ಅನ್ಬು ಎಂಬುದರ ನೈಜಾರ್ಥ ಕರುಣೆಯುಳ್ಳವನೆಂದು. ಆದರೆ ಆ ವ್ಯಕ್ತಿಯಲ್ಲಿ ಯಾವುದೇ ಕರಣಾಭಾವ ಇರಲಿಲ್ಲವೆಂದು ನಾನು ಆದಷ್ಟು ಬೇಗನೆ ಅರ್ಥಮಾಡಿಕೊಂಡು ಬಿಟ್ಟಿದ್ದೆ. ಸರಸ್ವತಿ ವಿದ್ಯಾಲಯದ ಭೂ ವಿಜ್ಞಾನದ ಟೀಚರ್‌ಗೆ ಬದಲಾಗಿ ನನ್ನನ್ನು ಬೇಟೆಯಾಡುತ್ತಿದ್ದ ಹೊಸ ಭೂತದ ಹೆಸರು ಅನ್ಬು. ಆತನ ನೋಟದಲ್ಲಿ ಬೇರೇನೇನೋ ಮನೆ ಮಾಡಿದೆಯೆಂದು ನನಗನ್ನಿಸಿತು. ವಯಸ್ಸಿಗೆ ಬಂದ ಹೆಣ್ಣುಮಗಳಾಗಿದ್ದರೂ ನನಗೆ ಸೆಕ್ಸ್‌ನ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ. ನನ್ನ ಮನಸ್ಸು ಮತ್ತು ಶರೀರ ಆಗಲೂ ಬಾಲ್ಯದ ಹುಡುಗಾಟದ ಹಿಂದೆಯೇ ಅಲೆದಾಡುತ್ತಿತ್ತು. ಅನ್ಬು ಮಾಸ್ತರರು ಕೆಲವೊಮ್ಮೆ ನನ್ನ ದೇಹವನ್ನು ಸ್ಪರ್ಶಿಸುತ್ತಿದ್ದರು. ಅದು ಅವರ ಒಬ್ಬ ವಿದ್ಯಾರ್ಥಿನಿಯೊಂದಿಗೆ ತೋರುವ ವಾತ್ಸಲ್ಯದ ಕುರುಹು ಎಂದು ನನಗನ್ನಿಸಲೇ ಇಲ್ಲ.
ನಾನು ಭೌತಶಾಸ್ತ್ರದಲ್ಲಿ ಹೆಚ್ಚಿಗೆ ಆಸಕ್ತಿ ವಹಿಸುತ್ತಿಲ್ಲವೆಂದು ಹೇಳಿ ಅವರು ನನ್ನನ್ನು ಶಿಕ್ಷೆಗೊಳಪಡಿಸುತ್ತಿದ್ದರು. ನಾನು 16 ದಿನಗಳ ರಜೆ ಏಕೆ ತೆಗೆದುಕೊಂಡಿದ್ದೆನೆಂದು ಅವರಿಗೆ ಗೊತ್ತಿತ್ತು. ಬಾರದಿರುವ ದಿನಗಳ ಪಾಠದ ಮೇಲೆ ಅವರು ಪ್ರಶ್ನೆಗಳನ್ನ ಕೇಳಿ, ಅದೆಲ್ಲ ಏಕೆ ಕಲಿಯಲಿಲ್ಲವೆಂದು ಹೇಳುತ್ತಾ ನನ್ನನ್ನು ಹಿಂಸಿಸುತ್ತಿದ್ದರು. ಹೊಡೆಯುವುದಷ್ಟೇ ಅಲ್ಲ, ಬೇರೆ ರೀತಿಯ ಹಿಂಸೆಗಳನ್ನು ಅವರು ಕೊಡುತ್ತಿದ್ದರು. ನಾನು ನೋವಿನಿಂದ ಚಡಪಡಿಸುತ್ತಿದ್ದರೆ ಅನ್ಬು ಮಾಸ್ತರರು ಅದರಲ್ಲಿ ಸಂತೋಷ ಕಾಣುತ್ತಿದ್ದರು.
ತರಗತಿಯಲ್ಲಿ ಎದ್ದು ನಿಲ್ಲಿಸಿ ಎರಡೂ ಕೈಗಳನ್ನು ಎತ್ತಿ ಹಿಡಿಯಲು ಅನ್ಬು ಹೇಳುತ್ತಿದ್ದರು. ಆಗ ಆ ಮನುಷ್ಯ ನನ್ನ ಉಬ್ಬಿದ ಎದೆಯ ಭಾಗವನ್ನು ನೋಡಿ ಆನಂದಿಸುತ್ತಿದ್ದರು. ಕೆಲವೊಮ್ಮೆ ಅರ್ಧ ಸೊಂಟ ಬಗ್ಗಿಸಿ ಖುರ್ಚಿಯಲ್ಲಿ ಕುಳಿತಂತೆ ಕೂರಿಸುತ್ತಿದ್ದರು. ತಲೆಕೆಳಗೆ ಮಾಡಿ ಬಗ್ಗುವಂತೆ ಆಜ್ಞಾಪಿಸುತ್ತಿದ್ದರು. ಹೀಗೆ ಹಲವು ಶಿಕ್ಷಾ ಕ್ರಮಗಳಿಗೆ ಒಳಗಾಗುತ್ತಿದ್ದೆ. ಕರುಣಾಮಯನೆಂಬ ಹೆಸರಿಟ್ಟುಕೊಂಡಿರುವ ಅನ್ಬು ಮಾಸ್ತರರು, ಕಲ್ಲು ಹೃದಯಿ ಆಗಿದ್ದರು. ಇವೆಲ್ಲದರ ನಡುವೆ ಅವರು ನನ್ನ ಶರೀರದ ಉಬ್ಬುತಗ್ಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅಷ್ಟೇ ಅಲ್ಲ, ಕೆಲವೊಮ್ಮೆ ನನ್ನ ದೇಹದ ಭಾಗಗಳನ್ನು ಸ್ಪರ್ಶಿಸುತ್ತಿದ್ದರು. ನಿಧಾನವಾಗಿ ಭೌತಶಾಸ್ತ್ರವನ್ನೂ ನಾನು ದ್ವೇಷಿಸತೊಡಗಿದೆ. ಶಾಲೆಯ ಕ್ಲಾಸ್ ರೂಮಿನಲ್ಲಿ, ಮೈದಾನದಲ್ಲಿ ಒಂಟಿಯಾಗಿ ಕುಳಿತು ನಾನು ಬಿಕ್ಕಿದೆ. ಕನಸ್ಸಿನಲ್ಲಿ ಅನ್ಬು ಮಾಸ್ತರರು ಪ್ರೇತದಂತೆ ಭಯಪಡಿಸಿದರು.
ಇಂಥ ಪರಿಸ್ಥಿತಿಯಲ್ಲಿರುವಾಗ ಶಾಲೆಯ ಸುತ್ತಾ ಒಂದು ಸಿಹಿ ಸುದ್ದಿ ಹಬ್ಬಿತು. ಸದ್ಯದಲ್ಲೇ ಕಂಪ್ಯೂಟರ್ ಕ್ಲಾಸ್ ಪ್ರಾರಂಭಿಸುತ್ತಾರಂತೆ. ಅದು ನನ್ನ ಮನಸ್ಸಿಗೆ ತುಸು ನೆಮ್ಮದಿ ತಂದಿತು. ಸೆಂಟ್ರಲೈಸ್ಡ್ ಎಸಿ ಕೊಠಡಿಯಲ್ಲಿ ಕಂಪ್ಯೂಟರ್ ಕ್ಲಾಸನ್ನು ಸಿದ್ಧಗೊಳಿಸಲಾಗಿತ್ತು. ಟೇಬಲಿನ ಮೇಲೆ ಸಾಲಾಗಿರಿಸಿದ್ದ ಕಂಪ್ಯೂಟರ್‌ಗಳನ್ನು ಕುತೂಹಲದಿಂದ ವೀಕ್ಷಿಸಿದೆವು. ಜಗತ್ತಿನ ವಿವಿಧೆಡೆಯ ಸುದ್ದಿ ಸಮಾಚಾರಗಳನ್ನು ತಿಳಿಯಲು ಕಂಪ್ಯೂಟರ್- ಇಂಟರ್‌ನೆಟ್ ನೆರವಾಗುತ್ತದೆಂದು ನಮಗೆಲ್ಲ ತಿಳಿದಿತ್ತು. ಈತನಕ ಕಂಪ್ಯೂಟರ್ ಕಲಿಯುವ ಅವಕಾಶಗಳು ಒದಗಿ ಬಂದಿರಲಿಲ್ಲ.
ನನ್ನ ವಿದ್ಯಾರ್ಥಿ ಬದುಕಿನಲ್ಲಿ ಅಂಥದ್ದೊಂದು ಉತ್ತಮ ಮಟ್ಟದ ಕ್ಲಾಸ್ ರೂಂ ನಾನು ಕಂಡೇ ಇರಲಿಲ್ಲ. ಕೀ ಬೋರ್ಡ್, ಮಾನಿಟರ್‌ಗಳು ಸಾಲಾಗಿ ಕುಳಿತಿರುವ ವಿಸ್ಮಯಲೋಕ ಈಗ ನಮ್ಮೆದುರಿಗೆ! ಸದಾ ತಣ್ಣಗಿರುವ ಆ ಕ್ಲಾಸ್ ರೂಮಿನಲ್ಲಿ ಎಷ್ಟು ಹೊತ್ತು ಕುಳಿತರೂ ಬೇಸರ ಆಗುತ್ತಿರಲಿಲ್ಲ. ಹೇಗಾದರೂ ಕಂಪ್ಯೂಟರ್ ಕಲಿಯಬೇಕೆಂಬ ಉತ್ಸಾಹದಿಂದ ಸಿದ್ಧಳಾದೆ. ಮನೆಗೆ ಹೋಗಿ ಮನೆಯವರ ಮುಂದೆ ಕಂಪ್ಯೂಟರ್ ಬಗ್ಗೆ ಎಡಬಿಡದೆ ಮಾತನಾಡಿದೆ. ನಿಜವಾಗಿಯೂ ನಾನು ಕಂಪ್ಯೂಟರ್ ಅನ್ನು ನೋಡಿದ್ದು ಅದೇ ಮೊದಲು ಆದರೆ ನನಗೆ ಅದರಲ್ಲಿ ಯಾವುದೇ ಅಪರಿಚಿತ ಭಾವ ಉಂಟಾಗಲಿಲ್ಲ. ಬಹುಶಃ ಕಲಿಯಬೇಕೆಂಬ ಅದಮ್ಯ ಆಸಕ್ತಿ ಅದಕ್ಕೆ ಕಾರಣವಾಗಿರಬಹುದು.  ಕಂಪ್ಯೂಟರ್ ಕಲಿಕೆ ನನಗೆ ತುಂಬಾ ಉತ್ಸಾಹ ತಂದಿತು.
ಪರೀಕ್ಷೆ ಮುಗಿದಿತ್ತು. ಕಂಪ್ಯೂಟರ್‌ನಲ್ಲಿ ನನಗೆ ನೂರಕ್ಕೆ ನೂರು ಅಂಕಗಳು ಬಂದಿದ್ದವು. ನನ್ನ ಕಣ್ಣುಗಳು ಅರಳಿದವು. ಎಲ್ಲರಿಗೂ ಕೂಗಿ ಹೇಳಬೇಕೆನಿಸಿತು. ಏಕೆಂದರೆ ನನ್ನ ಶಾಲಾ ದಿನಗಳಲ್ಲಿ ಒಂದು ವಿಷಯದಲ್ಲಿ ಪೂರ್ಣ ಅಂಕಗಳು ದೊರೆಯುತ್ತಿರುವುದು ಅದೇ ಮೊದಲು. ಸಂತೋಷವನ್ನು ಅದುಮಿಡಲು ಸಾಧ್ಯವಾಗದ ನಿಮಿಷ. ಮನೆಗೆ ಹೋಗಿ ಎಲ್ಲರನ್ನೂ ಅಪ್ಪಿ ಹಿಡಿದು ಈ ಸುದ್ದಿಯನ್ನು ತಿಳಿಸಲು ಮನಸ್ಸು ತಹತಹಿಸಿತು. ಮೊದಲ ಬಾರಿಗೆ ಮೂರು ಮಾರ್ಕ್‌ಗಳನ್ನು ಪಡೆದ ಖುಷಿಯನ್ನು ಹೇಗೆ ಅದುಮಿಡಲು ಸಾಧ್ಯ? ಇಷ್ಟವಾದ ವಿಷಯವನ್ನು ಕಲಿಯುವುದರೊಂದಿಗೆ ಇಷ್ಟವಾಗದ ವಿಷಯಗಳನ್ನು ನಮಗೆ ಅರ್ಥವಾಗುವಂತೆ ನಮ್ಮ ಮೇಲೆ ಬಲವಂತವಾಗಿ ಹೇರದೆ ಹೇಳಿಕೊಟ್ಟರೆ ಕಲಿಯುವುದು ಸುಲಭವೆಂದು ಒಬ್ಬ ಟೀಚರಿಗಾದರೂ ಹೇಳಬೇಕೆನಿಸಿತು. ಸದ್ಯಕ್ಕೆ ಅದಕ್ಕೆಲ್ಲ ಪ್ರಯತ್ನಿಸಲಿಲ್ಲ. ಅನ್ಬು ಮಾಸ್ತರರು ನನಗೆ ನೀಡಿದ ಹಿಂಸೆಯ ನಡುವೆ ನನ್ನ ಮನಸ್ಸು ತಣ್ಣಗಾಗಿಸಿದ ಅನುಭವವಾಯಿತು. ಕಂಪ್ಯೂಟರ್ ಕಲಿಕೆ. ಅದರೊಂದಿಗೆ ಪರೀಕ್ಷೆಯಲ್ಲಿ ಲಭಿಸಿದ ಅಂಕಗಳು. ಒಬ್ಬ ಯುವ ಅಧ್ಯಾಪಕ ನಮಗೆ ಕಂಪ್ಯೂಟರ್ ಕಲಿಸಿಕೊಡುತ್ತಿದ್ದರು. ನನ್ನ ಅಂಕಗಳನ್ನು ಕಂಡು ಅವರು ಬಹಳ ಖುಷಿಪಟ್ಟರು. ನನ್ನನ್ನು ಎಲ್ಲರ ಮುಂದೆ ನಿಲ್ಲಿಸಿ ಅಭಿನಂದಿಸಿದರು. ಅದು ನನಗೆ ತುಂಬಾ ಆಹ್ಲಾದ ಕೊಟ್ಟಿತ್ತು. ಶಾಲೆಯಿಂದ ಲಭಿಸಿದ ಪ್ರಥಮ ಪ್ರಶಂಸೆ ಮತ್ತು ಸಂತೋಷ ಅದಾಗಿತ್ತು. ಆ ಕ್ಲಾಸ್‌ರೂಮಿನ ಅಭಿನಂದನಾ ಕ್ಷಣಗಳ ಮಧುರ ನೆನಪನ್ನು ಈಗಲೂ ಉಳಿಸಿಕೊಂಡಿದ್ದೇನೆ.
ಅಲ್ಲಿಂದ ಮುಂದೆ ಮತ್ತೊಂದು ಸಂತೋಷದ ಅನುಭವವೂ ನನಗಾಯಿತು. ನಮ್ಮ ಕಂಪ್ಯೂಟರ್ ಅಧ್ಯಾಪಕರು ಮತ್ತೊಂದು ಕೆಲಸವನ್ನು ನನಗೆ ವಹಿಸಿದರು. ಬೇರೆಯವರ ಉತ್ತರ ಪತ್ರಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮಾರ್ಕ್ ಹಾಕುವ ಕೆಲಸ. ನಿಜ ಹೇಳಬೇಕೆಂದರೆ, ಅದು ನನಗೆ ದೊರೆತ ಗೌರವ. ಓದದವಳು, ದಡ್ಡಿ ಎಂದೆಲ್ಲ ನಿರಂತರವಾಗಿ ಕೇಳಿಸಿಕೊಳ್ಳುತ್ತಿದ್ದ ನನಗೆ ಈ ಕೆಲಸ ಕೊಟ್ಟಿದ್ದರು. ನಾನೊಬ್ಬ ಟೀಚರ್ ಆಗಿ ಬದಲಾಯಿಸಿದೆ. ಕೆಲವು ಟೀಚರ್‌ಗಳನ್ನು ಅನುಕರಿಸಲೂ ಪ್ರಾರಂಭಿಸಿದೆ. ಕ್ಲಾಸ್ ಮುಗಿದ ನಂತರ ಸ್ವಲ್ಪ ಸಮಯ ಕ್ಲಾಸ್ ರೂಮಿನಲ್ಲೇ ಕುಳಿತು ಉತ್ತರ ಪತ್ರಿಕೆಗಳನ್ನು ತಪ್ಪದೆ ನೋಡಬೇಕೆಂದು ಅವರು ನನಗೆ ಆದೇಶಿಸಿದ್ದರು. ಅಪಾರವಾದ ಸಂತೋಷದಿಂದ ನಾನು ಬೀಗಿದೆ. ಆ ಖುಷಿಯಲ್ಲೇ ನನಗೆ ಅಧ್ಯಾಪಕನ ಮೇಲೆ ಅತಿಯಾದ ಪ್ರೀತಿ ಮತ್ತು ಗೌರವವುಂಟಾಯಿತು. ಭೂವಿಜ್ಞಾನದ ಅಧ್ಯಾಪಕಿ ಮತ್ತು ಫಿಸಿಕ್ಸ್ ಮಾಸ್ತರರ ಮುಂದೆ ಅವಹೇಳನಕ್ಕೆ ಗುರಿಯಾಗಿದ್ದ ನನಗೆ ದೇವರು ನೀಡಿದ ಅನುಗ್ರಹ ಇದೆ ಎಂದು ನಂಬಿದೆ.ಆದ್ದರಿಂದ ಕ್ಲಾಸ್‌ರೂಮಿನಲ್ಲಿ ಎಷ್ಟು ಹೊತ್ತು ಬೇಕಾದರೂ ಕಳೆಯಲು ನಾನು ಸಿದ್ಧಳಾದೆ. ಗೆಳೆಯರ ನಡುವೆ ನಾನೊಬ್ಬ ಅಧ್ಯಾಪಕಿ ಎಂಬಂತೆ ನಡೆದುಕೊಂಡೆ.
ಅದೊಂದು ದಿನ. ಎಂದಿನಂತೆ ಮಕ್ಕಳು ಅಧ್ಯಾಪಕರೆಲ್ಲ ಮನೆಗೆ ಹೋಗಿದ್ದರು. ನನ್ನ ಕ್ಲಾಸಿನಲ್ಲಿ ನಾನು ಮಾತ್ರ ಕುಳಿತಿದ್ದೆ. ಪಕ್ಕದಲ್ಲೆಲ್ಲೂ ಕ್ಲಾಸ್‌ಗಳು ನಡೆಯುತ್ತಿರಲಿಲ್ಲ. ಶಾಲೆಯಲ್ಲಿ ನಾಲ್ಕನೇ ದರ್ಜೆ ನೌಕರನೂ ಇರಲಿಲ್ಲ. ನೀರವ ವಾತಾವರಣ. ನನಗೆ ಭಯ ಆಗಲಿಲ್ಲ. ಕಾರಣ ತುಂಬಾ ಜವಾಬ್ದಾರಿಯುತ ಕೆಲಸವನ್ನು ನನಗೆ ವಹಿಸಿದ್ದರಲ್ಲವೇ! ಬೇರೆ ಎಷ್ಟೋ ವಿದ್ಯಾರ್ಥಿಗಳಿದ್ದರೂ ಈ ಕೆಲಸಕ್ಕೆ ಸೈಕಲ್ಲಿನಲ್ಲಿ ನನಗೆ ಮನೆಗೆ ಹಿಂತಿರುಗಬಹುದು. ತಡವಾದರೂ ಏನಾದರೊಂದು ನೆಪ ಹೇಳಿದರಾಯಿತೆಂದುಕೊಂಡೆ.
ಸಮಯ ಓಡುತ್ತಿತ್ತು. ಸೂರ್ಯನ ಬೆಳಕು ಕಡಿಮೆಯಾಗತೊಡಗಿತ್ತು. ನಾನು ಹೊರಕ್ಕೆ ನೋಡಿದರೆ ಯಾರೂ ಇರಲಿಲ್ಲ. ಒಂದು ಸದ್ದು ಕೇಳಿಸುತ್ತಿಲ್ಲ. ಪ್ರತಿಯೊಂದು ಪರೀಕ್ಷಾ ಉತ್ತರ ಪತ್ರಿಕೆ ತೆಗೆದು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೆ. ಇದ್ದಕ್ಕಿದ್ದಂತೆ ನನ್ನ ಹಿಂದಿನಿಂದ ಏನೋ ಮಿಸುಕಾಡುತ್ತಿರುವಂತೆ ತೋರಿತು. ಅನುಮಾನವೇ ಬೇಡ, ಅದು ನಮ್ಮ ಕಂಪ್ಯೂಟರ್ ಅಧ್ಯಾಪಕರು. ತುಂಬಾ ಮೆದುವಾಗಿ ನಡೆದು ನನ್ನ ಬಳಿಗೆ ಬಂದಿದ್ದೇ ತಿಳಿಯಲಿಲ್ಲ. ನಗುತ್ತಾ ಸೌಮ್ಯವಾಗಿ ನನ್ನನ್ನು ಮುಟ್ಟಿ ನಿಂತ. ಅದರ ನಂತರ ನಿಧಾನವಾಗಿ ಕುರ್ಚಿಯ ಹಿಂದಿನಿಂದ ಕೈಗಳನ್ನು ಮುಂದೆ ತಂದ. ನಾನು ನಡುಗತೊಡಗಿದೆ. ನನ್ನ ತೋಳುಗಳ ಮೇಲಿನಿಂದ ಆತನೆರಡು ಕೈಗಳು ಬಂದು ಅದುಮಿದವು. ನಾನು ಬೆಚ್ಚಿ ಬಿದ್ದೆ. ತಲೆಯೊಳಗೆ ಏನೋ ಹೊಗೆಯಾಡುತ್ತಿರುವಂತೆ ತೋರಿತು. ನಡುಗುತ್ತಿದ್ದುದರಿಂದ ನನಗೇನೂ ಹೇಳಲಾಗಲಿಲ್ಲ. ಗಟ್ಟಿಯಾಗಿ ಅಳೋಣವೆಂದರೆ ಅದಕ್ಕೂ ಸಾಧ್ಯವಾಗಲಿಲ್ಲ. ನಾನು ತುಂಬಾ ಗೌರವದಿಂದಲೂ, ಪ್ರೀತಿಯಿಂದಲೂ ಆರಾಧಿಸುತ್ತಿದ್ದ ಅಧ್ಯಾಪಕನ ಕೈಗಳು ನನ್ನ ದೇಹದ ಮೇಲೆ ಹರಿದಾಡಲು ಶ್ರಮಿಸುತ್ತಿದೆ. ನನಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ. ಕೋಪ ಮತ್ತು ಸಂಕಟ ಸಹಿಸಲಾಗದೆ ನಾನು ಕುಸಿದೆ. ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಹೇಗೆ ನೋಡಬೇಕೆಂಬುದನ್ನು ಹೇಳಿಕೊಡಲು ಆತ ಬಂದಿದ್ದನಂತೆ. ಅದು ಸುಳ್ಳೆಂದು ಕೆಲವೇ ಕ್ಷಣಗಳಲ್ಲಿ ನನಗೆ ತಿಳಿಯಿತು. ಸುತ್ತ ಯಾರೂ ಇಲ್ಲ. ನಾನು ಕೂಗಿದರೆ ಆತ ನನ್ನ ಮೇಲೆ ಆಕ್ರಮಣ ಮಾಡುತ್ತಾನೆಂದುಕೊಂಡೆ. ನಾನು ಅಪಾಯದಲ್ಲಿದ್ದೇನೆಂದೆನಿಸಿತು. ಗಂಟೆ ಸಂಜೆ ಐದೂವರೆ ದಾಟಿದೆ. ಆತನಿಂದ ಪಾರಾಗಲು ನಾನು ಹಲವು ಮಾರ್ಗೋಪಾಯಗಳನ್ನು ಯೋಚಿಸಿದೆ! ಅಧ್ಯಾಪಕನ ಗುರಿ ನನ್ನ ದೇಹದ ಮೇಲಿನ ಆಕ್ರಮಣವೆಂದು ಅರ್ಥವಾಯಿತು.
ಆಗ ನನ್ನ ಜೇಬಿನಲ್ಲಿದ್ದ ಸೈಕಲ್ಲಿನ ಕೀ ನೆನಪಾಯಿತು. ನಾನೊಮ್ಮೆ ಕೊಸರಿ ಕುಳಿತೆ. ಭಯ ಪ್ರದರ್ಶಿಸದೆ ತುಂಬಾ ಕಷ್ಟಪಟ್ಟು ನಕ್ಕು ಬಾತ್‌ರೂಮಿಗೆ ಹೋಗಿ ಬರುತ್ತೇನೆಂದು ಹೇಳಿ ಅಧ್ಯಾಪಕನ ತೋಳ ತೆಕ್ಕೆಯಿಂದ ಬಿಡಿಸಿ ಹೊರಕ್ಕೆ ಓಡಿದೆ. ಅದನ್ನು ಓಟವೆನ್ನುವುದಕ್ಕಿಂತಲೂ ಹಾರುತ್ತಿದ್ದೆನೆಂದರೆ ಸರಿ. ಒಬ್ಬ ಹೆಣ್ಣುಮಗಳ ಮಾನ ಮತ್ತು ಜೀವದ ಉಳಿವಿಗಾಗಿ ಅವಶ್ಯವಿರುವ ಓಟ. ನನಗೆ ಈಗಲೂ ಅದನ್ನು ಜ್ಞಾಪಿಸಿಕೊಳ್ಳಲಾಗುತ್ತಿಲ್ಲ. ಓಡುತ್ತಾ ಓಡುತ್ತಾ ನಾನು ಸೈಕಲಿನ ಬಳಿಗೆ ಬಂದೆ. ಬೀಗ ತೆರೆದು ಸೈಕಲಿನಲ್ಲಿ ಜಿಗಿದು ಕುಳಿತು ಮನೆಯತ್ತ ಧಾವಿಸಿದೆ. ಎಷ್ಟು ವೇಗವಾಗಿ ಸಾಗಲು ಸಾಧ್ಯವೋ ಅಷ್ಟೇ ವೇಗವಾಗಿ ಸೈಕಲ್ಲನ್ನು ತುಳಿಯತೊಡಗಿದೆ. ಆಗಲೂ ನನ್ನ ದೇಹ ಕಂಪಿಸುತ್ತಿತ್ತು. ನನ್ನೊಂದಿಗೆ ಪ್ರೀತಿ ತೋರುವಂತೆ ನಟಿಸಿ, ನನ್ನನ್ನು ಪ್ರೋತ್ಸಾಹಿಸಿದ ಅಧ್ಯಾಪಕ ಒಬ್ಬ ಮೃಗವಾಗಿದ್ದ. ಅವನ ಹೆಸರನ್ನು ಮನಸ್ಸಿನಲ್ಲೇ ಉಚ್ಛರಿಸುತ್ತ ಬಾಯಿ ತುಂಬಾ ಉಗುಳು ತಂದು ನೆಲಕ್ಕೆ ಕ್ಯಾಕರಿಸಿ ಉಗಿದೆ. ಇದನ್ನು ಯಾರಲ್ಲಿ ಹೇಳೋಣ? ಯಾರು ಇದನ್ನು ನಂಬುತ್ತಾರೆ? ಹೇಳಿದರೂ ನನ್ನ ವಿದ್ಯಾರ್ಥಿ ಜೀವನದ ಗತಿ ಏನಾದೀತು? ಅಷ್ಟೇ ಅಲ್ಲ, ನನ್ನೊಂದಿಗೆ ಮಾತ್ರ ನನ್ನ ಅಧ್ಯಾಪಕನಿಗೆ ಹಾಗೆ ಅನ್ನಿಸಲು ಕಾರಣವೇನೆಂದು ಮನೆಯವರು ಕೇಳುವುದಿಲ್ಲವೆ? ಶಾಲೆ ಬಿಟ್ಟ ನಂತರ ಮನೆಯವರ ಅನುಮತಿ ಇಲ್ಲದೆ ಕ್ಲಾಸ್‌ರೂಮಿನಲ್ಲಿ ಕುಳಿತು ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನೋಡುವುದಕ್ಕೆ ಏಕೆ ಒಪ್ಪಿಕೊಂಡೆನೆಂದು ಕೇಳಿದರೆ ಏನು ಹೇಳಲಿ? ಉತ್ತರ ಲಭಿಸದ ಅನೇಕ ಪ್ರಶ್ನೆಗಳು ಬೆಳೆಯುತ್ತಲೇ ಇದ್ದವು. ಆ ವೇಳೆಗಾಗಲೇ ನಾನು ಮಾನಸಿಕವಾಗಿ ಕುಸಿದಿದ್ದೆ. ಶಾಲೆ ಬಿಟ್ಟು ಮನೆ ತಲುಪಲು ತುಂಬಾ ಹೊತ್ತಾಗಿದ್ದಾದರೂ ಏಕೆ ಎಂಬ ಪ್ರಶ್ನೆ ಅಮ್ಮ ಕೇಳಿದರು. ಡ್ಯಾನ್ಸ್ ಕಾರ್ಯಕ್ರಮಕ್ಕೆ ರಿಹರ್ಸಲ್ ಮಾಡಲು ಹೋಗಿದ್ದನೆಂದು ಹೇಳಲೆತ್ನಿಸಿದೆ. ಆದರೆ ಅಮ್ಮ ಅದನ್ನು ನಂಬಲಿಲ್ಲ. ನಿನಗೆ ಯಾರ ಭಯವೂ ಇಲ್ಲ. ನಿನ್ನ ಇಷ್ಟದಂತೆ ನಡೆದುಕೊಳ್ಳುತ್ತಿದ್ದೀಯಾ ಎಂದೆಲ್ಲ ಬೈದು ಚೆನ್ನಾಗಿ ಹೊಡೆದರು. ನನ್ನ ವಾಸ್ತವ ಪರಿಸ್ಥಿತಿ ಯಾರಲ್ಲಿ ಹೇಳಿಕೊಳ್ಳಲಿ? ಯಾರಿಗೆ ಅರ್ಥವಾಗುತ್ತದೆ? ನಾನು ನನ್ನ ಕೊಠಡಿಯೊಳಗೆ ಹೋಗಿ ಚಿಲಕ ಹಾಕಿ ಮನ ಹಗುರವಾದಷ್ಟು ಅತ್ತೆ. ಆ ಅಧ್ಯಾಪಕನನನ್ನು ಸೇಡಿನ ಮುಳ್ಳುಗಳಿಂದ ತೃಪ್ತಿಯಾಗುವಷ್ಟು ಚುಚ್ಚಿದೆ! ಅಮ್ಮ ಹೊರಗಿನಿಂದ ಏನೇನೂ ಬಯ್ಯುತ್ತಿದ್ದರು. ಅದು ಯಾವುದು ನನ್ನನ್ನು ನೋಯಿಸಲಿಲ್ಲ. ಆದರೆ ಆ ಅಧ್ಯಾಪಕನ ಮುಖ ನನ್ನನ್ನು ಭೇಟೆಯಾಡುತ್ತಲೇ ಇತ್ತು. ನಾನು ಬಿಕ್ಕಿ ಬಿಕ್ಕಿ ಅತ್ತು ದಣಿದೆ.
ತುಂಬಾ ಹೊತ್ತಿನ ನಂತರ ಕೋಣೆಯಿಂದ ಹೊರಬಂದೆ. ನನಗೆ ಓದಿನಲ್ಲಿ ಕೊಂಚವೂ ಆಸಕ್ತಿ ಇಲ್ಲವೆಂದು ಎಲ್ಲರಿಗೂ ಕೇಳಿಸುವಂತೆ ಹೇಳಿದೆ. 'ಅಪ್ಪ, ನಾನು ಇನ್ನು ಓದಲು ಸ್ಕೂಲಿಗೆ ಹೋಗೋದಿಲ್ಲ. ಇನ್ನು ನನ್ನನ್ನು ಶಾಲೆಗೆ ಕಳುಹಿಸಿದರೆ ಖಂಡಿತವಾಗಿಯೂ ಸತ್ತೇ ಹೋಗುತ್ತೇನೆ'ಅಪ್ಪನ ಹತ್ತಿರ ಹೋಗಿ ಕುಳಿತು ಒಂದೇ ಉಸಿರಿಗೆ ಅಷ್ಟನ್ನು ಹೇಳಿದೆ. ಅಪ್ಪ ತಕ್ಷಣ ಉತ್ತರಿಸಿದರು; 'ನೀನು ಓದದಿದ್ದರೆ ನಿನ್ನನ್ನು ನಾನು. ಯಾವನ್ನಾದರೂ ಜಾಡಮಾಲಿ ಕೆಲಸ ಮಾಡುವವನಿಗೆ ಕೊಟ್ಟು ಮದುವೆ ಮಾಡಿಸುತ್ತೇನೆ. ಹಾಗೆ ನೀನು ನರಳಿ ಮರಳಿ ಬದುಕಬೇಕಾಗುತ್ತದೆ.'
ಅದನ್ನು ಕೇಳಿಸಿಕೊಂಡಾಗ ನನ್ನ ಸಂಕಟ ಹೆಚ್ಚಾಯಿತು. ಕಾರ್ಪೋರೇಷನ್ನಿನಲ್ಲಿ ಅಮೇಧ್ಯವನ್ನು ಬಾಚುವ ಕೆಲಸ ತೋಟಿಯದ್ದು. ಅಂಥವನು ಗಂಡನಾಗಿ ಸಿಕ್ಕಿದರೆ ಹೇಗಿರುತ್ತದೆ? ನನಗೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಅಪ್ಪ ಕೋಪದಲ್ಲಿ ಹಾಗೆಯೇ ಮಾಡಿಬಿಟ್ಟರೆ ಎಂಬ ಭಯ ನನ್ನಲ್ಲುಂಟಾಯಿತು. ಜೊತೆಗೆ ನನ್ನ ಮೈ ಬಣ್ಣ ಕಪ್ಪು. ಅದೂ ನನ್ನನ್ನು ಕಾಡಿತು. ಕೊನೆಗೆ ನನಗಿರುವ ಅಭಯ ಕೇಂದ್ರ ನೂರ್‌ಜಹಾನ್ ಅಕ್ಕ. ನಾನು ನೇರವಾಗಿ ಅಕ್ಕನಲ್ಲಿಗೆ ಹೋಗಿ ಹೇಳಿದೆ.
'ಅಕ್ಕಾ ಇನ್ನು ನಾನು ಸ್ಕೂಲಿಗೆ ಕೊಂದರೂ ಹೋಗಲಾರೆ' ನಾನು ಹೇಳುವುದನ್ನು ಕೇಳಿದಾಗ ಅಕ್ಕನಿಗೆ ಏನೋ ಅನುಮಾನದ ವಾಸನೆ ಬಡಿಯಿತು. 'ಏನೇ ಶಕೀ, ನಿನಗೆ ಹಾಗನ್ನಿಸಲಿಕ್ಕೆ ಕಾರಣ? ಅದೇನೇ ಇದ್ದರೂ ನನ್ನಲ್ಲಿ ಹೇಳ್ಕೋ' ಅಮ್ಮನಿಗೆ ಹೇಳಬಾರದೆಂಬ ನಿಬಂಧನೆ ಹಾಕಿ ಅಕ್ಕನಿಗೆ ಎಲ್ಲ ವಿಷಯ ಹೇಳಿದೆ. ಮನೋವೇದನೆ ಅರ್ಥೈಸಿಕೊಂಡ ಅಕ್ಕ ಎಲ್ಲವನ್ನೂ ತಲೆಯಾಡಿಸಿ ಒಪ್ಪಿಸಿದಳು. ವಯಸ್ಸಿಗೆ ಮೀರಿ ಬೆಳೆದ ನನ್ನ ದೇಹವನ್ನು ನಾನು ದ್ವೇಷಿಸಿದೆ. ಅಕ್ಕನಿಗೆ ಈಗ ಎಲ್ಲವೂ ಅರ್ಥವಾಗಿರಬೇಕು. ನನ್ನ ವಯಸ್ಸನ್ನು ದಾಟಿ ಬೆಳೆದವಳಲ್ಲವೆ ನನ್ನಕ್ಕ. ನನಗೇನಾದರೂ ತೊಂದರೆಯಾಗಬಹುದೇ ಎಂದು ಅಕ್ಕ ಹೆದರಿದಳು. ಬುದ್ಧಿಮಾತುಗಳನ್ನು ಪದೇಪದೆ ಹೇಳಿದಳು. ಒಂದು ರೀತಿಯಲ್ಲಿ ಅಕ್ಕನೇ ಜವಾಬ್ದಾರಿ ವಹಿಸಿ ನನ್ನನ್ನು ಸ್ಕೂಲಿಗೆ ಸೇರಿಸಿದಳು. ಅದಕ್ಕಾಗಿ ಅಪ್ಪ ಅಮ್ಮನನ್ನು ಒಪ್ಪಿಸಲು ಅಕ್ಕ ತುಂಬಾ ಹೆಣಗಿದಳು. ಅಂತೆಯೇ ಚೆನ್ನೈ ಆದರ್ಶ ವಿದ್ಯಾಲಯವೆಂಬ ಹೊಸ ಸ್ಕೂಲಿಗೆ ನಾನು ಸೇರಿಕೊಂಡೆ.
(ಮುಂದಿನ ವಾರ: 'ಗಂಡು ಹೆಣ್ಣುಗಳೊಂದಿಗೆ ನನ್ನ ಮದ್ಯಪಾನ')

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com