ಮಹಿಳೆಯ ಧ್ವನಿಯಾದ ಕಮಲಾದಾಸ್

ಭಾರತದಂಥ ಬಹು ಸಂಸ್ಕೃತಿಯ ದೇಶದಲ್ಲಿ ಇಪ್ಪತ್ತನೇ ಶತಮಾನದಲ್ಲಿ ಮಹಿಳೆಯೊಬ್ಬಳು ತನಗೆ ತೋಚಿದ್ದನ್ನು ಮಾತನಾಡುತ್ತಾಳೆ ...
ಮಹಿಳೆಯ ಧ್ವನಿಯಾದ ಕಮಲಾದಾಸ್
Updated on

ಭಾರತದಂಥ ಬಹು ಸಂಸ್ಕೃತಿಯ ದೇಶದಲ್ಲಿ ಇಪ್ಪತ್ತನೇ ಶತಮಾನದಲ್ಲಿ ಮಹಿಳೆಯೊಬ್ಬಳು ತನಗೆ ತೋಚಿದ್ದನ್ನು ಮಾತನಾಡುತ್ತಾಳೆ ಮತ್ತು ತನಗೆ ಅನಿಸಿದ್ದನ್ನು ಬರೆಯುತ್ತಾಳೆ ಎಂದರೆ ಅದನ್ನು ಸುಲಭವಾಗಿ ಅರಗಿಸಿಕೊಳ್ಳುವ ಮನಸ್ಥಿತಿಯಲ್ಲಿ ಸಮಾಜ ಇರಲಿಲ್ಲ. ವ್ಯಕ್ತಿಸ್ವಾತಂತ್ರ್ಯವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮಲಯಾಳ ಸಾಹಿತ್ಯದ ದೊಡ್ಡ ಹೆಸರಾದ ಮಾಧವಿಕುಟ್ಟಿ ಉರ್ಫ್ ಕಮಲಾದಾಸ್ ಅವರು ತಮ್ಮ ಬದುಕಿನ ಕೊನೆಯ ಹಂತದಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಬಂಡಾಯ ಮನೋಧರ್ಮವನ್ನು ಪ್ರದರ್ಶಿಸಿದವರು.
ಕಮಲಾದಾಸ್ ಅವರು ಬರೆಯಲು ಆರಂಭಿಸಿದ ಹೊತ್ತಿನಲ್ಲೇ ಮಲಯಾಳಿಯ ಅಗ್ರಗಣ್ಯ ಲೇಖಕರಾದ ವೈಕಂ ಮಹಮ್ಮದ್ ಬಷೀರ್, ತೆಗಳಿ ಶಿವಶಂಕರ ಪಿಳ್ಳೆ, ಎಂ.ಟಿ. ವಾಸುದೇವನ್ ನಾಯರ್ ಮೊದಲಾದವರು ಬರೆಯುತ್ತಿದ್ದರು. ಪುರುಷ ಆಲೋಚನೆಯ ಬರವಣಿಗೆಗಳು ಸಮಾಜದ ಅರ್ಧ ಭಾಗವಾಗಿರುವ ಮಹಿಳೆಯ ದನಿಯನ್ನು ಯಥಾವತ್ತಾಗಿ ಪ್ರತಿಬಿಂಬಿಸಲು ವಿಫಲವಾಗಿದ್ದವು. ಆ ಒಂದು ಕೊರತೆಯನ್ನು ಕಮಲಾದಾಸ್ ತಮ್ಮ ಬರೆಹಗಳ ಮೂಲಕ ತುಂಬಿದರು.
ಅವರ ಹನ್ನೊಂದು ಕಾದಂಬರಿಗಳ ಸಂಪುಟವು ಕನ್ನಡಕ್ಕೆ ಬಂದಿದೆ. ಡಾ. ಅಶೋಕ್ ಕುಮಾರ್ ಮಲಯಾಳದಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಮಲಾ ದಾಸ್ ಅವರು ಕೇರಳದ ಗ್ರಾಮೀಣ ಹೆಣ್ಣುಮಗಳ ನೋವಿಗೆ ದನಿಯಾದರು. ಅದೇ ರೀತಿ ನಗರ ಪ್ರದೇಶದ ಸಂಕೀರ್ಣ ಜೀವನ ಶೈಲಿಯನ್ನೂ ಹಿಡಿದಿಟ್ಟರು. ಭಾಷೆಯ ನಿರರ್ಗಳತೆ, ಕತೆಯನ್ನು ಹೇಳುವಲ್ಲಿಯ ನಿರ್ಭಿಡೆ ಅವರಿಗೆ ಅಪಾರವಾದ ಓದುಗರನ್ನು ದೊರಕಿಸಿ ಕೊಟ್ಟಿತ್ತು. ದಟ್ಟವಾದ ಜೀವನಾನುಭವ ಮತ್ತು ಮನುಷ್ಯ ಸಂಬಂಧಗಳನ್ನು ಅವರು ತಡಕಾಡುವ ರೀತಿ ಮಲಯಾಳ ಸಾಹಿತ್ಯದಲ್ಲಿ ಹೊಸ ಅಲೆಯನ್ನು ಹುಟ್ಟಿಸಿತು. ಹೆಣ್ಣಿನ ವಿಷಯದಲ್ಲಿ ಮಡಿ ಅಂದುಕೊಂಡಿದ್ದ ಒಳ ಜಗತ್ತಿನ ಅದೆಷ್ಟೋ ವಿವರಗಳು, ಸಂಕಟದ ನುಡಿಚಿತ್ರಗಳು ಕಮಲಾದಾಸ್ ಅವರ ಕೃತಿಗಳಲ್ಲಿ ಮೂಡಿಬಂದವು.
ಮಹಾನಗರವೊಂದರ ವೇಶ್ಯಾವೃತ್ತಿಯಲ್ಲಿರುವ ಹೆಣ್ಣುಗಳ ಜೀವನವನ್ನು ಆಧರಿಸಿದ ಕಾದಂಬರಿ 'ರುಕ್ಮಿಣಿಗೊಂದು ಗೊಂಬೆ'. ತೀರ ಸಂಕೀರ್ಣವೆನ್ನಿಸುವ ಸನ್ನಿವೇಶದಲ್ಲಿ ತಾಯಿಯೇ ತನ್ನ ಹರೆಯದ ಮಗಳನ್ನು ವೇಶ್ಯಾಗೃಹಕ್ಕೆ ಒಪ್ಪಿಸುವ ಸಂದರ್ಭವು ಹೃದಯಕ್ಕೆ ತಟ್ಟುವಂತೆ ಚಿತ್ರಣಗೊಂಡಿದೆ. ಇನ್ನೂ ಬೊಂಬೆಯಾಡುವ ವಯಸ್ಸಿನ ಹುಡುಗಿಯ ಸಾಕ್ಷಿಪ್ರಜ್ಞೆಯಲ್ಲಿ ಕಾದಂಬರಿಯ ಅನಾವರಣವಾಗಿದೆ.
ಹಾಗೆಯೇ 'ಕೊನೆಯ ಅತಿಥಿ' ಕವಯಿತ್ರಿಯೊಬ್ಬಳ ಬಾಳ ಪುಟಗಳ ದಾಖಲೆ ಇದೆ. ಅತೃಪ್ತ ದಾಂಪತ್ಯದ ವಿನೋವಿಶ್ಲೇಷಣಾತ್ಮಕ ಕತೆಯನ್ನು ಹೊಂದಿದ ಕಾದಂಬರಿ 'ರೋಹಿಣಿ'. ಅಂಕೆ ಮೀರಿದ ಕಾಮದ ಸಾಧಕ ಬಾಧಕಗಳ ವಿಮರ್ಶೆ ಇದರಲ್ಲಿದೆ. ವಿವಾಹಪೂರ್ವ ಲೈಂಗಿಕ ಚಟುವಟಿಕೆಯ ವಸ್ತುವನ್ನು ಒಳಗೊಂಡಿದ್ದು 'ಮಾನಸಿ'. ಕವಯಿತ್ರಿಯೊಬ್ಬಳ ಆತ್ಮಕತೆಯಂತೆ ನಿರೂಪಣೆ ಇರುವ ಇದು ಅತೃಪ್ತ ದಾಂಪತ್ಯ, ಪರಪುರುಷರ ಬೆನ್ನುಹತ್ತುವಿಕೆ, ಅನ್ಯಸ್ತ್ರೀಯರ ಸಂಗ, ರಾಜಕೀಯ ಕಲಸುಮೇಲೋಗರ ಇತ್ಯಾದಿಯನ್ನೆಲ್ಲ ಅವರು ಕಟ್ಟಿಕೊಟ್ಟಿದ್ದಾರೆ. 'ಗಂಧದ ಮರಗಳು' ಕಾದಂಬರಿಯಲ್ಲಿ ಚಿಕ್ಕಂದಿನಿಂದಲೂ ಸ್ನೇಹಿತೆಯಾದವರ ಸಲಿಂಗ ಕಾಮದ ವಸ್ತುವನ್ನು ಬೆಳೆಸಿದ್ದಾರೆ. 'ಮನೋಮಿ' ಕಾದಂಬರಿಯು ಶ್ರೀಲಂಕಾದ ತಮಿಳರು ಮತ್ತು ಸಿಂಹಳೀಯರ ಸಂಘರ್ಷದ ನಡುವೆ ಮನೋಮಿ ಎಂಬ ಹುಡುಗಿ ಭಾರತಕ್ಕೆ ವಲಸೆ ಬರುವುದು, ಹೊಸ ಬದುಕನ್ನು ಇಲ್ಲಿ ಅರಸುವುದು 'ನಾನು ಯಾರನ್ನೂ ದ್ವೇಷಿಸುವುದಿಲ್ಲ' ಎಂಬ ಆಕೆಯ ವಿಶ್ವಪ್ರೇಮದ ದೃಷ್ಟಿಕೋನಕ್ಕೆ ಮನ್ನಣೆ ಸಿಗದೆ ಹೋಗುವುದು, ಈ ಮೂಲಕ ಯುದ್ಧದ ಕರಾಳತೆಯನ್ನು ಬಿಂಬಿಸುವುದಕ್ಕೆ ಕಮಲಾದಾಸ್ ಪ್ರಯತ್ನಿಸಿದ್ದಾರೆ.
ಅವಿವಾಹಿತ ಮಧ್ಯ ವಯಸ್ಕಳ ಮಾನಸಿಕ ಮತ್ತು ದೈಹಿಕ ತಲ್ಲಣಗಳನ್ನು 'ಸಮುದ್ರದ ನವಿಲು' ಕಾದಂಬರಿಯಲ್ಲಿ ಹೇಳಲಾಗಿದೆ. ಕಾಮನೆಗಳನ್ನು ಹತ್ತಿಕ್ಕುವುದರಿಂದ ಆಗುವ ಅಪಾಯಗಳ ಕಡೆಗೆ ಇದು ಗಮನ ಸೆಳೆಯುತ್ತದೆ. ಭಗ್ನಪ್ರೇಮದ ಕತೆ 'ಎಂದೆಂದೂ ತಾರಾ'. ತಾನು ಪ್ರೇಮಿಸಿದ ಹುಡುಗಿ ಬೇರೆಯವರನ್ನು ವರಿಸಿದಾಗ ನೊಂದ ಯುವಕನ ಮಾನಸಿಕ ತೊಳಲಾಟ ಇದರಲ್ಲಿದೆ. ಸಿನಿಮಾ ಆಗಿದ್ದ ಕನ್ನಡದ 'ಎರಡು ಕನಸು' ಕಾದಂಬರಿಯನ್ನು ಇದು ನೆನಪಿಸಬಹುದು. ತಂದೆಯ ಆರೈಕೆಯಲ್ಲಿ ಬೆಳೆದ ತಾಯಿ ಇಲ್ಲದ ಮಗಳ ಅವ್ಯಕ್ತ ಭೀತಿ, ಹತಾಶೆ, ಮಾನಸಿಕ ಅಸ್ವಸ್ಥತೆ, ಖಿನ್ನತೆ ಇತ್ಯಾದಿಗಳನ್ನು 'ರಾತ್ರಿಯ ಪದವಿನ್ಯಾಸ' ಕಾದಂಬರಿಯು ಹೇಳುತ್ತದೆ.
ಈ ಎಲ್ಲ ಕಾದಂಬರಿಗಳನ್ನು ಒಟ್ಟಿಗೆ ಓದಿದಾಗ ಕಮಲಾದಾಸ್ ಅವರ ಜೀವನ ದರ್ಶನವೇನು ಎಂಬುದನ್ನು ಅರಿಯಬಹುದು. ಒಂದು ರೀತಿಯಲ್ಲಿ ಚಾರ್ವಾಕನಂತೆ ಅವರು ಚಿಂತಿಸಿರಬಹುದು. ಅದಕ್ಕಿಂತ ಹೆಚ್ಚಾಗಿ ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ತಮ್ಮ ಕೃತಿಗಳಲ್ಲಿ ಅವರು ಮಾತನಾಡಿದರು. ಡಾ. ಅಶೋಕ್ ಕುಮಾರ್ ಅವರ ಕನ್ನಡ ಅನುವಾದ ಸೊಗಸಾಗಿದೆ.
ಪ್ರ: ಹೇಮಂತ ಸಾಹಿತ್ಯ, ಬೆಂಗಳೂರು, ಪುಟಗಳು 567, ಬೆಲೆ ರು. 400


ಆದಿತ್ಯ ಭಟ್ ಲೇಖನಗಳು
ಯುವ ಲೇಖಕ ಆದಿತ್ಯ ಭಟ್ ಅವರು ಬರೆದಿರುವ ಐವತ್ತು ಲೇಖನಗಳು 'ಗಾಂಧಿ ಟೋಪಿ ಗೊಡ್ಸೆ ನೆರಳು' ಹೆಸರಿನಲ್ಲಿ ಕೃತಿಯಾಗಿದೆ. ಇದು ಅವರ ಲೇಖನಗಳ ಎರಡನೆ ಸಂಕಲನ. ಸಮಕಾಲೀನ ವಿದ್ಯಮಾನಗಳನ್ನೆಲ್ಲ ಅವರು ವಿವೇಚಿಸಿ ತಮ್ಮ ಟೀಕೆ ಟಿಪ್ಪಣಿಗಳನ್ನು ಬರೆದಿದ್ದಾರೆ. ಹೆಚ್ಚಿನವು ರಾಜಕೀಯ ಚಿಂತನೆಗಳು. ಬಂಗಾರಪ್ಪನವರ ಬದುಕನ್ನು ಕುರಿತು ಬರೆದ ವ್ಯಕ್ತಿಚಿತ್ರ ಚೆನ್ನಾಗಿದೆ. ಹಾಗೆಯೇ ನೆಲ್ಸನ್ ಮಂಡೇಲಾ ಕುರಿತು ಬರೆದದ್ದು ತುಂಬ ಆಪ್ತವಾದ ಬರೆಹ. ಅದರಲ್ಲಿಯ 'ಔಜಛಜ ಜ್ಠ್ಟಿಟ ಛಿಛ್ಛ್ಞ ಛಟಿಜ ಟಜಡಿ ್ಟಝಿಜ್ಠಡ ಛಿಜಟ್ಝಜಢಜ ಝಿಜಣ ಛ್ಠಜ ್ಝಟಿ ಜ್ಠ್ಟಿಟಿಡಿ' ಎಂಬ ಮಂಡೇಲಾರ ಚಿಂತನೆ ನಾಯಕರಾಗಬೇಕು ಎಂದು ಬಯಸುವವರಿಗೆ ಮಾರ್ಗದರ್ಶಕ ಮಾತಿನಂತಿದೆ. ಗಾಂಧಿ ಮತ್ತು ಮಂಡೇಲಾ ಹೇಗೆ ಭಿನ್ನ ಎಂದು ಗುರುತಿಸುವ ಆದಿತ್ಯ ಮಂಡೇಲಾರಂಥವರು ಯಾವಾಗ ಹುಟ್ಟಿಕೊಳ್ಳುತ್ತಾರೆ ಎಂಬುದನ್ನೂ ಹೇಳುತ್ತಾರೆ. ಆಲೋಚನೆಗಳ ತಾಜಾತನಕ್ಕೆ ಈ ಕೃತಿ ಓದಬೇಕು.
ಪ್ರ: ನ್ಯೂ ವೇವ್ ಬುಕ್ಸ್, ಬೆಂಗಳೂರು, ಪುಟಗಳು 156, ಬೆಲೆ ರು. 95




ಗುಪ್ತಗಾಮಿನಿ
ವಿಜ್ಞಾನ ಇಂದು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಕತೆಗಳಲ್ಲಿಯೂ ವೈಜ್ಞಾನಿಕ ಸಂಗತಿಗಳನ್ನು ಸೇರಿಸಿ ಬರೆದರೆ ಅದು ರೋಚಕವಾಗಿರುತ್ತದೆ. ಕನ್ನಡದಲ್ಲಿ ವೈಜ್ಞಾನಿಕ ಸಾಹಿತ್ಯ ಅಷ್ಟೊಂದು ಪುಷ್ಟವಾಗಿ ಬೆಳೆದಿಲ್ಲ. ಸವಿತಾ ಶ್ರೀನಿವಾಸ ಅವರು 'ಗುಪ್ತಗಾಮಿನಿ' ಎಂಬ ವೈಜ್ಞಾನಿಕ ಕಥಾಸಂಕಲನ ಹೊರತಂದಿದ್ದಾರೆ. ಇದರಲ್ಲಿ ಒಂಬತ್ತು ಕತೆಗಳಿವೆ. ವೈಜ್ಞಾನಿಕ ಅಂಶಗಳನ್ನು ಕಲ್ಪನೆಯ ರೆಕ್ಕೆಯ ಮೇಲೆ ಕೂಡಿಸಿ ಕತೆಯನ್ನು ಹೆಣೆಯುವಾಗ ಪಾತ್ರಪೋಷಣೆ ಸೊರಗುವುದು ಸಹಜ. ಆದರೆ ಇಲ್ಲಿಯ ಕತೆಗಳಲ್ಲಿ ಹಾಗೆ ಆಗಿಲ್ಲ. ಅದು ಸಂಕಲನದ ಪ್ಲಸ್ ಪಾಯಿಂಟ್.
ಪ್ರ: ಐಬಿಎಚ್ ಪ್ರಕಾಶನ, ಬೆಂಗಳೂರು, ಪುಟಗಳು 116, ಬೆಲೆ ರು. 75


ಕೋಡೂರು ಕಾಣ್ಕೆ
ಕೆ.ಗಣೇಶ ಕೋಡೂರು ಅವರ 'ರೈಟ್ ಚಾಯ್ಸ್‌' ಮತ್ತು 'ಕಥೆಗಳಲ್ಲ ಕಥೆಗಳು' ಎಂಬ ಎರಡು ಕೃತಿಗಳು ಬಂದಿವೆ. ಜೀವನ ಮೌಲ್ಯಗಳನ್ನು ಹೇಳುವ ಇವು ಬದುಕಿನ ಭರವಸೆಯ ಪಾಠಗಳು. 'ರೈಟ್ ಚಾಯ್ಸ್‌' ಇರುವ ಕೆಲಸ ಬಿಟ್ಟು ಇನ್ನೊಂದು ಕೆಲಸದಲ್ಲಿ ಯಶಸ್ಸು ಕಂಡವರ ಕಥನಗಳು. ಇದು ಕೋಡೂರು ಅವರದೇ ಬರೆಹಗಳು. 'ಕಥೆಗಳಲ್ಲದ ಕಥೆಗಳು' ಯಾರೋ ಹೇಳಿದ ಎಲ್ಲೋ ಕೇಳಿದ ಬದುಕಿನ ಒಂದಿಷ್ಟು ಚಿತ್ರಗಳು. ಇದು ಹಲವರ 21 ಲೇಖನಗಳ ಸಂಪಾದನೆ. ಮತ್ತೆ ಮತ್ತೆ ಓದಬೇಕೆನ್ನಿಸುವ ಬರೆಹಗಳು ಇವು.
ಪ್ರ: ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು ಅಂಚೆ, ಹೊಸನಗರ ತಾ. ಪುಟಗಳು 64/68, ಬೆಲೆ ರು. 20/50

-ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com