ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳುತ್ತಿರುವುದರ ಹಿಂದೆ ಲಷ್ಕರ್-ಇ-ತೊಯಿಬಾ(ಎಲ್‌ಇಟಿ) ಉಗ್ರ ಸಂಘಟನೆಯ ಸ್ಥಾಪಕ ಹಫೀಜ್ ಸಯೀದ್ ಪಾತ್ರ ಇರುವುದಾಗಿ ಗುಪ್ತಚರ ವರದಿಗಳು ತಿಳಿಸಿವೆ ಎಂದು ಮಂಗಳವಾರ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಹೇಳಿದ್ದಾರೆ.
ಸಾಂಬಾದಲ್ಲಿ ಗಡಿ ಭದ್ರತಾ ಪಡೆಯ ಸೈನಿಕ ಸಮ್ಮೇಳನದಲ್ಲಿ ಭಾಗವಹಿಸುವ ಮುನ್ನ ವರದಿಗಾರರೊಂದಿಗೆ ಮಾತನಾಡಿದ ಶಿಂಧೆ, ಉಗ್ರರನ್ನು ಭಾರತದ ಗಡಿಯೊಳಗೆ ನುಗ್ಗಿಸುವ ಸಂಬಂಧ ಹಫೀಜ್ ಸಯೀದ್ ಗಡಿ ನಿಯಂತ್ರಣ ರೇಖೆಯ ಪ್ರದೇಶಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಖಚಿತ ಮಾಹಿತಿ ಇದೆ ಎಂದಿದ್ದಾರೆ.
ಕೆಲವು ಸಂದರ್ಭಗಳಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಪಾಕಿಸ್ತಾನ ಇದನ್ನು ಅರ್ಥ ಮಾಡಿಕೊಳ್ಳದೇ ಪದೇಪದೆ ಅಪ್ರಚೋದಿತ ದಾಳಿ ನಡೆಸಿದರೆ ನಾವು ಅನ್ಯ ಮಾರ್ಗದ ಮೂಲಕ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಶಿಂಧೆ ಎಚ್ಚರಿಸಿದ್ದಾರೆ.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಈ ವಿಚಾರದಲ್ಲಿ ಮೂರನೆಯವರ ಮಧ್ಯಸ್ಥಿಕೆಯ ಅಗತ್ಯ ಇಲ್ಲ. ಇದನ್ನು ದ್ವಿಪಕ್ಷೀಯ ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.
Advertisement