ಭರವಸೆ ಮೂಡಿಸಿದ್ದು ಕೆಲವೇ ಚಿತ್ರಗಳು; ಅಬ್ಬರವೇ ಹೆಚ್ಚು; ಕನ್ನಡ ಸಿನೆಮಾಗಳ ಹಿನ್ನೋಟ

ಒಟ್ಟಿನಲ್ಲಿ ಈ ವರ್ಷದ ಕನ್ನಡ ಚಿತ್ರಗಳನ್ನು ಅವಲೋಕಿಸಿದರೆ ನಂಬರ್ ೧ ಪಟ್ಟದ ಹಿಂದೆ ಬಿದ್ದ ದೊಡ್ಡ ದೊಡ್ಡ ನಟರ ಸಿನೆಮಾಗಳು ಭಯ-ಆತಂಕ ಮೂಡಿಸಿದರೆ, ಹೊಸದಾಗಿ ಬಂದವರಲ್ಲಿ ಕೂಡ ಛಾಪು ಮೂಡಿಸಲು
ಕನ್ನಡ ಸಿನೆಮಾಗಳ ಹಿನ್ನೋಟ 2015
ಕನ್ನಡ ಸಿನೆಮಾಗಳ ಹಿನ್ನೋಟ 2015

ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ತಮ್ಮ ಸಾಧನೆಯನ್ನು ವಿಮರ್ಶಿಕೊಳ್ಳುವ ಉಮೇದು ಇದೆಯೇ? ಅಷ್ಟಕ್ಕೂ ಮೊದಲ ವಾರಾಂತ್ಯದ ಗಳಿಕೆ, ದಾಖಲೆ ಸಂಖ್ಯೆಯ ಥಿಯೇಟರ್ ಗಳಲ್ಲಿ ಬಿಡುಗಡೆ, ಟಿವಿ ಮಾಧ್ಯಮಗಳಲ್ಲಿ ನೀಡುವ ಪ್ರಚಾರ ಕಾರ್ಯಕ್ರಮಗಳಿಂದಲೇ ತಮ್ಮ ಸಿನೆಮಾಗಳ ಯಶಸ್ಸು ಅಳೆಯುವ ಕನ್ನಡ ಚಿತ್ರರಂಗ ನಿಜಕ್ಕೂ ಕನ್ನಡ ಪ್ರೇಕ್ಷಕನ ನಿರೀಕ್ಷೆಯನ್ನು ಮನಗಂಡಿದೆಯೇ? ಅಥವಾ ಅದರ ಅಗತ್ಯವೇ ಇಲ್ಲ, ಅವರ ಆಯ್ಕೆ ನಾವು ನೀಡಿದಷ್ಟೇ ಎಂಬ ದಾರ್ಷ್ಟ್ಯದಿಂದ ಮೈಮರೆತಿದೆಯೇ? ಕನ್ನಡ ಚಿತ್ರರಂಗಕ್ಕೆ ಅಗತ್ಯವೋ ಇಲ್ಲವೋ, ಕನ್ನಡ ಪ್ರೇಕ್ಷಕರ ದೃಷ್ಟಿಯಿಂದಷ್ಟೇ, ಯಾವ ಆಮಿಶಕ್ಕೂ, ಒತ್ತಡಕ್ಕೂ ಮಣೆ ಹಾಕದೇ ವಸ್ತುನಿಷ್ಠ ವಿಮರ್ಶೆಗಳನ್ನು ನೀಡುತ್ತ ಬಂದಿರುವ ಕನ್ನಡಪ್ರಭ.ಕಾಂಗೆ ಇದು ಅತಿ ಮುಖ್ಯ ಎನಿಸಿದೆ. ಆದುದರಿಂದ ೨೦೧೫ ರ ಕನ್ನಡ ಚಿತ್ರಗಳ ಬಗ್ಗೆ ಇದೊಂದು ಅವಲೋಕನ ಮತ್ತು ನಾವು ಮಾಡಿದ ವಿಮರ್ಶೆಗಳತ್ತ ಮತ್ತೆ ಕಣ್ಣಾಡಿಸಿ, ವಿಮರ್ಶೆಗೂ ಸಿನೆಮಾ ಪ್ರದರ್ಶನಕ್ಕೂ ಸಂಬಂಧವೇನಾದರೂ ಇದೆಯೇ ಎಂದು ಪರಾಮರ್ಶಿಸಲು ನಮ್ಮ ತಾಣವನ್ನೇ ಎಡತಾಕುವ ಪ್ರಯತ್ನ.

ಕಳೆದ ವರ್ಷ ಅಂತ್ಯ ಕಂಡಿದ್ದು ಯಶ್ ಅಭಿನಯದ ಮಿ ಅಂಡ್ ಮಿಸಸ್ ರಾಮಾಚಾರಿಯ ಭಾರಿ ಯಶಸ್ಸಿನ ಮೂಲಕ. ಬಹಳ ಎಚ್ಚರಿಕೆಯಿಂದ ನಾವು ಇದು ಹಿರೋಯಿಸಂ ವೈಭವೀಕರಣದ ಚಿತ್ರವಾದರೂ ಮನರಂಜನಾತ್ಮಕವಾಗಿದ್ದು ನೋಡುವಂತಹ ಸಿನೆಮಾ ಎಂದಿದ್ದೆವು. ಇದು ಶತದಿನದತ್ತ ನಡೆದದ್ದು ಈಗ ಇತಿಹಾಸವಾದರೆ ೨೦೧೫ರ ಆರಂಭ ಮಾತ್ರ ಬರೀ ಆಘಾತಗಳೆ! ಸ್ವಾಗತ ಮಾಡಿದ ಗಣೇಶ್ ಅವರ ರಿಮೇಕ್ ಸಿನೆಮಾ 'ಖುಷಿ ಖುಷಿಯಾಗಿ' ಮತ್ತು ಉಪೇಂದ್ರ ಅವರ 'ಶಿವಂ' ಶಿವ ಶಿವಾ ಎಂದು ಕಳೆದು ಹೋದವು. ದೊಡ್ಡ ದೊಡ್ಡ ಪ್ರಚಾರ ಪಡೆದು ಬಂದ ದುನಿಯಾ ವಿಜಯ್ ಅವರ 'ಜಾಕ್ಸನ್' ಬಗ್ಗೆ "ಕನ್ನಡದ ಈ ಜಾಕ್ಸನ್ ಸಿನೆಮಾ ಬೇನ್-ವಾಕ್ (ಹಿಂಸೆಯ ನಡಿಗೆ)" ಎಂದು ಬರೆದಿದ್ದನ್ನು ಪ್ರೇಕ್ಷಕರು ಅನುಮೋದಿಸದೆ ಇರಲಿಲ್ಲ. ನಂತರ ದೊಡ್ಡ ಮನೆಯ ದೊಡ್ಡ ಬ್ಯಾನರ್ ನಡಿ ಬಂದ ವಿನಯ್ ರಾಜಕುಮಾರ್ ಅವರ 'ಸಿದ್ಧಾರ್ಥ'ನಿಗೆ ಸಿದ್ಧತೆಯಿಲ್ಲ ಎಂದೆವು. ಆದರೂ ಕನ್ನಡ ಪ್ರೇಕ್ಷಕ ಮೊದಲಿಗ ಎಂದು ಒಂದು ಚಾನ್ಸ್ ಕೊಟ್ಟಂತೆಯೂ, ಓಡಿಸಲೇಬೇಕೆಂಬ ನಿರ್ಮಾಪಕರ ಛಲವು ಸಿನೆಮಾ ೫೦ ಕ್ಕೂ ಹೆಚ್ಚು ದಿನ ಪ್ರದರ್ಶನ ಕಂಡಿತಂತೆ! ಜನವರಿಯಲ್ಲಿ ಪೂಜಾ ಗಾಂಧಿ ಅವರ 'ಅಭಿನೇತ್ರಿ' ಸ್ವಲ್ಪ ಸದ್ದು ಮಾಡಿತಾದರೂ ಮನದಾಳದಲ್ಲಿ ಉಳಿಯಲು ವಿಫಲವಾಯಿತು.

'ಅಧ್ಯಕ್ಷ' ಸಿನೆಮಾದ ಯಶಸ್ಸಿನಿಂದ ಉತ್ತುಂಗಕ್ಕೇರಿದ್ದ ಹಾಸ್ಯ ನಟ ಶರಣ್ ಅವರ 'ರಾಜ ರಾಜೇಂದ್ರ' ತುಸು ನಿರೀಕ್ಷೆ ಮೂಡಿಸಿತ್ತಾದರೂ, ಮಲಯಾಳಮ್ ಸಿನೆಮಾದ ಪೇಲವ ರಿಮೇಕ್ ಆಗಿ ಸುಸ್ತು ಮಾಡಿದ್ದಂತೂ ನಿಜ. ಪ್ರಚಾರ ಪ್ರಿಯ ಪ್ರೇಮ್ ಅವರ 'ಡಿಕೆ' ವಿಮರ್ಶೆಗೆ ನಾವು ನೀಡಿದ ಶೀರ್ಷಿಕೆ 'ಸಿನೆಮಾವಿಡೀ ಬಾಯಿಬDK, ಪ್ರೇಕ್ಷಕನ ಚಡಪDK' ಎಲ್ಲವನ್ನೂ ಹೇಳುತ್ತದೆ. ಚಿರಂಜೀವಿ ಸರ್ಜಾ, ರಾಧಿಕಾ ಕುಮಾರ ಸ್ವಾಮಿ ಅವರ 'ರುದ್ರತಾಂಡವ', ಟಿಕೆ ದಯಾನಂದ್ ನಿರ್ದೇಶನದ 'ಬೆಂಕಿಪಟ್ಣ' ಎಲ್ಲಾ ಮಿಸ್ ಗಳೇ. ಫೆಬ್ರವರಿಯಲ್ಲಿ ಸಂಚಲನ ಮೂಡಿಸಿದ್ದು ಗಿರಿರಾಜ್ ನಿರ್ದೇಶನದ, ಪುನೀತ್ ರಾಜ ಕುಮಾರ್, ಮೋಹನ್ ಲಾಲ್ ಅಭಿನಯದ 'ಮೈತ್ರಿ' ಮತ್ತು ದೊರೈ ಭಗವಾನ್ ಅವರ ರಾಜಕುಮಾರ್ ಅಭಿನಯದ 'ಎರಡು ಕನಸು' ಕಲರ್ನಲ್ಲಿ ಮರುಬಿಡುಗಡೆಯಾದದ್ದು.

ಮಾರ್ಚ್ ನಲ್ಲಿ 'ಫ್ಲಾಪ್' ಎಂಬ ಸಿನೆಮಾ ಬಿಡುಗಡೆಯಿಂದ ಶುರುವಾಗಿ ಅದನ್ನೂ ಸೇರಿದಂತೆ, 'ಗೋವಾ', 'ಮಾಸ್ಟರ್ ಮೈಂಡ್', 'ರೈನ್ ಕೋಟ್', 'ರಾಟೆ', 'ಕಳ್ದೋಗ್ಬಿಟ್ಟೆ' ಎಂಬಿತ್ಯಾದಿ ಫ್ಲಾಪ್ ಸಿನೆಮಾಗಳ ಮಳೆಸುರಿಸಿದ ತಿಂಗಳು. ಆದರೆ ಈ ತಿಂಗಳಿನಲ್ಲೇ ಈ ವರ್ಷದ ಅತ್ಯುತ್ತಮ ಸಿನೆಮಾಗಳಲ್ಲಿ ಒಂದಾದ ಶಶಾಂಕ್ ನಿರ್ದೇಶನದ, ಮೊದಲ ಬಾರಿಗೆ ನಿರ್ಮಾಣಕ್ಕೆ ಇಳಿದು ನಟನೆ ಕೂಡ ಮಾಡಿದ್ದ ಅಜಯ್ ರಾವ್ ಅವರ 'ಕೃಷ್ಣ ಲೀಲಾ' ಬಿಡುಗಡೆಯಾಗಿದ್ದು. ಅದರ ಹಾಡಿನ ಸಾಲಿನ ಒಂದು ಸಾಲನ್ನೇ ತಿರುಚಿ 'ಒಳ್ಳೆ ಚಿತ್ರ ಬಂದಿದೆ ಮಾತಾಡ್ರೋ' ಎಂಬ ಶೀರ್ಷಿಕೆಯೊಂದಿಗೆ ಧನಾತ್ಮಕ ವಿಮರ್ಶೆ ನೀಡಿದ್ದೆವು.

ಏಪ್ರಿಲ್ ದೊಡ್ಡ ದೊಡ್ಡ ಹೆಸರಿನ ಸಿನೆಮಾಗಳು ಬಿಡುಗಡೆಯಾದರೆ ದಡ್ಡತನವನ್ನೇ ಹೆಚ್ಚು ಮೆರೆದದ್ದು. ಯೋಗರಾಜ್ ಭಟ್ ಅವರ ಬಹು ನಿರೀಕ್ಷಿತ 'ವಾಸ್ತು ಪ್ರಕಾರ' ತಲೆಚಿಟ್ಟು ಹಿಡಿಸಿದರೆ, 'ಜಸ್ಟ್ ಮದ್ವೇಲಿ', 'ಕಟ್ಟೆ', 'ನಗಾರಿ', 'ಮೆಲಡಿ', 'ಖೈದಿ', 'ಮಳೆ ನಿಲುವವರೆಗೆ', 'ಹಿಂಗ್ಯಾಕೆ', 'ಮಹಾಕಾಳಿ' ಎಲ್ಲವೂ ಬೇಗನೆ ಕಣ್ಮರೆಯಾದಂತವೇ. ಯಾವುದೇ ಕಟ್ ಇಲ್ಲದೆ ತೆಗೆದ ಪ್ರಯೋಗಾತ್ಮಕ ಸಿನೆಮಾ ಎಂಬ ಹೆಗ್ಗಳಿಕೆಯಿಂದ ಬಿಡುಗಡೆಯಾದ ಎಸ್ ನಾರಾಯಣ ಅವರ 'ದಕ್ಷ' ಕೂಡ ಅತಾರ್ಕಿಕತೆಯಿಂದ ನೆನೆಗುದಿಗೆ ಬಿದ್ದರೆ, ಅಬ್ಬರಿಸಿ ಬೊಬ್ಬಿರುದು ಬಿಡುಗಡೆಯಾದ ಪುನೀತ್ ಅಭಿನಯದ 'ರಣವಿಕ್ರಮ' ಕೂಡ ಸೋತಿದ್ದು ವಿಶೇಷ.

ಮೇ ತಿಂಗಳು ಚಿತ್ರರಂಗದ ಹಲವು ವಿಶೇಷಗಳಿಂದ ಸುದ್ದಿಯಾಗಿತ್ತು. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿರ್ದೇಶಕನ ಟೋಪಿ ಧರಿಸಿ 'ಎಂದೆಂದಿಗೂ' ಬಿಡುಗಡೆ ಮಾಡಿದರೆ, 'ಮುತ್ತಿನ ಹಾರ' ಖ್ಯಾತಿಯ ರಾಜೇಂದ್ರ ಸಿಂಗ್ ಬಾಬು ಅವರ ಬಹಳ ಹಳೆಯ ಯೋಜನೆ 'ರೆಬೆಲ್' ಮತ್ತು ಹಾಸ್ಯನಟ ಚಿಕ್ಕಣ್ಣ ನಾಯಕ ನಟನಾಗಿ ಹೊರಹೊಮ್ಮಿದ್ದ 'ಬಾಂಬೆ ಮಿಠಾಯಿ' ಬಿಡುಗಡೆಯಾಗಿದ್ದು. 'ಕೃಷ್ಣ ಲೀಲಾ'ದಲ್ಲಿ ಮೋಡಿ ಮಾಡಿದ್ದ ಅಜಯ್ ರಾವ್ 'ಎಂದೆಂದಿಗೂ' ಸಿನೆಮಾದಲ್ಲಿ ಸೋತರು. 'ರೆಬೆಲ್' ಪ್ರೇಕ್ಷಕನ ಬುದ್ಧಿವಂತಿಕೆಯನ್ನು ಅವಮಾನ ಮಾಡಿದರೆ, 'ಬಾಂಬೆ ಮಿಠಾಯಿ'ಯಲ್ಲಿ ತುಸು ಹಾಸ್ಯವಿತ್ತಾದರು ಮೋಡಿ ಮಾಡಲು ವಿಫಲವಾಯಿತು. ಇನ್ನುಳಿದಂತೆ 'ಮೃಗಶಿರ', 'ಎರಡೊಂದ್ಲಾ ಮೂರು', 'ಮುರಾರಿ', 'ಪಾತರಗಿತ್ತಿ' ಬಂದಂತೆ ಕಾಣೆಯಾದವು. ಇದೇ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ಅಪಥ್ಯವಾದಂತಹ ಒಂದು ಒಳ್ಳೆಯ ಸಿನೆಮಾ ಬಿಡುಗಡೆಯಾಗಿ ಕಣ್ಮರೆಯಾದದ್ದು ವಿಪರ್ಯಾಸ. ಪಿ ಶೇಷಾದ್ರಿ ನಿರ್ದೇಶನದ 'ವಿದಾಯ' ದಯಾಮರಣ ವಿಷಯವನ್ನು ಬಹಳ ಸೂಕ್ಷಮತೆಯಿಂದ ಚರ್ಚಿಸಿದರು ಪ್ರೇಕ್ಷಕರು ಏಕೋ ಕೈಹಿಡಿಯದೆ ಹೋದರು!

'ಕೃಷ್ಣಲೀಲಾ', 'ವಿದಾಯ'ದ ನಂತರ ಒಂದೊಳ್ಳೆ ಸಿನೆಮಾ ಬಂದದ್ದು ಬಹುಷಃ ಜೂನ್ ನಲ್ಲೇ. ಪ್ರಭು ಶ್ರೀನಿವಾಸ್ ನಿರ್ದೇಶನದ, ಸಂತೋಶ್ ನಟನೆಯ 'ಗಣಪ' ಮತ್ತದೇ ರೌಡಿಸಂ ಥೀಮ್ ಹೊಂದಿದ್ದರೂ, ವಿಷಯವನ್ನು ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಿದ ರೀತಿ ಜನಕ್ಕೆ ಇಷ್ಟವಾಯಿತು. ೨೫ ದಿನಗಳವರೆಗೆ ಒಳ್ಳೆಯ ಪ್ರದರ್ಶನ ಕಂಡರೂ ನಂತರ ಏಕೋ ಕಣ್ಮರೆಯಾಗಿ ಹೋಯಿತು. ಇದೇ ತಿಂಗಳಲ್ಲಿ ಬಂದ ಸುದೀಪ್ ಅವರ ತೆಲುಗು ರಿಮೇಕ್ 'ರನ್ನ', ಹರ್ಷ ನಿರ್ದೇಶನದ ಶಿವರಾಜ್ ಕುಮಾರ್ ಅವರ 'ವಜ್ರಕಾಯ' ಎಂದಿನಂತೆ ಬಿಡುಗಡೆಗೆ ಮೊದಲು ದೊಡ್ಡ ಮಟ್ಟದ ಪ್ರಚಾರ ಪಡೆದರೂ, ಕಂಟೆಂಟ್ ನಲ್ಲಿ ಸೊನ್ನೆ ಎಂಬುದನ್ನು ಸಾಬೀತು ಪಡಿಸಿದವು. ದೊಡ್ಡ ಹೆಸರಿನಿಂದ ಒಂದಷ್ಟು ದಿನ ಓಡಿದವು ಕೂಡ. 'ಆಟ-ಪಾಠ', 'ಗೂಳಿಹಟ್ಟಿ' ಕೂಡ ಬಿಡುಗಡೆಯಾದ ತಿಂಗಳಿದು.

ಕನ್ನಡ ಚಿತ್ರೋದ್ಯಮಕ್ಕೆ ಒಂದು ಹೊಸ ದಿಕ್ಕು ತೋರಿಸಿದ ತಿಂಗಳು ಜುಲೈ. ಅನೂಪ್ ಭಂಡಾರಿ ಅವರ ಕಡಿಮೆ ಬಜೆಟ್ ನ ಸಿನೆಮಾ 'ರಂಗಿತರಂಗ' ಬಿಡುಗಡೆಯಾದಾಗ ಅದರ ಮೇಲೆ ಯಾರೂ ದೊಡ್ಡ ಮಟ್ಟದ ನಿರೀಕ್ಷೆ ಹೊಂದಿರಲಿಲ್ಲ. "ಭೂತದ ಚೇಷ್ಟೆ; ರೋಚಕತೆಯ ಪರಾಕಾಷ್ಠೆ" ಎಲ್ಲರೂ ನೋಡಿ ಬನ್ನಿ ಎಂದು ನಾವು ಸಲಹೆ ನೀಡಿದ್ದೆವು. ನಂತರ ಈ ಸಿನೆಮಾ ಮಾಡಿದ ದಾಖೆಲೆಗಳು ಹಲವಾರು. ವಿಶ್ವ ಪರ್ಯಟನೆ ಮಾಡಿ, ಜನರ ಮತ್ತು ವಿಮರ್ಶಕರ ಸಮಾನ ಮೆಚ್ಚುಗೆ ಪಡೆದು ಈಗ ಆಸ್ಕರ್ ಗೂ ಸ್ಪರ್ಧಿಸುತ್ತಿರುವುದು ಇತಿಹಾಸ. ಇದೇ ತಿಂಗಳಲ್ಲಿ ಏಳೆಂಟು ಸಿನೆಮಾಗಳು ಬಿಡುಗಡೆಯಾದರೂ ಸದ್ದಿಲ್ಲದೇ ಮರೆಯಾದವು. ಶರಣ್ ಅವರ 'ಬುಲೆಟ್ ಬಸ್ಯಾ' ಮತ್ತು ಕೋಮಲ್ ಅವರ 'ಲೊಡ್ಡೆ' ಕೂಡ ಹಾಸ್ಯನಟರ ಕೈಹಿಡಿಯಲಿಲ್ಲ.  
 
'ಎಲ್ಲರ ಕಾಲ್ ಎಳೀತದೆ ಕಾಲ' ಎಂಬ ಹಾಡಿನೊಂದಿಗೆ ಆಗಸ್ಟ್ ನಲ್ಲಿ ಬಿಡುಗಡೆಯಾದ ಉಪೇಂದ್ರ ಅವರ 'ಉಪ್ಪಿ೨' ದಾಖಲೆ ಗಳಿಕೆ ಎಂದೆಲ್ಲ ಪ್ರಚಾರ ಮಾಡಿಕೊಂಡರು, ಏನೇನು ಕತೆಯಿಲ್ಲದೆ ಪ್ರೇಕ್ಷಕರಿಗೆ ಅತಿ ದೊಡ್ಡ ನಿರಾಸೆ ಮೂಡಿಸಿದ ಸಿನೆಮಾ. 'ಬುಗರಿ' ಇದ್ದುದರಲ್ಲಿ ಒಳ್ಳೆಯ ಸಿನೆಮಾ ಎಂದರು ಅದು ಕೂಡ ಮೇಲೇಳಲು ಸಾಧ್ಯವಾಗದೆ ಹೋಯಿತು. ಆಗಸ್ಟ್ ತಿಂಗಳಲ್ಲಿ ಅಗಾತಾ ಕ್ರಿಸ್ಟಿ ಕಾದಂಬರಿ ಆಧಾರಿತ ಕೆ ಎಂ ಚೈತನ್ಯ ಅವರ 'ಆಟಗಾರ' ಮಾತ್ರ ಪ್ರೇಕ್ಷಕರ ಮನಸೆಳೆದು ಉತ್ತಮ ಪ್ರದರ್ಶನ ನೀಡುವತ್ತ ಮುಂದುವರೆದದ್ದು. ಇನ್ನುಳಿದಂತೆ 'ಮಳೆ', 'ಶ್!!! ಎಚ್ಚರಿಕೆ', 'ದ್ರೋಹಿ', 'ಮುದ್ದು ಮನಸೇ' ಎಲ್ಲವೂ ಇತ್ತ ಬಂದು ಅತ್ತ ಹೋದವು!

ಸೆಪ್ಟಂಬರ್ ನಲ್ಲಿ ಸಿನೆಮಾಗಳ ಮಹಪೂರವೇ ಹರಿದರೂ ಭರವಸೆ ಮೂಡಿಸಿದ್ದು ಎರಡು ಸಿನೆಮಾಗಳಷ್ಟೇ. ಸೂರಿ ಅವರ 'ಕೆಂಡ ಸಂಪಿಗೆ' ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ 'ನಾನು ಅವನಲ್ಲ ಅವಳು'. ಮಂಗಳಮುಖಿಯರ ಜೀವನದ ಬಗೆಗಿನ ಅತ್ಯುತ್ತಮ ಅಭಿನಯವಿದ್ದ 'ನಾನು ಅವನಲ್ಲ ಅವಳು' ಮತ್ತೆ ಕನ್ನಡ ಚಿತ್ರರಂಗಕ್ಕೆ ಅಪಥ್ಯವಾಯಿತು. 'ಗೀತಾ ಬ್ಯಾಂಗಲ್ ಸ್ಟೋರ್ಸ್' ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಕೇಳಿ ಬಂದರೂ, ಥಿಯೇಟರ್ ಗಳ ಸಮಸ್ಯೆಯಿಂದಾಗಿ ಸಿನೆಮಾ ಬಿದ್ದುಹೋಯಿತು. 'ಆರ್ ಎಕ್ಸ್ ಸೂರಿ' ಮೂಲಕ ದುನಿಯಾ ವಿಜಯ್ ತಮ್ಮ ಕೆಟ್ಟ ಫಾರ್ಮ್ ಮುಂದುವರೆಸಿದರೆ, 'ಓಂ ನಮಃ', '೧೪೧', 'ಬಿಲ್ಲ', 'ನಮಕ್ ಹರಾಮ್', 'ಚಾರ್ಲಿ', 'ನೀನೆ ಬರಿ ನೀನೆ', 'ಅರ್ಜುನ', 'ಸೆಕಂಡ್ ಹ್ಯಾಂಡ್ ಲವರ್', 'ಆ ರಾತ್ರಿ', 'ಚಂದ್ರಿಕಾ' ಇವೆಲ್ಲವೂ ಸಾಲು ಸಾಲಾಗಿ ಬಂದು ಹೋದವು. ಆದರು ಇವುಗಳಿಗಿಂತಲೂ ಅತಿ ಹೆಚ್ಚು ಪ್ರಚಾರ ಪಡೆದು ಅತಿ ಹೆಚ್ಚು ನಿರಾಸೆ ಮೂಡಿಸಿದ ಸಿನೆಮಾದಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲುವುದು ಇಂದ್ರಜಿತ್ ಲಂಕೇಶ್ ಅವರ 'ಲವ್ ಯು ಆಲಿಯಾ'.

ಅಕ್ಟೋಬರ್ ನಲ್ಲಿ ಜೋರು ಮಳೆಯಂತೆ ಸುರಿದ ಸಿನೆಮಾಗಳು ತಂಪೆರೆಯಲು ವಿಫಲವಾಗಿದ್ದೇ ಹೆಚ್ಚು. ದರ್ಶನ್ ಅಭಿನಯದ ಅತಿ ದೊಡ್ಡ ಬಜೆಟ್ ಸಿನೆಮಾ 'ಮಿ ಐರಾವತ' ದೊಡ್ಡ ನಟರ ಸಿನೆಮಾಗಳ ಬಗ್ಗೆ ಭರವಸೆಯನ್ನೇ ಕಳೆದುಕೊಳ್ಳುವ ಹಾಗೆ ಮಾಡಿದರೆ, 'ತಮಿಸ್ರ', ಡವ್', 'ರಿಂಗ್ ಮಾಸ್ತರ್', 'ಟೈಟ್ಲು ಬೇಕಾ', '೭', 'ಪ್ಲಸ್', 'ಗಂಗಾ', 'ರಿಂಗ್ ರೋಡ್ ಸುಮಾ', 'ವಾಸ್ಕೊಡಗಾಮ', 'ಬೆತ್ತನಗೆರೆ' ಇವೆಲ್ಲವೂ ಬಂದು ಹೋದವು. 'ಪ್ಲಸ್' ಸಿನೆಮಾದಲ್ಲಿ ನಟಿಸಿದ್ದಕ್ಕೆ ಅನಂತ್ ನಾಗ್ ಕ್ಷಮೆ ಕೇಳಿದ್ದೇ ಚಿತ್ರರಂಗಕ್ಕೆ ಪ್ಲಸ್ ಪಾಯಿಂಟ್! ನಮ್ಮ ವಿಮರ್ಶೆಯಲ್ಲಿ "ಅನಂತನಾಗ್ ಇದ್ದೂ ಪ್ಲಸ್ ಇಲ್ಲ" ಎಂದಿದ್ದೆವು.

ಕನ್ನಡ ರಾಜ್ಯೋತ್ಸವ ತಿಂಗಳಲ್ಲೂ ನಿಲ್ಲದ ಭಾಷಣಗಳಂತೆ ಸಿನೆಮಾಗಳು ಬಂದರೂ ಅತಿರೇಕಗಳಿಲ್ಲದೆ 'ಬಾಕ್ಸರ್' ಪರವಾಗಿಲ್ಲ ಎಂದು ನಾವು ತಿಳಿಸಿದರು ಜನ ಅದನ್ನು ಮುನ್ನಡೆಸಿದಂತೆ ಕಾಣಲಿಲ್ಲ. '1st ರ್ಯಾಂಕ್ ರಾಜು' ಗೆ ಒಳ್ಳೆಯ ಪ್ರತಿಕ್ರಿಯೆಗಳು ಬಂದು ಒಳ್ಳೆಯ ಪ್ರದರ್ಶನದೊಂದಿಗೆ ಮುಂದುವರೆದಿದ್ದರೆ, ಅತಿ ಹೆಚ್ಚು ನಿರಾಸೆ ಮೂಡಿಸಿದ್ದು ನಿರ್ಮಾಪಕನಾಗಿ ಹೊರಹೊಮ್ಮಿ ನಟಿಸಿದ್ದ ನೀನಾಸಂ ಸತೀಶ್ ಅವರ 'ರಾಕೆಟ್'. ಅನಂತನಾಗ್ ಅಭಿನಯದ ಮತ್ತು ಹೊಸಬರ ತಂಡದ 'ದ ಪ್ಲ್ಯಾನ್' ಕೂಡ ಒಳ್ಳೆಯ ಪ್ರತಿಕ್ರಿಯೆ ಗಳಿಸಿತು. ತಮಿಳು ನಿರ್ದೇಶಕ ಮಿಸ್ಕಿನ್ ಅವರ 'ಪಿಶಾಸು' ಸಿನೆಮಾದ ರಿಮೇಕ್ 'ರಾಕ್ಷಸಿ' ಒಮ್ಮೆ ನೋಡಬಹುದು ಎಂದರು ಅದೂ ಕೂಡ ಕಾಣೆಯಾಯಿತು. 'ವಂಶೋದ್ಧಾರಕ', 'ಆಕ್ಟೋಪಸ್', 'ರಾಮ್-ಲೀಲಾ' ಇವೆಲ್ಲವೂ ಕಾಣೆಯಾದವು.

ವರ್ಷವನ್ನು ಅಂತ್ಯ ಮಾಡಲು ಹೇಳಿಕೊಳ್ಳುವಂತಾದ್ದು ಏನಿಲ್ಲ ಎಂದು ನಿರಾಸೆಯಿಂದಲೇ  ೨೦೧೫ಕ್ಕೆ ವಿದಾಯ ಹೇಳಬೇಕಿದೆ. ಬಹು ನಿರೀಕ್ಷಿತ, ಮುರಳಿ ಅವರ 'ರಥಾವರ', ಯಶ್ ಅವರ 'ಮಾಸ್ಟರ್ ಪೀಸ್' ನಲ್ಲಿ ಹಿರೋಯಿಸಂ ಹೊರತುಪಡಿಸಿದರೆ ಉಳಿದದ್ದು ಏನೂ ಇಲ್ಲ ಎಂದು ಹೇಳುವಾಗ ಬೇಸರ-ದುಃಖ ಆಗುತ್ತದೆ. ಅಭಿಮಾನಿಗಳು ಈ ಸಿನೆಮಾಗಳನ್ನೇನೋ ಗೆಲ್ಲಿಸಬಹುದು, ಆದರೆ ಇಂತಹ ಕಂಟೆಂಟ್ ಇಟ್ಟುಕೊಂಡು ಜಾಗತಿಕ ಸಿನೆಮಾಗಳೊಂದಿಗೆ ಸ್ಪರ್ಧಿಸಲು ಕನ್ನಡ ಚಿತ್ರಗಳಿಗೆ ಸಾಧ್ಯವೇ ಇಲ್ಲ ಎನ್ನಬಹುದೇನೋ. ಆಸ್ಕರ್ ಗೆ ಲ್ಯಾಟರಲ್ ಪ್ರವೇಶ ಪಡೆದ 'ಕೇರ್ ಆಫ್ ಪುಟ್ಪಾಥ್' ಕೂಡ ಹೆಚ್ಚೇನು ಸುದ್ದಿ ಮಾಡಲಿಲ್ಲ. ದಿಗಂತ್ ಅವರ ಎರಡು ಸಿನೆಮಾಗಳು 'ಮಿಂಚಾಗಿ ನೀನು ಬರಲು' ಮತ್ತು 'ಶಾರ್ಪ್ ಶೂಟರ್' ಠುಸ್ ಆದವು.

ಒಟ್ಟಿನಲ್ಲಿ ಈ ವರ್ಷದ ಕನ್ನಡ ಚಿತ್ರಗಳನ್ನು ಅವಲೋಕಿಸಿದರೆ ನಂಬರ್ ೧ ಪಟ್ಟದ ಹಿಂದೆ ಬಿದ್ದ ದೊಡ್ಡ ದೊಡ್ಡ ನಟರ ಸಿನೆಮಾಗಳು ಭಯ-ಆತಂಕ ಮೂಡಿಸಿದರೆ, ಹೊಸದಾಗಿ ಬಂದವರಲ್ಲಿ ಕೂಡ ಛಾಪು ಮೂಡಿಸಲು ವಿಫಲರಾದವರೇ ಹೆಚ್ಚು. ಆದರೆ ಬೆಳ್ಳಿ ಗೆರೆಯಂತೆ ಕೆಲವೇ ಕೆಲವು ಹೊಸಬರ ಸಿನೆಮಾಗಳು ಮಾಡಿದ ಸದ್ದು ಚಿತ್ರರಂಗವನ್ನು ಒಳ್ಳೆಯ ದಿಕ್ಕಿಗೆ ಕರೆದೊಯ್ಯಲಿ, 'ರಂಗಿತರಂಗ', 'ಗಣಪ', 'ಕೆಂಡಸಂಪಿಗೆ', 'ನಾನು ಅವನಲ್ಲ ಅವಳು' ಇಂತಹ ಸಿನೆಮಾಗಳು ೨೦೧೬ಕ್ಕೆ ದಾರಿದೀಪವಾಗಲಿ. ಸಿನೆಮಾರಂಗ ಬೆಳೆಯಲಿ-ಬೆಳಗಲಿ. ಪ್ರೇಕ್ಷಕರಿಗೆ ಕೂಡ ಉತ್ತಮ ಮನರಂಜನೆ ದೊರಕಲಿ ಅವರೂ ಕೂಡ ಚಿತ್ರರಂಗದ ಭಾಗ ಎಂದು ಸಿನೆಮಾ ಮಂದಿ ಮರೆಯದಿರಲಿ ಎಂಬ ಆಶಾವಾದದೊಂದಿಗೆ ನಿಮ್ಮೆಲರಿಗೂ ಹೊಸ ವರ್ಷದ ಶುಭಾಶಯ ಕೋರುತ್ತಿದೆ ಕನ್ನಡಪ್ರಭ.ಕಾಂ ತಂಡ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com