ಹಿನ್ನೋಟ 2021: ರಾಜ್ಯದಲ್ಲಿ ಸಂಭವಿಸಿದ ಪ್ರಮುಖ ಘಟನಾವಳಿಗಳು!

2021 ಸರಿದು 2022 ಬರುತ್ತಿದೆ. ನೋಡನೋಡುತ್ತಿದ್ದಂತೇ ಒಂದು ವರ್ಷ ಕಳೆದು ಬಿಟ್ಟಿದೆ. ಜನತೆ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿದೆ. ಆದರೆ ಭವಿಷ್ಯವನ್ನು ಸ್ವಾಗತಿಸುವುದು ಎಷ್ಟು ಪ್ರಮುಖವೋ, ಅಷ್ಟೇ ಗತಕಾಲದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳನ್ನು ಸ್ಮರಿಸುವುದು ಕೂಡ ಮುಖ್ಯ
ಸಂಗ್ರಹ ಫೋಟೋಗಳು
ಸಂಗ್ರಹ ಫೋಟೋಗಳು

ಬೆಂಗಳೂರು: 2021 ಸರಿದು 2022 ಬರುತ್ತಿದೆ. ನೋಡನೋಡುತ್ತಿದ್ದಂತೇ ಒಂದು ವರ್ಷ ಕಳೆದು ಬಿಟ್ಟಿದೆ. ಜನತೆ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿದೆ. ಆದರೆ ಭವಿಷ್ಯವನ್ನು ಸ್ವಾಗತಿಸುವುದು ಎಷ್ಟು ಪ್ರಮುಖವೋ, ಅಷ್ಟೇ ಗತಕಾಲದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳನ್ನು ಸ್ಮರಿಸುವುದು ಕೂಡ ಮುಖ್ಯ. ಹಾಗೆ ನೋಡಿದರೆ 2021ರ ಹೊಸ ವರ್ಷ ಆರಂಭವಾಗಿದ್ದು ಕೋವಿಡ್ ಹಾವಳಿಯ ಸುದ್ದಿಗಳಿಂದಲೇ. ವರ್ಷ ಕಳೆಯುತ್ತಿದಂತೆ ಕೊರೋನಾ ರೂಪಾಂತರಿ 
ಓಮಿಕ್ರಾನ್ ವಕ್ಕರಿಸಿದ್ದು, ಸಂಭಾವ್ಯ ಕೋವಿಡ್- 19 ಮೂರನೇ ಅಲೆಯ ಭೀತಿ ಶುರುವಾಗಿದೆ. 

ಹೊಸ ವರ್ಷದ ದಿನವೇ ಎಸ್ ಎಸ್ ಎಲ್ ಸಿ, ಪಿಯುಸಿ ಆರಂಭ: ಮಹಾಮಾರಿ ಕೊರೋನಾ ಭೀತಿಯಿಂದ ಬರೋಬ್ಬರಿ 10 ತಿಂಗಳುಗಳಿಂದ ಬಂದ್ ಆಗಿದ್ದ ರಾಜ್ಯದ ಎಲ್ಲಾ ಶಾಲೆ ಹಾಗೂ ಪಿಯು ಕಾಲೇಜುಗಳು ಸರ್ಕಾರದ ಆದೇಶದಂತೆ ಹೊಸ ವರ್ಷದ ಆರಂಭದ ದಿನದಿಂದ ಪುನರಾರಂಭಗೊಂಡವು. ಕೋವಿಡ್-19 ಸುರಕ್ಷತಾ ಕ್ರಮಗಳೊಂದಿಗೆ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಗೆ ಮಾತ್ರ ಶಾಲೆಗಳಲ್ಲಿ ತರಗತಿ ಚಟುವಟಿಕೆ ಆರಂಭವಾಯಿತು. 6 ರಿಂದ 98ನೇ ತರಗತಿಗೆ ವಿದ್ಯಾಗಮ ಯೋಜನೆ ಮೂಲಕ ಕಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. 

ಪ್ರಧಾನಿಯಿಂದ ಅನಿಲ ಕೊಳವೆ ಮಾರ್ಗಲೋಕಾರ್ಪಣೆ: ಹೊಸ ವರ್ಷದ ಆರಂಭದಲ್ಲಿ  ಕೇರಳದ ಕೊಚ್ಚಿ ಮತ್ತು ಕರ್ನಾಟಕದ ಮಂಗಳೂರು ನಡುವೆ 450 ಕಿಲೋ ಮೀಟರ್ ಉದ್ದದ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಜನವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಮಾದರಿಯಲ್ಲಿ ಲೋಕಾರ್ಪಣೆ ಮಾಡಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ವರ್ಚುಯಲ್ ಕಲಾಪದಲ್ಲಿ ಪಾಲ್ಗೊಂಡರು. ಈ ಎರಡು ರಾಜ್ಯಗಳು ನೈಸರ್ಗಿಕ ಅನಿಲ ಕೊಳವೆ ಮಾರ್ಗದಿಂದ ಜೋಡಿಸಲ್ಪಟ್ಟಿವೆ. ಇದು ಉಭಯ ರಾಜ್ಯಗಳ ಆರ್ಥಿಕ ಬೆಳವಣಿಗೆ ಮೇಲೂ ಧನಾತ್ಮಕ ಪರಿಣಾಮ ಬೀರಲಿದೆ. 

ಕನಕಪುರ ರಸ್ತೆಯಿಂದ ಸಿಲ್ಕ್ ಇನ್ಸಿಟಿಟ್ಯೂಟ್ ವರೆಗಿನ ಮೆಟ್ರೋ ಮಾರ್ಗಕ್ಕೆ ಚಾಲನೆ:  ವರ್ಷದ ಆರಂಭದ ತಿಂಗಳಲ್ಲಿ ಕೇಂದ್ರದ ಪ್ರಮುಖ ಸಚಿವರು ರಾಜ್ಯದ ವಿವಿಧ ಯೋಜನೆಗಳಿಗೆ ಚಾಲನೆ ಕೊಟ್ಟರು. ಕನಕಪುರ ರಸ್ತೆಯಿಂದ ಕೇಂದ್ರ ರೇಷ್ಮೆ ಸಂಶೋಧನಾ ಸಂಸ್ಥೆವರೆಗಿನ ಆರು ಕಿಲೋ ಮೀಟರ್ ಮೆಟ್ರೋ ಮಾರ್ಗಕ್ಕೆ ನಾಗರಿಕ ವ್ಯವಹಾರ ಸಚಿವ ಹರ್ದೀಪ್ ಸಿಂಗ್ ಪುರಿ ದೆಹಲಿಯಿಂದ ವರ್ಚುಯಲ್ ಮಾದರಿಯಲ್ಲಿ ಜನವರಿ 14 ರಂದು ಹಸಿರು ನಿಶಾನೆ ತೋರಿದರು. ಅದೇ ದಿನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿನಲ್ಲಿ ಸಶಸ್ತ್ರ ಪಡೆಗಳ ನಿವೃತ್ತ ಸೈನಿಕರ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡರು.

ಕೋವಿಡ್ -19 ಲಸಿಕಾ ಅಭಿಯಾನಕ್ಕೆ ಚಾಲನೆ: ಮಹಾಮಾರಿ ಕೋವಿಡ್-19 ಸೋಂಕಿನ ಅಟ್ಟಹಾಸಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ  ರಾಜ್ಯದಲ್ಲಿ ಕೋವಿಡ್-19 ಕೊರೋನಾ ಲಸಿಕಾ  ಅಭಿಯಾನಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಲಸಿಕೆ ಪಡೆಯುವ ಮೂಲಕ ಬಲ ತುಂಬಿದರು. ಅವರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್,ಜೋಶಿ, ಅನೇಕ ಸಚಿವರು, ಉನ್ನತಾಧಿಕಾರಿಗಳು, ಕೋವಿಡ್ ಕಾರ್ಯಕರ್ತರು ಲಸಿಕೆ ಪಡೆದುಕೊಂಡರು. ಜನಸಾಮಾನ್ಯರಿಗೆ ಲಸಿಕೆ ಹಾಕಿಸಿಕೊಳ್ಳುವ ವಿಶ್ವಾಸ ಸಾರಿದರು.

ಶಿವಮೊಗ್ಗದಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟ:  ಹೊಸ ವರ್ಷಕ್ಕೆ ಮೊದಲ ತಿಂಗಳು ತುಂಬುವುದಕ್ಕೆ 5 ದಿನ ಮೊದಲೇ ಶಿವಮೊಗ್ಗ ಸಮೀಪದಲ್ಲಿ ಜಿಲೆಟಿನ್ ಕಡ್ಡಿಗಳಿಂದ ಲಾರಿ ಸ್ಫೋಟಿಸಿ , ಐವರು ಕಾರ್ಮಿಕರನ್ನು ಜೀವಂತವಾಗಿ ದಹಿಸಿದ ದುರಂತ ಸಂಭವಿಸಿತು. ಉನ್ನತ ಮಟ್ಟದ ತನಿಖೆಗೆ ರಾಜ್ಯ ಸರ್ಕಾರ ಆದಶಿಸಿ, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಕೊಟ್ಟಿತು. 

ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ: ಕರ್ನಾಟಕದ ಇಬ್ಬರು ಬಾಲಕರು ಸೇರಿ 32 ಮಕ್ಕಳು ಕೇಂದ್ರ ಸರ್ಕಾರ ನೀಡುವ 2021ನೇ ಸಾಲಿನ ‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರಶಸ್ತಿಗೆ ಭಾಜನರಾದರು. ಕೆ. ರಾಕೇಶ್‌ಕೃಷ್ಣ ಮತ್ತು ವೀರ್‌ ಕಶ್ಯಪ್‌ ಪ್ರಶಸ್ತಿಗೆ ಆಯ್ಕೆಯಾದ ರಾಜ್ಯದ ಮಕ್ಕಳು. ರಾಕೇಶ್‌ ಕೃಷ್ಣ ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದವರು. ವೀರ್‌ ಕಶ್ಯಪ್‌ ಬೆಂಗಳೂರಿನವರು. ಇವರಿಬ್ಬರಿಗೂ ಆವಿಷ್ಕಾರ ವಲಯದಲ್ಲಿ ಪುರಸ್ಕಾರ ಲಭಿಸಿತು. ಕೊರೋನಾ ವೈರಸ್‌ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಹಾವು-ಏಣಿ ಮಾದರಿಯ ‘ಕೊರೋನಾ ಯುಗ’ ಎಂಬ ವಿಶಿಷ್ಟಆಟವನ್ನು ವೀರ್‌ ಕಶ್ಯಪ್ ಕಂಡುಹಿಡಿದಿದ್ದರು. ಕ್ರೀಡೆ, ಕಲೆ, ಸಂಸ್ಕೃತಿ, ಸಾಮಾಜಿಕ ಸೇವೆ, ಶೌರ‍್ಯ, ಶಾಲಾ ಸಂಬಂಧಿ ಚಟುವಟಿಕೆ, ಆವಿಷ್ಕಾರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 18 ವರ್ಷದೊಳಗಿನ ಬಾಲ ಪ್ರತಿಭೆಗಳನ್ನು ಗುರುತಿಸಿ ಸರ್ಕಾರ ಪ್ರತಿ ವರ್ಷ ಈ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯು ಪದಕ ಮತ್ತು 1 ಲಕ್ಷ ನಗದು ಒಳಗೊಂಡಿದೆ. ವಿಜೇತರೊಂದಿಗೆ ಪ್ರಧಾನಿ ನರೇಂದ್ರ ಮೋದಿ  ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು. 

ಯಲಹಂಕ ವೈಮಾನಿಕ ಪ್ರದರ್ಶನ:  ಯಲಹಂಕ ವಾಯುನೆಲೆಯಲ್ಲಿ ಫೆ.3 ರಿಂದ 5ರವರೆಗೆ ನಡೆದ ಏರೋ ಇಂಡಿಯಾ-2021 ವೈಮಾನಿಕ ಪ್ರದರ್ಶನ ಭೌತಿಕ ಹಾಗೂ ಛಾಯಾತ್ಮಕವಾಗಿ ರೋಮಾಂಚನಗೊಳಿಸಿತು. ಕೋವಿಡ್ ಸಾಂಕ್ರಾಮಿಕ ನಡುವೆಯೂ 60  ರಾಷ್ಟ್ರಗಳ 580ಕ್ಕೂ ಹೆಚ್ಚು ವೈಮಾನಿಕ ಸಂಸ್ಥೆಗಳಿದ್ದ ಪ್ರದರ್ಶನ ಹಾರಾಟದಲ್ಲಿ ದೇಶಿಯ ನಿರ್ಮಿತ ಸೂರ್ಯ ಕಿರಣ್, ಸಾರಂಗ್ ಯುದ್ಧ ವಿಮಾನಗಳು, ಚಿನೂಕ್, ಅಪಾಚೆ ಯುದ್ಧ ಹೆಲಿಕಾಪ್ಟರ್ ವಿಜೃಂಭಿಸಿದವು.

ಜಲ ಸಂಪನ್ಮೂಲ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ: ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮುಜುಗರ ತಪ್ಪಿಸಲು ರಮೇಶ್​ ಜಾರಕಿಹೊಳಿ ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ಸಿಡಿ ಬಿಡುಗಡೆ ಮಾಡಿದ ನಂತರ ಬಳಿಕ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನವೇ  ಉಂಟಾಗಿತ್ತು. ಪ್ರತಿಪಕ್ಷಗಳು ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ರಮೇಶ್ ಜಾರಕಿಹೊಳಿ ಅವರಿಂದ ರಾಜೀನಾಮೆ ಕೊಡಿಸಲಿ ಎಂದು ಪಟ್ಟು ಹಿಡಿದಿದ್ದವು. ಆದರೆ. ರಮೇಶ್​ ಜಾರಕಿಹೊಳಿ ಈ ವಿಡಿಯೋಗೂ ನನಗೂ ಸಂಬಂಧವಿಲ್ಲ, ಬೇಕಿದ್ದರೆ ತನಿಖೆ ನಡೆಯಲಿ. ಆರೋಪ ಸಾಬೀತಾದರೂ ನಾನು ನಿವೃತ್ತಿ ತೆಗೆದುಕೊಳ್ಳುವೆ ಎಂದು ಹೇಳಿಕೆ ನೀಡಿದ್ದರು. ಆದರೆ, ಕೇಂದ್ರದ ವರಿಷ್ಠರ ಒತ್ತಡದ ಮಧ್ಯೆ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. 

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪ್ರಾದೇಶಿಕ ಪುರಸ್ಕಾರವನ್ನು ಮನೋಜ್ ಕುಮಾರ್ ನಿರ್ದೇಶನದ ಕನ್ನಡ ಚಿತ್ರ ಅಕ್ಷಿ ಗೆದ್ದುಕೊಂಡಿತು. ಅತ್ಯುತ್ತಮ ಉಪಭಾಷಾ ಪ್ರಶಸ್ತಿಯನ್ನು ಆರ್. ಪ್ರೀತಂ ಶೆಟ್ಟಿ ನಿರ್ದೇಶಿತ ಅಂಗಾರ ತುಳು ಚಿತ್ರ ಪಡೆದುಕೊಂಡಿತು.ಅತ್ಯುತ್ತಮ ನಟ ಪ್ರಶಸ್ತಿಯನ್ನು ಧನುಷ್ ( ಅಸುರನ್ ) ಹಾಗೂ ಮನೋಜ್ ಬಾಜಪೇಯಿ (ಬೋನ್ಸ್ಲೇ) ಚಿತ್ರಕ್ಕೆ ಜಂಟಿಯಾಗಿ ಪಡೆದುಕೊಂಡಿದ್ದಾರೆ. ಇನ್ನೂ ಮಣಿಕರ್ಣಿಕಾ ಮತ್ತು ಪಿಂಗಾ ಸಿನಿಮಾಕ್ಕಾಗಿ ಕಂಗನಾ ರಣಾವತ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. 

ಸಾರಿಗೆ ಸಂಸ್ಥೆ ನೌಕರರ ಮುಷ್ಕರ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸಾರಿಗೆ ನೌಕರರ ಮುಷ್ಕರದ ಬಿಸಿ ರಾಜ್ಯದ ಜನತೆಗೆ ತಟ್ಟಿತು. 9ರಲ್ಲಿ 8 ಬೇಡಿಕೆ ಈಡೇರಿ ಸರ್ಕಾರ ಮುಷ್ಕರ ಬೇಡವೆಂದು ಮಾಡಿದ ಮನವಿಗೆ ನೌಕರರ ಸಂಘ ಒಪ್ಪಲಿಲ್ಲ. ಪರ್ಯಾಯವಾಗಿ ಸರ್ಕಾರ ಖಾಸಗಿ ಪ್ರಯಾಣ ವ್ಯವಸ್ಥೆಗೆ ಅನುಮತಿ ಕೊಟ್ಟು. ಕೋವಿಡ್ ಶಿಸ್ತು ಪಾಲಿಸಲು ಸೂಚಿಸಿತು. ಒಂದೆಡೆ ಕೊರೋನಾ, ಇನ್ನೊಂದೆಡೆ ಸಾರಿಗೆ ಮುಷ್ಕರ ಚೇತರಿಸಿಕೊಳ್ಳುತ್ತಿದ್ದ ನಾಗರಿಕ ಜೀವನ ಮೂರಾಬಟ್ಟೆಯಾಯಿತು.

14 ದಿನಗಳ ಲಾಕ್ ಡೌನ್ ಹೇರಿಕೆ:  ಏಪ್ರಿಲ್ 11 ರಿಂದ ರಾಜ್ಯದಲ್ಲಿ ತೀವ್ರ ಲಸಿಕಾ ಅಭಿಯಾನ ಆರಂಭವಾಯಿತು. ಮಹಿಳೆಯರಿಗಾಗಿ ಪಿಂಕ್ ಬೂತ್ ರೂಪುಗೊಂಡವು, ಕೋವಿಡ್ ಚಿಕಿತ್ಸೆ ಕುರಿತಂತೆ ಸಚಿವ ಡಾ. ಸುಧಾಕರ್ ಖಾಸಗಿ ಆಸ್ಪತ್ರೆ ಸಂಘಟನೆಗಳೊಂದಿಗೆ ಚರ್ಚಿಸಿ, ಹಾಸಿಗೆ ಮೀಸಲಾತಿ ನಿರ್ಧರಿಸಿದರು. ಹೋಟೆಲ್ ಸೇರಿ ಸಾರ್ವಜನಿಕ ಬಳಕೆ ವ್ಯವಸ್ಥೆಗಳಲ್ಲೂ ಕೋವಿಡ್ ತತ್ಕಾಲ ಚಿಕಿತ್ಸಾ ಘಟಕ ತೆರೆಯಲಾಯಿತು. ಏಪ್ರಿಲ್ 19 ರಂದು ಬೆಂಗಳೂರಿನಲ್ಲಿ ಕೊರೋನಾ ಸೋಂಕಿನಿಂದ ಬಿಎಸ್ ಯಡಿಯೂರಪ್ಪ ಆಸ್ಪತ್ರೆಗೆ ದಾಖಲಾದರು. ಅಲ್ಲಿಂದಲೇ ಸಂಪುಟ ಸದಸ್ಯರು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾತ್ರಿ ಕರ್ಫ್ಯೂ ಘೋಷಿಸಿದರು. ಶನಿವಾರ- ಭಾನುವಾರ ವಾರಾಂತ್ಯದಲ್ಲಿ 144ನೇ ವಿಧಿ ಜಾರಿಗೊಳಿಸಲಾಗಿತ್ತು. ಏಫ್ರಿಲ್ 26 ರಂದು ರಾಜ್ಯದಲ್ಲಿ 14 ದಿನಗಳ ಲಾಕ್ ಡೌನ್ ಹೇರಲಾಗಿತ್ತು. 

ಚಾಮರಾಜನಗರ ಆಸ್ಪತ್ರೆಯಲ್ಲಿ ದುರಂತ: ಚಾಮರಾಜನಗರದ ಆಸ್ಪತ್ರೆಯಲ್ಲಿ ಒಂದೇ ದಿನ 24 ಸೋಂಕಿತರು ಮೃತಪಟ್ಟ ದುರಂತ ನಾಡನ್ನು ನಡುಗಿಸಿತು. ಆಕ್ಸಿಜನ್ ಕೊರತೆ ಕಾರಣದಿಂದ ಈ ಘಟನೆ ಸಂಭವಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು. ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ವಿಚಾರಣಾ ಆಯೋಗ ರಚಿಸಿತು. ಹೈಕೋರ್ಟ್ ನಿರ್ದೇಶನದಂತೆ ಮೃತರ 24 ಕುಟುಂಬಗಳಿಗೆ ತಲಾ 2 ಲಕ್ಷದಿಂದ 5 ಲಕ್ಷ ರೂಪಾಯಿ ತನಕ ಪರಿಹಾರ ಕೊಟ್ಟಿತು.

ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಪ್ರಮಾಣ ವಚನ ಸ್ವೀಕಾರ: ರಾಜ್ಯದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಸ್ವೀಕಾರ ಮಾಡಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗೆಹ್ಲೋಟ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು.ರಾಜ್ಯದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ಅವರು ನೂತನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ:  ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಘೋಷಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ 2ನೇ ವರ್ಷದ ಬಿಜೆಪಿ ಸರ್ಕಾರದ ಸಾಧನಾ ಸಮಾವೇಶ ಉದ್ಘಾಟಿಸಿದ ಬಿ.ಎಸ್.ಯಡಿಯೂರಪ್ಪ ಅತ್ಯಂತ ಭಾವುಕರಾಗಿ ಮಾತನಾಡಿದರು. ತಮ್ಮ ಭಾಷಣದ ನಂತರ ಸಾಧನಾ ಸಮಾವೇಶದ ವೇದಿಕೆಯಿಂದ ಇಳಿದು ರಾಜಭವನಕ್ಕೆ ತೆರಳಿದ ಬಿಎಸ್‌ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಧಿಕೃತವಾಗಿ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದರು. ಬಿ.ಎಸ್‌. ಯಡಿಯೂರಪ್ಪ ಅವರ ರಾಜೀನಾಮೆಯನ್ನು ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅಂಗೀಕರಿಸಿದರು.

ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ:  ಜುಲೈ 28 ರಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದ ಬಸವರಾಜ ಬೊಮ್ಮಾಯಿ, ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ  ಜುಲೈ 28, 2021ರ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ 61 ವರ್ಷದ ಬಸವರಾಜ ಬೊಮ್ಮಾಯಿಯವರು ಬಿ ಎಸ್ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಶಿಗ್ಗಾಂವ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಬಂದಿರುವ ಬೊಮ್ಮಾಯಿಯವರು ಎರಡು ಬಾರಿ ವಿಧಾನಪರಿಷತ್ ಸದಸ್ಯರು ಕೂಡ ಆಗಿದ್ದಾರೆ.

ಕೆಂಗೇರಿವರೆಗೆ ಮೆಟ್ರೋ ವಿಸ್ತರಣೆ:ನಮ್ಮ ಮೆಟ್ರೋ ಯೋಜನೆ ಪಿಂಕ್ ವಿಭಾಗದಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ವಿಸ್ತರಿಸಲಾಗಿರುವ ಮಾರ್ಗವನ್ನು ಮುಖ್ಯಮಂತ್ರಿ ಜೊತೆಗೂಡಿ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದಿಪ್ ಸಿಂಗ್ ಪುರಿ ಆಗಸ್ಟ್ 29 ರಂದು ಉದ್ಘಾಟಿಸಿದರು.  ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿವರೆಗಿನ 7.5 ಕಿಮೀ ಉದ್ದದ ‘ನಮ್ಮ ಮೆಟ್ರೋ’ ರೈಲು ಸೇವೆಯಿಂದ ನಗರದ ಪೂರ್ವ-ಪಶ್ಚಿಮ ಭಾಗಕ್ಕೆ ಸಂಚಾರ ಮತ್ತಷ್ಟುಸುಗಮವಾಗಿದೆ. ಕೇಂದ್ರ ಭಾಗದಲ್ಲಿ ವಾಹನದಟ್ಟಣೆ ಕಡಿಮೆ ಆಗಿದೆ. 

ಸ್ಪೀಕರ್ ಓಂ ಬಿರ್ಲಾ ಭಾಷಣ:  ವಿಧಾನಮಂಡಲದ ಮುಂಗಾರು ಅಧಿವೇಶನ 10 ದಿನಗಳ ಕಲಾಪದೊಂದಿಗೆ ಸೆಪ್ಟೆಂಬರ್ 13 ರಂದು ಆರಂಭವಾಯಿತು. ಎರಡೂ ಸದಗಳ ಜಂಟಿ ಸಮಾವೇಶ ಉದ್ದೇಶಿಸಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಭಾಷಣ ಮಾಡಿದರು.  ಬಿಎಸ್ ಯಡಿಯೂರಪ್ಪ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಹಿಂದೆ ಅಂದಿನ ಲೋಕಸಭಾಧ್ಯಕ್ಷರಾಗಿದ್ದ ಮನೋಹರ ಜೋಶಿ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿದ್ದು, ಇಂಥ ಮೊದಲ ಸಂಸದೀಯ ಕಲಾಪವಾಗಿತ್ತು. 

ಕನ್ನಡಕ್ಕಾಗಿ  ನಾವು ಅಭಿಯಾನ:  66ನೇ ಕನ್ನಡ ರಾಜ್ಯೋತ್ಸವಕ್ಕೆ ಪೂರಕವಾಗಿ ಬೊಮ್ಮಾಯಿ ಸರ್ಕಾರ ಅಕ್ಟೋಬರ್ 24 ರಿಂದ 31ರವರೆಗೆ ಕನ್ನಡಕ್ಕಾಗಿ  ನಾವು ಅಭಿಯಾನ ಕೈಗೊಂಡಿತ್ತು. ಮಾತಾಡ್ ಮಾತಾಡ್ ಕನ್ನಡ ಸಪ್ತಾಹದ ಘೋಷವಾಕ್ಯವಾಗಿತ್ತು. ಕನ್ನಡ ಗೀತ ಗಾಯನ- ಸಾಮೂಹಿಕ ಕಲಾಪ ರೂಪಿಸಿ ಕುವೆಂಪು, ನಿಸಾರ್ ಅಹಮದ್, ಹಂಸಲೇಖ ಅವರ ಗೀತೆಗಳ ಗಾಯನ ನಡೆಯಿತು. ಪ್ರಧಾನ ಕಾರ್ಯಕ್ರಮ ಅಕ್ಟೋಬರ್ 28 ರಂದು ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳಲ್ಲಿ ನಡೆಯಿತು. ಜಿಲ್ಲಾ ಕೇಂದ್ರಗಳಲ್ಲೂ ಗೀತಾ ಗಾಯನ ಕಾರ್ಯಕ್ರಮ ನಡೆಯಿತು. 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನ ರಾಜ್ಯಕ್ಕೆ ಬರಸಿಡಿಲಿನಂತೆ ಅಪ್ಪಳಿಸಿತು. ಹೃದಯಾಘಾತದಿಂದ  46ರ ಹರೆಯದಲ್ಲಿ ನಿಧನರಾದ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಕಂಠೀರವ ಕ್ರೀಡಾಂಗಣಕ್ಕೆ ಜನಸಾಗರವೇ ಹರಿದುಬಂದಿತ್ತು. ಅಕ್ಟೋಬರ್ 31 ರಂದು ಡಾ. ರಾಜ್ ಕುಮಾರ್ ಪುಣ್ಯಭೂಮಿಯಲ್ಲಿ ಪುನೀತ್ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಸಹಿತ ರಾಷ್ಟ್ರದ ಗಣ್ಯರು, ಶೋಕ ಸಂದೇಶ ನೀಡಿ ಯುವನಟನ ಪ್ರತಿಭೆ ಸ್ಮರಿಸಿದರು. ಸರಳ, ಸಜ್ಜನಿಕೆ ಹಾಗೂ ಸಾಮಾಜಿಕ ಕಾರ್ಯಗಳಿಂದ ಕನ್ನಡಿಗರ ಮನ- ಮನೆಗಳಲ್ಲಿ ಚಿರಸ್ಥಾಯಿಯಾಗಿ ಪವರ್ ಸ್ಟಾರ್ ಉಳಿದಿದ್ದಾರೆ. 

ಜನಸೇವಕ ಯೋಜನೆ ಪ್ರಕಟ: ಈ ವರ್ಷ ಕನ್ನಡ ರಾಜ್ಯೋದಯ ದಿನಕ್ಕೆ 66ನೇ ವೈಭವ. ಜೊತೆಗೆ ಬಸವರಾಜ ಬೊಮ್ಮಾಯಿ ಆಡಳಿತಕ್ಕೆ ಶತದಿನೋತ್ಸವ ಸಂಭ್ರಮ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರದಾನ ಸಮಾರಂಭದಲ್ಲಿ ರಾಜ್ಯೋದಯ ದಿನದ ಕೊಡುಗೆಯಾಗಿ ಜನಸೇವಕ ಯೋಜನೆ ಪ್ರಕಟಿಸಿದರು. ಜನಸೇವಕ ಕರ್ನಾಟಕ ಸರ್ಕಾರದ ಯೋಜನೆಯಾಗಿದ್ದು, ರಾಜ್ಯದ ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸಿ ಅವರ ದೈನಂದಿನ ಜೀವನವನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ನಾಗರಿಕರು ತಮ್ಮ ಅನುಕೂಲಕರ ದಿನ ಹಾಗೂ ಸಮಯದ ಆಧಾರದಲ್ಲಿ 8AM ರಿಂದ 8PM ನಡುವೆ ಎಲ್ಲಾ ದಿನಗಳಲ್ಲಿ ಸ್ಲಾಟ್ ಬುಕ್ ಮಾಡಬಹುದು.

ನಾಗರಿಕರು ದೂರವಾಣಿ ಸಂಖ್ಯೆ: 080-4455 4455ಗೆ ಕರೆ ಮಾಡಿದಲ್ಲಿ ತರಬೇತಿ ಹೊಂದಿದ ಕರೆ ಕೇಂದ್ರದ ಕಾರ್ಯನಿರ್ವಾಹಕರು ಈ ಸೇವೆಯನ್ನು ಪಡೆಯುವ ಬಗ್ಗೆ ಮಾಹಿತಿ ಒದಗಿಸುತ್ತಾರೆ. ನಾಗರಿಕರು ತಮ್ಮ ಜನಸೇವಕ ಕೇಂದ್ರಕ್ಕೆ (080-44554455) ಕರೆ ಮಾಡುವುದರ ಮೂಲಕ ಅಥವಾ ಜಾಲತಾಣ (www.janasevaka.karnataka.gov.in)ವನ್ನು ಸಂಪರ್ಕಿಸುವುದರ ಮೂಲಕ ಅಥವಾ ಮೊಬೈಲ್ ಒನ್ ಅಪ್ಲಿಕೇಶನ್ ಬಳಸಿ ಸ್ಲಾಟ್ ಗಳನ್ನು ಕಾಯ್ದಿರಿಸಬಹುದಾಗಿದೆ..

ಪದ್ಮ ಪ್ರಶಸ್ತಿ ವಿಜೇತರು: 2020 ಮತ್ತು 2021ರ ಪದ್ಮ ಪ್ರಶಸ್ತಿಗಳು ನವೆಂಬರ್ ನಲ್ಲಿ ಪ್ರಧಾನಗೊಂಡವು. ತಮ್ಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆಗಾಗಿ ಡಾ. ಚಂದ್ರಶೇಖರ್ ಕಂಬಾರ-ಪದ್ಮ ಭೂಷಣ ಭೂಷಿತರಾದರು. ಡಾ. ಬಿ. ಎಂ. ಹೆಗ್ಡೆ ಪದ್ಮ ವಿಭೂಷಣ. ಮಂಜಮ್ಮ ಜೋಗತಿ, ರಂ.ಲ. ಕಶ್ಯಪ್, ಕೆ. ವೈ. ವೆಂಕಟೇಶ್, ಹರೇಕಳ ಹಾಜಪ್ಪ, ಡಾ. ವಿಜಯ್ ಸಂಕೇಶ್ವರ್, ಪ್ರೊ. ಬಿ.ಎನ್. ಗಂಗಾಧರ್, ತುಳಸೀಗೌಡ- ಪದ್ಮಶ್ರೀ ಪುರಷ್ಕತರಾಗಿದ್ದಾರೆ. 

ಕಸಾಪಕ್ಕೆ ಚುನಾವಣೆ: ಮಹೇಶ್ ಜೋಶಿ ನೂತನ ಅಧ್ಯಕ್ಷ: ಕನ್ನಡ ಸಾರಸ್ವತ ಲೋಕದ  ಮುಂಚೂಣಿ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ನಡೆದ ಚುನಾವಣೆ ನ.1 ರಂದೇ ಪ್ರಕಟವಾಯಿತು. ರಾಜ್ಯಾಧ್ಯಕ್ಷರಾಗಿ ಮಹೇಶ್ ಜೋಶಿ ಆಯ್ಕೆಯಾದರು. ನೂತನ ಜಿಲ್ಲಾಧ್ಯಕ್ಷರು ಚುನಾಯಿತರಾದರು. 

ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ:  ಟೀಂ ಇಂಡಿಯಾದ ನೂತನ ಕೋಚ್ ಆಗಿ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದಾರೆ.  ನವೆಂಬರ್ 17ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಅವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ 48ರ ಹರೆಯದ ದ್ರಾವಿಡ್ ಕಳೆದ ಆರು ವರ್ಷಗಳಿಂದ ಭಾರತ ಎ ಮತ್ತು ಅಂಡರ್-19 ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅವರ ಮೇಲ್ವಿಚಾರಣೆಯಲ್ಲಿ, ರಿಷಬ್ ಪಂತ್, ಅವೇಶ್ ಖಾನ್, ಪೃಥ್ವಿ ಶಾ, ಹನುಮ ವಿಹಾರಿ ಮತ್ತು ಶುಭಮನ್ ಗಿಲ್ ಅವರಂತಹ ಆಟಗಾರರು ಜೂನಿಯರ್ ಹಂತದಿಂದ ರಾಷ್ಟ್ರೀಯ ತಂಡಕ್ಕೆ ಪ್ರಯಾಣಿಸಿದ್ದಾರೆ. ಅವರು ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(NCA) ಮುಖ್ಯಸ್ಥರಾಗಿದ್ದಾರೆ.

ನಿಧನ: ಕೋವಿಡ್ ಮಹಾಮಾರಿಗೆ ಜೂನ್ ತಿಂಗಳಲ್ಲಿ ಹಿರಿಯ ಸಾಹಿತಿ ವಸಂತ ಕುಷ್ಠಗಿ, ಮಾಜಿ ಸಚಿವ ಮುಮ್ತಾಜ್ ಅಲಿಖಾನ್, ಸಿಎಂ ಉದಾಸಿ, ಬಂಡಾಯ ಕವಿ ಡಾ. ಸಿದ್ದಲಿಂಗಯ್ಯ, ರಾಷ್ಟ್ರ ಪ್ರಶಸ್ತಿ ಚಿತ್ರನಟ ಸಂಚಾರಿ ವಿಜಯ್, ಹೆಸರಾಂತ ಸಂಸ್ಕೃತ ದೈನಿಕ ಸುಧರ್ಮ ಸಂಪಾದಕ ಪದ್ಮಶ್ರಿ ಕೆ. ವಿ. ಸಂಪತ್ ಕುಮಾರ್ , ಹೆಸರಾಂತ ಚಿತ್ರನಟಿ ಜಯಂತಿ, ವಿಜ್ಞಾನಿ, ಸಾಹಿತಿ ಡಾ. ಸುದೀಂದ್ರ ಹಾಲ್ಡೋಡ್ಡೇರಿ, ರಣಜಿ ಕ್ರಿಕೆಟ್ ಅಂಪೈರ್- ವೀಕ್ಷಣೆ ವಿವರಣೆಗಾರ ಬಾಪು ಹನುಮಂತರಾವ್, ಮಾಜಿ ಸಚಿವ ಜಿ. ಮಾದೇಗೌಡ ಸೇರಿದಂತೆ ಹಲವು ಗಣ್ಯರು ಅಗಲಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com