ಅಭಿಷೇಕಪ್ರಿಯ ಶಿವನಿಗೆ ಮಹಾಶಿವರಾತ್ರಿಯಂದು ಅರ್ಪಿಸುವ ನೈವೇದ್ಯ

ಶಿವರಾತ್ರಿಯಂದು ಶಿವಲಿಂಗಗಳಿಗೆ ಬಿಲ್ವಪತ್ರೆ, ಹೂಗಳಿಂದ ಪೂಜಿಸಿ, ಖರ್ಜೂರ, ಕಲ್ಲು ಸಕ್ಕರೆ ನೈವೇದ್ಯ ಅರ್ಪಿಸಿ, ಶಿವನಾಮ ಸ್ಮರಣೆ ಮಾಡಿ ಭಕ್ತಿ ಸಮರ್ಪಿಸಬೇಕು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ ಮಂಗಳಕರ ದಿನ. ಹಿಂದೂ ನಂಬಿಕೆಯಂತೆ ಈ ದಿನದಂದು ಮಾಡಿದ ವ್ರತ ಉಪವಾಸಗಳು ಕೈಗೂಡಿ ಶಿವತ್ಕಾರವಾದಂತೆ ಎಂಬ ಮಾತಿದೆ. ಮಹಾಶಿವನು ಶಿವರಾತ್ರಿಯಂದು ಧರೆಗಿಳಿದು ಬಂದು ಭಕ್ತರ ಪೂಜೆ ಪುನಸ್ಕಾರಗಳನ್ನು ಸ್ವತಃ ಸ್ವೀಕರಿಸುತ್ತಾನೆ ಎಂಬ ಪ್ರತೀತಿ ಇದೆ.

ಶಿವರಾತ್ರಿಯಂದು ವಿಶೇಷತೆ ಇರುವುದು ಅಂದು ಮಾಡುವ ಜಾಗರಣೆ. ಎಲ್ಲವನ್ನೂ ಶಿವಾರ್ಪಣಗೊಳಿಸಿ ಕೈಲಾಸ ನಾಥನನ್ನು ಮೈ ಮನಗಳಲ್ಲಿ ತುಂಬಿಕೊಂಡು ಭಕ್ತಿ ಶ್ರದ್ಧೆಯಿಂದ ಶಿವ ಧ್ಯಾನ ಮಾಡಬೇಕು. ನಿದ್ದೆ, ಹಸಿವು, ಬಾಯಾರಿಕೆ ಮುಂತಾದ ಅರಿಷಡ್ವರ್ಗಗಳನ್ನು ತ್ಯಜಿಸಿ ಶಿವನ ಓಂಕಾರ ಸ್ಮರಣೆಯಿಂದ ಮಾತ್ರವೇ ಶಿವರಾತ್ರಿ ಸಂಪನ್ನಗೊಳ್ಳುತ್ತದೆ.

ಶಿವರಾತ್ರಿಯಂದು ಶಿವಲಿಂಗಗಳಿಗೆ ಬಿಲ್ವಪತ್ರೆ, ಹೂಗಳಿಂದ ಪೂಜಿಸಿ, ಖರ್ಜೂರ, ಕಲ್ಲು ಸಕ್ಕರೆ ನೈವೇದ್ಯ ಅರ್ಪಿಸಿ, ಶಿವನಾಮ ಸ್ಮರಣೆ ಮಾಡಿ ಭಕ್ತಿ ಸಮರ್ಪಿಸಬೇಕು.ಮನೆಯಲ್ಲಿಯೇ ಶಿವನಿಗೆ ವಿಶೇಷ ಪೂಜೆ ನಡೆಸುವವರು,ಶಿವರಾತ್ರಿಯಂದು ಶಿವನಿಗೆ ವಿವಿಧ ಪದಾರ್ಥಗಳಿಂದ ನೈವೇದ್ಯ ಮಾಡುತ್ತಾರೆ.

ಅಭಿಷೇಕ ಪ್ರಿಯ ಈಶ್ವರನಿಗೆ ನೈವೇದ್ಯಕ್ಕಿಂತ, ಹಾಲು, ನೀರು, ಜೇನುತುಪ್ಪ, ಎಳನೀರು, ಸಕ್ಕರೆ, ಖರ್ಜೂರ, ಮೊಸರು, ತುಪ್ಪ, ಹಣ್ಣುಗಳಿಂದ ಅಭಿಷೇಕ ಮಾಡಿದರೆ ಶಿವನಿಗೆ ಹೆಚ್ಚು ಸಂತೋಷವಂತೆ.

ದಕ್ಷಿಣ ಭಾರತದ ಕೆಲವು ಕಡೆ ಮಹಾಶಿವರಾತ್ರಿಯಂದು ಈಶ್ವರನಿಗೆ, ಹುರಿದ ಅಕ್ಕಿ ತಂಬಿಟ್ಟು, ಸಿಹಿ ಅವಲಕ್ಕಿ, ಹುಳಿ ಅವಲಕ್ಕಿ,ಪಂಚಾಮೃತ, ಹೆಸರಬೇಳೆ ಪಾಯಸ ಮಾಡಿ ನೈವೇದ್ಯ ಇಡುವ ಪದ್ಧತಿಯಿದೆ. ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಬೆಲ್ಲ, ಹಣ್ಣು-ಹಂಪಲ, ಹಾಲು, ಖರ್ಜೂರ, ಬೆಲ್ಲ, ಶೇಂಗಾ, ಕಬ್ಬು ಮತ್ತು ಲಾಡು ನೈವೇದ್ಯ ಮಾಡುವ ಸಂಪ್ರದಾಯವಿದೆ.

ಹಿಂದೂಗಳಲ್ಲಿ ಧಾರ್ಮಿಕ ಆಚರಣೆಗಳು ನಂಬಿಕೆಗಳು ಹೇಗೆ ಚ್ಯುತಿ ಇಲ್ಲದೆ ನಡೆದುಕೊಂಡು ಬರುತ್ತದೋ ಅದೇ ರೀತಿ ದೇವರನ್ನು ಸಂತೃಪ್ತಗೊಳಿಸುವ ತಿನಿಸು, ನೈವೇದ್ಯ ಕೂಡ ಶಿಸ್ತು, ಶುಚಿ, ರುಚಿಯ ವೈವಿಧ್ಯತೆಯಾಗಿರುತ್ತದೆ. ಪ್ರತಿಯೊಂದು ಹಬ್ಬಕ್ಕೂ ಮಾಡುವ ತಿಂಡಿ ತಿನಿಸುಗಳು ಅಷ್ಟೇ ಪ್ರೀತಿ ಭಯ ಭಕ್ತಿಯಿಂದ ಮಾಡಲ್ಪಟ್ಟಿರುತ್ತದೆ. ಹಾಗೆಯೇ ಶಿವರಾತ್ರಿಯಂದು ಕೂಡ ಶಿವನನ್ನು ಒಲಿಸಿಕೊಳ್ಳಲು ಈಶ್ವರನಿಗೆ ಪ್ರಿಯವಾದ ಹಲವು ತಿನಿಸುಗಳನ್ನು ಮಾಡಿ ನೈವೇದ್ಯ ಇಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com