-ಆನ್ಲೈನ್ ಖಾತೆಯಿಂದ ಹಣ ಕಬಳಿಸಲು ಇದರ ಬಳಕೆ
ನವದೆಹಲಿ: ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವೆಲ್ಲ ಮಂಗಮಾಯ!
ಹೌದು. ರಷ್ಯಾದ ಸೈಬರ್ ಕ್ರಿಮಿನಲ್ ಗಳ ತಂಡವೊಂದು ಅತ್ಯಂತ ಭಯಾನಕ ವೈರಸ್ ವೊಂದನ್ನು ಸಿದ್ಧಪಡಿಸಿದ್ದಾರೆ. ಇದು ಈವರೆಗೆ ಕಂಡು, ಕೇಳರಿಯದ ಅತಿ ಸುಧಾರಿತ ಕಂಪ್ಯೂಟರ್ ವೈರಸ್ ಆಗಿದ್ದು, ಇದು ಅಟ್ಯಾಕ್ ಮಾಡಿತೆಂದರೆ ಯಾವ ಸಾಫ್ಟ್ ವೇರ್ ಕೂಡ ನಿಮ್ಮನ್ನು ರಕ್ಷಿಸಲಾರದು.
ಭಯಾನಕ ವೈರಸ್
ಈ ವೈರಸ್ನ ಹೆಸರು 'ನೆವರ್ ಕ್ವೆಸ್ಟ್ ಟ್ರೋಜನ್'. ಮೆಲೀಷಿಯಸ್ ವೆಬ್ ಸೈಟ್ ಗಳಲ್ಲಿ ಅಡಗಿ ಕುಳಿತುಕೊಳ್ಳುವ ಈ ವೈರಸ್ಗಳು ಕಂಪ್ಯೂಟರ್ಗಳನ್ನು ಇನ್ಫೆಕ್ಟ್ ಮಾಡಿ ಜನರ ಬ್ಯಾಂಕ್ ಖಾತೆಯ ವಿವರಗಳನ್ನು ಕದಿಯುತ್ತವೆ. ಈ ವೈರಸ್ಗಳು ಯಾವುದೇ ದೇಶದ ಯಾವುದೇ ಬ್ಯಾಂಕ್ಗಳ ಮೇಲಾದರೂ ದಾಳಿ ನಡೆಸಿ ಹಣವನ್ನು ಬಾಚಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಯಾವ ಕಾರಣಕ್ಕೂ ಯಾರ ಕೈಗೂ ಸಿಗಬಾರದು ಎಂಬ ಉದ್ದೇಶದಿಂದ ಕ್ರಿಮಿನಲ್ಗಳು ಬಹಳ ಕೌಶಲ್ಯದಿಂದ ಈ ವೈರಸ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವೈರಸ್ ದಾಳಿ ನಡೆಸಿತೆಂದರೆ, ಅದನ್ನು ನಾಶಪಡಿಸಲು ಯಾವುದೇ ಸಾಂಪ್ರದಾಯಿಕ ಆ್ಯಂಟಿ-ವೈರಸ್ ಸಾಫ್ಟ್ ವೇರ್ ಗಳಿಂದಲೂ ಸಾಧ್ಯವಿಲ್ಲ.
ಫಿಡೆಲಿಟಿ ಇನ್ವೆಸ್ಟ್ಮೆಂಟ್ ಪ್ರಮುಖ ಟಾರ್ಗೆಟ್
ಭದ್ರತಾ ಸಂಸ್ಥೆ ಕ್ಯಾಸ್ಪರ್ಸ್ಕಿ ಲ್ಯಾಬ್ ಪ್ರಕಾರ, ನೆವರ್ಕ್ವೆಸ್ಟ್ ವೈರಸ್ ವಿಶ್ವಾದ್ಯಂತ ಕಂಪ್ಯೂಟರ್ಗಳನ್ನು ಹ್ಯಾಕ್ ಮಾಡಲು ಸಾವಿರಾರು ಪ್ರಯತ್ನಗಳನ್ನು ನಡೆಸಿದೆ. ಅದರ ಪ್ರಮುಖ ಟಾರ್ಗೆಟ್ ಫಿಡೆಲಿಟಿ ಇನ್ವೆಸ್ಟ್ಮೆಂಟ್. ಫಿಡೆಲಿಟಿ ಗ್ರಾಹಕರ ಆನ್ಲೈನ್ ಖಾತೆಗಳಲ್ಲಿ ಅವರ ಷೇರುಗಳು, ಸ್ಟಾಕ್ ಗಳ ಬಗೆಗಿನ ಮಾಹಿತಿಯೂ ಇರುತ್ತದೆ. ಹಾಗಾಗಿ ಅಂತಹ ಗ್ರಾಹಕರ ಖಾತೆಯನ್ನು ಹ್ಯಾಕ್ ಮಾಡಿದರೆ ಹಣ ಕದಿಯುವುದು ಮಾತ್ರವಲ್ಲದೇ ಷೇರು ವ್ಯವಹಾರಗಳನ್ನೂ ಮಾಡಬಹುದು ಎನ್ನುವುದು ಹ್ಯಾಕರ್ಗಳ ಯೋಚನೆ.
ಎಚ್ಚರಿಕೆ
ನೆವರ್ಕ್ವೆಸ್ಟ್ನಂತಹ ವೈರಸ್ನಿಂದ ರಕ್ಷಿಸಿಕೊಳ್ಳಲು 'ಸ್ಟ್ಯಾಂಡರ್ಡ್ ಆ್ಯಂಟಿವೈರಸ್' ಸಾಲುವುದಿಲ್ಲ. ಹಾಗಾಗಿ ಇದರ ದಾಳಿಯಿಂದ ತಪ್ಪಿಸಿಕೊಳ್ಳಬೇಕಾದರೆ, ಗ್ರಾಹಕರು ಕೇವಲ ಅಧಿಕೃತ ವೆಬ್ ಸೈಟ್ ಗಳನ್ನು ಮಾತ್ರ ಬಳಸಬೇಕು. ಅನಗತ್ಯ ಲಿಂಕ್ಗಳಿಗೆ ಕ್ಲಿಕ್ ಮಾಡಬಾರದು. ಕಂಪ್ಯೂಟರ್ಗಳಲ್ಲಿ, ಕುಕೀಸ್ನಲ್ಲಿ ಪಾಸ್ವರ್ಡ್ಗಳನ್ನು ಸೇವ್ ಮಾಡಬಾರದು ಎಂದು ಕ್ಯಾಸ್ಪರ್ಸ್ಕಿ ಲ್ಯಾಬ್ ಸೂಚನೆ ನೀಡಿದೆ.
ನೆವರ್ಕ್ವೆಸ್ಟ್ ಹೇಗೆ ಕೆಲಸ ಮಾಡುತ್ತದೆ?
- ಮೆಲೀಷಿಯಸ್ ವೆಬ್ ಸೈಟ್ ಗಳಲ್ಲಿ ನೆವರ್ಕ್ವೆಸ್ಟ್ ವೈರಸ್ ಕುಳಿತಿರುತ್ತವೆ. ಈ ಅಪಾಯಕಾರಿ ಸೈಟ್ಗಳಿಗಿರುವ ಲಿಂಕ್ಗಳನ್ನು ಯಾವಾಗ ನೀವು ಕ್ಲಿಕ್ ಮಾಡುತ್ತೀರೋ, ತಕ್ಷಣ ಆ ಕಂಪ್ಯೂಟರ್ ಮೇಲೆ ವೈರಸ್ ದಾಳಿ ಮಾಡುತ್ತದೆ.
- ಇಂಟರ್ನೆಟ್ ಎಕ್ಸ್ ಪ್ಲೋರರ್ ಹಾಗೂ ಫೈರ್ಫಾಕ್ಸ್ ಬ್ರೌಸರ್ಗಳಿಗಾಗಿಯೇ ವಿಶೇಷ ಸ್ಕ್ರಿಪ್ಟ್ಗಳನ್ನು ಸಿದ್ಧಪಡಿಸಿರಲಾಗುತ್ತದೆ. ಇದರ ಮೂಲಕ ಎಲ್ಲೋ ದೂರದಲ್ಲಿ ಕುಳಿತಿರುವ ಸೈಬರ್ ಕ್ರಿಮಿನಲ್ ಗಳು ನಿಮ್ಮ ಕಂಪ್ಯೂಟರ್ ಅನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದುತ್ತಾರೆ.
- ಒಮ್ಮೆ ಕಂಪ್ಯೂಟರ್ಗೆ ವೈರಸ್ ದಾಳಿ ಆಯಿತೆಂದರೆ, ಆ ವೈರಸ್ ನಿಮ್ಮ ಆನ್ ಲೈನ್ ಬ್ಯಾಂಕ್ ಖಾತೆಯ ಯೂಸರ್ನೇಮ್ ಹಾಗೂ ಪಾಸ್ವರ್ಡ್ ಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ.
- ಈ ಮಾಹಿತಿ ಹ್ಯಾಕರ್ ಗಳಿಗೆ ರವಾನೆಯಾಗುತ್ತದೆ. ಅವರಿಗೆ ನಿಮ್ಮ ಖಾತೆಯ ವಿವರ ದೊರೆಯುತ್ತದೆ.
- ನಿಮ್ಮ ಖಾತೆಯ ವಿವರ ದೊರೆತ ಬಳಿಕ, ಹ್ಯಾಕರ್ಗಳು ನಿಮ್ಮ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ. ಅಲ್ಲಿಗೆ ನಿಮ್ಮ ಖಾತೆಯಲ್ಲಿದ್ದ ಹಣ ಖಾಲಿ.
ಭಾರತದ ಬ್ಯಾಂಕುಗಳ ಮೇಲೂ ಕಣ್ಣು
ನೆವರ್ಕ್ವೆಸ್ಟ್ ವೈರಸ್ ವಿಶ್ವದ ದೊಡ್ಡ ದೊಡ್ಡ ಬ್ಯಾಂಕುಗಳು ಹಾಗೂ ಹೂಡಿಕೆ ಕಂಪನಿಗಳ ಮೇಲೆ ದಾಳಿಗೆ ಸನ್ನದ್ಧವಾಗಿದೆ. ಸದ್ಯಕ್ಕೆ ಸುಮಾರು 28 ಪ್ರಮುಖ ವೆಬ್ ಸೈಟ್ ಗಳು ಅಪಾಯದಲ್ಲಿವೆ. 'ಖಾಸಗಿತನ' ಕಾಪಾಡುವ ನಿಟ್ಟಿನಲ್ಲಿ ಕ್ಯಾಸ್ಪರ್ಸ್ಕಿ ಲ್ಯಾಬ್ ಯಾವ ಸೈಟ್ಗಳು ಅಪಾಯದಲ್ಲಿವೆ ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಆದರೆ, ಭಾರತ, ಜರ್ಮನಿ, ಇಟಲಿ, ಟರ್ಕಿಯ ಬ್ಯಾಂಕು, ಕಂಪನಿಗಳೂ ಟ್ರೋಜನ್ ನ ಟಾರ್ಗೆಟ್ ಪಟ್ಟಿಯಲ್ಲಿದೆ ಎಂದು ತಿಳಿಸಿದೆ.
Advertisement