ನಾಗ್ಪುರ: ಬಿಜೆಪಿ ಅಧ್ಯಕ್ಷ ಸ್ಥಾನ ಬಿಟ್ಟ ಮಾರನೇ ದಿನವೇ ನಿತಿನ್ ಗಡ್ಕರಿ ಅವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ 'ಆವಾಜ್' ಹಾಕಿದ್ದಾರೆ.
ಈಗ ಏನು ಮಾಡ್ತೀರೋ ಮಾಡಿ, ಮುಂದೆ ಬಿಜೆಪಿ ಸರ್ಕಾರವೇ ಬರೋದು, ಆಗ ನಿಮ್ಮನ್ನ ನೋಡ್ಕೋತೇನೆ ಎಂದು ನೇರವಾಗಿಯೇ ಅವರಿಗೆ ಸವಾಲು ಹಾಕಿದ್ದಾರೆ.
ಮೊನ್ನೆಯಷ್ಟೇ ಪೂರ್ತಿ ಗ್ರೂಪ್ಗೆ ಸೇರಿದ ಕಂಪನಿಗಳ ಮೇಲೆ ಐಟಿ ಅಧಿಕಾರಿಗಳು ನಡೆಸಿದ ದಾಳಿ ಹಿನ್ನೆಲೆಯಲ್ಲಿ ಅವರು ಈ ಆವಾಜ್ ಹಾಕಿದ್ದಾರೆ. ದೆಹಲಿಯಿಂದ ತವರು ನಾಗ್ಪುರಕ್ಕೆ ಆಗಮಿಸಿದ ಅವರು, ವಿಮಾನ ನಿಲ್ದಾಣದ ಬಳಿಯಲ್ಲೇ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಆಕ್ರೋಶಿತರಂತೆ ಕಂಡು ಬಂದ ಅವರು, ಐಟಿ ಅಧಿಕಾರಿಗಳನ್ನೇ ನೇರವಾಗಿ ತರಾಟೆಗೆ ತೆಗೆದುಕೊಂಡರು.
ಮೊದಲು ಬಿಜೆಪಿ ಅಧ್ಯಕ್ಷನಾಗಿದ್ದೆ, ಆಗ ಆ ಪದವಿಗೆ ಇರುವ ಗೌರವದಿಂದಾಗಿ ಸುಮ್ಮನಿದ್ದೆ. ಆದರೆ ಈಗ ಹಾಗಲ್ಲ, ನಾನು ಈ ಹುದ್ದೆಯಿಂದ ಹೊರಬಂದಿದ್ದೇನೆ. ಈಗ ಯಾರೂ ನನ್ನನ್ನು ಕೇಳೋಲ್ಲ ಎಂದಿದ್ದಾರೆ. ಜೊತೆಗೆ ಈಗ ನಿಮ್ಮ ಮೇಲೆ ಸವಾರಿ ನಡೆಸುತ್ತಿರುವ ಸೋನಿಯಾ ಅವರಾಗಲಿ, ಚಿದಂಬರಂ ಅವರಾಗಲಿ ಮುಂದೆ ರಕ್ಷಿಸಲು ಬರುವುದಿಲ್ಲ. ಮುಂದೆ ಬಿಜೆಪಿ ಸರ್ಕಾರವೇ ಬರುತ್ತದೆ. ಆಗ ನಿಮ್ಮನ್ನು ನೋಡಿಕೋಳ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
ಆದಾಯ ತೆರಿಗೆ ಇಲಾಖೆಯಲ್ಲಿ ನಮಗೆ ಬೇಕಾದ ಜನರಿದ್ದಾರೆ. ಅವರು ನಿಮ್ಮ ಮೇಲಿನ ಸರ್ಕಾರದ ಒತ್ತಡದ ಬಗ್ಗೆ ಮಾಹಿತಿ ನೀಡಿದ್ದಾರೆ. ನಾಗ್ಪುರ, ದೆಹಲಿ ಮತ್ತು ಪುಣೆಯಲ್ಲಿನ ಐಟಿ ದಾಳಿಗೆ ಕಾರಣರ್ಯಾರು ಎಂಬ ಬಗ್ಗೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಅಲ್ಲಿ ಕೇವಲ ಒಬ್ಬ ಯಜಮಾನನಿದ್ದಾನೆ, ಉಳಿದವರೆಲ್ಲಾ ಆತನ ಗುಲಾಮರು ಎಂದಿದ್ದಾರೆ.