ಸಿಂಗಾಪುರ: ಭಾರಿ ಶ್ರೀಮಂತರಿಗೆ ಈ ಬಾರಿಯ ಬಜೆಟ್ನಲ್ಲಿ ಕಹಿ ಸುದ್ದಿ ಬಂದರೂ ಅಚ್ಚರಿ ಇಲ್ಲ. ಕೇಂದ್ರ ಸರ್ಕಾರ ಅವರ ಮೇಲೆ ಹೆಚ್ಚಿನ ತೆರಿಗೆ ಹೊರೆ ಹೇರಲು ನಿರ್ಧಾರ ಮಾಡಿದೆ.
ಇಂಥ ಸುಳಿವನ್ನು ಬಿಟ್ಟುಕೊಟ್ಟದ್ದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ. ಸಿಂಗಾಪುರದಲ್ಲಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಭಾರಿ ಶ್ರೀಮಂತರಿಗೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಿಧಿಸಬೇಕೆಂಬ ಬಗ್ಗೆ ಒತ್ತಾಯವಿದೆ. ಈಗಾಗಲೇ ಅವರು ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಈಗಿನ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಪಾವತಿ ಮಾಡುವ ಅಗತ್ಯ ಬೀಳಬಹುದೆಂದು' ಚಿದಂಬರಂ ಹೇಳಿದ್ದಾರೆ.
ಸ್ಥಿರವಾಗಿರುವ ತೆರಿಗೆ ಪದ್ಧತಿ: ದೇಶದಲ್ಲಿ ಸ್ಥಿರವಾಗಿರುವ ತೆರಿಗೆ ಪದ್ಧತಿ ಜಾರಿಯಲ್ಲಿರಬೇಕೆಂದು ಬಯಸುವುದಾಗಿ ಚಿದಂಬರಂ ಹೇಳಿದ್ದಾರೆ. ಹಣಕಾಸು ಕ್ಷೇತ್ರದ ಅಗತ್ಯಕ್ಕೆ ಅನುಗುಣವಾಗಿ ಸಂಪನ್ಮೂಲಗಳನ್ನು ರೂಢಿಸಿಕೊಳ್ಳಬೇಕು. ಇದಕ್ಕಾಗಿ ಹೆಚ್ಚಿನ ತೆರಿಗೆ ವಿಧಿಸಬೇಕಾಗುತ್ತದೆ ಎಂದು ಚಿದು ಪ್ರತಿಪಾದಿಸಿದರು. ಹೀಗೆನ್ನುವ ಮೂಲಕ ಸಿರಿವಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಪ್ರಸ್ತಾಪವನ್ನು ಗಂಭೀರವಾಗಿಯೇ ಪರಿಗಣಿಸಿದೆ ಎನ್ನುವುದನ್ನು ಪರೋಕ್ಷವಾಗಿ ಪುಷ್ಟೀಕರಿಸಿದ್ದಾರೆ.