ಮೀನು, ಮಾಂಸ, ಹಣ್ಣು, ತರಕಾರಿಗಳು ಬೇಗನೆ ಕೊಳೆತುಹೋಗುವ ವಸ್ತುಗಳು. ಹಾಳಾದ ಬಳಿಕ ಅವುಗಳನ್ನು ಸೇವಿಸಿದರೆ ಹಲವು ರೀತಿಯ ಅನಾರೋಗ್ಯಕ್ಕೆ ಕಾರಣವಾಗಬಹುದು. ಬ್ಯಾಕ್ಟೀರಿಯಾಗಳಿಂದಾಗಿಯೇ ಆಹಾರ ವಸ್ತುಗಳು ಕೆಡುತ್ತವೆ. ಆಹಾರವನ್ನು ತಿನ್ನುವ ಬ್ಯಾಕ್ಟೀರಿಯಾಗಳು ಅದರಲ್ಲೇ ಜೀವಿಸುತ್ತವೆ. ಅವುಗಳ ಬೆಳವಣಿಗೆಗೆ ಕಡಿವಾಣ ಹಾಕಿ ಆಹಾರವಸ್ತುಗಳನ್ನು ಸಂರಕ್ಷಿಸುವ ವಿಧಾನ ಇಲ್ಲಿದೆ.
ಕಡಿಮೆ ಉಷ್ಣಾಂಶದಲ್ಲಿ
ಕಡಿಮೆ ಉಷ್ಣಾಂಶದಲ್ಲಿ ಅಂದರೆ ಫ್ರಿಜ್‌ನಲ್ಲಿ ಆಹಾರ ವಸ್ತುಗಳನ್ನಿಟ್ಟರೆ ಅದು ಬೇಗನೆ ಕೆಡುವುದಿಲ್ಲ. ಮಾಂಸ, ಮೀನು, ತರಕಾರಿ, ಹಣ್ಣುಗಳು ಮತ್ತಿತರ ವಸ್ತುಗಳನ್ನು ಹಾಳಾಗದಂತೆ ಹಲ ದಿನಗಳ ಕಾಲ ಇಡಬಹುದು. ರೆಫ್ರಿಜರೇಟರ್‌ನಲ್ಲಿಟ್ಟರೆ ಆಹಾರ ವಸ್ತುಗಳಲ್ಲಿ ಬ್ಯಾಕ್ಟೀರಿಯಾಗಳ ಕಾರ್ಯ ನಿಧಾನವಾಗುತ್ತದೆ. ಫ್ರೀಜರ್‌ನಲ್ಲಿಟ್ಟರೆ ಬ್ಯಾಕ್ಟೀರಿಯಾಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗುತ್ತವೆ.
ಒಣಗಿಸುವ ಮೂಲಕ
ಒಣಗಿಸುವ ಮೂಲಕ ಕೆಲವು ಆಹಾರ ವಸ್ತುಗಳನ್ನು ಸಂರಕ್ಷಿಸಿಡಬಹುದು. ಮೀನು, ಮಾಂಸಗಳನ್ನು ಹೆಚ್ಚಾಗಿ ಒಣಗಿಸಿಡಲಾಗುತ್ತದೆ. ದ್ವಿದಳ ಧಾನ್ಯಗಳನ್ನೂ ಇದೀ ರೀತಿ ಸಂರಕ್ಷಿಸಲಾಗುತ್ತದೆ. ಇವು ದೀರ್ಘಕಾಲದವರೆಗೆ ಹಾಳಾಗುವುದಿಲ್ಲ.
ನಿರ್ಜಲೀಕರಣ: ಕೆಲವು ವಸ್ತುಗಳನ್ನು ನಿರ್ಜಲೀಕರಣ ಮಾಡಿ ಸಂರಕ್ಷಿಸಿಡಬಹುದು. ಒಣ ಹಣ್ಣುಗಳು, ಬಾಕ್ಸ್‌ನಲ್ಲಿಟ್ಟ ಆಲೂಗಡ್ಡೆ, ಒಣಗಿಸಿದ ತರಕಾರಿಗಳು, ಹಾಲಿನ ಪುಡಿ, ಪಾಸ್ತಾ, ಸೂಪ್ ಪುಡಿ, ಸಾಸ್ ಪೌಡರ್ ಮುಂತಾದವುಗಳು ನಿರ್ಜಲೀಕರಣಗೊಳಿಸಿದ ವಸ್ತುಗಳು. ಆಹಾರ ವಸ್ತುವನ್ನು ಒಣಗಿಸಿದರೆ ಬ್ಯಾಕ್ಟೀರಿಯಾ ನಿಷ್ಕ್ರಿಯಗೊಳ್ಳುತ್ತವೆ.
ಸಂರಕ್ಷಕ ವಸ್ತುಗಳು
ಆಹಾರಗಳನ್ನು ಸಂರಕ್ಷಿಸಿಡಲು ಬಳಸುವ ವಸ್ತುಗಳನ್ನು ಸಂರಕ್ಷಕ ವಸ್ತುಗಳೆಂದು ಕರೆಯುತ್ತಾರೆ. ಉದಾಹರಣೆಗೆ, ಸಕ್ಕರೆ, ಉಪ್ಪು, ಸಂಬಾರ ಪದಾರ್ಥಗಳು, ವಿನೆಗರ್ ಇತ್ಯಾದಿ. ಹೊಗೆಯ ಮೂಲಕವೂ ಕೆಲ ವಸ್ತುಗಳನ್ನು ಸಂರಕ್ಷಿಸಬಹುದು. ಉದಾ: ಹಂದಿ ಮಾಂಸ. ಕೆಲವೊಂದು ಹಣ್ಣುಗಳನ್ನು ಸಕ್ಕರೆ ಹಾಕಿ ಸಂರಕ್ಷಿಸಲಾಗುತ್ತದೆ.
ಉಪ್ಪು: ಉಪ್ಪು ಹಾಕಿ ಸಂರಕ್ಷಿಸಿಡುವುದು ಪುರಾತನ ವಿಧಾನವಾಗಿದೆ. ಉಪ್ಪಿನ ವಾತಾವರಣದಲ್ಲಿ ಬ್ಯಾಕ್ಟೀರಿಯಾಗಳು ಉಳಿಯುವುದಿಲ್ಲ. ಹಾಗಾಗಿ ಉಪ್ಪು ಹಾಕಿಟ್ಟ ಮಾಂಸವು ಬಹಳಷ್ಟು ದಿನ ಬಾಳಿಕೆ ಬರುತ್ತದೆ. ಜತೆಗೆ, ಆಹಾರದಲ್ಲಿನ ತೇವಾಂಶವನ್ನೂ ಉಪ್ಪು ಹೀರುತ್ತದೆ.
ಗಾಳಿ ಹೊರತೆಗೆಯುವಿಕೆ
ಗಾಳಿಯು ತಾಗದಂತೆ ಆಹಾರ ವಸ್ತುಗಳನ್ನು ಸಂರಕ್ಷಿಸಿಡುವ ಮೂಲಕವೂ ಅವುಗಳನ್ನು ಕೆಡದಂತೆ ಕಾಪಾಡಬಹುದು. ಕ್ಯಾನ್‌ನಲ್ಲಿ ಬರುವ ವಸ್ತುಗಳನ್ನು ಇದೇ ರೀತಿ ಮಾಡಲಾಗಿರುತ್ತದೆ. ಕ್ಯಾನ್‌ನಲ್ಲಿಡಲಾದ ವಸ್ತುಗಳನ್ನು ತಣ್ಣಗಿನ, ಒಣ ಪ್ರದೇಶದಲ್ಲಿ ಇಡಬೇಕು.
ಟ ಕ್ಯಾನಿಂಗ್: 1825ರಿಂದಲೂ ಈ ವಿಧಾನ ಚಾಲ್ತಿಯಲ್ಲಿದೆ. ಜನರು ದೀರ್ಘಕಾಲ ಕ್ಯಾನ್‌ಗಳಲ್ಲಿ ವಸ್ತುಗಳನ್ನು ಸಂರಕ್ಷಿಸಿಡುತ್ತಿದ್ದರು. ಕ್ಯಾನ್‌ನಲ್ಲಿನ ಆಹಾರವನ್ನು ಮೊದಲು ಕುದಿಸಿ, ಬ್ಯಾಕ್ಟೀರಿಯಾಗಳನ್ನು ನಾಶಮಾಡಲಾಗುತ್ತದೆ. ಅದರ ಜತೆಗೇ, ಕ್ಯಾನ್‌ಗೆ ಗಾಳಿ ಒಳಹೋಗದಂತೆ ಗಟ್ಟಿಯಾದ ಮುಚ್ಚಳ ಹಾಕಲಾಗುತ್ತದೆ.
Advertisement