ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ ಜೊತೆ ವಿಧಾನಸಭಾ ಚುನಾವಣೆಗಾಗಿ ಮೈತ್ರಿ ಮಾಡಿಕೊಳ್ಳುವ ಸಂಬಂಧ ಸದ್ಯದಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜ್ನಾಥ್ ಸಿಂಗ್ ಜೊತೆ ಮಾತುಕತೆ ನಡೆಸುವುದಾಗಿ ಜೆಡಿಯು ನಾಯಕ ಕೆ.ಸಿ. ತ್ಯಾಗಿ ಹೇಳಿದ್ದಾರೆ.
ಪಕ್ಷವು ತಮಗೆ ಈ ಬಗ್ಗೆ ಜವಾಬ್ದಾರಿ ವಹಿಸಿದ್ದು, ಹೋಳಿ ಹಬ್ಬ ಮುಗಿದ ಬಳಿಕ ರಾಜ್ನಾಥ್ ಸಿಂಗ್ ಜೊತೆ ಚರ್ಚಿಸುವುದಾಗಿ ಅವರು ಹೇಳಿದ್ದಾರೆ.
ಕಳೆದ ಬಾರಿ ಕೆಲವೊಂದು ಗೊಂದಲಗಳಿಂದಾಗಿ ಮೈತ್ರಿ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಇಂಥ ಗೊಂದಲಗಳಿಗೆ ಅವಕಾಶ ಕೊಡುವುದಿಲ್ಲ. ಬಿಜೆಪಿ ಕೂಡ ಕಳೆದ ಬಾರಿ ಇದ್ದಷ್ಟು ಶಕ್ತಿಯುತವಾಗಿ ಈ ಬಾರಿ ಇಲ್ಲ. ಹಾಗಾಗಿ ಆ ಪಕ್ಷದ ಜೊತೆ ಮೈತ್ರಿ ಸಂಬಂಧ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
ಒಂದು ವೇಳೆ ಮೈತ್ರಿ ಸಾಧ್ಯವಾಗದೇ ಹೋದಲ್ಲಿ, ಏಕಾಂಗಿಯಾಗಿ ಪಕ್ಷ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.
ಏ.14ಕ್ಕೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಇದೇ ವೇಳೆ ಮಾತನಾಡಿದ ತ್ಯಾಗಿ ಅವರು, ಏ.14ಕ್ಕೆ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದಿದ್ದಾರೆ. ಹಾಲಿ ಅಧ್ಯಕ್ಷ ಶರದ್ ಯಾದವ್ ಅವರ ಅವಧಿ ಸದ್ಯದಲ್ಲೇ ಮುಕ್ತಾಯವಾಗಲಿದ್ದು, ಹೀಗಾಗಿ ಚುನಾವಣೆ ನಡೆಯಲಿದೆ ಎಂದಿದ್ದಾರೆ.
ನಾವು ಎನ್ಡಿಎ ಬಿಡುತ್ತಿಲ್ಲ: ಯುಪಿಎ ಸರ್ಕಾರ ಬಿಹಾರಕ್ಕೆ ವಿಶೇಷ ಸ್ಥಾನ ಮಾನ ನೀಡುವ ಬಗ್ಗೆ ಚಿಂತನೆ ನಡೆಸುವುದಕ್ಕೂ ನಾವು ಯುಪಿಎ ಸೇರುತ್ತೇವೆ ಎಂಬ ವದಂತಿಗೂ ಯಾವುದೇ ಸಂಬಂಧವಿಲ್ಲ ಎಂದು ತ್ಯಾಗಿ ಹೇಳಿದ್ದಾರೆ. ನಾವು ಎನ್ಡಿಎನಲ್ಲೇ ಇದ್ದೇವೆ. ಯಾವುದೇ ಕಾರಣಕ್ಕೂ ಈ ಒಕ್ಕೂಟ ಬಿಡುವುದಿಲ್ಲ. ನಾವು ಯುಪಿಎ ಸೇರಲಿದ್ದೇವೆ ಎಂಬುದೆಲ್ಲಾ ಕೇವಲ ವದಂತಿಯಷ್ಟೇ ಎಂದು ಹೇಳಿದ್ದಾರೆ.