ಇಂದು ಹನುಮ ಜಯಂತಿ

ಹನುಮನಿಲ್ಲದ ಹಳ್ಳಿಯಿಲ್ಲ ಎಂಬ ಮಾತೇ ಇದೆ. ನಮ್ಮನ್ನು ಅನಾದಿಯಿಂದ ಕಾಪಾಡಿಕೊಂಡು...
ಅಂಜನಾ ದೇವಿ ಪುತ್ರ  ಹನುಮ
ಅಂಜನಾ ದೇವಿ ಪುತ್ರ ಹನುಮ
Updated on

ಹನುಮನಿಲ್ಲದ ಹಳ್ಳಿಯಿಲ್ಲ ಎಂಬ ಮಾತೇ ಇದೆ. ನಮ್ಮನ್ನು ಅನಾದಿಯಿಂದ ಕಾಪಾಡಿಕೊಂಡು ಬಂದಿರುವ ರಕ್ಷಕನಾತ.

ಯಾವುದೇ ಶಿಷ್ಟ ಪಂಥದ ದೇವರಲ್ಲ. ಇವನ ಭಕ್ತಕೋಟಿಯಲ್ಲಿ ಜಾತಿಭೇದ, ಲಿಂಗಭೇದ, ವಯೋಭೇದಗಳಿಲ್ಲ. ನಿಷ್ಕಾಮ ಕರ್ಮಕ್ಕೆ ಪರ್ಯಾಯನಾಮ ಮಾರುತಿ. ಈತ ವಿಷ್ಣುವಿನ ಭಕ್ತ.

ಶ್ವಾಸಕ್ರಿಯೆ ನಮ್ಮ ಬದುಕಿಗೆ ಮುಖ್ಯ ಶಕ್ತಿ. ಅದರ ನಿಯಂತ್ರಣದಿಂದಲೇ ಸಕಲೇಂದ್ರಿಯಗಳ ವ್ಯಾಪಾರ, ಶ್ವಾಸರೂಪದಿಂದ ಜಗತ್ತನ್ನು ಬದುಕಿಸುವುದು ಇವನ ಮತ್ತೊಂದು ಹಿರಿಮೆ. ಹನುಮಂತನ ಜೀವನ ಪರೋಪಕಾರಕ್ಕೆ ಮುಡಿಪಾದ ಜೀವನ. ಅವನ ಜ್ಞಾನದ ರಾಶಿ ಶತ್ರುಗಳಿಗೆ ಅಗ್ನಿಯಂತೆ, ಅವನ ಸ್ಥಾನ ರಾಮಚಂದ್ರನ ಹೃದಯದಲ್ಲಿ, ಅವನದು ಲೋಕಪಾವನ ಚರಿತ್ರೆ. ರಾಮಾಯಣದ ಜೀಜಕಾಂಡವಾಗಿರುವ ಸುಂದರಕಾಂಡದ ಪಾರಾಯಣದಿಂದ ಮನಸ್ಸು ಆನಂದ ಪಡೆಯುತ್ತದೆ. ದುಃಸ್ವಪ್ನ, ಗ್ರಹಚಾರಪೀಡೆ, ವಿಷಮ ರೋಗ, ಅಗ್ನಿಭಯ, ಚೋರಪೀಡೆ, ಅನಿಷ್ಟಗಳು ದೂರವಾಗುತ್ತವೆ. ಧರ್ಮಾರ್ಥಕಾಮಗಳು ಸಿದ್ಧಿಸುತ್ತದೆ ಎಂದು ಅಗಸ್ತ್ಯ ಸಂಹಿತೆ ಅಭಯ ನೀಡುತ್ತದೆ.

ಹನುಮಂತನಾದದ್ದು...

ಆಂಜನೇಯನ ಉಲ್ಲೇಖ ವೈದಿಕ ಸಾಹಿತ್ಯದಲ್ಲೇ ಲಭಿಸುತ್ತದೆ. ಪುರಾಣಗಳಲ್ಲಿ ಅವನು ಕೇಸರಿಯೆಂಬ ವಾನರ ರಾಜನ ಮಡದಿ ಅಂಜನಾದೇಯೆಂಬ ಅಪ್ಸರೆಯಲ್ಲಿ ವಾಯುನ ಅಂಶದಿಂದ ಜನ್ಮ ತಾಳಿದನೆಂದು ಹೇಳಲಾಗಿದೆ.

ಅಂಜನಾ ದೇವಿಯು ಪುಂಜಿಕಸ್ಥಲೆಯೆಂಬ ಅಪ್ಸರೆಯಾಗಿದ್ದಳು. ಹನುಮಂತನ ಕಲ್ಪನೆಯಲ್ಲಿ ಹಾಸುಹೊಕ್ಕಾಗಿರುವ ವಿವರಗಳು ವೇದವಾಙ್ಮಯದಲ್ಲಿ ಹಲವಾರಿವೆ. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಹನುಮಂತನ ಸ್ವಾರಸ್ಯ ಇಮ್ಮಡಿಸುತ್ತದೆ. ಮಗುವಾಗಿದ್ದಾಗ ಸೂರ್ಯನನ್ನು ಹಿಡಿದು ಬಾಯೊಳಗೆ ಅಡಗಿಸಿಕೊಂಡನೆಂದು ಕತ್ತಲೆ ಉಂಟಾಯಿತು. ಇಂದ್ರನಿಗೆ ರೋಷ ಬಂದು ಅವನ ವಜ್ರಾಯುಧದ ಪ್ರಹಾರದಿಂದ ಹನು (ದವಡೆ) ದೊಡ್ಡದಾಯಿತು. ಹೀಗಾಗಿ ಅವನಿಗೆ ಹನುಮಂತ ಎಂಬ ಹೆಸರು ಬಂತು. ಆಚಾರ್ಯ ಮಧ್ವರ ಒಕ್ಕಣೆಯಂತೆ ಹನುಮನೆಂದರೆ ಜ್ಞಾನ ಅಂದರೆ ಬುದ್ಧಿಮತಾಂ ವರಿಷ್ಠ, ಪೂರ್ಣಪ್ರಜ್ಞ.

ಹರಿದಾಸರು ಕಂಡ ಹನುಮ

ದಾಸ್ಯ ಭಕ್ತಿಯ ಮೂರ್ತ ಸ್ವರೂಪನಾದ ಮಾರುತಿ ಕರ್ನಾಟಕದ ಹರಿದಾಸರಿಗೆ ಸಾಕ್ಷಾತ್ ಗುರುಸ್ವರೂಪಿ. ತ್ರೇತೆಯಲ್ಲಿ ಹನುಮಂತ ದ್ವಾಪರದಿ ಭೀಮಣ್ಣ ಕಲಿಯುಗದಿ ಗುರುಮಧ್ವರಾಗಿ ಅವತರಿಸಿದರು ಎಂದು ಪ್ರತೀತಿ. ಹರಿಸರ್ವೋತ್ತಮ ವಾಯು ಜೀವೋತ್ತಮ ತತ್ವ ಮಧ್ವ ಮತದ ಪ್ರಮುಖ ಅಂಶ. ದಾಸರ ಪ್ರಕಾರ ಅಹವಾಲನ್ನು ಶ್ರೀಹರಿಗೆ ಮುಟ್ಟಿಸುವ ಬಂಟ ಹನುಮ. ಹನುಮಂತ ಪುರಂದರ ವಿಠಲನದಾಸ. ಆದರೂ ಹರಿಯ ವಾಸ ಹನಮಂತನಲ್ಲೇ. ಆದ್ದರಿಂದ ದ್ವೈತಮತಾನುಯಾಯಿಗಳು ತಮ್ಮ ಎಲ್ಲ ಕೋರಿಕೆಗಳನ್ನು 'ಭಾರಾತೀರಮಣ ಮುಖ್ಯ ಪ್ರಾಣಾಂತರ್ಗತವಾದ' ಶ್ರೀ ಹರಿಗೆ ಸಲ್ಲಿಸುವುದು.

-ಗುರುರಾಜ ಪೋಶೆಟ್ಟಿ ಹಳ್ಳಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com