
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ವಿಮಾ ವಿಧೇಯಕಕ್ಕೆ ಬೆಂಬಲ ನೀಡಲು ನಿರ್ಧರಿಸಿದೆ.
ಲೋಕಸಭೆಯಲ್ಲಿ ಬಿಜೆಪಿಗೆ ಈ ವಿಧೇಯಕ ಅಂಗೀಕಾರ ಮಾಡಿಕೊಳ್ಳಲು ಚಿಂತೆಯಿಲ್ಲ. ಆದರೆ ರಾಜ್ಯಸಭೆಯಲ್ಲಿ ಎನ್‌ಡಿಎ ಬಹುಮತದ ಕೊರತೆ ಅನುಭವಿಸುತ್ತಿದೆ. ಹೀಗಾಗಿ ಈ ವಿಧೇಯಕ ಪಾಸಾಗಲು ಮೋದಿ ಸರ್ಕಾರಕ್ಕೆ ಪ್ರತಿಪಕ್ಷಗಳ ಬೆಂಬಲ ಬೇಕೇ ಬೇಕು. ಹೀಗಾಗಿ ಸರ್ಕಾರ ಕಾಂಗ್ರೆಸ್ ಜತೆ ಮಾತುಕತೆಯನ್ನೂ ನಡೆಸಿತ್ತು. ಇದು ಫಲ ನೀಡಿದ್ದು ವಿಮಾ ವಿಧೇಯಕ ಕೈ ಹಿಡಿಯಲು ಅದು ಒಪ್ಪಿದೆ.
ಏಕೆ ಒಪ್ಪಿಗೆ?: ಕಾಲ ಬದಲಾದಂತೆ ರಾಜಕೀಯ ಕೂಡ ಬದಲಾಗುತ್ತದೆ ಎಂಬುದು ಕನ್ನಡಿಯಷ್ಟೇ ಸತ್ಯ. ಯುಪಿಎ ಸರ್ಕಾರದ ಅವಧಿಯಲ್ಲೇ ಈ ವಿಧೇಯಕವನ್ನು ಮಂಡಿಸಲಾಗಿತ್ತು. ಆದರೆ ಆಗ ಈ ವಿಧೇಯಕಕ್ಕೆ ಬಿಜೆಪಿ ವಿರೋಧಿಸಿತ್ತು!
ಇದೀಗ ಕಾಲದ ಅನುಗುಣವಾಗಿ ಸರ್ಕಾರ ಕೂಡ ಬದಲಾಗಿದೆ. ಆಗ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಈಗ ಸರ್ಕಾರ ನಡೆಸುತ್ತಿದ್ದು, ವಿಧೇಯಕವನ್ನು ಅದೇ ರೂಪದಲ್ಲಿ ಮಂಡಿಸಲು ಯತ್ನಿಸುತ್ತಿದೆ. ಮೊದಲಿಗೆ 'ರಾಜಕೀಯ'ದಂತೆ ವಿರೋಧ ಮಾಡುವುದಾಗಿ ಹೇಳಿದೆ. ಇದಕ್ಕೆ ಕಾರಣವನ್ನೂ ನೀಡಿರುವ ಅದು, ತನ್ನದೇ ಕೂಸಾಗಿರುವ ವಿಧೇಯಕವನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಇದಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದೆ.
ಇದು ಯುಪಿಎ ಸರ್ಕಾರದ ಕನಸಿನ ಕೂಸು, ಇದಷ್ಟೇ ಅಲ್ಲ, ಜಿಎಸ್‌ಟಿ ವಿಧೇಯಕ ಕೂಡ ಅವರದ್ದೇ ಕೂಸು. ಕಳೆದ ವಾರವೇ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನುಸಿಂಘ್ವಿ ಈ ಬಗ್ಗೆ ಸುಳಿವು ನೀಡಿದ್ದರು. ನಮ್ಮ ಬೇಡಿಕೆಗಳಿಗೆ ಸರ್ಕಾರ ಒಪ್ಪಿದಲ್ಲಿ ನಾವು ಈ ವಿಧೇಯಕಗಳಿಗೆ ಒಪ್ಪಿಗೆ ನೀಡುತ್ತೇವೆ. ಎಷ್ಟೇ ಆಗಲಿ ಅವು ನಮ್ಮ ಕೂಸುಗಳಲ್ಲವೇ ಎಂದಿದ್ದರು.
ಏನಿದು ವಿಧೇಯಕ?: ವಿಮಾ ಕ್ಷೇತ್ರದಲ್ಲಿ ಸದ್ಯ ಶೇ.26ರಷ್ಟು ವಿದೇಶಿ ಬಂಡವಾಳ ಆಕರ್ಷಿಸುವ ಅವಕಾಶವಿದೆ. ಇದನ್ನು ಶೇ.49ಕ್ಕೆ ಏರಿಸುವ ಇರಾದೆ ಹಿಂದಿನ ಸರ್ಕಾರಕ್ಕೆ ಇತ್ತು. ಹೀಗಾಗಿಯೇ ವಿಮಾ ವಿಧೇಯಕವನ್ನು ಸಿದ್ಧಪಡಿಸಲಾಗಿತ್ತು.
ಡಿ.12ಕ್ಕೆ ವರದಿ ಸಲ್ಲಿಕೆ: ವಿಮಾ ವಿಧೇಯಕ ಸಂಬಂಧ ರಚಿಸಲಾಗಿದ್ದ ಸಂಸದೀಯ ಸಮಿತಿ ಇದೇ 12ಕ್ಕೆ ವರದಿ ಸಲ್ಲಿಸಲಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮಂಡಿಸಲಾಗಿದ್ದ 88 ತಿದ್ದುಪಡಿಗಳಿಗೆ ಈ ಸಮಿತಿ ಒಪ್ಪಿಗೆ ನೀಡಿದೆ ಎನ್ನಲಾಗಿದೆ.
ಹೀಗಾಗಿ ಈ ವಿಧೇಯಕಕ್ಕೆ ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಚಳಿಗಾಲದ ಅಧಿವೇಶನದಲ್ಲೇ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.
Advertisement