
ನವದೆಹಲಿ: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಮತ್ತೆ ಹೆಚ್ಚಿಸಿದೆ.
ಪೆಟ್ರೋಲ್ ರು.2.25 ಮತ್ತು ಡೀಸೆಲ್ ಅಬಕಾರಿ ಸುಂಕವನ್ನು ರು. 1ರಷ್ಟು ಹೆಚ್ಚಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಸತತ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಆದಾಯ ಸಂಗ್ರಹದ ಗುರಿಯನ್ನು ಹೆಚ್ಚಿಸಿಕೊಳ್ಳಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಆದರೆ, ಈ ಸುಂಕ ಹೆಚ್ಚಳದ ಬಿಸಿ ಗ್ರಾಹಕರ ಮೇಲೆ ಬೀಳುವುದಿಲ್ಲ ಎನ್ನುವುದೇ ಖುಷಿ. ಈ ಹೊಸ ಸುಂಕ ಪರಿಷ್ಕರಣೆ ಮಂಗಳವಾರದಿಂದಲೇ ಅನುಷ್ಠಾನಕ್ಕೆ ಬರಲಿದೆ. ನ.12 ರಂದು ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ರು.1.50 ರಷ್ಟು ಹೆಚ್ಚಿಸಿತ್ತು. ಇದೀಗ ಸುಂಕ ಹೆಚ್ಚಿಸುತ್ತಿರುವುದು ಇದು ಎರಡನೇ ಬಾರಿ.
ಅಬಕಾರಿ ಸುಂಕ ಪರಿಷ್ಕರಣೆಯಿಂದ ಈ ಹಣಕಾಸು ವರ್ಷದಲ್ಲಿ ಹೆಚ್ಚುವರಿ ರು.4 ಸಾವಿರ ಕೋಟಿ ಆದಾಯ ಸಂಗ್ರಹವಾಗಲಿದೆ. ಈ ಹಿಂದಿನ ಸುಂಕ ಹೆಚ್ಚಳ ನಿರ್ಧಾರದಿಂದ ಸರ್ಕಾರ ರು.6 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆ ಇದೆ. ಈ ಮೂಲಕ ವಿತ್ತೀಯ ಕೊರತೆಯ ಸಮಸ್ಯೆಯಿಂದ ಕಂಗೆಟ್ಟಿರುವ ಸರ್ಕಾರಕ್ಕೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.
Advertisement