ಬಾಬ್ರಿ ಉಸಾಬರಿ ಬೇಡ

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಡಿಸೆಂಬರ್ 6ಕ್ಕೆ ಭರ್ತಿ...
ಹಾಶಿಮ್ ಅನ್ಸಾರಿ
ಹಾಶಿಮ್ ಅನ್ಸಾರಿ
Updated on

ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಡಿಸೆಂಬರ್ 6ಕ್ಕೆ ಭರ್ತಿ ಇಪ್ಪತ್ತೆರಡು ವರ್ಷ. ಆದರೆ, ಪ್ರಕರಣಕ್ಕೆ ಸಂಬಂಧಇಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ ಕಳೆದ ಅರವತ್ತು ವರ್ಷಗಳಿಂದ ಸರ್ವೋಚ್ಛ ನ್ಯಾಯಾಲಯದೆದುರು ಪಟ್ಟು ಹಿಡಿದು ಕೂತಿದ್ದ ಮುಖ್ಯ ಅರ್ಜಿದಾರರಲ್ಲಿ ಒಬ್ಬರಾದ ಮೊದಮದ್ ಹಾಶಿಮ್ ಅನ್ಸಾರಿ ತಾವು ಕೇಸಿನಿಂದ ಹಿಂದೆ ಸರಿಯಲು ನಿರ್ಧರಿಸಿರುವುದಾಗಿ ತಿಳಿಸಿ ಅಚ್ಚರಿ ಮೂಡಿಸಿದ್ದಾರೆ.

ಇಡೀ ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವುದರಿಂದ ತಾವು ಅತೀವ ಬೇಸರಗೊಂಡು ಈ ನಿರ್ಧಾರಕ್ಕೆ ಬಂದಿರುವುದಾಗಿ ಅನ್ಸಾರಿ ತಿಳಿಸಿದ್ದಾರೆ. ರಾಮ್ ಲಲ್ಲಾ ಜಾಗವನ್ನು ಕೂಡ ಯಥಾಸ್ಥಿತಿಯಲ್ಲಿ ಬಿಟ್ಟು ಬಿಡಲು ಮನವಿ ಮಾಡಿರುವ ಅನ್ಸಾರಿ, ದೀರ್ಘಕಾಲದ ವಿವಾದಕ್ಕೆ ಇತಿಶ್ರೀ ಹಾಡಲು ಇದು ಸಕಾಲ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಜಮ್ ಖಾನ್‌ರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅನ್ಸಾರಿ, ಬಾಬರಿಮಸೀದಿ ವಿಷಯದಲ್ಲಿ ಕೋಮುಗಲಭೆಗಳು ಹೆಚ್ಚಾಗಲು ಆಜಮ್ ಖಾನ್ ಅವರೇ ನೇರ ಕಾರಣ ಎಂದು ದೂಷಿಸಿದರು. ಆಜಮ್ ಖಾನ್‌ಗೆ ನಿಜವಾದ ಕಾಳಜಿಯಿದ್ದಲ್ಲಿ ಅವರು ರಾಜಕೀಯ ಮುಕ್ತವಾಗಿ ನ್ಯಾಯಕ್ಕಾಗಿ ಹೋರಾಡಲಿ ಎಂದು ಗುಡುಗಿದ ಅನ್ಸಾರಿ, 22ನೇ ವರ್ಷದ ಸ್ಮರಣಾಚರಣೆಯಲ್ಲೂ ತಾವು ಭಾಗಿಯಾಗುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದರು.

1959ರಲ್ಲಿ ಫೈಸಲಾಬಾದ್ ಕೋರ್ಟಿನಲ್ಲಿ ದೂರು ಅರ್ಜಿ ಸಲ್ಲಿಸಿದ್ದ ಅನ್ಸಾರಿಗೆ ಈಗ ವಯಸ್ಸು 92 ವರ್ಷ.

ಹಲವು ವರ್ಷಗಳಿಂದಲೂ ತಮ್ಮ ವಿವಾದಿತ ಹೇಳಿಕೆಗಳಿಂದ ಸುದ್ದಿಯಲ್ಲಿದ್ದ ಅನ್ಸಾರಿ ಕಳೆದ ಡಿಸೆಂಬರ್‌ನಲ್ಲಿ ಕಾಂಗ್ರಸ್ಸಿನವರು ಮುಸ್ಲಿಮರಲ್ಲಿ ನರೇಂದ್ರ ಮೋದಿಯ ಬಗ್ಗೆ ಭಟ ಹುಟ್ಟಿಸುತ್ತಿದ್ದಾರೆಂದೂ, ನರೇಂದ್ರ ಮೋದಿಯ ಅಧಿಕಾರಕ್ಕೆ ತರಲಿಕ್ಕಾಗಿ ಮುಸ್ಲಿಮರೆಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು ಎಂಬ ಹೇಳಿಕೆ ನೀಡಿ ಅಲ್ಪಸಂಖ್ಯಾತರ ಕೆಂಗಣ್ಣಿಕೂ ಗುರಿಯಾಗಿದ್ದರು.

ಅನ್ಸಾರಿ ನಿರ್ಧಾರವನ್ನು ಶ್ಲಾಘಿಸಿರುವ ಉತ್ತರ ಪ್ರದೇಶ ಬಿಜೆಪಿ ನಾಯಕ ಯೋಗಿ ಆದಿತ್ಯ ನಾಥ್ 'ಈ ನಿರ್ಧಾರಕ್ಕಾಗಿ ಅನ್ಸಾರಿಯವರನ್ನು ನಾನು ಅಭಿನಂದಿಸುತ್ತೇನೆ. ಅಷ್ಟೇ ಅಲ್ಲ ವಾಸ್ತವವನ್ನು ಒಪ್ಪಿಕೊಂಡುವ ಅವರನ್ನು ಗೌರವಿಸುತ್ತೇನೆ. ರಾಜಕೀಯಗೊಳಿಸಲಾಗುತ್ತಿರುವ ಈ ಪ್ರಕರಣದಿಂದ ಎಲ್ಲರೂ ಹಿನ್ನೆಡೆದು ವಿವಾದಕ್ಕೆ ಕೊನೆ ಹಾಡಿದರೆ ಅದಕ್ಕಿಂತ ಸಂತಸ ಇನ್ನೊಂದಿಲ್ಲ' ಎಂದರು.

ರಾಮ್ ಲಲ್ಲಾ ಅಂದರೇನು?


ವಿವಾದಿತ ಜಾಗದಲ್ಲಿ 1992ರ ಡಿಸೆಂಬರ್ 6 ರಂದು ಬಾಬರಿ ಮಸೀದಿ ಧ್ವಂಸಗೊಳಿಸಲ್ಪಟ್ಟಾಗ ದೇಶಾದ್ಯಂತ ಭಾರೀ ಹಿಂಸಾತ್ಮಕ ಚಟುವಟಿಕೆಗಳು ನಡೆದು ಸಾವುನೋವುಗಳಾಗಿತ್ತು. 2010ರಲ್ಲಿ ಅಲಹಾಬಾದ್ ಕೋರ್ಟ್‌ನ ಲಕ್ನೋ ಪೀಠ, ವಿವಾದಿತ ಜಾಗವನ್ನು ಮೂರು ಸಮಭಾಗ ಮಾಡಿ ರಾಮ್‌ಲಲ್ಲಾ, ನಿರ್ಮೋಹಿ ಅಖಾಡ ಮತ್ತು ಸುನ್ನಿ ವಕ್ಫ್ ಬೋರ್ಡ್ ಎಂದು ವಿಂಗಡಿಸಿಕೊಟ್ಟಿತ್ತು. ಇದರಿಂದ ಹಿಂದೂ ಮತ್ತು ಮುಸಲ್ಮಾನ ಎರಡೂ ಪಂಗಡಗಳು ಅಸಮಾಧಾನಗೊಂಡಿದ್ದ ಕಾರಣ ಸುಪ್ರೀಂ ಕೋರ್ಟ್ ಲಖನೌ ಪೀಠದ ತೀರ್ಪಿಗೆ ತಡೆ ನೀಡಿತ್ತು. ಅಂದಹಾಗೆ ರಾಮ್ ಲಲ್ಲಾ ಅಂದರೆ ಬಾಲ ರಾಮ ಎಂದರ್ಥವಷ್ಟೆ.

ಅನ್ಸಾರಿ ಹೇಳಿಕೆಯ ಬಗ್ಗೆ ವಿಶ್ಲೇಷಕರು ಏನಂತಾರೆ?

ಅನ್ಸಾರಿಯ ಯಾವ ಹೇಳಿಕೆಗಳನ್ನೂ ಗಂಭೀರವಾಗಿ ಪರಿಗಣಿಸಬೇಕಿಲ್ಲ. ಅವರ ನಿರ್ಧಾರ ಪ್ರಕರಣದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ. ಅಸಲಿಗೆ ಅನ್ಸಾರಿ ಈ ಕೇಸಿನಿಂದ ಹಿಂದೆ ಸರಿದ ಮಾತ್ರಕ್ಕೆ ಪ್ರಕರಣಕ್ಕೆ ತೆರೆಬೀಳುವುದಿಲ್ಲ. ಅನ್ಸಾರಿ ಹೊರತಾಗಿ ಒಟ್ಟು ಆರು ಫಿರ್ಯಾದುದಾರರು ಈ ಕೇಸಿನಲ್ಲಿ ಇನ್ನೂ ಸಕ್ರಿಯರಾಗೇ ಉಳಿದಿದ್ದಾರೆ ಎಂದು ವಿಶ್ಲೇಷಕರು ತಮ್ಮ ಅಭಿಪ್ರಾಯ ಮಂಡಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com