ವಿವಾದದ ಬಗ್ಗೆ ಬಿಟ್ಟು ಅಭಿವೃದ್ಧಿಗಾಗಿ ಕೆಲಸ ಮಾಡೋಣ: ಮೋದಿ

ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಕೇಂದ್ರ ಆಹಾರ ಸಂಸ್ಕರಣೆ ಖಾತೆ ಸಹಾಯಕ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಈಗಾಗಲೇ ಕ್ಷಮಾಪಣೆ ಕೇಳಿದ್ದಾರೆ. ಹೀಗಾಗಿ ಈ ವಿವಾದದ ಬಗ್ಗೆ ಬಿಟ್ಟು ಅಭಿವೃದ್ಧಿಗಾಗಿ ಕೆಲಸ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.

ಸಾಧ್ವಿ ನಿರಂಜನ್ ಜ್ಯೋತಿ ಅವರ ವಿವಾದಾತ್ಮಕ ಹೇಳಿಕೆ ಇಂದು ಲೋಕಸಭೆಯಲೂ ಮಾರ್ದನಿಸಿದ್ದು, ಸಾಧ್ವಿ ಅವರ ಹೇಳಿಕೆ ಉಭಯ ಸದನಗಳ ಕಲಾಪವನ್ನು ನುಂಗಿ ಹಾಕುತ್ತಿದೆ.

ಸಾಧ್ವಿ ಅವರ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸತ್‌ನ ಉಭಯ ಸದನಗಳಲ್ಲಿ ಸಂಸದರು ಕೋಲಾಹಲವೆಬ್ಬಿಸುತ್ತಿದ್ದಾರೆ. ಸಂಪುಟದಿಂದ ಸಾಧ್ವಿ ಅವರನ್ನು ಕೈಬಿಡಬೇಕು ಎಂದು ಸಂಸದರು ಆಗ್ರಹಿಸುತ್ತಿದ್ದಾರೆ.

ಈ ಬಗ್ಗೆ ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ ಮೋದಿ ಅವರು, ತಮ್ಮ ತಪ್ಪಿಗಾಗಿ ಸಾಧ್ವಿ ಅವರು ಉಭಯ ಸದನಗಳಲ್ಲೂ ಕ್ಷಮಾಪಣೆ ಕೇಳಿದ್ದಾರೆ. ಹೀಗಾಗಿ ಸಂಸದರು ಪ್ರತಿಭಟನೆ ಬಿಟ್ಟು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿರೋಧ ಪಕ್ಷದ ಸಂಸದರಿಗೆ ಮನವಿ ಮಾಡಿದರು. ಸದ್ಯ ವಿವಾದಿತ ಹೇಳಿಕೆ ನೀಡದಂತೆ ಸಂಸದರು, ಸಚಿವರಿಗೂ ತಾಕೀತು ಮಾಡಿದ್ದೇನೆ. ಹೀಗಾಗಿ ವಿವಾದದ ಬಗ್ಗೆ ಬಿಟ್ಟು ಅಭಿವೃದ್ಧಿಗಾಗಿ ಕೆಲಸ ಮಾಡೋಣ ಎಂದು ಮೋದಿ ಹೇಳಿದರು.

ಸಾಧ್ವಿ ನಿರಂಜನ್ ಜ್ಯೋತಿ ಅವರ ವಿವಾದಾತ್ಮಕ ಹೇಳಿಕೆ ನಿನ್ನೆ ರಾಜ್ಯಸಭೆಯಲ್ಲಿ ಮಾರ್ದನಿಸಿತ್ತು. ವಿರೋಧ ಪಕ್ಷದ ಸಂಸದರು ವಿವಾದಾತ್ಮಕ ಹೇಳಿಕೆ ಕುರಿತಂತೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಅವರು, ಸಚಿವೆ ಸಾಧ್ವಿ ಅವರ ಹೇಳಿಕೆ ಅಸಂಬದ್ಧವಾದದ್ದು, ಈ ಹೇಳಿಕೆ ಹೊರಬರುತ್ತಿದ್ದಂತೆ ನಾನು ಅಸಮಧಾನ ವ್ಯಕ್ತಪಡಿಸಿದ್ದೆ. ಸಚಿವೆ ಮೊದಲ ಬಾರಿಗೆ ಸಂಸದರಾಗಿರವುದರಿಂದ ಆವೇಶದಲ್ಲಿ ಈ ರೀತಿ ಮಾತನಾಡಿದ್ದಾರೆ ಇನ್ನು ಮುಂದೆ ಈ ರೀತಿಯ ಆಗದಂತೆ ನೋಡಿಕೊಳ್ಳುತ್ತೇನೆ ಎಂದಿದ್ದರು.

ಇನ್ನು ಸಾಧ್ವಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ವಿರೋಧ ಪಕ್ಷದ ಸಂಸದರು ಒಕ್ಕೋರಳಿನಿಂದ ಒತ್ತಾಯಿಸಿದ್ದರಿಂದ ಮೋದಿ ಅವರು, ಯಾರ ಮರ್ಯಾದೆಯನ್ನು ಕಳೆಯಲು ನಾವು ಇಚ್ಛಿಸುವುದಿಲ್ಲ. ತಮ್ಮ ತಪ್ಪಿಗಾಗಿ ಸಾಧ್ವಿ ಅವರು ಈಗಾಗಲೇ ಕ್ಷಮೆಯಾಚಿಸಿದ್ದಾರೆ. ಹೀಗಾಗಿ ಸಂಸತ್ ಕಲಾಪಗಳನ್ನು ಸುಗಮವಾಗಿ ನಡೆಯಲು ಸಹಕರಿಸುವಂತೆ ವಿರೋಧ ಪಕ್ಷದ ಸಂಸದರಲ್ಲಿ ಮನವಿ ಮಾಡಿದ್ದರು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com