
ಬೆಂಗಳೂರು: ದಲಿತರ ಮೇಲಿನ ದೌರ್ಜನ್ಯ ಹಾಗೂ ಹಾಸ್ಟೆಲ್‌ಗಳಲ್ಲಿ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆರೋಪಿಸಿ ದಲಿತ ಸಂಘಟನೆಗಳು ಇಂದು ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದೆ.
ಕೊಳಗೇರಿ ನಿವಾಸಿಗಳ ಕಲ್ಯಾಣ ಯೋಜನೆ ಕುರಿತು ರಾಜ್ಯ ಸರ್ಕಾರ ಆಯೋಜಿಸಿದ್ದ ಅಂಬೇಡ್ಕರ್ ಮಹಾ ಪರಿನಿರ್ವಾಣ ಸಮಾರಂಭದ ವೇಳೆ ಪ್ರತಿಭಟನೆಗಿಳಿದಿದ್ದ ಸಮತಾ ಸೈನಿಕ ದಳ ಸಂಘಟನೆಯ ಕಾರ್ಯಕರ್ತರು, ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಹಾಸ್ಟೇಲ್‌ಗಳಲ್ಲಿ ಯಾವುದೇ ರೀತಿಯ ಸೌಲಭ್ಯಗಳು ದೊರೆಯುತ್ತಿಲ್ಲ ಮತ್ತು ಕುಪ್ಪೇಗಾಲ ಗ್ರಾಮದಲ್ಲಿ ಈಗಲೂ ಅಸ್ಪೃಶ್ಯತೆ ತಾಂಡವಾಡುತ್ತಿದ್ದು ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ರಾಜ್ಯಸರ್ಕಾರದ ಯೋಜನೆಗಳು ಹಾಗೂ ಕ್ರಮಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಅಲ್ಲದೆ, ಇಂದಿನ ರಾಜ್ಯ ಸರ್ಕಾರ ಬಸವ ಜಯಂತಿ, ಅಂಬೇಡ್ಕರ್ ಜಯಂತಿ ಹಾಗೂ ಅಟಲ್ ಬಿಹಾರಿ ವಸತಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ, ರಾಜ್ಯದಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧವೂ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾರ್ಯಕರ್ತರು, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಘೋಷಣೆ ಕೂಗಿದರು.
ಈ ವೇಳೆ ಪ್ರತಿಭಟನಾ ನಿರತ ಕಾರ್ಯಕರ್ತರ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ದಲಿತರಿಗೆ ಅನ್ಯಾಯವಾಗದಂತೆ ಹಾಗೂ ಅವರ ಮೇಲಿನ ದೌರ್ಜನ್ಯ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಸಮಸ್ಯೆಗಳನ್ನು ಆಲಿಸಿ ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.
Advertisement