ಬನ್ನಿ ದೆಹಲಿ ಯಾತ್ರೆಗೆ, ಕೆಂಪೇಗೌಡರ ಜಾತ್ರೆ

ದೆಹಲಿಯಲ್ಲಿ ನಡೆಯಲಿದೆ ನಾಡಪ್ರಭು ಕೆಂಪೇಗೌಡರ ಜಾತ್ರೆ...
ನಾಡಪ್ರಭು ಕೆಂಪೇಗೌಡ
ನಾಡಪ್ರಭು ಕೆಂಪೇಗೌಡ

ಬೆಂಗಳೂರು: ದೆಹಲಿಯಲ್ಲಿ ನಡೆಯಲಿದೆ ನಾಡಪ್ರಭು ಕೆಂಪೇಗೌಡರ ಜಾತ್ರೆ. ಬೆಂಗಳೂರು ವಿಶ್ವವಿಖ್ಯಾತ. ಆದರೆ, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬಗ್ಗೆ ಕನ್ನಡಿಗರನ್ನು ಬಿಟ್ಟರೆ ಉಳಿದ ಭಾಷಿಕರಿಗೆ ಹೆಚ್ಚು ಗೊತ್ತಿಲ್ಲ.

ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿದೆ ನಾಡಪ್ರಭು ಕೆಂಪೇಗೌಡರ ರಾಷ್ಟ್ರೀಯ ಉತ್ಸವ'. ವಿಶ್ವ ಒಕ್ಕಲಿಗರ ಮಹಾವೇದಿಕೆ, ದೆಹಲಿ ಒಕ್ಕಲಿಗ ಗೌಡರ ಸಂಘ, ದೆಹಲಿ ಕರ್ನಾಟಕ ಸಂಘದ ಸಂಯುಕ್ತಾಶ್ರಯದಲ್ಲಿ ಡಿ.13 ಮತ್ತು 14 ರಂದು ದೆಹಲಿಯ ಲಕ್ಷ್ಮೀಬಾಯಿ ಮಾರ್ಗ್‌ನಲ್ಲಿರುವ ತಾಲ್‌ಕೋಟೋರ ಕ್ರೀಡಾಂಗಣದಲ್ಲಿ ಉತ್ಸವ ನಡೆಯಲಿದ್ದು, 'ಬನ್ನಿ ದೆಹಲಿ ಯಾತ್ರೆಗೆ-ಕೆಂಪೇಗೌಡರ ಜಾತ್ರೆಗೆ' ಎಂದು ಆಯೋಜಕರು ಕರೆ ನೀಡಿದ್ದಾರೆ.

ಏನಿದರ ಉದ್ದೇಶ?


ಕೆಂಪೇಗೌಡರ ಆದರ್ಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಬೇಕೆಂಬುದು ಕಾರ್ಯಕ್ರಮದ ಪ್ರಧಾನ ಆಶಯ. ಇದರ ಜತೆಗೆ, ಐದು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಕನ್ನಡವೇ ಸತ್ಯ ರಂಗಣ್ಣ ತಿಳಿಸಿದ್ದಾರೆ.

ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು, ಗದುಗಿನ ಡಂಬಳ ಮಠದ ತೋಂಟದಾರ್ಯ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹಾಗೂ ನಂಜಾವಧೂತ ಸ್ವಾಮೀಜಿಗಳು ವಹಿಸಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದ ಗೌಡ, ವೆಂಕಯ್ಯ ನಾಯ್ಜು, ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ್ ಸಿಂಗ್, ರಾಜ್ಯದ ಸಚಿವರಾದ ಡಿ.ಕೆ.ಶಿವಕುಮಾರ್, ಅಂಬರೀಷ್. ರಾಮಲಿಂಗಾ ರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ಸಮ್ಮಾನ್: ಕಾರ್ಯಕ್ರಮದಲ್ಲಿ ಕೇಂದ್ರದ ಮಾಡಿ ಸಚಿವರಾದ ಅಜಿತ್ ಸಿಂಗ್ ಹಾಗೂ ಸರೋಜಿನಿ ಮಹಿಷಿ ಅವರಿಗೆ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಸಮ್ಮಾನ್ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

ಐದು ನಿರ್ಣಯಗಳು

  • ಬೆಂಗಳೂರು ನಗರ ಜಿಲ್ಲೆಗೆ ಕೆಂಪೇಗೌಡ ಜಿಲ್ಲೆ ಎಂದು ಹೆಸರಿಡುವಂತೆ ಒತ್ತಾಯಿಸುವುದು.
  • ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕೆಂಪೇಗೌಡ ವಿವಿ ಎಂದು ನಾಮಕರಣ ಮಾಡುವುದು
  • ವಿವಿಯಲ್ಲಿರುವ ಕೆಂಪೇಗೌಡ ಅಧ್ಯಯನ ಪೀಠಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಆಗ್ರಹಿಸುವುದು
  • ಮೈಸೂರು ದಸರಾ ರೀತಿಯಲ್ಲಿ ಕೆಂಪೇಗೌಡ ಜಯಂತ್ಯುತ್ಸವವನ್ನು ನಾಡಿನ ಸಾಂಸ್ಕೃತಿಕ ಹಬ್ಬವಾಗಿ ಆಚರಿಸುವುದು
  • ಅಶ್ವಾರೂಢ ಕೆಂಪೇಗೌಡರ ಕಂಟಿನ ಪ್ರತಿಮೆ ಸ್ಥಾಪಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com