
ಚೆನ್ನೈ: ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಣೆಯಾಗುತ್ತಿದ್ದ ಐದು ಕೋಟಿ ರು. ಮೌಲ್ಯದ 13 ಕೆ.ಜಿ ಚಿನ್ನವನ್ನು ಕಂದಾಯ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಸಿಂಗಾಪುರದಿಂದ ನಗರಕ್ಕೆ ಬಂದಿಳಿದ ರಿಯಾಜ್ ಮೊಹಮ್ಮದ್ ಎಂಬಾತನಿಂದ ಕಂದಾಯ ಅಧಿಕಾರಿಗಳು 12 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ತನ್ನ ಸೂಟ್‌ಕೇಸಿನಲ್ಲಿ ಬಚ್ಚಿಟ್ಟುಕೊಂಡು ಚಿನ್ನವನ್ನು ಸಾಗಿಸುತ್ತಿದ್ದ ಎನ್ನಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಚೆನ್ನೈನ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಪ್ರಕರಣದಲ್ಲಿ ಸುಮಾರು 6.5 ಕೆ.ಜಿ ತೂಕದ ಚಿನ್ನವನ್ನು ಸಿಐಎಸ್‌ಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಆದರೆ ಈ ಸೂಟ್‌ಕೇಸ್ ಯಾರದೆಂದು ತಿಳಿದು ಬಂದಿಲ್ಲ. ಸೂಟ್‌ಕೇಸ್ ಮಾಲೀಕನ ಹುಡುಕಾಟ ನಡೆಸಲಾಗುತ್ತಿದೆ. ಮಂಗಳವಾರ ಚೆನ್ನೈನ ವಿಮಾನ ನಿಲ್ಧಾಣದಲ್ಲಿ ವಶಪಡಿಸಿಕೊಳ್ಳಲಾದ ಚಿನ್ನದ ಒಟ್ಟು ಮೌಲ್ಯ ಐದು ಕೋಟಿ ರು. ಎಂದು ಅಂದಾಜಿಸಲಾಗಿದೆ.
ದೆಹಲಿಯ ವಿಮಾನ ನಿಲ್ದಾಣದಲ್ಲಿ ಚಿನ್ನದ ಬಿಸ್ಕೆಟ್ ವಶಕ್ಕೆ
ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಚಿನ್ನದ ಬಿಸ್ಕೆಟನ್ನು ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಶೌಕತ್ ಚೆಲ್ಲಂಕತ್(31) ಬಂಧಿತ ಆರೋಪಿ. ಮಂಗಳವಾರ ಬೆಳಗ್ಗೆ ಕುವೈತ್‌ನಿಂದ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆರೋಪಿಯ ಬಳಿ ಸುಮಾರು 95 ಲಕ್ಷ ಮೌಲ್ಯದ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ.
3ನೇ ಹಂತದ ತಪಾಸಣೆ ವೇಳೆ ಆರೋಪಿ ಸಿಕ್ಕಿ ಬಿದಿದ್ದಾನೆ. ಈತ ಕೇರಳದವನಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement