ಇಂಡೊನೇಷ್ಯಾ ಭೂಕುಸಿತ: 18 ಜನ ಸಾವು, ಹಲವರು ಕಾಣೆ

ಇಂಡೋನೇಷ್ಯಾ ಭೂಕುಸಿತ(ಸಂಗ್ರಹ ಚಿತ್ರ)
ಇಂಡೋನೇಷ್ಯಾ ಭೂಕುಸಿತ(ಸಂಗ್ರಹ ಚಿತ್ರ)

ಬಂಜಾರ್ನೆಗರ(ಇಂಡೋನೇಷ್ಯಾ): ಇಂಡೋನೇಷ್ಯಾದ ಜಾವಾ ಪ್ರಾಂತ್ಯದ ಬಂಜಾರ್ನೆಗರ ಜಿಲ್ಲೆಯಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದು, 90 ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಜಾವಾ ಪ್ರಾಂತ್ಯದ ಬಂಜಾರ್ನೆಗರ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೂಕುಸಿದ ಘಟನೆಯಲ್ಲಿ 105 ಮನೆಗಳು ನಿರ್ಣಾಮಗೊಂಡಿವೆ ಎಂದು ರಾಷ್ಟ್ರೀಯ ವಿಪತ್ತು ಪರಿಹಾರ ನಿರ್ವಹಣಾ ಪಡೆಯ ವಕ್ತಾರ ಪುರ್ವೊ ನುಗ್ರೊಹೊ ಅವರು ತಿಳಿಸಿದ್ದಾರೆ.

ಸೈನಿಕರು, ಪೊಲೀಸರು ಹಾಗೂ ಸ್ಥಳೀಯರು ಸೇರಿದಂತೆ ನೂರಾರು ರಕ್ಷಣಾ ಕಾರ್ಯಕರ್ತರು ಅವಶೇಷಗಳನ್ನು ಅಗೆಯುವ ಕಾರ್ಯದಲ್ಲಿ ನೆರವಾಗಿದ್ದಾರೆ. ಸುಮಾರು 420 ಜನರನ್ನು ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ಅವಶೇಷಗಳ ಅಡಿಯಿಂದ ನೆರವಿಗಾಗಿ ಯಾಚಿಸುತ್ತಿರುವ ಸಂತ್ರಸ್ತರ ದನಿಗಳು ಕೆಲವು ರಕ್ಷಣಾ ಕಾರ್ಯಕರ್ತರ ಕಿವಿಗೆ ಬಿದ್ದಿವೆ. ಆದರೆ ಸೂಕ್ತ ಸಲಕರಣೆಗಳ ಕೊರತೆಯಿಂದಾಗಿ ಸಂತ್ರಸ್ತರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದಿರುವ ಅಸಹಾಯಕತೆಯನ್ನು ವಿವರಿಸಿರುವ ನುಗ್ರೊಹೊ, ‘ಕುಸಿದ ಮಣ್ಣು, ಒಡ್ಡೊಡ್ಡಾದ ಭೂಪ್ರದೇಶ ಹಾಗೂ ಪ್ರತಿಕೂಲ ವಾತಾವರಣ ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗಿದೆ’ಎಂದಿದ್ದಾರೆ.

ರಕ್ಷಣಾ ಕಾರ್ಯಗಳಿಗೆ ಟ್ರ್ಯಾಕ್ಟರ್‌ಗಳು ಹಾಗೂ ಬುಲ್‌ಡೋಜರ್‌ ಬಳಸಿಕೊಳ್ಳಲಾಗಿದೆ. ಮಣ್ಣು ಹಾಗೂ ಮುದುಡಿರುವ ಮನೆಗಳಿಂದ ಈವರೆಗೂ 18 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಕಾಣೆಯಾಗಿರುವ 90 ಜನರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾ ಮುಖ್ಯಸ್ಥ ಸುತೆದ್ಜೊ ಸ್ಲಾಮೆಟ್‌ ಉಟೊಮೊ ಅವರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ 11 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com