ಬೆಂಗಳೂರು: ಬೆಂಗಳೂರು ವಿವಿ ಪದವಿ ಪರೀಕ್ಷೆಯ ಉತ್ತರ ಪತ್ರಿಕೆಗಳು ಮಾರತ್ ಹಳ್ಳಿ ತ್ರಿವೇಣಿ ಬಾರ್‌ನಲ್ಲಿ ಪತ್ತೆಯಾಗಿದ್ದ ಪ್ರಕರಣ ಸಂಬಂಧ ಸಹಾಯಕ ಉಪನ್ಯಾಸಕನನ್ನು ಎಚ್‌ಎಲ್ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಉಪನ್ಯಾಸಕ ಶಿವಕುಮಾರ್ (38) ಬಂಧಿತ.
ಕಾಡುಬಿಸನಹಳ್ಳಿಯಲ್ಲಿರುವ ನ್ಯೂ ಹಾರಿಜನ್ ಕಾಲೇಜು ಪ್ರಾಂಶುಪಾಲರ ಮೇಲಿನ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಪದವಿ ಪರೀಕ್ಷೆಯ ಖಾಲಿ ಉತ್ತರ ಪತ್ರಿಕೆಗಳನ್ನು ಶಿವಕುಮಾರ್ ಬಾರ್‌ನಲ್ಲಿ ಬಿಸಾಡಿದ್ದ. ಜೀವನಬಿಮಾನಗರದ ಕೆಪಿಡಬ್ಲ್ಯೂಡಿ ವಸತಿಗೃಹ ನಿವಾಸಿ ಶಿವಕುಮಾರ್‌ನನ್ನು ನ.7 ರಿಂದ ನ.26ರವರೆಗೆ ನಡೆದ ಪದವಿ ಪರೀಕ್ಷೆ ವೇಳೆ ನ್ಯೂ ಹಾರಿಜಾನ್ ಕಾಲೇಜಿಗೆ ಸಿಟ್ಟಿಂಗ್ ಆಫೀಸರ್ ಆಗಿ ವಿವಿ ನೇಮಿಸಿತ್ತು.
ಕರ್ತವ್ಯ ನಿರ್ವಹಣೆ ವೇಳೆ ಕಾಲೇಜಿನ ಪ್ರಾಂಶುಪಾಲರ ಜತೆ ಉಂಟಾದ ಜಗಳದಲ್ಲಿ ಶಿವಕುಮಾರ್ ದ್ವೇಷ ಕಟ್ಟಿಕೊಂಡಿದ್ದ. ಹೀಗಾಗಿ ಪ್ರಾಂಶುಪಾಲರಿಗೆ ಮತ್ತು ಕಾಲೇಜಿಗೆ ಕೆಟ್ಟ ಹೆಸರು ತರಲೆಂದು ಪರೀಕ್ಷೆ ವೇಳೆ 4 ಖಾಲಿ ಉತ್ತರ ಪತ್ರಿಕೆಗಳನ್ನು ಕದ್ದು, ತ್ರಿವೇಣಿ ವೈನ್ ಸ್ಟೋರ್‌ನಲ್ಲಿ ಬಿಟ್ಟು ಹೋಗಿದ್ದ.
ನಂತರ ಕಾಯಿನ್ ಬೂತ್ ಫೋನ್‌ನಲ್ಲಿ ಪೊಲೀಸ್ ನಿಯಂತ್ರಣ ಕೊಠಡಿ ಹಾಗೂ ವಿವಿಗೆ ಅನಾಮಧೇಯ ವ್ಯಕ್ತಿಯಂತೆ ಕರೆ ಮಾಡಿ ಮಾಹಿತಿ ನೀಡಿದ್ದ.
ಈ ಬಗ್ಗೆ ವಿವಿಯಿಂದ ಎಚ್‌ಎಎಲ್ ಠಾಮೆಯಲ್ಲಿ ಪ್ರಕರಣ ದಾಖಲಾಗಿತ್ತು. ವೈನ್ ಸ್ಟೋರ್ ಸುತ್ತಮುತ್ತ ಅಳವಡಿಸಿದ್ದ ಸಿಸಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಶಿವಕುಮಾರ್ ಸುಳಿವು ಸಿಕ್ಕಿತ್ತು.
ಈ ಸಾಕ್ಷ್ಯಾಧಾರದ ಮೇಲೆ ಹಾರಿಜಾನ್ ಕಾಲೇಜಿನ ಸಿಬ್ಬಂದಿ, ಉಪನ್ಯಾಸಕರು ಮತ್ತು ಪರೀಕ್ಷೆಗೆ ಬಂದಿದ್ದ ವಿಚಕ್ಷಣಾಧಿಕಾರಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಶಿವಕುಮಾರ್ ಉತ್ತರ ಪತ್ರಿಕೆ ಪ್ರಕರಣದ ಹಿಂದೆ ಇರುವುದು ಗೊತ್ತಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ