
ನವದೆಹಲಿ: ಸಿಬಿಎಸ್ಸಿ ಶಾಲೆಗಳಿಗೆ ಕ್ರಿಸ್ ಮಸ್ ಹಬ್ಬದಂದು ರಜೆಯಿಲ್ಲ ಎಂಬ ಮಾಧ್ಯಮಗಳ ವರದಿಯನ್ನು ಕೇಂದ್ರ ಸರ್ಕಾರ ಸೋಮವಾರ ತಿರಸ್ಕರಿಸಿದೆ.
ಡಿಸೆಂಬರ್ 25ರ ಕ್ರಿಸ್ ಮಸ್ ದಿನದಂದು ಮಾಜಿ ಪ್ರಧಾನ ಮಂತ್ರಿ ಅಟಲ್ಬಿಹಾರಿ ವಾಜಪೇಯಿ ಅವರು 90ನೇ ವರ್ಷದ ಜನ್ಮದಿನಕ್ಕೆ ಕಾಲಿಡುತ್ತಿರುವುದರಿಂದ, ಸಿಬಿಎಸ್ಸಿ ಶಾಲೆಯ ಮಕ್ಕಳಿಗೆ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವಾಗಿ ಆಚರಿಸಬೇಕೆಂದು ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರು ಯೋಜನೆ ರೂಪಿಸುತ್ತಿದ್ದಾರೆ. ಹೀಗಾಗಿ ಕ್ರಿಸ್ಮಸ್ ದಿನದಂದು ಸಿಬಿಎಸ್ಸಿ ಶಾಲೆಗಳಿಗೆ ರಜೆ ಇಲ್ಲ ಎಂದು ಕೆಲ ಖಾಸಗಿ ಪತ್ರಿಕೆಗಳು ಇಂದು ಸುದ್ದಿ ಪ್ರಕಟ ಮಾಡಿತ್ತು.
ಈ ವರದಿ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಕ್ರಿಸ್ ಮಸ್ ಹಬ್ಬದಂದು ರಜೆ ಇಲ್ಲ ಎಂಬ ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿದ್ದಾರೆ. ಈ ರೀತಿಯ ಯಾವುದೇ ಸೂಚನೆಗಳನ್ನು ನಾವು ನೀಡಿಲ್ಲ. ಕ್ರಿಸ್ಮಸ್ ಹಬ್ಬದಂದು ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.
Advertisement