ಕರೆಂಟ್ ಸಮಸ್ಯೆ: ಪ್ರತಿ ಗುರುವಾರ ಬನ್ನಿ

ಪ್ರತಿ ಗುರುವಾರ ನಾನು ವಿಧಾನಸೌಧದಲ್ಲಿರುತ್ತೇನೆ ಅಂದು ಶಾಸಕರು...
ಇಂಧನ ಸಚಿವ ಡಿ.ಕೆ.ಶಿವಕುಮಾರ್
ಇಂಧನ ಸಚಿವ ಡಿ.ಕೆ.ಶಿವಕುಮಾರ್

ಸುವರ್ಣ ವಿಧಾನ ಸೌಧ: ತಮ್ಮ ಕ್ಷೇತ್ರದ ವಿದ್ಯುತ್ ಸಮಸ್ಯೆ ಕುರಿತು ಚರ್ಚಿಸಿ ಪರಿಹರಿಸಿಕೊಳ್ಳಬಹುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುವರ್ಣ ವಿಧಾನಸೌಧದ ಸಭಾಂಗಮದಲ್ಲಿ ಇಂಧನ ಇಲಾಖೆಯ ಮಂಗಳವಾರ ಆಯೋಜಿಸಿದ್ದ ಶಾಸಕರು ಮತ್ತು ಅಧಿಕಾರಿಗಳ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ, ಟಿಸಿಗಳ ಕೊರತೆ, ಲೋಡ್‌ಶೆಡ್ಡಿಂಗ್, ನೂತನ ಸಂಪರ್ಕ ಪಡೆಯುವುದು ಸೇರಿದಂತ ವಿವಿಧ ಸಮಸ್ಯೆ ಕುರಿತು ಚರ್ಚಿಸಲು ತಮ್ಮನ್ನು ಪ್ರತಿ ಗುರುವಾರ ಭೇಟಿಯಾಗಿ ಅಹವಾಲುಗಳನ್ನು ಸ್ವೀಕರಿಸಿ, ಅವುಗಳನ್ನು ಪರಿಹರಿಸಲು ಶ್ರಮಿಸುವುದಾಗಿ ಸಚಿವರು ಹೇಳಿದರು.

ಬೆಂಗಳೂರು, ತುಮಕೂರು, ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಮಾಡುವುದೇ ಒಂದು ದೊಡ್ಡ ಸವಾಲಾಗಿದೆ. 1984ರಿಂದ ಹಳೆಯ ಲೈನ್‌ಗಳಿದ್ದು, ಹೊಸಲೈನ್‌ಗಳನ್ನು ಹಾಕಲು ಸಾರ್ವಜನಿಕರು ಅಡ್ಡಿಪಡಿಸುತ್ತಿರುವುದರಿಂದ ಸ್ವಲ್ಪ ತೊಂದಜರೆಯಾಗುತ್ತಿದೆ.

ಅಗತ್ಯ ಮೂಲ ಸೌಕರ್ಯಗಳನ್ನು ಅಳವಡಿಸಿಕೊಂಡು, ರಾಜ್ಯಾದ್ಯಂತ ಇರುವ ವಿದ್ಯುತ್ ಮಾರ್ಗಗಳನ್ನು ಮೇಲ್ದೆರ್ಜೆಗೆ ಏರಿಸುವ ಉದ್ದೇಶವಿದ್ದು, ಇದೇ ರೀತಿ ವಿದ್ಯುತ್ ಸ್ಟೇಶನ್‌ಗಳನ್ನು ಕೂಡ ಹೆಚ್ಚಿಸಲಾಗುವುದು. ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಸಮಸ್ಯೆ ನೀಗಿಸುವುದಕ್ಕಾಗಿ ಮೊದಲ ಹಂತದಲ್ಲಿ 200 ಮೆಗಾವಾಟ್‌ನ ಸೋಲಾರ ಮೇಲ್ಛಾವಣಿ ಅಳವಡಿಸಿಕೊಳ್ಳುವ ಸೂರ್ಯ ರೈತ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಕರೆಂಟ್ ಹೆಸರಿನಲ್ಲಿ ರಾಜಕಾರಣ ಬೇಡ
ಯಾವುದೇ ಪಕ್ಷದ ಶಾಸಕರಿರಲಿ, ವಿದ್ಯುತ್ ಪೂರೈಕೆ ವಿಷಯದಲ್ಲಿ ಯಾರೂ ರಾಜಕಾರಣ ಮಾಡಕೂಡದು. ನನಗೆ ರಾಜಕಾರಣ ಮುಖ್ಯವಲ್ಲ. ಅಭಿವೃದ್ದಿ ಮುಖ್ಯ.

ಯಾವುದೇ ಶಾಸಕರು ತಮ್ಮ ಸಮಸ್ಯೆಗಳನ್ನು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಲೇ ಅವುಗಳ ಪರಿಶೀಲನೆ ನಡೆಸಿ ಬಗೆಹರಿಸಬೇಕು. ಇಲಾಖೆಯಲ್ಲಿ ಹೆಚ್ಚುತ್ತಿರುವ ವಿದ್ಯುತ್ ಕಳ್ಳತನ ನಿಯಂತ್ರಣಕ್ಕಾಗಿ ಜಾಗೃತ ದಳ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ.

ನಿರಂತರಜ್ಯೋತಿಯನ್ನು ಇನ್ನೂ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು. ರಾಜ್ಯ ಸರ್ಕಾರ ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಕಡ್ಡಾಯಗೊಳಿಸುವ ಯಾವುದೇ ಆಲೋಚನೆ ಮಾಡಿಲ್ಲ. ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆಯೂ ಇಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com