ಕಳ್ಳನೆಂದು ಭಾವಿಸಿ ಹೊಡೆದು ಕೊಲೆ

ನಿರ್ಮಾಣ ಹಂತದ ಕಟ್ಟಡದಲ್ಲಿ ಸಾಮಗ್ರಿಗಳನ್ನು ಕದಿಯಲು ಬಂದಿದ್ದಾನೆಂದು...
ಹತ್ಯೆಗೀಡಾದ ಬಾಲಕ ಟೋನಿ ವಿನ್ಸೆಂಟ್
ಹತ್ಯೆಗೀಡಾದ ಬಾಲಕ ಟೋನಿ ವಿನ್ಸೆಂಟ್

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಸಾಮಗ್ರಿಗಳನ್ನು ಕದಿಯಲು ಬಂದಿದ್ದಾನೆಂದು ಭಾವಿಸಿ ಯುವಕನ ಕೈ ಕಟ್ಟಿ ಹಾಕಿ ದೊಣ್ಣೆಯಿಂದ ಹೊಡೆದು ಹತ್ಯೆ ಗೈದಿರುವ ಅಮಾನವೀಯ ಘಟನೆ ಮತ್ತಿಕೆರೆ ಅಯ್ಯಪ್ಪ ದೇವಸ್ಥಾನ ಬಳಿ ನಡೆದಿದೆ.

ಜಾಲಹಳ್ಳಿ ಕ್ರಾಸ್ ಸಮೀಪದ ಸಿದ್ಧಾರ್ಥ ನಗರ ನಿವಾಸಿ ಟೋನಿ ವಿನ್ಸೆಂಟ್(18) ಮೃತ ಯುವಕ, ಈ ಸಂಬಂಧ ಆರೋಪಿಗಳಾದ ಮತ್ತಿಕೆರೆ ನಿವಾಸಿ ಮಂಜುನಾಥ ಅಲಿಯಾಸ್ ವಾಟರ್ ಮಂಜ(41), ಸಹೋದರ ಶ್ರೀನಿವಾಸ (33) ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕ ಕಲಬುರಗಿ ಮೂಲದ ಹನುಮಂತು(38) ಎಂಬಾತನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಪಾಲಕರೊಂದಿಗೆ ಸಿದ್ದಾರ್ಥನಗರದಲ್ಲಿ ವಾಸವಿದ್ದ ಟೋನಿ ವಿನ್ಸೆಂಟ್, 10ನೇ ತರಗತಿ ಅನುತ್ತೀರ್ಣನಾಗಿದ್ದ. ಈ ಸಮಯದಲ್ಲಿ ಅಡುಗೆ ಕೌಶಲ ತರಬೇತಿಗೆ ಸೇರಿಕೊಂಡಿದ್ದ. ಆದರೆ ಅಲ್ಲಿಗೂ ಪ್ರತಿದಿನ ಹೋಗುತ್ತಿರಲಿಲ್ಲ ಎಂದು ಆತನ ಸಹೋದರ ಹೇಳಿದ್ದಾರೆ.

ಮಂಗಳವಾರ ಬೆಳಿಗ್ಗೆ ಎಂದಿನಂತೆ ತರಬೇತಿಗೆ ಹೋಗುವುದಾಗಿ ಹೇಳಿದ್ದ ವಿನ್ಸೆಂಟ್, ರಾತ್ರಿ ಮನೆಗೆ ವಾಪಸಾಗಿರಲಿಲ್ಲ. ಸ್ನೇಹಿತರೊಂದಿಗೆ ಹೋಗಿರಬಹುದು, ವಾಪಸ್ ಬರುತ್ತಾನೆ ಎಂದು ಭಾವಿಸಿದ್ದ ಪಾಲಕರು ಸುಮ್ಮನಾಗಿದ್ದರು. ಆದರೆ, ಬುಧವಾರ ಬೆಳಗ್ಗೆ ವಿನ್ಸೆಂಟ್ ಶವ ಜಾಲಹಳ್ಳಿ ಎಚ್‌ಎಂಟಿ ಬಡಾವಣೆಯ ನಿರ್ಜನ ರಸ್ತೆಯಲ್ಲಿ ಪತ್ತೆಯಾಗಿದೆ. ಬೆಳಿಗ್ಗೆ 8 ಗಂಟೆ ಸುಮಾರಿಗೆ ಸ್ಥಳೀಯರು ಶವ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವಕನ ಜೇಬು ಪರಿಶೀಲಿಸಿದ ಪೊಲೀಸರು ವಿನ್ಸೆಂಟ್ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಕಳ್ಳನೆಂದು ಭಾವಿಸಿ ಹಲ್ಲೆ
ವಿನ್ಸೆಂಟ್ ಮೈ ಮೇಲಿನ ಗಾಯಗಳನ್ನು ಗಮನಿಸಿದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಎರಡೇ ತಾಸಿನಲ್ಲಿ ಕೊಲೆ ರಹಸ್ಯ ಬೇದಿಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಮಂಜುನಾಥ ಮತ್ತಿಕೆರೆಯಲ್ಲಿ 2 ವಾಟರ್ ಟ್ಯಾಂಕರ್‌ಗಳನ್ನು ಇಟ್ಟುಕೊಂಡು ನೀರು ಸರಬರಾಜು ವ್ಯವಹಾರ ಮಾಡುತ್ತಿದ್ದ. ಮತ್ತಿಕೆರೆಯಲ್ಲಿ ಸ್ವಂತ ಮನೆ ನಿರ್ಮಿಸುತ್ತಿದ್ದಾನೆ. ತರಬೇತಿಗೆ ಹೋಗುವುದಾಗಿ ಹೇಳಿ ಹೊರ ಬಂದಿದ್ದ ವಿನ್ಸೆಂಟ್, ಮಂಗಳವಾರ ಮಧ್ಯಾಹ್ನ ಮಂಜುವಾಥ ನಿರ್ಮಿಸುತ್ತಿದ್ದ ಕಟ್ಟಡದೊಳಕ್ಕೆ ಹೋಗಿದ್ದ.

ಪಾಲಿಶ್ ಮಾಡುವ ಯಂತ್ರ ಕದಿಯಲು ಬಂದಿರಬಹುದು ಎಂದು ಭಾವಿಸಿದ ಮಂಜುನಾಥ, ಸಹೋದರ ಶ್ರೀನಿವಾಸ್ ಹಾಗೂ ಕಾರ್ಮಿಕ ಹನುಮಂತು, ವಿನ್ಸೆಂಟ್‌ನ ಕೈ ಕಟ್ಟಿ ಹಾಕಿ ಕಟ್ಟಡ ನಿರ್ಮಾಣಕ್ಕೆ ಬಳಸುವ ದೊಣ್ಣೆಗಳಿಂದ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆವರೆಗೂ ನಿರಂತರವಾಗಿ ಹಲ್ಲೆ ನಡೆಸಿದ್ದಾರೆ.

ಸಂಜೆ ವೇಳೆಗೆ ವಿನ್ಸೆಂಟ್ ಪ್ರಾಣ ಬಿಟ್ಟಿದ್ದ. ಇದರಿಂದ ಗಾಬರಿಗೊಂಡ ಮಂಜುನಾಥ, ಹನುಮಂತು ಸಹಾಯದೊಂದಿಗೆ ತಡರಾತ್ರಿ ತನ್ನ ಸ್ಯಾಂಟ್ರೋ ಕಾರಿನಲ್ಲಿ ಶವ ಹಾಕಿಕೊಂಡು ಜಾಲಹಳ್ಳಿ ಸಮೀಪದ ಎಚ್‌ಎಂಟಿ ಬಡಾವಣೆಯಲ್ಲಿ ಪೊದೆಯ ಬಲಿ ಬಿಸಾಡಿ ಏನು ಗೊತ್ತಿಲ್ಲದವನಂತೆ ಮನೆ ಸೇರಿದ್ದ.

ಬುಧವಾರ ಬೆಳಿಗ್ಗೆ ಶವ ಪತ್ತೆಯಾಗುತ್ತಿದ್ದಂತೆ ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಿದ ಜಾಲಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಸಿ.ವೆಂಕಟೇಶ್ ಹಾಗೂ ಅಪರಾಧ ವಿಭಾಗದ ಕಾನ್ಸ್‌ಟೇಬಲ್ ಯಶವಂತ ಅವರು ಆರೋಪಿಗಳನ್ನು 2 ತಾಸಿನಲ್ಲಿ ಬಂಧಿಸಿದ್ದಾರೆ.

ಈ ಹಿಂದೆ ಎರಡೂ ಬಾರಿ ಕಟ್ಟಡದಲ್ಲಿ ವಸ್ತುಗಳು ಕಾಣೆಯಾಗಿದ್ದವು. ಮಂಗಳವಾರ ಸಿಕ್ಕಿ ಬಿದ್ದ ಏನ್ಸೆಂಟ್‌ನೇ ಈ ಹಿಂದೆ ಕಾಣೆಯಾದ ವಸ್ತುಗಳನ್ನು ಕಳ್ಳತನ ಮಾಡಿರಬಹುದು ಎಂದು ಭಾವಿಸಿ ಹಲ್ಲೆ ನಡೆಸಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಯಾರಿಗೂ ಗೊತ್ತಾಗಬಾರದು ಎಂದು ಶವವನ್ನು ರಾತ್ರಿ ಕಾರಿನಲ್ಲಿ ಸಾಗಿಸಿರುವುದಾಗಿ ಹೇಳಿದ್ದಾರೆ. ಕೃತ್ಯಕ್ಕೆ ಬಳಸಲಾದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com