
ಇಸ್ಲಾಮಾಬಾದ್: ಮುಂಬೈ ದಾಳಿಯ ಆರೋಪಿ ಉಗ್ರ ಝಕಿವುರ್ ರೆಹಮಾನ್ ಲಖ್ವಿಗೆ ಜಾಮೀನು ನೀಡಿರುವುದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಉಗ್ರರನ್ನು ಜೈಲಿನಿಂದ ಬಿಡುಗಡೆ ಮಾಡದಿರಲು ಪಾಕಿಸ್ತಾನ ಸರ್ಕಾರ ತೀರ್ಮಾನಿಸಿದೆ.
ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರಗಾಮಿ ಝಕಿವುರ್ ರೆಹಮಾನ್ ಲಖ್ವಿಗೆ ಪಾಕಿಸ್ತಾನ ಉಗ್ರ ನಿಗ್ರಹ ಕೋರ್ಟ್ ಜಾಮೀನು ನೀಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ ಆತನನ್ನು ಹೊರಗೆ ಬಿಟ್ಟರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತದೆಂಬ ಕಾರಣ ನೀಡಿ ಆತನನ್ನು ಜೈಲಿನಿಂದ ಬಿಡುಗಡೆ ಮಾಡದಿರಲು ಪಾಕ್ ತೀರ್ಮಾನಿಸಿದೆ.
ತಾಂತ್ರಿಕ ದೋಷದಿಂದಾಗಿ ಲಖ್ವಿಗೆ ಜಾಮೀನು ಸಿಕ್ಕಿದೆ ಎಂದು ಪಾಕ್ ಸರ್ಕಾರ ಹೇಳುತ್ತಿದೆ. ಪೇಶಾವರ ಶಾಲೆಯಲ್ಲಿ ಉಗ್ರರು ದಾಳಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾವಾದಿಗಳು ಹಾಜರಾಗಿ ವಾದ ಮಂಡಿಸದೇ ಹೋಗಿದ್ದರಿಂದ ಲಖ್ವಿಗೆ ಜಾಮೀನು ಸಿಕ್ಕಿದೆ ಎಂಬುದು ಪಾಕ್ ಸರ್ಕಾರದ ಸ್ಪಷ್ಟನೆಯಾಗಿದೆ.
ಲಖ್ವಿಗೆ ಜಾಮೀನು ನೀಡಿರುವುದು ಈ ಪ್ರಕರಣದ ಇತರ ಆರು ಆರೋಪಿಗಳಿಗೂ ಜಾಮೀನು ಸಿಗಲು ನೆರವಾಗಬಹುದು. ಈ ಭಯವೂ ಪಾಕಿಸ್ತಾನಕ್ಕಿದೆ. ಹೀಗಾಗಿ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ತೀರ್ಪುನ್ನು ಮರುಪರಿಶೀಲಿಸುವಂತೆ ಕೋರಿ ಸರ್ಕಾರ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಬಿಡುಗಡೆಯ ಆಸೆಯಲ್ಲಿದ್ದ ಉಗ್ರ ಝಕಿಯುರ್ ರೆಹಮಾನ್ ಲಖ್ವಿ ಮತ್ತೆ ಜೈಲಿನಲ್ಲೇ ಉಳಿಯುವ ಸಾಧ್ಯತೆ ದಟ್ಟವಾಗಿದೆ.
Advertisement