17 ಬಾರಿ ಗಂಡನಿಂದ ಚೂರಿ ಇರಿತ: ಅದೃಷ್ಟವಶಾತ್ ಬದುಕುಳಿದ ಮಹಿಳೆ

ತನ್ನ ಮೇಲಿದ್ದ ದೂರನ್ನು ಹಿಂಪಡೆಯದ ಪತ್ನಿಯ ಮೇಲೆ ದ್ವೇಷ...
17 ಬಾರಿ ಗಂಡನಿಂದ ಚೂರಿ ಇರಿತ: ಅದೃಷ್ಟವಶಾತ್ ಬದುಕುಳಿದ ಮಹಿಳೆ

ಕೊಯಮತ್ತೂರು: ತನ್ನ ಮೇಲಿದ್ದ ದೂರನ್ನು ಹಿಂಪಡೆಯದ ಪತ್ನಿಯ ಮೇಲೆ ದ್ವೇಷವನ್ನಿಟ್ಟುಕೊಂಡಿದ್ದ ಪತಿ, ಆಕೆಯ ಮೇಲೆ 17 ಬಾರಿ ಚೂರಿಯಿಂದ ಇರಿದ ಘಟನೆ ಸೆಲ್ವಾಪುರಂನ ಎಲ್ಐಸಿ ಕಾಲೋನಿಯಲ್ಲಿ ಬುಧವಾರ ನಡೆದಿದೆ.

ಗಂಡನನ್ನು ಕಳೆದುಕೊಂಡಿದ್ದ ಕತೀಜ(39) ಎಂಬಾಕೆ 5 ವರ್ಷಗಳ ಹಿಂದಷ್ಟೇ ಸಕ್ತಿಡೊಸ್ (32) ಎಂಬುವವನನ್ನು ಮದುವೆಯಾಗಿದ್ದರು. ಕತೀಜ ಹೂವಿನ ವ್ಯಾಪಾರ ಮಾಡುತ್ತಿದ್ದು ಇವರಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ.

ಮದುವೆಯಾಗಿ ಕೆಲವು ತಿಂಗಳು ಕಳೆಯುತ್ತಿದ್ದಂತೆಯೇ ಕುಡಿತದ ಅಭ್ಯಾಸವನ್ನು ರೂಡಿಸಿಕೊಂಡಿದ್ದ ಸಕ್ತಿಡೊಸ್ ಪ್ರತಿ ನಿತ್ಯ ಕುಡಿದು ಬಂದು ಹಣ ನೀಡುವಂತೆ ಹೆಂಡತಿಯ ಮೇಲೆ ಹಲ್ಲೆ ನಡೆಸುತ್ತಿದ್ದನು. ಇದಕ್ಕೆ ರೋಸಿ ಹೋಗಿದ್ದ ಕತೀಜ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ಸಕ್ತಿಡೊಸ್ನನ್ನು ಠಾಣೆಗೆ ಕರೆದೊಯ್ದು ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಹೆಂಡತಿ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಸಕ್ತಿಡೊಸ್ ಎಂದಿನಂತೆ ಬುಧವಾರ ರಾತ್ರಿ ಕುಡಿದ ಅಮಲಿನಲ್ಲಿ ಮನೆಗೆ ಬಂದು ಕತೀಜ ನೀಡಿದ್ದ ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಕತೀಜ ನಿರಾಕರಿಸಿದ್ದಾಳೆ. ಕೋಪಗೊಂಡ ಸಕ್ತಿಡೊಸ್ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು 17 ಬಾರಿ ಆಕೆಯ ಕುತ್ತಿಗೆಯನ್ನು ಇರಿದಿದ್ದಾನೆ.

ಕತೀಜಾಳ ಮನೆಯಲ್ಲಿ ಬರುತ್ತಿದ್ದ ಕೂಗು ಕೇಳಿಸಿಕೊಂಡ ನೆರೆಯಮನೆಯವರು ಏನಾಯಿತು ಎಂದು ಸ್ಥಳಕ್ಕಾಗಮಿಸುವಷ್ಟರಲ್ಲಿ ಸಕ್ತಿಡೊಸ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಕತೀಜಳನ್ನು ಕಂಡ ನೆರೆಮನೆಯವರು ಸ್ಥಳೀಯ ಕೊಯಮತ್ತೂರು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕತೀಜಳಿಗೆ ಕುತ್ತಿಗೆಗೆ ಶಸ್ತ್ರಕ್ರಿಯೆ ನಡೆಸಲಾಗಿದ್ದು, 24 ಹೊಲಿಗೆಗಳನ್ನು ಹಾಕಲಾಗಿದೆ. ಪ್ರಸ್ತುತ ಕತೀಜಾಳ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ಕೊಯಮತ್ತೂರು ವೈದ್ಯಕೀಯ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೆಲ್ವಾಪುರಂನ ಪೊಲೀಸರು ಸಕ್ತಿಡೊಸ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com