
ಬೆಂಗಳೂರು: ಮಕ್ಕಳ ಸುರಕ್ಷತೆ, ಮಹಿಳೆಯರ ವಿರುದ್ಧದ ಅಪರಾಧಗಳು, ದರೋಡೆ, ಕಳ್ಳತನದಂಥ ಕೃತ್ಯಗಳ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಿಸಿಬಿ ಪೊಲೀಸರು ಇದೇ ಮೊದಲ ಬಾರಿಗೆ ಸುರಕ್ಷತಾ ಸಾಧನ ಮತ್ತು ಸಲಕರಣೆಗಳ ಪ್ರದರ್ಶನ ಆಯೋಜಿಸಿದ್ದು, ಮೇ ಸೇಫ್, ಸ್ಮಾರ್ಟ್ ವಾಚ್ ಮುಂತಾದ ಸಾಧನಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ರಾಜಾಜಿನಗರದ ಒರಾಯನ್ ಮಾಲ್‌ನಲ್ಲಿ ಆಯೋಜಿಸಿರುವ ಎರಡು ದಿನಗಳ ಪ್ರದರ್ಶನಕ್ಕೆ ಶುಕ್ರವಾರ ನಟಿ ರಾಗಿಣಿ ದ್ವಿವೇದಿ ಚಾಲನೆ ನೀಡಿದರು.
ಪ್ರದರ್ಶನದಲ್ಲಿ 24 ಸ್ಟಾಲ್‌ಗಳನ್ನು ಹಾಕಲಾಗಿದ್ದು ಹಲವು ಸುರಕ್ಷತಾ ಸಾಧನಗಳನ್ನು ಪ್ರದರ್ಶನಕ್ಕಿಡಲಾಗಿದೆ ಎಂದು ಸಿಸಿಬಿ ಡಿಸಿಪಿ ಅಭಿಷೇಕ್ ಗೋಯಲ್ ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಬಿ. ದಯಾನಂದ, ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಸಿಪಿ ಅಭಿಷೇಕ್ ಗೋಯಲ್, ಟಿ.ಆರ್.ಸುರೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಮೈ ಸೇಫ್
ಉತ್ತಮ ಗುಣಮಟ್ಟದ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯಬಲ್ಲ ಮೊಬೈಲ್ ಫೋನ್‌ಗಳನ್ನು ಬಳಸಿ ಉಪಕರಣವೊಂದನ್ನು ತಯಾರಿಸಲಾಗಿದೆ. ಜಿಪಿಎಸ್ ಅಧಾರದ ಮೇಲೆ ಕೆಲಸ ಮಾಡುವ 'ಮೈ ಸೇಫ್' ಹೆಸರಿನ ಈ ಸಾಧನವನ್ನು ಶಾಲಾ ಬಸ್, ಕ್ಯಾಬ್ ಸೇರಿದಂತೆ ಎಲ್ಲ ಮಾದರಿಯ ವಾಹನಗಳಲ್ಲಿ ಅಳವಡಿಸಬಹುದು. ವಾಹನದಲ್ಲಿ ಸಂಚರಿಸುವ ಮಕ್ಕಳ ಪಾಲಕರ ದೂರವಾಣಿ ಸಂಖ್ಯೆ ಹಾಗೂ ಶಾಲೆಯಲ್ಲಿರುವ ಕಂಪ್ಯೂಟರ್‌ಗೂ ಈ ಸಾಧನದೊಂದಿಗೆ ಸಂಪರ್ಕ ಕಲ್ಪಿಸಬಹುದು. ಶಾಲಾ ಬಸ್‌ನಲ್ಲಿ ಮಕ್ಕಳು, ಚಾಲಕ, ಕ್ಲೀನರ್ ಹಾಗೂ ಮೇಲ್ವಿಚಾರಕರ ಮೇಲೆ ಈ ಉಪಕರಣ ನಿಗಾ ಇರಿಸುತ್ತದೆ. ಅಲ್ಲದೇ ಪ್ರತಿ ಐದು ನಿಮಿಷಗಳಿಗೊಮ್ಮೆ ಪಾಲಕರ ಮೊಬೈಲ್ ಫೋನ್ ಅಥವಾ ಕಂಪ್ಯೂಟರ್‌ಗೆ ಫೋಟೋಗಳನ್ನು ರವಾನಿಸುತ್ತಿದೆ. ಈ ಮೂಲಕ ತಮ್ಮ ಮಕ್ಕಳ ಮೇಲೆ ಪಾಲಕರು ನಿಗಾ ಇಡಬಹುದು.
ಸ್ಮಾರ್ಟ್ ವಾಚ್
ಮಕ್ಕಳ ಮೇಲೆ ನಿಗಾ ಇರಿಸಲು ಲಾಕ್‌ಟೆಲ್ ಸಂಸ್ಥೆ ಸ್ಮಾರ್ಟ್ ವಾಚ್ ಅಭಿವೃದ್ಧಿಪಡಿಸಿದೆ. ಮೊಬೈಲ್ ಸಿಮ್‌ಕಾರ್ಡ್ ಹಾಗೂ ಜೆಪಿಎಸ್ ವ್ಯವಸ್ಥೆ ಮೂಲಕ ವಾಚ್ ಕೆಲಸ ಮಾಡಲಿದೆ. 1 ನೇ ತರಗತಿಯಿಂದ 10 ನೇತರಗತಿ ವಿದ್ಯಾರ್ಥಿಗಳು ಕೈಗೆ ಇದನ್ನು ಕಟ್ಟಬಹುದು. ಶಾಲೆ, ಆವರಣ, ಶಾಲೆಯಿಂದ ಮನೆಗೆ ಹೋಗುವ ಮಾರ್ಗವನ್ನು ವಾಚ್‌ಗೆ ಮುಂಚಿತವಾಗಿ ಅಳವಡಿಸಲಾಗಿರುತ್ತದೆ. ಮಕ್ಕಳು ಒಂದು ವೇಳೆ ಈ ಸ್ಥಳಗಳನ್ನು ಹೊರತುಪಡಿಸಿ ಬೇರೆ ಕಡೆ ಹೋದರೆ ಪಾಲಕರಿಗೆ ಸಂದೇಶ ಹೋಗುತ್ತದೆ. ಅಲ್ಲದೇ ಮಕ್ಕಳ ಇರುವಿಕೆ ಬಗ್ಗೆ ಜಿಪಿಎಸ್ ಮೂಲಕ ಸಂದೇಶ ಕಳುಹಿಸಿಕೊಡುತ್ತದೆ. ಸದ್ಯ ಈ ವಾಚ್ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು 2 ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ವಾಚ್ ಅಭಿವೃದ್ಧಿಪಡಿಸುತ್ತಿರುವ ಎಂಜಿನಿಯರ್ ಅಮಿತ್ ತಿಳಿಸಿದರು.
ಐಡಿ ಬ್ಯಾಡ್ಜ್
ಮಕ್ಕಳ ಸುರಕ್ಷತೆಗಾಗಿ ಮೊಬೈಲ್ ಗಾತ್ರದ ಸಾಧನ ಅಭಿವೃದ್ಧಿಪಡಿಸಲಾಗಿದೆ. ಐಡಿ ಕಾರ್ಡ್ ಹಿಂಭಾಗದಲ್ಲಿ ಇದನ್ನು ಅಳವಡಿಸಲಾಗುತ್ತದೆ. ಉಪಕರಣದ ಮೇಲೆ 1 ರಿಂದ 3 ಸಂಖ್ಯೆಗಳು ಹಾಗೂ ತುರ್ತು ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ. ಮಕ್ಕಳು ಏನಾದರೂ ಅಪಾಯಕ್ಕೆ ಸಿಲುಕಿದಲ್ಲಿ, ಅದರಲ್ಲಿ ಅಳವಡಿಸಲಾಗಿರುವ ನಂಬರ್‌ಗಳನ್ನು ಡಯಲ್ ಮಾಡಿದರೆ ಸಂದೇಶ ರವಾನೆಯಾಗುತ್ತದೆ. 1 ಪಾಲಕರಿಗೆ, 2 ಶಾಲೆಗೆ, 3 ಪೊಲೀಸರಿಗೆ ಹಾಗೂ 4ನ್ನು ಡಯಲ್ ಮಾಡಿದರೆ ಅತ್ಯಂತ ತುರ್ತು ಎನ್ನುವ ಸಂದೇಶ ರವಾನೆಯಾಗುತ್ತದೆ.
ಮಿಷ್ ಆ್ಯಪ್
ದ್ವಿಚಕ್ರ ವಾಹನ, ಕಾರು ಸೇರಿದಂತೆ ನಾನಾ ಮಾದರಿಯ ವಾಹನಗಳಲ್ಲಿ ಸಂಚರಿಸುವಾಗ ಅಪಘಾತ ಸಂಭವಿಸಿದರೆ, ಪಾಲಕರು ಹಾಗೂ ಪೋಷಕರಿಗೆ ಸಂದೇಶ ರವಾನೆಗೆ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಬ್ಬರು ಉಚಿತ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ . ಆ್ಯಂಡ್ರಾಯ್ಡ್‌ನಲ್ಲಿ ಮಿಷ್‌ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ತಮ್ಮ ನಿಕವರ್ತಿಗಳ ಮೊಬೈಲ್ ಸಂಖ್ಯೆ ಹಾಕಬೇಕು. ವಾಹನ ಚಲಾಯಿಸುವಾಗ ಇಂಟರ್ನೆಟ್ ಆಫ್ ಇದ್ದರೂ ಅದು ಕಾರ್ಯ ನಿರ್ವಹಿಸುತ್ತದೆ. ಅಪಘಾತವಾಗಿ ಮೊಬೈಲ್ ಫೋನ್ ಕೆಳಗೆ ಬಿದ್ದರೆ, ನೋಂದಣಿ ಮಾಡಿರುವ ಸಂಖ್ಯೆಗೆ ಫೋನ್‌ನಿಂದ ಮೆಸೇಜ್ ತಲುಪುತ್ತದೆ.
ಈ ಸಂದೇಶಕ್ಕೆ ಪ್ರತಿಯಾಗಿ ಅವರು ಕರೆ ಮಾಡಿದರೆ 20 ಸೆಕೆಂಡ್ ಕಾಲ ಮೊಬೈಲ್ ರಿಂಗ್ ಆಗುತ್ತದೆ. ಒಂದು ವೇಳೆ ಕರೆಗೆ ಪ್ರತಿಕ್ರಿಯೆ ಬಾರದಿದ್ದರೆ ಆಗ ಅಪಘಾತಕ್ಕೀಡಾಗಿರುವುದು ಖಚಿತವಾಗುತ್ತದೆ. ಜಿಪಿಎಸ್ ಮೂಲಕ ಅಪಘಾತದ ಸ್ಥಳ ತಿಳಿಯುತ್ತದೆ. ತಕ್ಷಣ ಅಪಘಾತಕ್ಕೀಡಾದವರ ನೆರವಿಗೆ ಹೋಗಬಹುದು. ಅಮೆರಿಕದಲ್ಲಿ ಕೆಲಸ ನಿರ್ವಹಿಸಿರುವ ಅಜಯ್ ಹಾಗೂ ನಗರದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ವಿನೋದ್ ಎಂಬುವರು ಮಿಷ್‌ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.
2ವರ್ಷಗಳ ಹಿಂದೆ ವಿನೋದ್‌ರ ಸಹೋದರ ಚೆನ್ನೈ ಹೊರವಲಯದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಅದರ ರಭಸಕ್ಕೆ ವಿನೋದ್‌ರ ಸಹೋದರ ವಾಹನ ಸಮೇತ ರಸ್ತೆ ಬದಿಯ ಪೊದೆಯೊಂದರಲ್ಲಿ ಬಿದ್ದಿದ್ದರು. 2 ದಿನಗಳ ಬಳಿಕ ಶವ ಸಿಕ್ಕಿತ್ತು. ಈ ರೀತಿ ಬೇರೆಯವರಿಗೆ ಆಗಬಾರದು ಹಾಗೂ ಅಪಘಾತಕ್ಕೀಡಾದವರಿಗೆ ತುರ್ತು ನೆರವು ಸಿಗಲೆಂದು ಆ್ಯಪ್ ಅಭಿವೃದ್ಧಿಪಡಿಸಿರುವುದಾಗಿ ವಿನೋದ್ ಹೇಳಿದರು.
Advertisement