
ಇಸ್ಲಾಮಾಬಾದ್: ಪಾಕಿಸ್ತಾನ ಜೈಲಿನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಸುಮಾರು 500 ಉಗ್ರಗಾಮಿಗಳ ಪೈಕಿ 55 ಉಗ್ರರಿಗೆ ಗಲ್ಲು ಶಿಕ್ಷೆ ಜಾರಿ ಮಾಡಲು ಪಾಕಿಸ್ತಾನದಲ್ಲಿ ಸಿದ್ಧತೆ ಸಾಗಿದೆ.
2008ರಲ್ಲಿ ಪಾಕಿಸ್ತಾನ ಸರ್ಕಾರ ಗಲ್ಲು ಶಿಕ್ಷೆಗೆ ನಿಷೇಧ ಹೇರಿತ್ತು. ಇತ್ತಿಚೆಗೆ ಪಾಕಿಸ್ತಾನದ ಪೇಶಾವರದ ಸೈನಿಕ ಶಾಲೆಯ ಮೇಲೆ ತೆಹ್ರಿಕ್-ಇ-ತಾಲಿಬಾನ್ ಸಂಘಟನೆ ಉಗ್ರರು ಮನಬಂದಂತೆ ಗುಂಡಿನ ದಾಳಿ ಹಾಗೂ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಸುಮಾರು 130ಕ್ಕೂ ಹೆಚ್ಚು ಮಕ್ಕಳನ್ನು ಬಲಿ ತೆಗೆದುಕೊಂಡಿದ್ದರು.
ಉಗ್ರರು ನಡೆಸಿದ್ದ ಈ ಪೈಶಾಚಿಕ ಕೃತ್ಯವನ್ನು ತೀವ್ರ ಖಂಡಿಸಿದ್ದ ಪಾಕಿಸ್ತಾನ ಸರ್ಕಾರ, 2008ರ ಮರಣ ದಂಡನೆ ಶಿಕ್ಷೆಗೆ ವಿಧಿಸಿದ್ದ ನಿಷೇಧವನ್ನು ಹಿಂಪಡೆದುಕೊಂಡಿತು. ಪಾಕಿಸ್ತಾನ ಜೈಲುಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಉಗ್ರರರಿಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಕೂಡಲೇ ಜಾರಿಗೊಳಿಸುವಂತೆ ಪಾಕಿಸ್ತಾನ ಸರ್ಕಾರ ಆದೇಶ ಹೊರಡಿಸಿತ್ತು.
ಇದರ ಬೆನ್ನಲ್ಲೆ ಪಾಕಿಸ್ತಾನದ ರಾಷ್ಟ್ರಪತಿ ಮನ್ಮೂನ್ ಹುಸೇನ್, ಗಲ್ಲು ಶಿಕ್ಷೆಗ ಒಳಗಾಗಿದ್ದ 55 ಮಂದಿ ಉಗ್ರರ ಕ್ಷಮಾಧಾನ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.
ಪೇಶಾವರ ಸೈನಿಕ ಶಾಲೆ ದುರಂತದ ಬೆನ್ನಲ್ಲೆ 500ಕ್ಕೂ ಹೆಚ್ಚು ಉಗ್ರರಿಗೆ ಪಾಕಿಸ್ತಾನ ಸರ್ಕಾರ ಗಲ್ಲು ಶಿಕ್ಷೆ ಹೊರಡಿಸಿದ್ದು, ಅವುಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ಆಂತರಿ ಸಚಿವ ನಿಸಾರ್ ಖಾನ್ ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜೈಲುಗಳಲ್ಲಿರುವ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಸುಮಾರು 500 ಉಗ್ರರ ಪೈಕಿ 55 ಉಗ್ರರಿಗೆ ಗಲ್ಲು ಶಿಕ್ಷೆ ಜಾರಿ ಮಾಡಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ.
Advertisement