
ನೈಜೀರಿಯಾ: ನೈಜೀರಿಯಾದ ಡುಕ್ಕು ಮೋಟಾರ್ ಪಾರ್ಕ್ ಬಳಿ ಮಹಿಳಾ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನೇ ಸ್ಪೋಟಿಸಿಕೊಂಡ ಪರಿಣಾಮ ಬಾಂಬರ್ ಸೇರಿದಂತೆ 25 ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಸೋಮವಾರ ಬೆಳಿಗ್ಗೆ 10.50ರ ಸುಮಾರಿಗೆ ನೈಜೀರಿಯಾ ಗಾಂಬೆ ರಾಜ್ಯದ ಡುಕ್ಕು ಮೋಟಾರ್ ಪಾರ್ಕ್‌ನ ಬಳಿ ನಿಂತಿದ್ದ ಖಾಸಗಿ ಬಸ್‌ನಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಸುಮಾರು 25 ಮಂದಿ ಸಾವನ್ನಪ್ಪಿದ್ದಾರೆ ಅಲ್ಲದೆ, 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಸ್ಪೋಟದಲ್ಲಿ ಗಾಯಗೊಂಡ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದಂತೆ, ಡುಕ್ಕು ಮೋಟಾರ್ ಪಾರ್ಕ್‌ನ ಬಳಿ ನಿಂತಿದ್ದ ಬಸ್‌ನಲ್ಲಿ ಸುಮಾರು 45 ಕ್ಕೂ ಅಧಿಕ ಜನರಿದ್ದರು. ಸುತ್ತಮುತ್ತ ನೋಡುತ್ತಿದ್ದ ಮಹಿಳೆಯೊಬ್ಬಳು, ತಕ್ಷಣ ಬಸ್ ಒಳಗೆ ಹೋದಳು. ನಂತರ ತಾನು ತೊಟ್ಟಿದ್ದ ಬಾಂಬನ್ನು ಇದ್ದಕ್ಕಿದ್ದಂತೆ ಸ್ಪೋಟಿಸಿದಳು ಎಂದು ಹೇಳಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಾಕ್ಕಾಗಮಿಸಿದ ನೈಜೀರಿಯಾದ ಅಗ್ನಿ ಶಾಮಕ ದಳದ ಸಿಬ್ಬಂದಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Advertisement