ಆ್ಯಸಿಡ್ ದಾಳಿ: ಶಿಸ್ತು ಕ್ರಮಕ್ಕೆ ಮುಂದಾಯ್ತು ಕೇಂದ್ರ

ಇತ್ತೀಚೆಗಷ್ಟೇ ದೆಹಲಿಯಲ್ಲಿ ಮಹಿಳಾ ವೈದ್ಯರ ಮೇಲೆ ನಡೆದ ಆ್ಯಸಿಡ್ ದಾಳಿಯಿಂದಾಗಿ ಎಚ್ಚೆತ್ತುಕೊಂಡಿರುವ...
ಆ್ಯಸಿಡ್ ದಾಳಿ: ಶಿಸ್ತು ಕ್ರಮಕ್ಕೆ ಮುಂದಾಯ್ತು ಕೇಂದ್ರ

ನವದೆಹಲಿ: ಇತ್ತೀಚೆಗಷ್ಟೇ ದೆಹಲಿಯಲ್ಲಿ ಮಹಿಳಾ ವೈದ್ಯರ ಮೇಲೆ ನಡೆದ ಆ್ಯಸಿಡ್ ದಾಳಿಯಿಂದಾಗಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಶಿಸ್ತು ಕ್ರಮಕ್ಕೆ ಮುಂದಾಗಿದೆ.

ದೇಶದಲ್ಲಿ ಎಲ್ಲೆಂದರಲ್ಲಿ ಸಿಗುತ್ತಿದ್ದ ಆ್ಯಸಿಡ್ ಮಾರಾಟಕ್ಕೆ ಕಡಿವಾಣ ಹೇರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆ್ಯಸಿಡ್ ಮಾರಾಟ ಸಂಬಂಧ ರಚಿಸಲಾಗಿರುವ ಶಿಸ್ತು ಕ್ರಮ ನಿಯಮ ಜಾರಿಗೆ ಒಪ್ಪಿಗೆ ಸೂಚಿಸಿದ್ದಾರೆ.

ಮಾರುಕಟ್ಟೆಗಳಲ್ಲಿ ಬಹು ಸುಲಭವಾಗಿ ಆ್ಯಸಿಡ್ ಸಿಗುತ್ತಿದ್ದು, ಇದನ್ನು ಅನೇಕ ಕಿಡಿಗೇಡಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ಹೆಚ್ಚಾಗುತ್ತಿದೆ.

ಇದನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆ್ಯಸಿಡ್ ಮಾರಾಟ ಕುರಿತು ಕ್ರಮ ಕೈಗೊಳ್ಳಲು ಮುಂದಾಗಿದೆ. ಆ್ಯಸಿಡ್ ತಯಾರಕ ಮತ್ತು ಮಾರಾಟಗಾರರಿಗೆ ಶಿಸ್ತು ಕ್ರಮ ಕುರಿತು ಹೊಸ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ಇನ್ನು ಮುಂದೆ ಆ್ಯಸಿಡ್ ಮಾರಾಟ ಮಾಡಬೇಕಾದರೆ, ಅನುಮತಿ ಪಡೆಯಬೇಕಿದೆ. ಅಲ್ಲದೇ, ಚಿಲ್ಲರೆ ವ್ಯಾಪಾರಿಗಳು ಮತ್ತು ದಾಸ್ತಾನುಗಾರರು ನೋಂದಣಿ ಮಾಡಿಕೊಳ್ಳಬೇಕಿದೆ. ಆ್ಯಸಿಡ್ ಮಾರಾಟ ಮಾಡುವವರು ಅನುಮತಿ ಪತ್ರ ಪಡೆಯಲು ತಮ್ಮ ಗುರುತಿನ ಚೀಟಿಯ ಪ್ರತಿಯನ್ನು ಕಡ್ಡಾಯವಾಗಿ ನೀಡಬೇಕಿದೆ.

ಆ್ಯಸಿಡ್ ದಾಳಿ ನಡೆಸಿದವರಿಗೆ, ಅಪರಾಧಕ್ಕನುಗುಣವಾಗಿ ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆ ಶಿಕ್ಷೆ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಸೆಕ್ಷನ್ 376ಎ-ಡಿ ಆಫ್ ಐಪಿಸಿ ಅಡಿಯಲ್ಲಿ ಬರುವ ಆ್ಯಸಿಡ್ ದಾಳಿ ಪ್ರಕರಣಗಳ ವಿಚಾರಣೆ 60 ದಿನಗಳೊಳಗೆ ಅಂತ್ಯಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಆ್ಯಸಿಡ್ ದಾಳಿಗೆ ಒಳಗಾದವರಿಗೆ ಉಚಿತ ಚಿಕಿತ್ಸೆಗಾಗಿ ದಾಳಿಗೆ ಒಳಗಾದವರ ಕೇಂದ್ರ ಪರಿಹಾರ ನಿಧಿಯಿಂದ ಹಣ ಬಿಡುಗಡೆ ಮಾಡಲಾಗುತ್ತದೆ. ಸ್ವ ಉದ್ಯೋಗ ಅವಕಾಶ, ವಿವಿಧ ಉದ್ಯೋಗಗಳ ತರಬೇತಿ, ಮೀಸಲಾತಿ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲಾಗುವುದು. ಅಲ್ಲದೇ ದಾಳಿಗೆ ತುತ್ತಾದವರಿಗೆ ಪುನರ್ವಸತಿ ಕೇಂದ್ರ ನಿರ್ಮಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com