ಬಿಜೆಪಿಗೆ ಐದು ನಿಬಂಧನೆ ವಿಧಿಸಿದ ಪಿಡಿಪಿ

ಸರ್ಕಾರ ಮಾಡ್ತೇವೆ. ಆದರೆ ನಮ್ಮ ನಿಲುವುಗಳಲ್ಲಿ ಬದಲಿಲ್ಲ. ನಮ್ಮ ಷರತ್ತುಗಳಿಗೆ ಒಪ್ಪಲೇಬೇಕು...
ಬಿಜೆಪಿಗೆ ಐದು ನಿಬಂಧನೆ ವಿಧಿಸಿದ ಪಿಡಿಪಿ

ಶ್ರೀನಗರ/ನವದೆಹಲಿ: 'ಸರ್ಕಾರ ಮಾಡ್ತೇವೆ. ಆದರೆ ನಮ್ಮ ನಿಲುವುಗಳಲ್ಲಿ ಬದಲಿಲ್ಲ. ನಮ್ಮ ಷರತ್ತುಗಳಿಗೆ ಒಪ್ಪಲೇಬೇಕು'

-ಹೀಗೆಂದು ಬಿಜೆಪಿಗೆ ಪಿಡಿಪಿ ಖಡಕ್ ಸಂದೇಶ ನೀಡಿದೆ. ಇಂಥ ನಿಲುವು ಪ್ರದರ್ಶಿಸುವ ಮೂಲಕ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ ಪ್ರಕ್ರಿಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ ಆ ಪಕ್ಷ.

ವಿಶೇಷವಾಗಿ ಸಂವಿಧಾನದ 370ನೇ ವಿಧಿಯ ಯಥಾಸ್ಥಿತಿ ಮತ್ತು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಕುರಿತಂತೆ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಅದು ಸೂಚಿಸಿದೆ. ಗಮನಾರ್ಹ ಅಂಶವೆಂದರೆ ತನ್ನ ಐಧು ಷರತ್ತುಗಳ ಬಗ್ಗೆ ವಕ್ತಾರ ನಯೀಮ್ ಅಖ್ತರ್ ಮೂಲಕವೇ ನಿಲುವುಗಳನ್ನು ಪಿಡಿಪಿ ನಾಯಕರಾದ ಮೆಹಬೂಬಾ ಮುಫ್ತಿ ಮತ್ತು ಮುಫ್ತಿ ಮೊಹಮ್ಮದ್ ಸಯೀದ್ ಬಹಿರಂಗಪಡಿಸುತ್ತಿದ್ದಾರೆ.

ಸರ್ಕಾರ ರಚನೆ ಬಗ್ಗೆ ಹಿಂಬಾಗಿಲ ಮಾತುಕತೆಗಳು ನಡೆಯುತ್ತಿರುವಾಗಲೇ ಪಿಡಿಪಿ ತನ್ನ ಪ್ರತ್ಯೇಕತಾವಾದಿ ಅಜೆಂಡಾ ಮುಂದಿಟ್ಟಿದೆ.

ಸರ್ಕಾರ ರಚಿಸಲು ನಾವು ಸಿದ್ಧರಿದ್ದೇವೆ. ಹಾಗೆಂದು ನಮ್ಮ ಮೂಲ ನಿಲುವುಗಳಲ್ಲಿ ಯಾವುದೇ ಬದಲು ಮಾಡಿಕೊಳ್ಳುವುದಿಲ್ಲ. ನಮಗೆ ಬೆಂಬಲ ಕೊಡುವವರು (ಬಿಜೆಪಿ) ಅದನ್ನು ಪಾಲಿಸಬೇಕು. ಎಂದು ನಯೀಮ್ ಖಾನ್ ತಿಳಿಸಿದ್ದಾರೆ. ಈ ಮಾತಿನ ಮೂಲಕ ಕಣಿವೆ ರಾಜ್ಯದ ಸರ್ಕಾರ ರಚನೆ ಪ್ರಕ್ರಿಯೆಯಲ್ಲಿ ಹೆಚ್ಚು ಸ್ಥಾನ ಪಡೆದ ತನ್ನ ಮಾತೇ ನಡೆಯಬೇಕು ಎಂಬ ವಾದವನ್ನು ಪರೋಕ್ಷವಾಗಿ ಅಖ್ತರ್ ಪ್ರಸ್ತಾಪಿಸಿದ್ದಾರೆ.

ಎಲ್ಲರ ಜತೆಗೂ ಚರ್ಚೆ: ಸರ್ಕಾರ ರಚನೆ ಬಗ್ಗೆ ಬಿಜೆಪಿ ಸೇರಿದಂತೆ ಎಲ್ಲರ ಜತೆಗೂ ಪಕ್ಷ ಚರ್ಚಿಸುತ್ತಿದೆ. ಆದರೆ ಕೆಲವೊಂದು ಪ್ರಮುಖ ವಿಚಾರಗಳ ಬಗ್ಗೆ ನಾವು ಬೆಂಬಲ ಪಡೆಯುವವರಿಂದ ಸ್ಪಷ್ಟವಾಗಬೇಕಾಗಿದೆ ಎಂದರು ಅಖ್ತರ್. ಎನ್ಸಿ ಬೆಂಬಲ ಬಗ್ಗೆ ಪ್ರಸ್ತಾಪಿಸಿದಾಗ ಅಂಥ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದರು. ಪಿಡಿಪಿಯಲ್ಲಿ ಮೆಹಬೂಬಾ ಮುಫ್ತಿ ಮತ್ತು ಮುಫ್ತಿ ಮೊಹಮ್ಮದ್ ಸಯೀದ್ ಮಾತುಗಳೇ ಅಂತಿಮ ಎಂದರು.

ಐದು ಷರತ್ತುಗಳು

ಪಿಡಿಪಿಯ ಸ್ವಯಂ ಆಡಳಿತದ ಬಗ್ಗೆ ಗೌರವ ಸೂಚಿಸಬೇಕು(ಗಡಿ ನಿಯಂತ್ರಣ ರೇಖೆಯ ಮೇಲೆ ಹೊಂದಿರುವ ನಿಲುವು ಸಡಿಲಗೊಳಿಸುವುದು)

ಜಮ್ಮು-ಕಾಶ್ಮೀರದ ಶಾಂತಿಯುತ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ರದ್ದು.

ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ವಿಧಿಯನ್ನು ಮತ್ತುಷ್ಟು ಬಲಪಡಿಸಬೇಕು

ಪಿಡಿಪಿಯ ಮುಫ್ತಿ ಮೊಹಮ್ಮದ್ ಸಯೀದ್ ಮುಖ್ಯಮಂತ್ರಿಯಾಗಿ ಆರು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಲು ಅವಕಾಶಕೊಡಬೇಕು.

ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಪರಿಹಾರ. ಇದಲ್ಲದೆ ರಾಜ್ಯಕ್ಕೆ ಸಮಗ್ರ ಹಣಕಾಸಿನ ನೆರವು ಘೋಷಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com