ಕಣ್ಮರೆಯಾದ ಏರ್ ಏಷ್ಯಾ ಸುಳಿವಿಲ್ಲ

ಸದ್ದಿಲ್ಲದೆ ಕಣ್ಮರೆಯಾದ ಏರ್ ಏಷ್ಯಾ ವಿಮಾನದ ಸುಳಿವಿಲ್ಲ. 162 ಮಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನ ಕಣ್ಮರೆಯಾದಾಗಿನಿಂದ ...
ಕಣ್ಮರೆಯಾದ  ಏರ್ ಏಷ್ಯಾ ವಿಮಾನ ಪ್ರಯಾಣಿಕರ ಸಂಬಂಧಿಕರು ಕಣ್ಣೀರಿಡುತ್ತಿರುವುದು
ಕಣ್ಮರೆಯಾದ ಏರ್ ಏಷ್ಯಾ ವಿಮಾನ ಪ್ರಯಾಣಿಕರ ಸಂಬಂಧಿಕರು ಕಣ್ಣೀರಿಡುತ್ತಿರುವುದು

ಸುರಬಯಾ: ಸದ್ದಿಲ್ಲದೆ ಕಣ್ಮರೆಯಾದ ಏರ್ ಏಷ್ಯಾ ವಿಮಾನದ ಸುಳಿವಿಲ್ಲ. 162 ಮಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನ ಕಣ್ಮರೆಯಾದಾಗಿನಿಂದ ನಿರಂತರ ಶೋಧ ಕಾರ್ಯಾಚರಣೆ ನಡೆಯುತ್ತಿದೆಯಾದರೂ ಯಾವುದೇ ಅವಶೇಷಗಳು ಇನ್ನೂ ಪತ್ತೆಯಾಗಿಲ್ಲ.

ಹುಡುಕಾಟ ನಡೆಸಲಾಗುತ್ತಿರುವ ಪ್ರದೇಶದಲ್ಲಿ ಎರಡು ಕಡೆ ತೈಲ ತೇಲುತ್ತಿರುವುದು ಕಂಡು ಬಂದಿದೆ ಎಂದು ಸೋಮವಾರ ಮಧ್ಯಾಹ್ನ  ಇಂಡೋನೇಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ, ಈ ಪ್ರದೇಶದಿಂದ ನೂರಾರು ಮೈಲು ದೂರದಲ್ಲಿ  (ಏರ್ ಏಷ್ಯಾವು ಸಂಪರ್ಕ ಕಡಿದುಕೊಂಡ ಸ್ಥಳದಲ್ಲಿ) ವಿಮಾನದ ಅವಶೇಷವೆನ್ನಲಾದ ವಸ್ತು ಕಂಡು ಬಂದಿದೆ ಎಂದು ಶೋಧದಲ್ಲಿ ತೊಡಗಿರುವ ಆಸ್ಟ್ರೇಲಿಯಾದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಆದರೆ ಇವರಿಬ್ಬರಲ್ಲಿ ಯಾರು ಹೇಳುತ್ತಿರುವುದು ಸರಿ, ನಿಜಕ್ಕೂ ಇವರಿಗೆ ಕಂಡುಬಂದಿರುವುದು ವಿಮಾನದ ಅವಶೇಷ ಹೌದೇ ಎನ್ನುವ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ಆ ದಿಕ್ಕಿನಲ್ಲಿ ತನಿಖೆ ಮುಂದುವರಿದಿದೆ ಎಂದು ಇಂಡೋನೇಷ್ಯಾ ತಿಳಿಸಿದೆ.

ಶೋಧದಲ್ಲಿ ಹಲವು ರಾಷ್ಟ್ರಗಳು ಭಾಗಿ

ಸಿಂಗಾಪುರ, ಮಲೇಷ್ಯಾ, ಆಸ್ಟ್ರೇಲಿಯಾ, ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳು ಶೋಧ ಕಾರ್ಯದಲ್ಲಿ ಭಾಗಿಯಾಗಿವೆ. ಇದೇ ವೇಳೆ, ಸಮುದ್ರದಡಿಯಲ್ಲಿ ವಿಮಾನಕ್ಕಾಗಿ ಹುಡುಕಾಟ ನಡೆಸುವ ಅತ್ಯಾಧುನಿಕ ತಂತ್ರಜ್ಞಾನಗಳು ಇಂಡೋನೇಷ್ಯಾದ ಬಳಿಯಿಲ್ಲ. ಹೀಗಾಗಿ ಇದಕ್ಕೆ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‌ನ ನೆರವನ್ನು ಪಡೆಯಲಾಗುತ್ತಿದೆ.

ನಿಮ್ಮ ವಿಮಾನ ಎಂದೂ ಕಣ್ಮರೆಯಾಗಲ್ಲ ಎಂದಿದ್ದ ಏರ್ ಏಷ್ಯಾ


ಮಾರ್ಚ್ 8 ರಂದು ಮಲೇಷ್ಯಾದ ಎಂಎಚ್370 ವಿಮಾನ ನಿಗೂಢವಾಗಿ ನಾಪತ್ತೆಯಾದ ಬೆನ್ನಲ್ಲೇ ಏರ್ ಏಷ್ಯಾವು ತನ್ನ ಇನ್-ಫ್ಲೈಟ್ ಮ್ಯಾಗಜಿನ್ ನಲ್ಲಿ ಲೇಖನವೊಂದನ್ನು  ಪ್ರಕಟಿಸಿತ್ತು. ನಮ್ಮ  ಕ್ಯಾಪ್ಟನ್ ಸರ್ವಸನ್ನದ್ಧರಾಗಿದ್ದಾರೆ. ನಿಮ್ಮ ವಿಮಾನ ಎಂದೂ ಕಣ್ಮರೆಯಾಗಲ್ಲ ಎಂಬ ಶೀರ್ಷಿಕೆಯಲ್ಲಿ ಈ ಲೇಖನ ಪ್ರಕಟವಾಗಿತ್ತು.  ಈ ಮೂಲಕ  ಏರ್‌ಏಷ್ಯಾದ  ಸುರಕ್ಷೆ  ಬಗ್ಗೆ ಸ್ಪಷ್ಟಪಡಿಸಲಾಗಿತ್ತು. ಆದರೆ ಎಂಎಚ್370 ಕಣ್ಮರೆಯಾದ ನೋವಿನಲ್ಲಿರುವಾಗ ಇಂತಹ ಲೇಖನ  ಪ್ರಕಟಿಸಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಪ್ರಕರಣ ವಿವಾದಕ್ಕೆ ತಿರುಗುತ್ತಿದ್ದಂತೆ ಏರ್‌ಏಷ್ಯಾವು ಮ್ಯಾಗಜಿನ್ ಅನ್ನೇ ಮಾರುಕಟ್ಟೆಯಿಂದ ವಾಪಸ್ ಪಡೆದುಕೊಂಡಿತ್ತು.


ವಿಮಾನ ಪತನವಾಗಿದೆಯೇ?

ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಡಿದುಕೊಂಡ ಬಳಿಕ ಏರ್ ಏಷ್ಯಾ 8501 ಪತನಗೊಂಡಿರುವ  ಸಾಧ್ಯತೆ ಹೆಚ್ಚಿದೆ ಎಂದು  ಶೋಧ ಮತ್ತು ರಕ್ಷಣಾ ಮುಖ್ಯಸ್ಥ ಹೆನ್ರಿ ಬ್ಯಾಂಬ್ಯಾಂಗ್ ಅಭಿಪ್ರಾಯ ಪಟ್ಟಿದ್ದಾರೆ. ವಿಮಾನದ ಎತಚ್ತರವನ್ನು 32 ಸಾವಿರದಿಂದ 38 ಸಾವಿರ ಅಡಿಗೆ ಹೆಚ್ಚಿಸುವಂತೆ ಪೈಲಟ್ ಕೋರಿಕೊಂಡಿದ್ದರು. ಆದರೆ ಆ ಸಮಯದಲ್ಲಿ ಬೇರೊಂದು ವಿಮಾನ  34 ಸಾವಿರ ಅಡಿ ಎತ್ತರದಲ್ಲಿ ಸಂಚರಿಸುತ್ತಿತ್ತು.  ಹೀಗಾಗಿ ತಕ್ಷಣವೇ ಪೈಲಟ್ ಕೋರಿಕೆ ಒಪ್ಪಲಾಗಲಿಲ್ಲ . ನಂತರ ಎತ್ತರ ಹೆಚ್ಚಿಸಲು ಅನುಮತಿ ನೀಡಬೇಕೆನ್ನುವಾಗ ವಿಮಾನವು ಕಣ್ಮರೆಯಾಗಿತ್ತು. ಇವೆಲ್ಲವನ್ನು ನೋಡಿದರೆ ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಪತನವಾಗಿ ಸಮುದ್ರಕ್ಕೆ ಬಿದ್ದಿರಬಹುದು ಎಂದಿದ್ದಾರೆ ಹೆನ್ರಿ. ಜತೆಗೆ, ವಿಮಾನವು ಗಂಟೆಗೆ 160 ಕಿ.ಮೀಅಂದರೆ ಅತ್ಯಂತ ಕಡಿಮೆ ಮೇಗದಲ್ಲಿ ಸಂಚರಿಸುತ್ತಿತ್ತು ಎಂದೂ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com