ಸಮನ್ವಯ ಭೂ ಸ್ವಾಧೀನ

ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಸರಣಿ ಮುಂದುವರಿದಿದೆ. ಸೋಮವಾರ ಮತ್ತೆರಡು ಆಧ್ಯಾದೇಶಗಳಿಗೆ ಒಪ್ಪಿಗೆ...
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ನವದೆಹಲಿ:  ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಸರಣಿ ಮುಂದುವರಿದಿದೆ. ಸೋಮವಾರ ಮತ್ತೆರಡು ಆಧ್ಯಾದೇಶಗಳಿಗೆ ಒಪ್ಪಿಗೆ ನೀಡಿರುವ ಕೇಂದ್ರ ಸಂಪುಟ ಸಭೆ, ಇವುಗಳನ್ನು ಕಾನೂನು ಮಾಡಲು ಹೊರಟಿದೆ. ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ಮತ್ತು ರಾಷ್ಟ್ರೀಯ ದೆಹಲಿ ಪ್ರಾಂತ ಕಾನೂನುಗಳು (ವಿಶೇಷ ನಿಬಂಧನೆಗಳು ) ಕಾಯ್ದೆಗೆ ಒಪ್ಪಿಗೆ ನೀಡಿದೆ.

ಸರ್ಕಾರ ಈಗಾಗಲೇ ವಿಮೆ, ಕಲ್ಲಿದ್ದಲು ಮತ್ತು ಫಾರ್ಮಾ ಕ್ಷೇತ್ರಕ್ಕೆ ಸಂಬಂಧಿಸಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಒಪ್ಪಿಗೆ ಪಡೆದಿದೆ.

ಸುಗ್ರೀವಾಜ್ಞೆಗಳ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅರುಣ್ ಜೇಟ್ಲಿ,  ರಾಜ್ಯ ಸರ್ಕಾರಗಳು ಮತ್ತು ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿಯೇ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ರಾಷ್ಟ್ರಪತಿಗೆ ಕಳುಹಿಸಲಾಗಿದೆ ಎಂದಿದ್ದಾರೆ. ಫೆಬ್ರವರಿಯಲ್ಲಿ ನಡೆಯಲಿರುವ ಸಂಸತ್‌ನ ಬಜೆಟ್ ಅಧಿವೇಶನದಲ್ಲಿ ಸುಗ್ರೀವಾಜ್ಞೆಗೆ ಅಂಗೀಕಾರ ಪಡೆಯಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಪರಿಹಾರ ಮೊತ್ತದಲ್ಲಿ ಬದಲಿಲ್ಲ


ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಆದ್ಯತೆಯಾಗಿದೆ. ನಾವು ರೈತರ ಹಿತಾಸಕ್ತಿ ಮತ್ತು ಅಭಿವೃದ್ಧಿಯ ಅಗತ್ಯತೆಯನ್ನು ಸಮತೂಗಿಸಿಕೊಂಡು ಹೋಗಬೇಕು. ಯಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೋ, ಅಂಥವರಿಗೆ ನೀಡುವ ಭಾರಿ ಪರಿಹಾರ ಮೊತ್ತದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. ಜತೆಗೆ ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆ, ಗ್ರಾಮೀಣ ಮೂಲ ಸೌಕರ್ಯ ಮತ್ತು ಕಡಿಮೆ ವೆಚ್ಚದ ಮನೆ ನಿರ್ಮಾಣ ಯೋಜನೆಗಳನ್ನು ಕಠಿಣ ನಿಯಮಾವಳಿಗಳ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದಿದ್ದಾರೆ. ಹಿಂದಿನ ಯುಪಿಎ ಸರ್ಕಾರವು ಭೂಮಿ ಖರೀದಿಗೆ ಸಂಬಂಧಿಸಿ ಹೊರಡಿಸಿದ್ದ ನಿರ್ಬಂಧದಿಂದಾಗಿ, ರೈಲು, ಉಕ್ಕು, ಗಣಿ ಹಾಗೂ ರಸ್ತೆಗೆ ಸಂಬಂಧಿಸಿದ ಸುಮಾರು ರು. 20 ಲಕ್ಷ ಕೋಟಿ ವೆಚ್ಚದ ಯೋಜನೆಗಳು ಸ್ಥಗಿತಗೊಂಡಿದ್ದವು. ಆದರೆ ರಕ್ಷಣೆ, ವಿದ್ಯುತ್, ಮೂಲ ಸೌಕರ್ಯ, ಗೃಹ ಮತ್ತಿತರ ಯೋಜನೆಗಳಿಗೆ ಅಡ್ಡಿಯಾದರೆ ಅಭಿವೃದ್ಧಿ ಸಾಧ್ಯವಿಲ್ಲ. ಇವುಗಳು ದೇಶಕ್ಕೆ ಅತ್ಯಗತ್ಯ. ಹಾಗಾಗಿ ಭೂಸ್ವಾಧೀನ ಕಾಯ್ದೆಯಲ್ಲಿ ಕೆಲವೊಂದು ನಿಯಮಗಳನ್ನು ಸಡಿಲಗೊಳಿಸಿ ಸುಧಾರಣೆಗೆ ನೆರವಾಗುವಂತೆ  ಮಾಡಲಾಗಿದೆ ಎಂದೂ ಜೇಟ್ಲಿ ಮಾಹಿತಿ ನೀಡಿದ್ದಾರೆ.


ಸರ್ಕಾರವು ಬದ್ಧತೆಯಿಂದ ಕೆಲಸ ಮಾಡಬೇಕಾಗುತ್ತದೆ. ತನ್ನ ನಿರ್ಧಾರಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಹೆಜ್ಜೆಯಿಡಬೇಕಾಗುತ್ತದೆ
ಅರುಣ್ ಜೇಟ್ಲಿ, ಕೇಂದ್ರ ಸಚಿವ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com