ಇಸ್ರೋ ಅಧ್ಯಕ್ಷ ರಾಧಕೃಷ್ಣನ್ ನಾಳೆ ನಿವೃತ್ತಿ, ಮುಂದಿನ ಅಧ್ಯಕ್ಷ ಯಾರು?

ಚಂದ್ರಾಯನ, ಮಂಗಳಾಯನ ಸಂಶೋಧನೆಗಳಲ್ಲಿ ರಾಧಕೃಷ್ಣನ್ ಪ್ರಮುಖ ಪಾತ್ರ...
ಇಸ್ರೋ ಅಧ್ಯಕ್ಷ ಕೆ.ರಾಧಕೃಷ್ಣನ್
ಇಸ್ರೋ ಅಧ್ಯಕ್ಷ ಕೆ.ರಾಧಕೃಷ್ಣನ್

ಇಸ್ರೋ ಅಧ್ಯಕ್ಷ ಕೆ.ರಾಧಕೃಷ್ಣನ್ ನಾಳೆ ಸೇವೆಯಿಂದ ನಿವೃತ್ತಿಯಾಗುತ್ತಿದ್ದು, ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಈಗಾಗಲೇ ಚುರುಕುಗೊಂಡಿದೆ.

1971ರಂದು ಕೇರಳದ ತಿರುವನಂತಪುರದಲ್ಲಿನ ವಿಕ್ರಂ ಸಾರಾ ಬಾಯಿ ಬಾಹ್ಯಕಾಶ ಕೇಂದ್ರದಲ್ಲಿ ಡಾ.ರಾಧಕೃಷ್ಣನ್ ವೈಮಾನಿಕ ಇಂಜಿನಿಯರ್ ಆಗಿ ಸೇರ್ಪಡೆಗೊಂಡಿದ್ದರು. ಇಸ್ರೋವಿನ ಅಭಿವೃದ್ಧಿಗಳಲ್ಲಿ ಪ್ರಧಾನ ಪಾತ್ರವಹಿಸಿದ್ದ ರಾಧಕೃಷ್ಣನ್ ಅತಿಶೀಘ್ರದಲ್ಲಿ ಇಸ್ರೋವಿನ ಅಧ್ಯಕ್ಷರಾಗಿ ಆಯ್ಕೆಗೊಂಡರು.  ಅವರ ಸಾಧನೆಗಳನ್ನು ಗುರುತಿಸಿದ ಕೇಂದ್ರ ಸರ್ಕಾರ ಅವರಿಗೆ ಪದ್ಮಭೂಷಣ್ ಪ್ರಶಸ್ತಿ ನೀಡಿ ಗೌರವಿಸಿತು.

ಚಂದ್ರಾಯನ, ಮಂಗಳಾಯನ ಸೇರಿದಂತೆ ಬಾಹ್ಯಕಾಶ ಸಂಶೋಧನೆಗಳಲ್ಲಿ ರಾಧಕೃಷ್ಣನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಡಿ.31ರಂದು ಇಸ್ರೋ ಅಧ್ಯಕ್ಷ ಸ್ಥಾನದಿಂದ ಕೆ.ರಾಧಕೃಷ್ಣನ್ ನಿವೃತ್ತಿಗೊಳ್ಳಲಿರುವ ಹಿನ್ನೆಲೆಯಲ್ಲಿ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಪ್ರಸ್ತುತ ರಾಧಕೃಷ್ಣನ್ ಅವರ ನಂತರದ ಸ್ಥಾನದಲ್ಲಿ ತಮಿಳುನಾಡು ಮೂಲದ ಶಿವನ್, ಹಾಗೂ ಕರ್ನಾಟಕ ಮೂಲದ ತತ್ವಾಲ್ ಇವರಿಬ್ಬರ ಹೆಸರು ಕೇಳಿಬರುತ್ತಿದೆ. ಇವರಿಬ್ಬರು ಬಾಹ್ಯಾಕಾಶದ ನಿಪುಣ ಹಾಗೂ ಅನುಭವಶಾಲಿಗಳಾಗಿದ್ದು, ಇಸ್ರೋ ಸಾಧನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

ಈ ಮಧ್ಯೆ ಆಧ್ಯಕ್ಷ ಸ್ಥಾನಕ್ಕೆ ಕೇರಳ ಮೂಲದ ಇಬ್ಬರ ಹೆಸರನ್ನು ಶಿಫಾರಸ್ಸು ಮಾಡಿರುವುದು ಅಚ್ಚರಿ ಮೂಡಿಸಿದೆ. ಶಿಫಾರಸ್ಸುಗೊಂಡಿರುವ ಇಬ್ಬರ ಪೈಕಿ, ಇಸ್ರೋವಿನ ಕ್ರಯೋಜನಿಕ್ ಎಂಜಿನ್ ನಿರ್ಮಾಣಕ್ಕೆ 15 ವರ್ಷಗಳ ವಿಳಂಬಕ್ಕೆ ಕಾರಣಕರ್ತರಾಗಿದ್ದರು ಎಂಬ ಆರೋಪ ಒಬ್ಬರ ಮೇಲಿದೆ.

ಒಟ್ಟಿನಲ್ಲಿ ರಾಷ್ಟ್ರದ ಅತ್ಯುನ್ನತ ಸಂಸ್ಥೆಯಾಗಿರುವ ಇಸ್ರೋವಿನ ಅಧ್ಯಕ್ಷ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com