
ನವದೆಹಲಿ: ನಾವು ಕಾನೂನನ್ನು ಬದಲಾಯಿಸಲು ತಯಾರಿದ್ದೇವೆ. ಆದರೆ, ನೀವು ಭಾರತವನ್ನು ಬದಲಾಯಿಸಲು ಸಿದ್ಧರಿದ್ದೀರಾ?
ಇದು ಪ್ರಧಾನಿ ನರೇಂದ್ರ ಮೋದಿ ಬಂಡವಾಳಶಾಹಿ ವರ್ಗಕ್ಕೆ ಕೇಳಿದ ಪ್ರಶ್ನೆ.
ಅವರು ಸೋಮವಾರ 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮದಲ್ಲಿ ಮಾತನಾಡಿ, ಈ ಯೋಜನೆ ಮೂಲಕ ಭಾರತವನ್ನು ಅಭಿವೃದ್ಧಿ ಪಥದೆಡೆಗೆ ತೆಗೆದುಕೊಂಡು ಹೋಗಲು ಏನೆಲ್ಲ ಸಹಾಯ ಬೇಕೋ ಅದೆಲ್ಲವನ್ನೂ ಮಾಡಲು ನಾವು ಸಿದ್ಧರಿದ್ದೇವೆ. ಆದರೆ ಇದಕ್ಕೆ ನಿಮ್ಮ ಸಹಕಾರ ಸಹ ಅಷ್ಟೇ ಮುಖ್ಯ. ಈ ಮೂಲಕ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡುವುದು ನಮ್ಮ ಗುರಿ ಎಂದು ಹೇಳಿದ್ದಾರೆ.
ಕಾನೂನು ಬದಲಾಯಿಸುತ್ತೇವೆ: ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವವನ್ನು ನಾವು ಕೇವಲ ಯೋಜನೆಗಳಿಗೆ ಹೂಡಿಕೆ ಮಾಡಲಷ್ಟೇ ಬಳಸಿಕೊಳ್ಳುವುದಿಲ್ಲ. ನಿರ್ಧಾರ ಕೈಗೊಳ್ಳುವಲ್ಲಿಯೂ ಅವರ ಅಭಿಪ್ರಾಯವನ್ನು ಪಡೆಯುತ್ತೇವೆ. ಈ ನಿಟ್ಟಿನಲ್ಲಿ ನಾವು ಕಾನೂನನ್ನು ತಿದ್ದುಪಡಿ ಮಾಡಲೂ ಸಿದ್ಧ ಎಂದು ತಿಳಿಸಿದ್ದಾರೆ.
ಮೇಕ್ ಇನ್ ಇಂಡಿಯಾ ಮೂಲಕ ಭಾರತದ ಅಭಿವೃದ್ಧಿ ಮಾಡುವ ಮೂಲಕ ಭಾರತದ ಬ್ರ್ಯಾಂಡ್ ಅನ್ನು ಜಗಜ್ಜಾಹೀರುಗೊಳಿಸಬೇಕು. ಈ ನಿಟ್ಟಿನಲ್ಲಿ ನ್ಯೂನತೆ ರಹಿತ, ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸಲು ಹೆಚ್ಚಿನ ಒತ್ತು ನೀಡಬೇಕು ಎಂಬ ಸಲಹೆಯನ್ನೂ ಪ್ರಧಾನಿ ನೀಡಿದ್ದಾರೆ.
ಐಟಿ ಕ್ಷೇತ್ರದಲ್ಲಿ ನಮ್ಮ ಸಾಧನೆ ದೊಡ್ಡದು. ನಮ್ಮಲ್ಲಿ ಐಟಿ ಶಕ್ತಿ ಕೇಂದ್ರವೇ ಇದೆ. ಹೀಗಿದ್ದರೂ ಗೂಗಲ್ ಎಂಬ ಸಂಸ್ಥೆಯನ್ನು ನಾವು ಕಟ್ಟಲಾಗಿಲ್ಲ. ಆದರೆ, ಗೂಗಲ್ ಸಂಸ್ಥೆಯಲ್ಲಿ ಪ್ರಮುಖ ಹುದ್ದೆಯನ್ನಲಂಕರಿಸಿರುವುದು ನಮ್ಮವರೇ. ನಮ್ಮವರೆಲ್ಲ ಸೇರಿದರೆ ಯಾಕೆ ಇಂಥ ಒಂದು ಸಂಸ್ಥೆ ಹುಟ್ಟುಹಾಕಲಾಗುವುದಿಲ್ಲ ಎಂದು ಕೇಳಿದ್ದಾರೆ.
ರಘುರಾಮ್‌ಗೆ ಟಾಂಗ್: ಅಧಿಕಾರ ಶಾಹಿಗಳು ಮನಬಂದಂತೆ ಹೇಳಿಕೆ ನೀಡುವುದರ ಮೂಲಕ ಬಂಡವಾಳಶಾಹಿಗಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಈ ಮೂಲಕ ಮಹತ್ತರ ಯೋಜನೆಗ ಅಡಚಣೆಯನ್ನುಂಟು ಮಾಡುತ್ತಿದ್ದಾರೆ. ಜಾರಿಕೊಳ್ಳುವ , ವಿಳಂಬ ಮಾಡುವ, ನಿರ್ಲಕ್ಷ್ಯ ತೋರುವ, ಗೊಂದಲ ಸೃಷ್ಟಿಸುವ ಸಂಸ್ಕೃತಿಗೆ ಕಡಿವಾಣ ಹಾಕಬೇಕು. ಹೊಣೆಗಾರಿಕೆ, ಒಡೆತನ, ಉತ್ತರದಾಯಿತ್ವ ಮತ್ತು ಶಿಸ್ತು ರೂಢಿಸಿಕೊಳ್ಳಬೇಕು ಎನ್ನುವ ಮೂಲಕ ಮೇಕ್ ಇನ್ ಇಂಡಿಯಾ ಬಗ್ಗೆ ಈಚೆಗೆ ಮೂಗುಮುರಿದಿದ್ದ ಆರ್‌ಬಿಐ ಗೌರ್ನರ್ ರಘುರಾಮ್‌ಗೆ ಟಾಂಗ್ ನೀಡಿದ್ದಾರೆ.
ಕಡಿಮೆ ಬೆಲೆಗೆ ಉತ್ಕೃಷ್ಟ ಗುಣಮಟ್ಟ: ಇದೇ ವೇಳೆ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ , ಕಡಿಮೆ ಬೆಲೆಗೆ ಉತ್ಕೃಷ್ಟಗುಣಮಟ್ಟದ ಉತ್ಪನ್ನವನ್ನು ತಯಾರಿಸಿ, ಮಾರಾಟ ಮಾಡುವುದು ಮೇಕ್ ಇನ್ ಇಂಡಿಯಾದ ನಿಜವಾದ ಅರ್ಥ ಎನ್ನುವ ಮೂಲಕ ರಾಜನ್‌ಗೆ ತಿರುಗೇಟು ನೀಡಿದ್ದಾರೆ.
ಇಲ್ಲಿ ತಯಾರಾದ ಉತ್ಪನ್ನಗಳು ಭಾರತದಲ್ಲಿ ಅಥವಾ ವಿದೇಶದಲ್ಲಿ ಮಾರಾಟವಾಗಲಿ, ಆದರೆ ಮುದ್ರೆ ಭಾರತದ್ದಿರುತ್ತದೆ. ಉತ್ಪಾದಕ ಕಂಪನಿಗಳು ಗುಣಮಟ್ಟ ಮತ್ತು ದರವನ್ನು ಗಮನದಲ್ಲಿಟ್ಟುಕೊಂಡು, ಕೆಲವು ನಿಯಮಗಳನ್ನು ಪರಿವರ್ತನೆ ಮಾಡಿಕೊಳ್ಳದಿದ್ದರೆ, ಸವಾಲುಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ.
Advertisement