ವಿಷ್ಣುವರ್ಧನ್ ಸ್ಮಾರಕಕ್ಕೆ ತ್ರಿಶಂಕು ಸ್ಥಿತಿ

ಹಿರಿಯ ನಟ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಮತ್ತೆ ಅಡ್ಡಿ ಉಂಟಾಗಿದೆ...
ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಶಂಕುಸ್ಥಾಪನೆ
ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಶಂಕುಸ್ಥಾಪನೆ

ಬೆಂಗಳೂರು; ಹಿರಿಯ ನಟ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಮತ್ತೆ ಅಡ್ಡಿ ಉಂಟಾಗಿದೆ. ಐದು ವರ್ಷಗಳ ಹೋರಾಟದ ನಂತರ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದ ಹತ್ತೇ ನಿಮಿಷದಲ್ಲಿ ನ್ಯಾಯಾಲಯ ನಿರ್ಮಾಣ ಕಾಮಗಾರಿಗೆ ತಡೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಮಾತು ಆರಂಭಿಸುವಷ್ಟರಲ್ಲಿ ಹೈಕೋರ್ಟ್‌ನ ಆದೇಶ ಹೊರಬಿತ್ತು. ಉದ್ದೇಶಿತ ಜಾಗದಲ್ಲಿ ಯಾವುದೇ ಕಾಮಗಾರಿ ನಡೆಸದೆ ಯಥಾಸ್ಥಿತಿ ಕಾಯ್ದು ಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದೆ. ವಿಷ್ಣುವರ್ಧನ್ ಅಭಿಮಾನಿಗಳಲ್ಲಿ ಇದು ತೀವ್ರ ನಿರಾಸೆ ಮೂಡಿಸಿದೆ.

ಕೆಂಗೇರಿ ಸಮೀಪದ ಮೈಲಸಂದ್ರ ಬಳಿಯ ಎರಡು ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಮಂಗಳವಾರ ಬೆಳಿಗ್ಗೆ 10.30ಕ್ಕೆ ನಿಗದಿಯಾಗಿತ್ತು. ಸಿದ್ದರಾಮಯ್ಯ 11 ಗಂಟೆಗೆ ಆಗಮಿಸಿದರು. ಶಂಕುಸ್ಥಾಪನೆ ನೆರವೇರಿಸಿದ ನಂತರ ವಿಷ್ಣು ಸಮಾಧಿಯಿರುವ ಅಭಿಮಾನ್ ಸ್ಟುಡಿಯೋಕ್ಕೆ ತೆರಳಿದರು. ಅಲ್ಲಿ ಅವರು ಸಮಾರಂಭದಲ್ಲೇ ಸ್ಮಾರಕ ನಿರ್ಮಾಣಕ್ಕೆ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದ ಮಾಹಿತಿ ಬಂತು.

ಸ್ಮಾರಕಕ್ಕಾಗಿ ಮೈಲಸಂದ್ರ ಬಳಿ ಎರಡು ಎಕರೆ ಜಾಗ ನೀಡಿದ್ದನ್ನು ಪ್ರಶ್ನಿಸಿ ಪರಿಸರ ಪ್ರೇಮಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನಂತರ ಎಲ್ಲರೂ ಚುಟುಕಾಗಿ ಭಾಷಣ ಮುಗಿಸಿದರು.

ಹೈಕೋರ್ಟ್ ಆದೇಶದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಮುಖ್ಯಮಂತ್ರಿಯವರು ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟುಹೋದರು. ಅಷ್ಟೇ ಅಲ್ಲ, ಸಿಎಂ ನಿರ್ಗಮಿಸಿದ ಮೇಲೆ ಅಲ್ಲಿಗೆ ಆಗಮಿಸಿದ ಸಚಿವ ಅಂಬರೀಷ್ ಕೂಡ ಪ್ರತಿಕ್ರಿಯಿಸಲಿಲ್ಲ.

ವೇದಿಕೆಯಲ್ಲಿ ಮಾತನಾಡಿದ ಅಂಬರೀಷ್, 'ಒಳ್ಳೆಯ ಕೆಲಸ ಮಾಡುವಾಗ ಯಾವಾಗಲೂ ಇಂಥ ಅಡ್ಡಿ ಬರುತ್ತವೆ. ಒಂದೊಂದು ಬಾರಿ ಯಾಕಾದ್ರೂ ಈ ಕೆಲಸ ಮಾಡ್ಬೇಕು ಎಂದೆನಿಸುತ್ತದೆ. ಶಾಂತಿದೂತನಂತಿದ್ದ ವಿಷ್ಣುವನ್ನು ಸಾವಿನ ನಂತರವೂ ನೆಮ್ಮಿದಿಯಿಂದಿರಲು ಬಿಡುತ್ತಿಲ್ಲ' ಎಂದು ವಿಷಾದಿಸಿದರು.

ಈ ಮಧ್ಯೆ ಡಾ.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಜಾಗ ನೀಡಿದೆ. ಸರ್ಕಾರದ ಮೇಲೆ ನಂಬಿಕೆ ಇದೆ. ಸರ್ಕಾರವೇ ಅದನ್ನು ನೋಡಿಕೊಳ್ಳಲಿದೆ ಎಂದರು. ಡಾ.ಭಾರತಿ ವಿಷ್ಣುವರ್ಧನ್ ಪ್ರತಿಕ್ರಿಯಿಸಲು ನಿರಾಕರಿಸಿದರು.

ಅಂತೂ ಇಂತೂ ಐದು ವರ್ಷಗಳ ನಂತರವಾದರೂ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿತಲ್ಲ ಎಂದು ನಿಟ್ಟಿಸಿರುಬಿಟ್ಟ ಜನರಿಗೆ ಮತ್ತೆ ಆತಂಕ ಬರಸಿಡಿಲಿನಂತೆ ಬಡಿದಿದ್ದು ಸುಳ್ಳಲ್ಲ. ಭೂಮಿ ವಿವಾದ ಸೃಷ್ಟಿಯಾಗಿ, ನ್ಯಾಯಾಲಯದ ಮೆಟ್ಟಿಲೇರುತ್ತದೆ ಎಂಬ ವಿಷಯ ಸರ್ಕಾರಕ್ಕೆ ಗೊತ್ತಿದ್ದರೂ ಈ ಬಗ್ಗೆ ಕೇವಿಯಟ್ ಸಲ್ಲಿಸಲಿಲ್ಲ. ಹೀಗಾಗಿ ತಡೆಯಾಜ್ಞೆ ಸಿಕ್ಕಿದೆ ಎಂದು ಕೆಲವು ಅಭಿಮಾನಿಗಳು ದೂರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com