ಜಿನೇವಾ: ಒಂದು ಕಾಲದಲ್ಲಿ ಸಣ್ಣಪುಟ್ಟ ಕಾಯಿಲೆಗಳಿಗೆ ರಾಮಬಾಣವಾಗಿದ್ದ 'ಆ್ಯಂಟಿಬಯೋಟಿಕ್'ಗಳು ಈಗ ತಮ್ಮ ಸಾಮರ್ಥ್ಯ ಕಳೆದುಕೊಳ್ಳುತ್ತಿವೆಯೇ?
ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ). ರೋಗ ನಿರೋಧಕ ಶಕ್ತಿಯು ದುರ್ಬಲವಾಗುತ್ತಿರುವ ಬಗ್ಗೆ ಡಬ್ಲ್ಯೂಎಚ್‌ಓ ನಡೆಸಿದ ಜಾಗತಿಕ ಸಮೀಕ್ಷೆಯಿಂದ ಈ ವಿಚಾರ ತಿಳಿದುಬಂದಿದೆ. ಮೆದುಳಿನ ರೋಗ,ಚರ್ಮ, ರಕ್ತ ಮತ್ತು ಕಿಡ್ನಿಗಳ ಸೋಂಕು ಮತ್ತಿತರ ಸಮಸ್ಯೆಗಳನ್ನು ಉಂಟುಮಾಡುವ ಇ.ಕೋಲಿ ಬ್ಯಾಕ್ಟೀರಿಯಾವನ್ನು ಕೊಲ್ಲಲು ಈಗಿರುವ ಆ್ಯಂಟಿ ಬಯೋಟಿಕ್‌ಗಳಿಗೆ ಸಾಧ್ಯವಾಗುತ್ತಿಲ್ಲ. ಇ.ಕೋಲಿ ಮಾತ್ರವಲ್ಲ ಇನ್ನಿತರ ಸಣ್ಣಪುಟ್ಟ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವಲ್ಲಿಯೂ ಆ್ಯಂಟಿಬಯೋಟಿಕ್‌ಗಳು ವಿಫಲವಾಗುತ್ತಿದೆ ಎಂದು ಡಬ್ಲ್ಯೂಎಚ್‌ಒ ವರದಿ ತಿಳಿಸಿದೆ.
ಪರಿಣಾಮವೇನು?: ಆ್ಯಂಟಿಬಯೋಟಿಕ್‌ಗಳು ತಮ್ಮ ಸಾಮರ್ಥ್ಯ ಕಳೆದುಕೊಂಡಿರುವುದು ಭಾರಿ ಭೀತಿಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಸಣ್ಣಪುಟ್ಟ ಸೋಂಕು ಹಾಗೂ ಅಲ್ಪ ಪ್ರಮಾಣದ ಗಾಯಗಳೂ ಮಾನವನ ಜೀವಕ್ಕೇ ಅಪಾಯ ತಂದೊಡ್ಡಬಲ್ಲದು ಎಂದು ಡಬ್ಲ್ಯೂಎಚ್‌ಒ ಎಚ್ಚರಿಸಿದೆ. ದಶಕಗಳಿಂದಲೂ ಸಣ್ಣಪುಟ್ಟ ರೋಗಗಳಿಗೆ ಆ್ಯಂಟಿಬಯೋಟಿಕ್ ಸೂಕ್ತ ಔಷಧವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೀಗ ಈ ಮಾತ್ರೆಗಳೇ ತಮ್ಮ ಶಕ್ತಿ ಕಳೆದುಕೊಳ್ಳುತ್ತಿರುವುದು ಮಾನವಸಂಕುಲಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಎಚ್ಚರಿಕೆ: ಇದೇ ವೇಳೆ, ವೈದ್ಯರು ಹೇಳಿದರಷ್ಟೇ ಆ್ಯಂಟಿಬಯೋಟಿಕ್‌ಗಳನ್ನು ಬಳಸಬೇಕೇ ಹೊರತು ತಮ್ಮಿಷ್ಟದಂತೆ ಅದನ್ನು ಸೇವಿಸಬಾರದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
Advertisement