

ನವದೆಹಲಿ: ಮಾಲ್, ಎಟಿಎಂ ಅಥವಾ ಕಾರ್ಪೋರೇಟ್ ಕಂಪನಿಗಳ ಪ್ರವೇಶದ್ವಾರದಲ್ಲಿ ಕಾಣುವ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೋಡಿ ಮೂಗು ಮುರಿಯುವಂತಿಲ್ಲ, ಯಾಕೆಂದರೆ ಅವರು ಪೊಲೀಸ್ ಇಲಾಖೆಯ 'ಕಣ್ಣು ಮತ್ತು ಕಿವಿ'ಗಳಾಗಿರಬಹುದು..!
ದೇಶಾದ್ಯಂತ ಇರುವ ಖಾಸಗಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಪೊಲೀಸ್ ತರಬೇತಿ ನೀಡುವ ಪ್ರಸ್ತಾವ ಕೇಂದ್ರದ ಮುಂದಿದೆ. ಖಾಸಗಿ ಭದ್ರತಾ ಸಿಬ್ಬಂದಿಯನ್ನು ಪೊಲೀಸ್ ಇಲಾಖೆಗೆ ಪೂರಕವಾಗಿ ಬಳಸಿಕೊಳ್ಳುವುದು ಗೃಹ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ. ಜನದಟ್ಟಣೆ ಇರುವಾಗ ಯಾವ ರೀತಿ ಎಚ್ಚರದಿಂದ ಇರಬೇಕು, ಸಂಭಾವ್ಯ ಅಪಾಯವನ್ನು ಗ್ರಹಿಸುವುದು ಹೇಗೆ, ತುರ್ತು ಪರಿಸ್ಥಿತಿಯಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಮೊದಲಾದ ವಿಷಯಗಳ ಬಗ್ಗೆ ಪೊಲೀಸ್ ಇಲಾಖೆ ತರಬೇತಿ ನೀಡಲಿದೆ. ಶಸ್ತ್ರಾಸ್ತ್ರ ಹೊದಲು ಅನುಮತಿ ನೀಡುವುದರ ಜತೆಗೆ ಅದರ ಬಳಕೆ ಬಗ್ಗೆಯೂ ತಿಳಿಸಿಕೊಡಲಿದೆ. ಇಲಾಖೆಯ ಮಾಹಿತಿದಾರರಾಗಿಯೂ ಸೆಕ್ಯೂರಿಟಿಗಾರ್ಡ್‌ಗಳು ಕಾರ್ಯನಿರ್ವಹಿಸಲಿದ್ದಾರೆ.
ದೇಶದಲ್ಲಿ ಪೊಲೀಸ್ ಬಲ, ಅಗತ್ಯದ ಅರ್ಧದಷ್ಟು ಮಾತ್ರವೇ ಇದೆ. 1.2 ಶತಕೋಟಿ ಜನಸಂಖ್ಯೆಗೆ ಕೇವಲ 15 ಲಕ್ಷ ಪೊಲೀಸ್ ಸಿಬ್ಬಂದಿ ಇದ್ದಾರೆ. ಅದೇ ಖಾಸಗಿ ಭದ್ರತಾ ಸಿಬ್ಬಂದಿ ಬಲ 50 ಲಕ್ಷ. ಫಿಕ್ಕಿ ಅಂದಾಜಿನ ಪ್ರಕಾರ ಈ ಉದ್ಯಮ ವಾರ್ಷಿಕ ರೂ.22 ಸಾವಿರ ಕೋಟಿ ದಾಟುವ ನಿರೀಕ್ಷೆ ಇದೆ.
ಹಲವು ಪ್ರಯೋಜನ: ಕೇಂದ್ರದ ಯೋಜನೆ ಜಾರಿಗೆ ಬಂದಿದ್ದೇ ಅದರಲ್ಲಿ ಪೊಲೀಸ್ ಇಲಾಖೆಗೆ ಬಹಳ ಅನುಕೂಲವಾಗಲಿದೆ. ಒಂದು ಪೊಲೀಸ್ ಠಾಣೆಯಲ್ಲಿ 100 ಪೊಲೀಸ್ ಸಿಬ್ಬಂದಿ ಇದ್ದರೆ, ಅದೇ ಪ್ರದೇಶದಲ್ಲಿ 500 ಖಾಸಗಿ ಭದ್ರತಾ ಸಿಬ್ಬಂದಿ ಇರುತ್ತಾರೆ. ಹೀಗಾಗಿ ಅವರಿಗೆ ತರಬೇತಿ ನೀಡಿದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕುವುದು ಸುಲಭ. ಬಂಧಿಸಲು ಹೋದಾಗ ಪೊಲೀಸರ ಸುಳಿವು ಗ್ರಹಿಸಿ ಅಪರಾಧಿಗಳು ಜಾಗ ಖಾಲಿ ಮಾಡಬಹುದು. ಸೆಕ್ಯೂರಿಟಿ ಗಾರ್ಡ್‌ಗಳಿಂದ ಅಪರಾಧಿಗಳ ಇರುವಿಕೆ ಮಾಹಿತಿ ಲಭ್ಯವಾದರೆ ತಪ್ಪಿಸಿಕೊಳ್ಳಲು ಅವಕಾಶವೇ ಆಗದು. ಅನಧಿಕೃತ ಸೆಕ್ಯೂರಿಟಿ ಏಜೆನ್ಸಿಗಳಿಗೂ ಇದು ಮೂಗುದಾರ ಹಾಕಲಿದೆ. ಈಗ ಕಾರ್ಯನಿರ್ವಹಿಸುತ್ತಿರುವ ಏಜೆನ್ಸಿಗಳ ಪೈಕಿ ಶೇ 25 ಮಾತ್ರ ನೋಂದಣಿ ಹೊಂದಿವೆ.
'ಖಾಸಗಿ ಭದ್ರತಾ ಸಿಬ್ಬಂದಿಗೆ ತರಬೇತಿ ನೀಡಿದರೆ ಹಬ್ಬಗಳ ಋತುವಿನಲ್ಲಿ ಸಂಭವಿಸಬಹುದಾದ ಎಷ್ಟೋ ಅವಘಡಗಳನ್ನೂ ತಪ್ಪಿಸಲು ಸಾಧ್ಯ'ಎನ್ನುತ್ತಾರೆ ಗೃಹ ಇಲಾಖೆ ಹಿರಿಯ ಅಧಿಕಾರಿಗಳು.
ಪ್ರಸ್ತಾವದಲ್ಲಿ ಇನ್ನೇನಿದೆ?
50 ಲಕ್ಷ ಖಾಸಗಿ ಭದ್ರತಾ ಸಿಬ್ಬಂದಿಗೆ ಪೊಲೀಸ್ ತರಬೇತಿ.
ಖಾಸಗಿ ಭದ್ರತಾ ಕಂಪನಿಗಳ ನೋಂದಣಿ ಕಡ್ಡಾಯ.
ಬೇಹುಗಾರರಾಗಿಯೂ ಖಾಸಗಿ ಭದ್ರತಾ ಸಿಬ್ಬಂದಿ ಬಳಸಿಕೊಳ್ಳುವುದು.
ಎಟಿಎಂಗಳಲ್ಲಿ ಹಣ ವರ್ಗಾವಣೆಯನ್ನು ನೋಂದಾಯಿತ ಕಂಪನಿಗಳು ಮಾತ್ರ ನಿರ್ವಹಿಸುವುದು.
ಉತ್ತರದಾಯಿತ್ವದೊಂದಿಗೆ ಶಸ್ತ್ರಾಸ್ತ್ರ ಹೊಂದಲು ಖಾಸಗಿ ಏಜೆನ್ಸಿಗಳಿಗೆ ಅನುಮತಿ ನೀಡುವುದು.