
ನವದೆಹಲಿ: ನಾನು ಮೊದಲು ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು ೧೯೯೦ ರಲ್ಲಿ. ಆಗ ಮೋದಿ ಆರ್ ಎಸ್ ಎಸ್ ನ ಪ್ರಚಾರಕರಾಗಿ ಒಳ್ಳೆಯ ಸಂಘಟಕರಾಗಿದ್ದರು. ಅಡ್ವಾನಿಯವರ ರಥಯಾತ್ರೆಯನ್ನು ಯಾವುದೇ ಅಡಚಣೆಗಳಿಲ್ಲದೆ ಮುನ್ನಡೆಸುವ ಕೆಲಸ ಗುಜರಾತ್ ನ ಬಿಜೆಪಿ ಸಂಘಟಕರಾಗಿದ್ದ ಮೋದಿ ಅವರ ಪಾಲಿಗೆ ಬಿದ್ದಿತ್ತು. ಅವರು ಅತಿ ಸೂಕ್ಷ್ಮ ವಿವರಗಳಿಗೆ ಗಮನವಿಟ್ಟು ಬಹಳ ಕರಾರುವಕ್ಕಾಗಿ ಕೆಲಸ ಮಾಡುತ್ತಿದ್ದರು. ಅವರು ಆಗಿನಿಂದಲೂ ಅವರು ಉಡುಪನ್ನು ಧರಿಸುತ್ತಿದ್ದ ರೀತಿ ಬಹಳ ಕರಾರುವಕ್ಕಾಗಿಯೇ. ಆಗಿನ ವದಂತಿ ಏನಿತ್ತೆಂದರೆ ಮೋದಿ ಅವರು ಕನ್ನಡಿ ಮುಂದೆ ದಿನವೂ ಅರ್ಧ ಗಂಟೆ ಕಳೆಯುತ್ತಿದ್ದರೆಂದು - ಇವು ಆತ್ಮರತಿಯ ಮುಂಚಿನ ಕುರುಹುಗಳು, ಎಂದು ನವೆಂಬರ್ ೨೦೧೪ ರಲ್ಲಿ ಬಿಡುಗಡೆಯಾಗಿರುವ ತಮ್ಮ ಪುಸ್ತಕ "೨೦೧೪ ಭಾರತವನ್ನು ಬದಲಾಯಿಸಿದ ಚುನಾವಣೆ" (2104 The Election That Changed India) ಯಲ್ಲಿ ಹಿರಿಯ ಪತ್ರಕರ್ತ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಬರೆದಿದ್ದಾರೆ.
ನಾನು ಎನ್ ಡಿ ಟಿ ವಿ ಯಲ್ಲಿ ಅರ್ಣಬ್ ಗೋಸ್ವಾಮಿ ಜೊತೆ ನ್ಯೂಸ್ ಹವರ್ ಎಂಬ ಟಿ ವಿ ಶೋ ನಡೆಸುತ್ತಿದ್ದೆ. ಆ ಕಾರ್ಯಕ್ರಮದಲ್ಲಿ ಒಮ್ಮೆ ಬಿಜೆಪಿಯನ್ನು ಪ್ರತಿನಿಧಿಸಬೇಕಿದ್ದ ವಿಜಯ್ ಕುಮಾರ್ ಮಲಹೋತ್ರ ಅವರು ಕೊನೆಯ ಕ್ಷಣದಲ್ಲಿ ಕಾರ್ಯಕ್ರಮದಿಂದ ಹೊರಬಿದ್ದಿದ್ದರಿಂದ ನಾನು ಮೋದಿ ಅವರಿಗೆ ಕರೆ ಮಾಡಿ ಸ್ಟುಡಿಯೊಗೆ ಬರುವಂತೆ, ನನಗೆ ಬರುತ್ತಿದ್ದ ಗುಜರಾತಿ ಭಾಷೆಯಲ್ಲೇ ಮನವಿ ಮಾಡಿದ್ದೆ. ನನ್ನ ಮನವಿಗೆ ತಕ್ಷಣ ಓಗೊಟ್ಟು, ಅರ್ಧ ಘಂಟೆಯಲ್ಲೆ ನಮ್ಮ ಕಾರ್ಯಕ್ರಮ ಸೇರಿಕೊಂಡಿದ್ದರು. ಆಗ ಅವರು ಮೀಡಿಯ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದರು. ಎಂದು ನೆಪಿಸಿಕೊಳ್ಳುವ ರಾಜದೀಪ್, ಗೋಧ್ರ ಹತ್ಯಾಕಾಂಡ ಮತ್ತು ಗೋಧ್ರಾ ನಂತರದ ಗುಜರಾತ್ ಕೋಮುಗಲಭೆಗಳ ನಂತರ ಎಲ್ಲವೂ ಬದಲಾಗಿ ಹೋಯಿತು. ಅವರು ಮಾಧ್ಯಮಗಳನ್ನು ದೂರವಿಟ್ಟರು. ಅದರಲ್ಲೂ ಇಂಗ್ಲಿಷ್ ಮೀಡಿಯಾಗಳು ಅಂದರೆ ಉರಿದು ಬೀಳುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ಇದಕ್ಕೂ ಮುಂಚೆ ನಾನು ಮತ್ತು ಮೋದಿ ಬಹಳ ಉತ್ತಮ ಗೆಳೆಯರಾಗಿದ್ದೆವು. ೨೦೦೭ ರಲ್ಲಿ ನಮ್ಮ ತಂದೆ ತೀರಿಕೊಂಡಾಗ ನನಗೆ ಕರೆ ಮಾಡಿ ಸಂತೈಸಿದ ಮೊದಲ ರಾಜಕಾರಿಣಿ ಮೋದಿಯವರೆ, ಆದರೆ ಅಷ್ಟು ಹೊತ್ತಿಗೆ ನಮ್ಮ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು ಎಂದು ಬರೆದುಕೊಂಡಿದ್ದಾರೆ.
ಹೀಗೆ ಮೋದಿಯವರು ಎತ್ತರಕ್ಕೆ ಏರಿದ ಬಗೆಯನ್ನು ಎಳೆಯೆಳೆಯಾಗಿ ಬಿಚ್ಚಿಡುವ ಪುಸ್ತಕ, ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಂಡ ಬಗೆ, ರಾಹುಲ್ ಗಾಂಧಿಯವರ ಹುಡುಗಾಟದ ಪ್ರಚಾರಗಳು, ರಾಜಕಾರಿಣಿಗಳು ಮಾಧ್ಯಮಗಳನ್ನು ಮಾರ್ಪಾಡು ಮಾಡುವ ರೀತಿ ಇದ್ಯಾದಿ ರೋಚಕ ಅಂಶಗಳನ್ನು ಬಿಚ್ಚಿಡುವ ಈ ಪುಸ್ತಕ ಮಾಧ್ಯಮ ಪಂಡಿತರ ಕುತೂಹಲ ಕೆರಳಿಸಿದೆ.
Advertisement