

ಚಂಡೀಗಢ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಕುಟಂಬ ಇಟಲಿಗೆ ಸ್ಥಳಾಂತರವಾಗುವ ಯೋಚನೆಯಲ್ಲಿದೆ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜಿ ಅವರು ಗುರುವಾರ ಹೇಳಿದ್ದಾರೆ.
ಅಕ್ರಮ ಭೂ ಖರೀದಿ ಪ್ರಕರಣ ಸಂಬಂಧ ವಿಚಾರಣೆಯ ಭೀತಿ ಎದುರಿಸುತ್ತಿರುವ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಹರ್ಯಾಣದಲ್ಲಿನ ತಮ್ಮ ನಾಲ್ಕು ಕಂಪನಿಗಳನ್ನು ಬಂದ್ ಮಾಡಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಹರ್ಯಾಣ ಸಚಿವ, ಸೋನಿಯಾ ಹಾಗೂ ಅವರ ಕುಟುಂಬ ಇಟಲಿಗೆ ಸ್ಥಳಾಂತರವಾಗುವ ಚಿಂತನೆಯಲ್ಲಿದೆ. ಆದರೆ ಆರೋಪಿಗಳು ಯಾರೇ ಆಗಿದ್ದರೂ ಅವರನ್ನು ಶಿಕ್ಷೆಗೆ ಒಳಪಡಿಸುತ್ತೇವೆ ಎಂದಿದ್ದಾರೆ.
ಹರ್ಯಾಣದ ನೂತನ ಬಿಜೆಪಿ ಸರ್ಕಾರ ರಾಬರ್ಟ್ ವಾದ್ರಾ ಅವರ ಅಕ್ರಮ ಭೂ ವ್ಯವಹಾರ ಪ್ರಕರಣವನ್ನು ತನಿಖೆ ನಡೆಸುತ್ತೇವೆ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಹರ್ಯಾಣದಲ್ಲಿರುವ ವಾದ್ರಾ ಅವರ 6 ಕಂಪನಿಗಳ ಪೈಕಿ 4 ಕಂಪನಿಗೆ ಬೀಗ ಹಾಕಲಾಗಿದೆಯಂತೆ.
ಕಂಪನಿ ವ್ಯವಹಾರಗಳ ಸಚಿವಾಲಯಕ್ಕೆ ನೀಡಿರುವ ದಾಖಲೆಗಳ ಪ್ರಕಾರ, ಹರ್ಯಾಣ ಮತ್ತು ರಾಜಸ್ತಾನ ರಾಜ್ಯಗಳಲ್ಲಿರುವ ರಾಬರ್ಟ್ ವಾದ್ರಾ ಅವರ 6 ಸಂಸ್ಥೆಗಳ ಪೈಕಿ 4 ಸಂಸ್ಥೆಗಳನ್ನು ಮುಚ್ಚಲಾಗಿದೆ.